Mysore
23
overcast clouds
Light
Dark

ವೈಡ್‌ ಆಂಗಲ್‌ : ಚಿತ್ರೋದ್ಯಮದ ಸಂಘಟನೆಗಳೆಲ್ಲ ಮೈಕೊಡವಿ ನಿಲ್ಲಲಿದು ಸಕಾಲ

– ಬಾನಾ ಸುಬ್ರಮಣ್ಯ

ಚಿತ್ರೋದ್ಯಮದ ವ್ಯವಹಾರಗಳು ಕಾರ್ಪೊರೇಟ್ ಶೈಲಿಗೆ ಬದಲಾಗುತ್ತಿರುವಂತೆ ಸಂಘಟನೆಗಳನ್ನು, ಒಡೆದು ಆಳುವ ಪ್ರವೃತ್ತಿ ಉದ್ಯಮಕ್ಕರಿವಿಲ್ಲದಂತೆ ಬೆಳೆದಿದೆ

೧೯೮೪ರಲ್ಲಿ ಸ್ಥಾಪನೆಯಾದ ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ (ಕಾನ್ಫಿಡಾ) ನಿರ್ದೇಶಕ ಪುಟ್ಟಣ್ಣ ಕಣಗಾಲರ ಕನಸಿನ ಕೂಸು. ಅವರು ಅದರ ಸ್ಥಾಪಕ ಅಧ್ಯಕ್ಷರಾಗಿದ್ದರು. ಚಿತ್ರವೊಂದರ ಕ್ಯಾಪ್ಟನ್ ಆಗಿರುವ ನಿರ್ದೇಶಕರ ತಂಡದಲ್ಲಿ ಶಿಸ್ತು ಮತ್ತು ಸಂಯಮವನ್ನು ಬೆಳೆಸುವುದಕ್ಕೆ ಆದ್ಯತೆಯೊಂದಿಗೆ ಸ್ಥಾಪನೆಯಾದ ಈ ಸಂಘದ ಉದ್ಘಾಟನೆಯನ್ನು ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಎಲ್ ವಿ ಪ್ರಸಾದ್ ನೆರವೇರಿಸಿದ್ದರು. ಇತರ ಭಾಷೆಗಳ ಹೆಸರಾಂತ ನಿರ್ದೇಶಕರ ಜೊತೆ ಸಂವಾದ, ವಿಚಾರ ಸಂಕಿರಣಗಳೇ ಮೊದಲಾದವು ಕಾನ್ಫಿಡಾ ಮೂಲಕ ನಡೆದಿದ್ದವು. ವಾರ್ಷಿಕೋತ್ಸವ ವೇಳೆ ಹೊರಗಿನ ಹೆಸರಾಂತ ನಿರ್ದೇಶಕರನ್ನು ಕರೆಸಿ ಅವರನ್ನು ಗೌರವಿಸುವುದರ ಜೊತೆಗೆ ಆಯಾ ವರ್ಷದ ಸಾಧಕ ನಿರ್ದೇಶಕರನ್ನು ಗೌರವಿಸುವ ಕೆಲಸವನ್ನೂ ಮಾಡುತ್ತಿತ್ತು.

ನಿರ್ದೇಶಕರ ಸಂಘ ತನ್ನದೇ ಆದ ಪತ್ರಿಕೆ ಚಿತ್ರನಿರ್ದೇಶಕಭಿ ಮಾಸಿಕವನ್ನು ಹಿರಿಯ ನಿರ್ದೇಶಕರ ಸಲಹೆಯೊಂದಿಗೆ ನಂಜುಂಡೇಗೌಡರ ಸಂಪಾದಕತ್ವದಲ್ಲಿ ಹೊರತಂದಿತು. ಅದು ಅಲ್ಪಾಯುಷಿಯಾಯಿತು ಎನ್ನುವುದು ಬೇರೆ ಮಾತು. ವಾರ್ಷಿಕೋತ್ಸವ, ಗೌರವ ಇತ್ಯಾದಿ ಕಾರ್ಯಕ್ರಮಗಳು ಆರಂಭದ ವರ್ಷಗಳಲ್ಲಿ ನಿರಂತರವಾಗಿ ನಡೆದು ಬಂದವಾದರೂ, ೨೦೦೨ರಲ್ಲಿ ನಡೆದ ಕಾರ್ಯಕ್ರಮವೇ ಕೊನೆಯದಾಗಿರಬೇಕು. ಎಸ್.ವಿ. ರಾಜೇಂದ್ರಸಿಂಗ್ (ಬಾಬು) ಆಗ ಅಧ್ಯಕ್ಷರಾಗಿದ್ದರು. ಮಹೇಶ್ ಭಟ್, ಪ್ರಿಯದರ್ಶನ್ ಮತ್ತು ಸಾಹಿತಿ ನಿಸಾರ್ ಅಹಮದ್ ಅವರನ್ನು ಗೌರವಿಸಿದ, ವಾರ್ಷಿಕೋತ್ಸವದಲ್ಲಿ ಐವತ್ತರ ವರೆಗೆ, ಎರಡು ವರ್ಷಗಳ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಮುಂದೆ ಇಂತಹ ಪ್ರಯತ್ನಗಳಾದವು. ಆದರೆ ನಡೆಯಲಿಲ್ಲ. ಇತ್ತೀಚಿಗೆ ಸಂಘ ಬೀದಿಗೆ ಬರುವ ಹಂತಕ್ಕೆ ಬಂತು. ಶ್ರೀರಾಮಪುರದಲ್ಲಿ ಇದ್ದ ಕಾರ್ಯಾಲಯದಲ್ಲಿ ನಿರ್ದೇಶನ ತರಬೇತಿ ತರಗತಿಗಳು ನಡೆಯುತ್ತಿದ್ದವು. ಕಾರ್ಯಾಲಯ ಬೇರೆಡೆ ಸ್ಥಳಾಂತರಿಸಿದಾಗಲೂ ಅದಿತ್ತು. ಸಂಘಕ್ಕೆ ಒಂದು ನಿವೇಶನವನ್ನು ಸರ್ಕಾರ ನೀಡಿದರೂ ಅದನ್ನು ಪಡೆದುಕೊಳ್ಳಲಾಗಲಿಲ್ಲ. ನಾಗರಬಾವಿಯಲ್ಲಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾದ ನಂತರದ ಬೆಳವಣಿಗೆಗಳು, ನಿರ್ದೇಶಕರ ಸಂಘವನ್ನು ಅಕ್ಷರಶಃ ಬೀದಿಗೆ ತಂದಿತ್ತು. ಇಬ್ಬರು ಅಧ್ಯಕ್ಷರ ಮೇಲೆ ಸಂಘದ ಹಣ ದುರುಪಯೋಗದ ಆರೋಪ ಬಂತು. ಸಹಕಾರ ಸಂಘಗಳ ನಿಬಂಧಕರು ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕಾಗಿ ಬಂತು. ಆರೋಪ ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದಿದೆ ಎಂದದ್ದು ಮಾತ್ರವಲ್ಲದೆ, ಅದೇ ಮುಂದಿನ ಚುನಾವಣೆಯನ್ನು ನಡೆಸಬೇಕಾಯಿತು.

ಸಂಘದ ಹೊಸ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡಿದ್ದಾರೆ. ಮೊನ್ನೆ ವರ್ಷಗಳ ನಂತರ ಕಾನ್ಫಿಡಾದ ಪತ್ರಿಕಾಗೋಷ್ಠಿ ಇತ್ತು. ಅಧ್ಯಕ್ಷರಾದ ನಂಜುಂಡಗೌಡ, ಉಪಾಧ್ಯಕ್ಷರಾದ ಎನ್‌ಆರ್‌ಕೆ ವಿಶ್ವನಾಥ್, ನಾಗೇಂದ್ರಅರಸ್, ಕಾರ್ಯದರ್ಶಿ ಬಿ. ರಾಮಮೂರ್ತಿ, ಜಂಟಿ ಕಾರ್ಯದರ್ಶಿ ಮಂಜು ಎಂ. ಮಸ್ಕಲ್‌ಮಟ್ಟಿ, ಖಜಾಂಚಿ ಉಮೇಶ್ ನಾಯಕ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಹಾಜರಿದ್ದರು.

ಕಾನ್ಫಿಡಾ ಮತ್ತೆ ಹಿಂದಿನಂತೆ ಚಟುವಟಿಕೆಗಳನ್ನು ನಡೆಸುವುದರೊಂದಿಗೆ, ನಿರ್ದೇಶಕರು ಹಿಂದಿನಂತೆ ತಮ್ಮ ಸ್ಥಾನದ ಗೌರವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎನ್ನುವ ಭರವಸೆ ಅಧ್ಯಕ್ಷರದು. ಮೊದಲ ಕಾರ್ಯಕ್ರಮವಾಗಿ ಇದೇ ತಿಂಗಳ ೩೦ ರಂದು, ನಾಲ್ಕು ದಶಕಗಳಿಂದಲೂ ಹೆಚ್ಚು ಕಾಲ ಕನ್ನಡ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ನಿರ್ದೇಶಕರನ್ನುಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡದ್ದನ್ನುಅಲ್ಲಿ ಪ್ರಕಟಿಸಿದರು. ಸಂಘದಲ್ಲಿ ಯಾವುದೇ ಬಂಡವಾಳ ಇಲ್ಲದೆ ಇದ್ದರೂ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿದಾಗ ಕಲಾವಿದರು, ನಿರ್ಮಾಪಕರು ನೆರವಾಗುವ ಆಶ್ವಾಸನೆ ಕೊಟ್ಟದ್ದನ್ನೂ ಅವರು ಹೇಳಿದರು. ಸಂಘದ ತಾತ್ಕಾಲಿಕ ಕಛೇರಿ ಶೇಷಾದ್ರಿಪುರಂನಲ್ಲಿ ತೆರೆದಿದ್ದು, ಸಾಕಷ್ಟು ಮಂದಿ ಹೊಸ ನಿರ್ದೇಶಕರಿದ್ದು, ಅವರನ್ನು ಸದಸ್ಯರಾಗಿ ಸೇರಲು ಕೋರಲಾಗುವುದು ಎಂದಿದ್ದಾರೆ.

ಭಾರತದ ಇತರ ಭಾಷಾ ಚಿತ್ರರಂಗಗಳನ್ನು ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡುತ್ತಿರುವ ದಿನಗಳಿವು. ಈ ದಿನಗಳಲ್ಲಿ ಕಾನ್ಫಿಡಾ ಇನ್ನಷ್ಟು ಒತ್ತಾಸೆಯಾಗಿ ನಿಲ್ಲಲು ಪೂರಕವಾದ ಕಾರ್ಯಕ್ರಕ್ರಮಗಳನ್ನು ಹಮ್ಮಿಕೊಳ್ಳಬಹುದು. ಕನ್ನಡ ಚಿತ್ರರಂಗದ ಇತರ ಸಂಘಟನೆಗಳೊಂದಿಗೆ ಸೇರಿ, ಚಿತ್ರೋದ್ಯಮದ ಬೇಕು ಬೇಡಗಳ ಕುರಿತು ಚರ್ಚಿಸಬಹುದು.
ಚಿತ್ರೋದ್ಯಮದ ಇತರ ಸಂಘಟನೆಗಳೋ! ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೊಸ ಪದಾಧಿಕಾರಿಗಳು ಚುನಾಯಿತರಾಗಿ ಬಂದಿದ್ದಾರೇನೋ ಹೌದು. ಆದರೆ, ಚುನಾವಣೆ ಸರಿಯಾಗಿ ನಡೆದಿಲ್ಲ ಎಂದು ದೂರಿ, ಸೋತವರಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಲೇರಿದ್ದಾರೆ. ಅದು ಇತ್ಯರ್ಥವಾಗುವ ವರೆಗೆ ಯಾವುದೇ ಮಹತ್ವದ ತೀರ್ಮಾನ ಕೈಗೊಳ್ಳುವಂತಿಲ್ಲ! ನಿರ್ಮಾಪಕರ ಸಂಘದಲ್ಲೂ ಚುನಾವಣೆ ನಡೆದು ಹೊಸಬರು ಬಂದಿದ್ದಾರೆ. ಸಂಘದ ಹೊಸ ಕಟ್ಟಡವೂ ಸಿದ್ಧವಾಗುತ್ತಿದೆ. ಇನ್ನು ಕಲಾವಿದರ ಸಂಘ. ಕಲಾವಿದರ ಸಂಘಕ್ಕೆ ಸ್ವಂತ ಕಟ್ಟಡ ಇರುವುದುಕ ರ್ನಾಟಕದಲ್ಲಿ ಮಾತ್ರ ಎನ್ನಲಾಗಿದೆ. ಡಾ.ರಾಜಕುಮಾರ್ ಅವರ ನಂತರ ಅಧ್ಯಕ್ಷರಾದ ಅಂಬರೀಶ್ ಈ ಕಟ್ಟಡ ನಿರ್ಮಿಸಲು ಮುಖ್ಯ ಕಾರಣಕರ್ತರಾದರು. ಅವರ ನಿಧನಾ ನಂತರ ಸಂಘದಲ್ಲಿ ಸರ್ವಸದಸ್ಯರ ಸಭೆಯಾಗಲೀ, ಚುನಾವಣೆಯಾಗಲೀ, ಆಯ್ಕೆಯಾಗಲೀ ನಡೆದಿಲ್ಲ. ಕಾರ್ಯದರ್ಶಿಯಾಗಿರುವ ರಾಕ್‌ಲೈನ್ ವೆಂಕಟೇಶ್ ಮತ್ತು ಖಜಾಂಚಿಯಾಗಿರುವ ದೊಡ್ಡಣ್ಣ ಅಲ್ಲಿನ ವ್ಯವಹಾರಗಳ ಜವಾಬ್ದಾರಿಯನ್ನು ಈಗ ಹೊತ್ತಿದ್ದಾರೆ.

ಈ ಮೂರು ಸಂಘಟನೆಗಳಲ್ಲದೆ ಇತರ ವಿಭಾಗಗಳ ಸಂಘಟನೆಗಳೂ ಇವೆ. ಅವುಗಳಲ್ಲಿ ಕೆಲವು ಒಕ್ಕೂಟದ ಸಹಸದಸ್ಯತ್ವ ಪಡೆದವು. ಚಿತ್ರೋದ್ಯಮ ಡಿಜಿಟಲ್ ಆಗಿ ವ್ಯವಹಾರಗಳು ಕಾರ್ಪೊರೇಟ್ ಶೈಲಿಗೆ ಬದಲಾಗುತ್ತಿರುವಂತೆ, ಎಲ್ಲ ಸಂಘಟನೆಗಳನ್ನು, ಒಡೆದು ಆಳುವ ಪ್ರವೃತ್ತಿ ಉದ್ಯಮಕ್ಕರಿವಿಲ್ಲದಂತೆ ಬೆಳೆದಿದೆ. ವಾಣಿಜ್ಯ ಮಂಡಳಿಗೆ ಪರ್ಯಾಯವಾಗಿ ಎಂದುಕೊಂಡ ಒಂದೆರಡು ಸಂಘಟನೆಗಳಿವೆ. ಒಕ್ಕೂಟದಲ್ಲೂ ಅಷ್ಟೇ. ನಿರ್ಮಾಪಕರ ಸಂಘದ ಚುನಾವಣೆಗೆ ಮುನ್ನ. ಅಲ್ಲೂ ಸಕ್ರಿಯ ನಿರ್ಮಾಪಕರ ಸಂಘವನ್ನು ಸ್ಥಾಪಿಸುವ ಬೆಳವಣಿಗೆ ಆಗಿತ್ತು. ಆಂಧ್ರಪ್ರದೇಶದಲ್ಲಿ ಇಂತಹದೊಂದು ಆಗಿದೆ. ಅಲ್ಲಿ ಸಕ್ರಿಯ ಚಲನಚಿತ್ರ ನಿರ್ಮಾಪಕರ ಸಂಘ ಮತ್ತು ತೆಲುಗು ಚಿತ್ರ ನಿರ್ಮಾಪಕರ ಮಂಡಳಿ ಎಂದು ಪ್ರತ್ಯೇಕ ಸಂಘಟನೆಗಳಿವೆ.

ಅಲ್ಲಿನ ನಿರ್ಮಾಪಕರ ಮಂಡಳಿ ಇತ್ತೀಚೆಗೆ ಹೊಸದೊಂದು ಠರಾವನ್ನು ಮಂಡಿಸಿದೆ. ಅದೆಂದರೆ, ಸಂಕ್ರಾಂತಿ, ದಸರಾ ಮುಂತಾದ ಹಬ್ಬಗಳ ದಿನಗಳಲ್ಲಿ ತೆಲುಗಿನ ಮೂಲ ಚಿತ್ರಗಳಿಗೆ ಬಿಡುಗಡೆಗೆ ಆದ್ಯತೆ ನೀಡಬೇಕು, ಉಳಿಕೆ ಚಿತ್ರಮಂದಿರಗಳಲ್ಲಿ ಮಾತ್ರ ಡಬ್ ಆಗಿ ಬರುವ ತೆಲುಗು ಚಿತ್ರಗಳಿಗೆ ಅವಕಾಶ ನೀಡಬೇಕು ಎನ್ನುವುದು, ತಮ್ಮ ಈ ಬೇಡಿಕೆಯನ್ನುಅಲ್ಲಿನ ಪ್ರದರ್ಶಕರಿಗೆ ಮತ್ತು ವಿತರಕರಿಗೆ ಮಂಡಳಿ ಕಳುಹಿಸಿದೆ.

ಇಂತಹದೊಂದು ಯೋಚನೆ ತೆಲುಗುಚಿತ್ರರಂಗದಲ್ಲಿ ಇದು ಹೊಸದಲ್ಲ. ೨೦೧೯ರಲ್ಲಿ, ಅಲ್ಲಿನ ಚಲನಚಿತ್ರ ವಾಣಿಜ್ಯ ಮಂಡಳಿ, ಡಬ್ ಆದ ಚಿತ್ರಗಳಿಗೆ ಚಿತ್ರಮಂದಿರಗಳನ್ನು ನೀಡುವುದರ ವಿರುದ್ಧ ನಿಲುವು ತಾಳಿತ್ತು. ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಯ ಹಾಲಿ ಉಪಾಧ್ಯಕ್ಷರಾಗಿರುವ ದಿಲ್ ರಾಜು ಅವರು ೨೦೧೯ರಲ್ಲಿ ಹೇಳಿರುವ ಮಾತನ್ನು ಉದ್ದರಿಸಿ, ಮೊನ್ನೆ ನಿರ್ಮಾಪಕರ ಮಂಡಳಿ ಈ ನಿಲುವನ್ನು ಪ್ರಕಟಿಸಿದೆ.

ಇಂತಹದೊಂದು ನಿರ್ಧಾರಕ್ಕೆ ಕನ್ನಡದಲ್ಲಿ ತಯಾರಾಗಿ, ಇತರ ಭಾಷೆಗಳಿಗೂ ಡಬ್ ಆದ ಕೆಜಿಎಫ್ಚಾರ್ಪ್ಟ ೨, ಜೇಮ್ಸ್, ೭೭೭ ಚಾರ್ಲಿ, ವಿಕ್ರಾಂತ್ರೋಣ ಇದೀಗ ಕಾಂತಾರ ಇವು ಗಲ್ಲಾಪೆಟ್ಟಗೆಯಲ್ಲಿ ಬರೆದ ದಾಖಲೆ ಕಾರಣ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೊನ್ನೆ ದೀಪಾವಳಿ ವೇಳೆ ತೆರೆ ಕಂಡ ತೆಲುಗು ಚಿತ್ರಗಳ ಗಳಿಕೆ ಕಾಂತಾರದ ಮುಂದೆ ಏನೇನೂ ಆಗಿರಲಿಲ್ಲ ಎನ್ನಲಾಗಿದೆ.   ತೆಲುಗು ಚಿತ್ರರಂಗದ ಈ ಬೆಳವಣಿಗೆಗೂ, ಕನ್ನಡ ಚಿತ್ರರಂಗ ದಶಕಗಳ ಹಿಂದೆ ತಾಳಿದ್ದ ಡಬ್ಬಿಂಗ್ ವಿರೋಧಿ ನಿಲುವಿಗೂ ಸಾಮ್ಯವಿದೆಯೇ? ಇದು ಗಮನಿಸಬೇಕಾದ ಬೆಳವಣಿಗೆ. ಅದೇನೇ ಇರಲಿ, ಕನ್ನಡ ಚಿತ್ರರಂಗದ ಎಲ್ಲ ಸಂಘಟನೆಗಳೂ ಮೈಕೊಡವಿ ಎದ್ದೇಳಲು, ದೂರಗಾಮಿಯಾಗಿ ಯೋಚಿಸಲು ಇದು ಸಕಾಲವಂತೂ ಹೌದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ