Mysore
21
overcast clouds

Social Media

ಸೋಮವಾರ, 07 ಅಕ್ಟೋಬರ್ 2024
Light
Dark

ವೈಡ್ ಆಂಗಲ್: ಸಿನಿಮಾ ಪ್ರಚಾರದ ಈ ಪರಿ; ವಿವಾದವೂ ಪ್ರಚಾರದ ರೀತಿ

ಜನವರಿ 26, ಭಾರತ ಸಂವಿಧಾನ ಬದ್ಧವಾಗಿ ಸಾರ್ವಭೌಮ ಪ್ರಜಾಪ್ರಭುತ್ವ ಗಣ ರಾಜ್ಯವಾದ ದಿನ.

ಈ ಬಾರಿ ಜ. 26 ರಂದು ಕನ್ನಡ ಚಿತ್ರ ‘ಕ್ರಾಂತಿ’ ತೆರೆಗೆ ಬರಲಿದೆ. ಅದರ ಮುನ್ನಾದಿನ ‘ಪಠಾಣ್’ ಹಿಂದಿ ಚಿತ್ರ. ಅವೆರಡು ಚಿತ್ರಗಳು ಹೇಗಿವೆಯೋ, ಅವುಗಳನ್ನು ಪ್ರೇಕ್ಷಕ ಹೇಗೆ ಸ್ವೀಕರಿಸುತ್ತಾನೋ ಮುಂದಿನ ದಿನಗಳು ಹೇಳಲಿವೆ. ಆದರೆ ಈ ಎರಡೂ ಚಿತ್ರಗಳು ಬಿಡುಗಡೆಗೂ ಮುನ್ನ ಪಡೆದ ಪ್ರಚಾರವಂತೂ ಅವುಗಳಿಗೆ ಅವೇ ಸಾಟಿ ಎನ್ನುವಂತಿದೆ. ಕೊಡುಗೆ ಸಾಮಾಜಿಕ ತಾಣಗಳು ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ.

‘ಕ್ರಾಂತಿ’ ಚಿತ್ರವನ್ನು ಬಿ.ಸುರೇಶ ಮತ್ತು ಶೈಲಜಾ ನಾಗ್ ತಮ್ಮ ಮೀಡಿಯಾ ಹೌಸ್ ಮೂಲಕ ನಿರ್ಮಿಸಿದ್ದಾರೆ. ಇದರ ಮುಖ್ಯ ಪಾತ್ರಧಾರಿ ದರ್ಶನ್. ದರ್ಶನ್ ಮಾಧ್ಯಮಗಳ ಕುರಿತಂತೆ ಆಡಿದರೆನ್ನಲಾದ ಮಾತುಗಳ ಕಾರಣದಿಂದ ಒಂದೆರಡರ ಹೊರತಾಗಿ ಸುದ್ದಿವಾಹಿನಿಗಳು ಅವರ ಸುದ್ದಿಗಳನ್ನು ಪ್ರಕಟಿಸುತ್ತಿಲ್ಲ. ಈ ಮಾತಿನ ಆಡಿಯೋ ಜಾಲತಾಣಗಳಲ್ಲಿದೆ. ಈ ಕುರಿತಂತೆ ಅವರ ಜೊತೆ ಪ್ರಸ್ತಾಪಿಸಿದವರೊಂದಿಗೆ, ‘ಅದು ಎಡಿಟೆಡ್ ಆಡಿಯೋ. ಎಡಿಟ್ ಮಾಡದೆ ಇರುವ ಆಡಿಯೋದಲ್ಲಿ ಏನಿದೆ ಎನ್ನುವುದು ತಿಳಿಯಬೇಕು. ಅದನ್ನು ಕೇಳಿದ ನಂತರ ನಾನು ಮಾಡಿದ್ದು ತಪ್ಪಾದರೆ ಕ್ಷಮೆ ಕೇಳುತ್ತೇನೆ’ ಎಂದು ಹೇಳಿದ್ದಾಗಿ ಅವರ ಆತ್ಮೀಯರು ಹೇಳುತ್ತಾರೆ.

ಹಾಗಂತ ಚಿತ್ರದ ಪ್ರಚಾರದ ಕೆಲಸ ನಿಂತಿಲ್ಲ. ತಮ್ಮ ಅಭಿಮಾನಿಗಳನ್ನು ‘ಸೆಲೆಬ್ರಿಟಿ’ಗಳು ಎಂದು ಕರೆಯುತ್ತಾರೆ ದರ್ಶನ್. ಅವರ ಅಭಿನಯದ ‘ಕ್ರಾಂತಿ’ ಚಿತ್ರದ ಪ್ರಚಾರವನ್ನು ಈಗ ಈ ಸೆಲೆಬ್ರಿಟಿಗಳೇ ಕೈಗೆತ್ತಿಕೊಂಡಿದ್ದಾರೆ. ಹಿಂದೆಂದೂ ಕಂಡಿರಲಾರದ ರೀತಿಯಲ್ಲಿ ‘ಕ್ರಾಂತಿ’ ಚಿತ್ರದ ಪ್ರಚಾರ ಕ್ರಾಂತಿ ಆಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ತಮ್ಮ ನೆಚ್ಚಿನ ನಟನ ಚಿತ್ರವನ್ನು ಗೆಲ್ಲಿಸಿಯೇ ಸಿದ್ಧ ಎನ್ನುವುದು ಅವರ ಶಪಥವಿದ್ದಂತಿದೆ. ಅಭಿಮಾನ, ಜನಪ್ರಿಯತೆ ಮಾತ್ರ ಒಂದು ಚಿತ್ರವನ್ನು ಗೆಲ್ಲಿಸಬಹುದೇ ಎಂದು  ಕೇಳುವವರೂ ಇಲ್ಲದಿಲ್ಲ.

ಯಾವುದೇ ಚಿತ್ರವಿರಲಿ, ಅದು ಪ್ರೇಕ್ಷಕರಿಗೆ ಇಷ್ಟವಾಯಿತು ಎಂದಾದರೆ, ಯಾವುದೇ ಹೆಚ್ಚಿನ ಪ್ರಚಾರದ ಅಬ್ಬರವಿಲ್ಲದೆ, ಜನರಿಂದ ಜನರಿಗೆ ಪ್ರಚಾರವಾಗಿ ಭಾರೀ ಗೆಲುವನ್ನು ಪಡೆಯಬಹುದು ಎನ್ನುವುದಕ್ಕೆ ನಮ್ಮ ಮುಂದೆ ಇತ್ತೀಚೆಗೆ ಪವಾಡಸದೃಶ ಗೆಲುವನ್ನು ಕಂಡ ‘ಕಾಂತಾರ’ದಂತಹ ಚಿತ್ರವಿದೆ. ಆ ಚಿತ್ರದ ನಿರ್ಮಾಣ ಸಂಸ್ಥೆಯ ಮತ್ತೊಂದು ಚಿತ್ರದ ಪ್ರಚಾರಕ್ಕೆ ವೆಚ್ಚಮಾಡಿದ ಅರ್ಧದಷ್ಟೂ ನಿರ್ಮಾಣ ವೆಚ್ಚ ಮಾಡದ ‘ಕಾಂತಾರ’, ಭಾರತದಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಚಿತ್ರ.

ಪ್ರಚಾರ, ಗೆಲುವು ಈ ಮಾತುಗಳಂತಿರಲಿ, ಪ್ರಚಾರದ ವೇಳೆ ನಡೆದ ಚಪ್ಪಲಿ ಪ್ರಸಂಗ, ಅಭಿಮಾನಿಗಳು ಅನಿಸಿಕೊಂಡವರ ಮನಸ್ಥಿತಿಗೆ ಕನ್ನಡಿ ಹಿಡಿದಿತ್ತು. ಯಾವನೋ ಒಬ್ಬ ಕಿಡಿಗೇಡಿಯ ವರ್ತನೆಗೆ ಸಾಮಾಜಿಕ ತಾಣಗಳಲ್ಲಿ, ಗುಂಪುಗಳಲ್ಲಿ ನಡೆಯುತ್ತಿದ್ದ ಚರ್ಚೆ, ವಾಗ್ವಾದಗಳು ಯಾವುವೂ ಸುಸಂಸ್ಕೃತ ಎನಿಸಿದ್ದಲ್ಲ. ಪರಸ್ಪರ ಸ್ಪರ್ಧೆಯೋ ಎಂಬಂತೆ ಕೆಟ್ಟಾತಿ ಕೆಟ್ಟ ಬೈಗುಳಗಳ ಪ್ರಯೋಗ ನಡೆದಿತ್ತು.

ಯಾರು ಬೇಕಾದರೂ ಯುಟ್ಯೂಬ್ ವಾಹಿನಿಗಳನ್ನು ಆರಂಭಿಸುತ್ತಿರುವ ದಿನಗಳಿವು. ಅಲ್ಲಿ ಆಡುವ ಮಾತುಗಳಿಗೆ ನಿಯಂತ್ರಣ ಇಲ್ಲ. ಮಾಹಿತಿಗಳ ಸತ್ಯಾಸತ್ಯತೆ ತಿಳಿದಿರುವುದಿಲ್ಲ. ತಮ್ಮ ಮೂಗಿನ ನೇರಕ್ಕೆ ಆಡುವ ಮಾತುಗಳು. ಯಾರು ಏನನ್ನಾದರೂ ಹೇಳಬಹುದಾದ ಜಾಗವದು. ‘ಆಚಾರವಿಲ್ಲದ ನಾಲಿಗೆ, ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ, ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವಂಥ ನಾಲಿಗೆ’ ಎನ್ನುವ ದಾಸರ ಪದ ಈಗ, ಹೀಗೆ ಸಾಮಾಜಿಕ ತಾಣಗಳಲ್ಲಿ ಕೈಯಾಡಿಸುವ ಬಹುತೇಕ ಮಂದಿಗೆ ಅನ್ವಯವಾಗುವಂತಹದು.

‘ಕ್ರಾಂತಿ’ ಪ್ರಚಾರದ ವೇಳೆ, ಸಾಮಾಜಿಕ ತಾಣದಲ್ಲಿ ಪುನೀತ್ ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಸಮರವೇ ನಡೆಯಿತು. ದರ್ಶನ್ ಮತ್ತು ಸುದೀಪ್ ಭೇಟಿಯಾದರು! ಸುದೀಪ್ ಪ್ರಚಾರಕ್ಕೆ ಬಂದರು. ಎಲ್ಲವೂ ಸಾಮಾಜಿಕ ತಾಣದ ಕೊಡುಗೆ.

ಇದು ಒಂದೆಡೆಯಾದರೆ, ಗಣರಾಜ್ಯೋತ್ಸವದ ಹಿಂದಿನ ದಿನ ತೆರೆಗೆ ಬರುವ ‘ಪಠಾಣ್’ ಹಿಂದಿ ಚಿತ್ರದ್ದು ಬೇರೆಯೇ ಕಥೆ. ಶಾರುಕ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ಈ ಚಿತ್ರ ವಿವಾದಕ್ಕೆ ಈಡಾದದ್ದು ಬಣ್ಣದ ಕಾರಣಕ್ಕೆ. ಹಾಡೊಂದರಲ್ಲಿ ಅರೆನೀಲಿ ಚಿತ್ರದ ಭಂಗಿಯಲ್ಲಿ ಶಾರುಕ್ ಮತ್ತು ದೀಪಿಕಾ ಇರುವ ಚಿತ್ರಿಕೆಯೊಂದಿದೆ. ಅದರಲ್ಲಿ ಆಕೆ ಧರಿಸಿರುವ ಉಡುಪು ಕೇಸರಿ ಬಣ್ಣದ್ದಾದರಿಂದ, ಅದು ಭಗವಾಧ್ವಜದ ಬಣ್ಣ ಎಂದು ತಕರಾರು ಎತ್ತಲಾಯಿತು. ಅದರ ವಿರುದ್ಧ ಪ್ರತಿಭಟನೆಗಳಾದವು. ಚಿತ್ರವನ್ನು ತೆರೆಗೆ ಬರಲು ಬಿಡಲಾರೆವು ಎಂದವರೂ ಇದ್ದರು.

ಚಿತ್ರದ ಆ ಹಾಡಿನ ಭಂಗಿ ನೋಡಿದರೆ, ಹಿಂದಿ ಚಿತ್ರರಂಗದ ಪಾಡನ್ನು ನೋಡಿ ಯಾರಾದರೂ ಅನುಕಂಪಪಡುವಂತಿದೆ. ಹಿಂದಿಯೇತರ ಭಾರತೀಯ ಚಿತ್ರಗಳ ವಿಜೃಂಭಣೆ, ಅದರಲ್ಲೂ‘ಕಾಂತಾರ’, ‘ಕೆಜಿಎಫ್ ಚಾಪ್ಟರ್ 2’, ‘777 ಚಾರ್ಲಿ’, ‘ಆರ್‌ಆರ್‌ಆರ್’ನಂತಹ ಚಿತ್ರಗಳು ಹಿಂದಿ ಚಿತ್ರರಂಗದ ನಿದ್ದೆಗೆಡಿಸಿದ್ದು, ಈ ಚಿತ್ರಗಳ ಡಬ್ಬಿಂಗ್ ಅವತರಣಿಕೆಗೆ ನಿಯಂತ್ರಣ ಹೇಗೆ ಎಂದು ಅಲ್ಲಿ ಚರ್ಚೆಯಾಗಿರುವುದು ಎಲ್ಲವೂ ಬಹಿರಂಗ ಗುಟ್ಟು. ದೀಪಿಕಾ ಪಡುಕೋಣೆಯಂತಹ ನಟಿ  ಈ ಚಿತ್ರದ ಈ ರೀತಿಯ ಹಾಡಿಗೆ ಕುಣಿಯಲು ಒಪ್ಪಬೇಕಾಗಿತ್ತೇ ಎಂದು ಕೇಳುವವರೂ ಇದ್ದಾರೆ. ಪಾಪ, ಅವರಿಗೆ ಅದು ಅಸ್ತಿತ್ವದ ಪ್ರಶ್ನೆಯೂ ಆಗಿರಬಹುದು.

ಚಿತ್ರದಲ್ಲಿ ಬಳಸಿದ ಬಟ್ಟೆಯ ಬಣ್ಣ ಬೇರೊಂದು ದಾರಿ ಹಿಡಿಯಿತು, ಚಿತ್ರವನ್ನು ಬಹಿಷ್ಕರಿಸಬೇಕು ಎನ್ನುವುದಾಗಿ, ಅಲ್ಲಲ್ಲಿ ಪ್ರತಿಭಟನೆಗಳೂ ನಡೆದವು. ರಾಜಕೀಯವೂ ಸೇರಿದಂತೆ ಎಲ್ಲ ರೀತಿಯ ಒಳಸುಳಿಗಳಿಗೂ ಸಿಕ್ಕಿ ಹಾಕಿಕೊಂಡ ಚಿತ್ರ ಈಗ ಪ್ರಮಾಣಪತ್ರ ಪಡೆದುಕೊಂಡಿದೆ. ಚಿತ್ರಗಳ ಕುರಿತಂತೆ ಯಾರೂ ಅನಗತ್ಯ ಟೀಕೆ ಮಾಡಬಾರದು, ಅದು ಹೆಚ್ಚು ಪ್ರಚಾರ ಪಡೆಯುವುದರಿಂದ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಮುಕ್ಕಾಗುತ್ತದೆ ಎಂದು ಪ್ರಧಾನಿ ಮೋದಿ ಅವರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ. ಹಾಗಾಗಿ ವಿವಾದ ತಣ್ಣಗಾಗಲಿದೆ. ಏನೇ ಇರಲಿ, ಈ ಬೆಳವಣಿಗೆ ಚಿತ್ರದ ಪ್ರಚಾರಕ್ಕೆ ಪೂರಕವಾದದ್ದಂತೂ ಹೌದು.

ಆರಂಭದ ದಿನಗಳಲ್ಲಿ ಸಿನೆಮಾಗಳ ಪ್ರಚಾರಕ್ಕೆ ನೋಟೀಸು, ಭಿತ್ತಿಪತ್ರ, ಸ್ಲೈಡ್‌ಗಳು, ಬ್ಯಾನರ್, ಕಟೌಟ್‌ಗಳು, ಮೈಕ್‌ನಲ್ಲಿ, ರೇಡಿಯೊ, ಪತ್ರಿಕೆಗಳಲ್ಲಿ ಜಾಹೀರಾತು, ವಿಮರ್ಶೆ ವಿಶ್ಲೇಷಣೆಗಳು ನೆರವಾಗುತ್ತಿದ್ದವು. ಡಿಜಿಟಲ್ ದಿನಗಳ ನಂತರ, ದೃಶ್ಯಮಾಧ್ಯಮಗಳು, ಸಾಮಾಜಿಕ ತಾಣಗಳು ಅದಕ್ಕೆ ಸೇರ್ಪಡೆಯಾಗಿವೆ.

ಕನ್ನಡ ಚಿತ್ರರಂಗಕ್ಕೆ ಸಂಬಂಧಪಟ್ಟಂತೆ ಹೇಳುವುದಾದರೆ, ಪತ್ರಿಕೋದ್ಯಮ, ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾಗಿ ನಿಂತಿತ್ತು. ಮುಖ್ಯವಾಹಿನಿ ಚಿತ್ರಗಳಿರಲಿ, ನಂತರ ಬಂದ ಸಮಾನಾಂತರ ಚಿತ್ರಗಳಿರಲಿ, ಅವುಗಳಿಗೆ ಪೂರಕವಾಗಿ ನಿಂತದ್ದು ಪತ್ರಿಕೋದ್ಯಮ. ‘ನಾನು ಚಿತ್ರರಂಗ ಪ್ರವೇಶಿಸಿದ್ದು 1975ರಲ್ಲಿ. ಆಗ ಚಲನಚಿತ್ರ ಪತ್ರಕರ್ತರು ಬೆನ್ನೆಲುಬಾಗಿದ್ದರಿಂದ ಈ ಮಟ್ಟಕ್ಕೆ ಬೆಳೆಯಲು ಸಹಕಾರಿ ಆಯಿತು’ ಎಂದು ಮೊನ್ನೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘದ ಉದ್ಘಾಟನೆಯನ್ನು ಮಾಡಿದ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರು ಹೇಳಿದರು. ಇದು ಪತ್ರಿಕೋದ್ಯಮ ಮತ್ತು ಚಿತ್ರೋದ್ಯಮ ಪರಸ್ಪರ ಹಾಸುಹೊಕ್ಕಾಗಿದ್ದ ದಿನಗಳಿಗೆ ನಿದರ್ಶನ.

ಬಹಳ ಹಿಂದಿನಿಂದಲೂ ಪತ್ರಕರ್ತರು ಕಲಾವಿದರ ಸಂಘಟನೆಗೆ ನೆರವಾಗಿದ್ದರು. ಐವತ್ತರ ದಶಕದಲ್ಲಿ ಪತ್ರಕರ್ತ ಗಂಗರತ್ನಂ ಅವರು ಕಲಾವಿದರ ಸಂಘವನ್ನು ಸ್ಥಾಪಿಸಲು ಒತ್ತಾಸೆಯಾಗಿದ್ದರು. ಅರವತ್ತರ ದಶಕದ ಆರಂಭದಲ್ಲಿ ಪ್ರವಾಹ ಪೀಡಿತರಿಗೆ ನೆರವಾಗಲು ಚಲನಚಿತ್ರ ರಂಗದ ಮಂದಿ ರಾಜ್ಯಾದ್ಯಂತ ಪ್ರವಾಸ ಮಾಡಲು ಪ್ರಜಾವಾಣಿ ಪತ್ರಿಕೆಯ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುತ್ತಿದ್ದ ಎಂ.ಬಿ.ಸಿಂಗ್ ಕಾರ್ಯೋನ್ಮುಖರಾದರು.

ಪತ್ರಕರ್ತರು ಮತ್ತು ತಮಿಳಿನಲ್ಲಿ ಹೆಸರಾಗಿದ್ದ ಕನ್ನಡದ ತಾರೆಯೊಬ್ಬರ ನಡುವೆ ಮನಸ್ತಾಪವಾಗಿ ಅವರ ಸುದ್ದಿಗಳನ್ನು ಪ್ರಕಟಿಸದೆ ಇದ್ದ ದಿನಗಳಿದ್ದವು. ನಂತರ, ಅವರು ತಮ್ಮ ತಪ್ಪಿಗೆ ಪತ್ರಕರ್ತರಲ್ಲಿ ಕ್ಷಮೆ ಕೇಳಿದ ಪ್ರಸಂಗವೂ ಇತ್ತು.

ಸಾಮಾಜಿಕ ತಾಣಗಳು ವರವೂ ಹೌದು, ಶಾಪವೂ ಹೌದು. ಅವುಗಳ ಬಳಕೆಯನ್ನು ಯಾರು ಮಾಡುತ್ತಾರೆ, ಅವರ ಆಸಕ್ತಿಗಳೇನು, ಅವರ ಹಿನ್ನೆಲೆ ಏನು ಎನ್ನುವುದರ ಮೇಲೆ ಅದು ಅವಲಂಬಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ