ರಾಜ್ಯಕ್ಕೆ ಧಕ್ಕಲಿರುವ ಒಂಬತ್ತು ನರ್ಸಿಂಗ್ ಕಾಲೇಜುಗಳು
ಮೈಸೂರು: ಬುಧವಾರ ಕೇಂದ್ರದ ಬಜೆಟ್‌ನಲ್ಲಿ ದೇಶದಾದ್ಯಂತ 156 ನರ್ಸಿಂಗ್ ಕಾಲೇಜುಗಳ ಸ್ಥಾಪನೆ ಕುರಿತು ಆಗಿರುವ ಘೋಷಣೆ ಅನ್ವಯ ಕರ್ನಾಟಕಕ್ಕೆ ಚಾಮರಾಜನಗರ, ಕೊಡಗು ಸೇರಿದಂತೆ 9 ನರ್ಸಿಂಗ್ ಕಾಲೇಜುಗಳು ದೊರೆಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರತಿ ಜಿಲ್ಲೆಯಲ್ಲಿಯೂ ಒಂದು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆ ಆಗಬೇಕು ಎನ್ನುವ ನಿಲುವನ್ನು ಈಗಾಗಲೇ ಬಹಿರಂಗಪಡಿಸಿದ್ದು ಅದಕ್ಕೆ ತಕ್ಕಂತೆ ಸರ್ಕಾರ ಕಾರ್ಯಯೋಜನೆಯನ್ನು ರೂಪಿಸಿದೆ. ಇದರ ಮುಂದಿನ ಹಂತವಾಗಿ ನರ್ಸಿಂಗ್ ಕಾಲೇಜ್‌ಗಳ ಸ್ಥಾಪನೆಗೆ ಮುಂದಾಗಿದೆ. ತನ್ಮೂಲಕ ವೈದ್ಯಕೀಯ ಸೇವೆಯಲ್ಲಿ ನೈಪುಣ್ಯತೆಯನ್ನು ಕಾಪಾಡಿಕೊಳ್ಳುವ ಜತೆಗೆ ವೈದ್ಯರು ಮತ್ತು ದಾದಿಯರ ಸಂಖ್ಯೆಯನ್ನು ದಾಖಲೆ ಪ್ರಮಾಣದಲ್ಲಿ ಹೆಚ್ಚಿಸುವ ಪ್ರಯತ್ನಕ್ಕೆ ಸರ್ಕಾರ ಕೈಹಾಕಿದೆ.
2014ರಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ರಚನೆಯಾದ ಅನಂತರದಲ್ಲಿ ಸ್ಥಾಪನೆಯಾಗಿರುವ 175 ವೈದ್ಯಕೀಯ ಕಾಲೇಜ್‌ಗಳಲ್ಲಿ ಈ ನರ್ಸಿಂಗ್ ಕಾಲೇಜು ನಿರ್ಮಾಣವಾಗಲಿದೆ. ಈ ಮಾನದಂಡದ ಅನ್ವಯ ರಾಜ್ಯದಲ್ಲಿ 2014ರ ಬಳಿಕ ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಬೆಂಗಳೂರು, ಕಲಬುರಗಿ, ಕಾರವಾರ, ಕೊಪ್ಪಳ, ಗದಗ ಮತ್ತು ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜ್ ಸ್ಥಾಪನೆಯಾಗಿದ್ದು ಇಲ್ಲಿ ನರ್ಸಿಂಗ್ ಕಾಲೇಜು ಕೂಡ ಬರುವ ಸಾಧ್ಯತೆಯಿದೆ.
ವೈದ್ಯಕೀಯ, ಔಷಧ ಕ್ಷೇತ್ರದ ಸಂಶೋಧನೆಗೆ ಅಡಿಪಾಯ: ಕೋವಿಡ್ ಸಾಂಕ್ರಾಮಿಕದ ಬಳಿಕ ವೈದ್ಯಕೀಯ ಮತ್ತು ಔಷಧ ಕ್ಷೇತ್ರಗಲ್ಲಿನ ಸಂಶೋಧನೆ ಮತ್ತು ಅನ್ವೇಷಣೆಯ ಮಹತ್ವವನ್ನು ಅರಿತಿರುವ ಸರ್ಕಾರ ಈ ರಂಗದಲ್ಲಿನ ಅಭಿವೃದ್ಧಿಗೆ ವಿಶೇಷ ಮಹತ್ವ ನೀಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದ ನಿರ್ವಹಣೆಯಲ್ಲಿನ ಖಾಸಗಿ, ಸರಕಾರಿ ಸಹಭಾಗಿತ್ವವನ್ನು ಸಂಶೋಧನ ವಲಯಕ್ಕೂ ಈ ಬಜೆಟ್ ಮೂಲಕ ವಿಸ್ತರಿಸಲಾಗಿದೆ.