Light
Dark

ವೀರಪ್ಪನ್ ಕ್ರೌರ್ಯ; ಮೈಸೂರಿನಲ್ಲಿ ಕರಾಳ ಸ್ವಾತಂತ್ರ್ಯೋತ್ಸವ

 ೧೯೯೨ ರ ಆಗಸ್ಟ್ ೧೪ ಇಂದಿಗೆ ಮೂವತ್ತು ವರ್ಷಗಳ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಸರ್ವ ಸಿದ್ಧತೆಗಳೂ ಮುಗಿದು, ಇಡೀ ನಗರ ಸಂಭ್ರಮದಿಂದ ಸಜ್ಜಾಗಿತ್ತು. ಮಾರನೇ ದಿನವೇ ಭಾರತದ ನಲವತ್‌ತೈದನೇ ಸ್ವಾತಂತ್ರ್ಯೋತ್ಸವ . ಅದೊಂದು ಸುದ್ದಿ ಬರಸಿಡಿಲಿನಂತೆ ಬಂದೆರೆಗಿತು. ಮೈಸೂರು ಜಿಲ್ಲಾ ಎಸ್ಪಿ ಟಿ. ಹರಿಕೃಷ್ಣ , ಸಬ್ ಇನ್ಸ್‌ಪೆಕ್ಟರ್ ಶಕೀಲ್ ಅಹಮದ್ ಮತ್ತು ಐದು ಮಂದಿ ಪೊಲೀಸರನ್ನು ವೀರಪ್ಪನ್ ದಾರುಣವಾಗಿ ಹತ್ಯೆ ಮಾಡಿದ್ದ. ಇಡೀ ಮೈಸೂರು ತಲ್ಲಣಿಸಿ ಹೋಗಿತ್ತು. ಕೇವಲ ಮೂರು ವರ್ಷದ ಹಿಂದೆ, ಇದೇ ವೀರಪ್ಪನ್ ಮೈಸೂರಿನ ನಾಲ್ಕು ಯುವ ಪೊಲೀಸ್ ಅಧಿಕಾರಿಗಳನ್ನು ಭೀಕರವಾಗಿ ಕೊಲೆಗೈದಿದ್ದ. ಸಬ್ ಇನ್ಸ್‌ಪೆಕ್ಟರ್‌ಗಳಾದ ಜಗನ್ನಾಥ್ , ರಾಮಲಿಂಗು , ದಿನೇಶ್, ಶಂಕರರಾವ್ ಹತ್ಯೆಯಾದವರು. ಡಿಸಿಎಫ್ ಶ್ರೀನಿವಾಸ್ ಅವರ ರುಂಡ ಕತ್ತರಿಸಿದ್ದ. ರಾಮಾಪುರ ಠಾಣೆಗೆ ನುಗ್ಗಿ ಪೊಲೀಸರನ್ನು ಕೊಂದು ಅಟ್ಟಹಾಸಗೈದಿದ್ದ. ಅಲ್ಲದೆ ಕರ್ನಾಟಕ, ತಮಿಳುನಾಡಿನ ಪೊಲೀಸ್ ಮತ್ತು ಅರಣ್ಯಾಧಿಕಾರಿಗಳನ್ನು ಕೊಂದಿದ್ದು ಆ ಸಂಖ್ಯೆ ನೂರನ್ನು ದಾಟಿತ್ತು.

ಅವರೆಲ್ಲ ಮೂವತ್ತರ ಆಸುಪಾಸಿನಲ್ಲಿದ್ದ young and energetic ಪೊಲೀಸರು.
ಮೈಸೂರೇನು? ಇಡೀ ನಾಡು ಕಣ್ಣೀರಿಟ್ಟಿತ್ತು. ಆ ನೋವು ಆರುವುದರೊಳಗೆ ಈಗ ಸ್ವಾತಂತ್ರ್ಯೋತ್ಸವದ ಹೊಸ್ತಿಲಲ್ಲಿ ಏಳು ಜನ ಪೊಲೀಸ್ ಅಧಿಕಾರಿಗಳು ಒಟ್ಟಿಗೆ ಹುತಾತ್ಮರಾಗಿದ್ದಾರೆ.

ಅವರೆಲ್ಲ ಡ್ಯೂಟಿಯಲ್ಲಿದ್ದಾಗ ಹೃದಯಾಘಾತವಾಗಿಯೋ , ಆಕಸ್ಮಿಕ ಅಪಘಾತಕ್ಕೀಡಾಗಿಯೋ ಮೃತಪಟ್ಟವರಲ್ಲ. ನಿರ್ದಿಷ್ಟವಾಗಿ ಕಾಡುಗಳ್ಳ ವೀರಪ್ಪನ್ನನ್ನು ಹಿಡಿಯಲು ಹೋದಾಗ ನಡೆದ ಕಾಳಗದಲ್ಲಿ ಹತ್ಯೆಯಾದವರು.

ಎಸ್ಪಿ ಹರಿಕೃಷ್ಣ ಕೇವಲ ಮೂರು ದಿನದ ಹಿಂದೆ ಮೈಸೂರಿನ ಸ್ವಾತಂತ್ರ್ಯೋತ್ಸವ ಪೆರೇಡ್ ರಿಹರ್ಸಲ್ಲಿಗೆ ಬಂದು ಎಲ್ಲರನ್ನೂ ಮಾತಾಡಿಸಿ ನಗುನಗುತ್ತಾ ಬೆಟ್ಟಕ್ಕೆ ಹೋಗಿದ್ದರು. ‘ ರೀ ರಂಗಸ್ವಾಮೀ ನಿಮ್ಮ ಕಾಮೆಂಟರಿಯಲ್ಲಿ ಸಂಸ್ಕೃತ ಶಬ್ಧ ಜಾಸ್ತಿ ಬಳಸುತ್ತೀರಾ? ಕನ್ನಡವನ್ನೇ ಪೂರ್ತಿ ಬಳಸ್ರೀ !’ ಎಂಬ ಕಿವಿಮಾತು ಬೇರೆ ಹೇಳಿ ಹೋಗಿದ್ದರು.

ಇನ್ನು ಶಕೀಲ್ ಅಹಮದ್ ಮೈಸೂರಿನಲ್ಲೇ ಹುಟ್ಟಿ ಬೆಳೆದ ಯುವಕ. ಜಿಯಾಲಜಿ ಎಂಎಸ್ಸಿ ಮಾಡಿದ್ದ. ಪ್ರಾಮಾಣಿಕತೆ ಮತ್ತು ನಿಷ್ಠೆಗೆ ಹೆಸರಾಗಿದ್ದವ. ಆತನ ಹತ್ಯೆಯಂತೂ ನಮ್ಮೆಲ್ಲರಿಗೆ ಸಹಿಸಲಸಾಧ್ಯವಾಗಿತ್ತು.

ವರ್ಗಾವಣೆ ನಡೆದಾಗ ನಮ್ಮಿಬ್ಬರಿಗೆ ಪರಸ್ಪರ ಪೋಸ್ಟಿಂಗ್ ಆಗಿತ್ತು. ನಾನಿದ್ದ ಸರಸ್ವತಿಪುರಂ ಠಾಣೆಗೆ ಶಕೀಲ್ ಬಂದಿದ್ದ . ನಾವಿಬ್ಬರೂ ಹೋಗೋ ಬಾರೋ ಗೆಳೆಯರು. ಅವನಿದ್ದ ಲಷ್ಕರ್ ಠಾಣೆಗೆ ನಾನು ವರ್ಗವಾಗಿದ್ದೆ. ಎರಡೂ ಠಾಣೆಗಳ ಹಳೆಯ ಕೇಸುಗಳ ತನಿಖೆ ಬಗ್ಗೆ ನಾವು ಭೆಟ್ಟಿಯಾಗುತ್ತಿದ್ದೆವು. ಆ ದಿನಗಳಲ್ಲಿ ನಾನು ಪೊಲೀಸ್ ಸಂಘದ ಕಾರ್ಯದರ್ಶಿಯಾಗಿದ್ದೆ. ನನಗೆ ಬೇರೊಂದು ಜವಾಬ್ದಾರಿ ವಹಿಸಿದ್ದರಿಂದಾಗಿ ಕಾರ್ಯದರ್ಶಿ ಸ್ಥಾನ ತೆರವು ಮಾಡಬೇಕಿತ್ತು. ಯಾರನ್ನು ನೇಮಿಸಿದರೆ ಉತ್ತಮ? ಈ ಪ್ರಶ್ನೆ ಬಂದಾಗ ಒಕ್ಕೊರಲಿನಿಂದ ಆಯ್ಕೆಯಾದ ಹೆಸರೇ ಶಕೀಲನದ್ದು. ನಿಸ್ಪೃಹತೆ, ಪ್ರಾಮಾಣಿಕತೆಗೆ ಶಕೀಲ್ ಅದಾಗಲೇ ಹೆಸರಾಗಿದ್ದ . ಠಾಣಾ ಜವಾಬ್ದಾರಿಗಳ ಕೊಡು ಕೊಳ್ಳುವಿಕೆಯಿಂದಾಗಿ ನಮ್ಮ ನಡುವೆ ಒಡನಾಟ ಹೆಚ್ಚಾಗಿತ್ತು.

‘ನನ್ನ ಬ್ಯಾಚ್ ಮೇಟ್ ಜಗನ್ನಾಥನ ಸಾವಿಗೆ ಸೇಡು ತೀರಿಸಲೇಬೇಕು . ನಾನು ಎಸ್ ಟಿ ಎಫ್ ಗೆ ಹೋಗ್ತೀನಿ. ಆ ವೀರಪ್ಪನ್ನ್ನು ಉಡಾಯಿಸುತ್ತೀನಿ’ ಎಂದು ಪದೆ ಪದೇ ಹೇಳ್ತಿದ್ದ .

ನನಗೋ ಆಶ್ಚರ್ಯ. ಸ್ನೇಹಿತನ ಸಾವಿಗೆ ಸೇಡು ತೀರಿಸಲು ಕಾಡಿಗೆ ಹೋಗ್ತೀನಿ ಅಂತಿದ್ದಾನೆ. ಅದರೆ ಪ್ರಾಣಕ್ಕೆ ಪ್ರಾಣ ಕೊಡುವಂಥ ಗಾಢವಾದ ಸ್ನೇಹವೇನೂ ಅವರಿಬ್ಬರ ನಡುವೆ ಇದ್ದಂತಿರಲಿಲ್ಲ. ಯಾಕೆಂದರೆ ಜಗನ್ನಾಥ್ , ಶಕೀಲ್ , ನಾನು , ಚಂದ್ರಪ್ಪ ಎಲ್ಲರೂ ಸಮಾನ ಸ್ನೇಹಿತರು. ಅವರವರು ಬ್ಯಾಚ್‌ಮೇಟ್ಸ್ ಎಂಬುದನ್ನು ಬಿಟ್ಟರೆ ಜಗನ್ನಾಥರ ಆತ್ಮೀಯ ವಲಯದಲ್ಲಿ ಶಕೀಲ್ ಇರಲಿಲ್ಲ. ಸಹೋದ್ಯೋಗಿ ಫ್ರೆಂಡ್ಸ್ ಅಷ್ಟೇ. ಆದರೆ ಶಕೀಲ್ ತೀವ್ರ ಭಾವೋದ್ವೇಗಿ. ಸ್ನೇಹಿತ ಎಂದರೆ ಮುಗಿಯಿತು. ಪ್ರಾಣಕ್ಕೆ ಪ್ರಾಣ ಕೊಡಬಲ್ಲ ನಿಯತ್ತುಗಾರ. ಅನೇಕ ಆದರ್ಶಗಳ ಕನಸುಗಾರ. ಸ್ನೇಹಿತನ ಸಾವಿಗೆ ಪ್ರತೀಕಾರ ಎಂಬುದು ನಿತ್ಯ ಮಂತ್ರವಾಗಲು ಇಲಾಖೆಯ ಬಗ್ಗೆ ಆತನಿಗಿದ್ದ ತೀವ್ರ ವಾಂಛಲ್ಯ ಕಾರಣವಾಗಿತ್ತು. ಕೊನೆಗೂ ಅವನ ಬೇಡಿಕೆಯಂತೆ STF ಗೆ ವರ್ಗವಾಯಿತು. ಅವನಿದ್ದ ಸ್ಥಳಕ್ಕೆ ನಾನು incharge ಅಗಿ ನಿಯೋಜನೆಗೊಂಡೆ.

ಷಕೀಲ್ ಮೈಸೂರಿಗೆ ಬಂದಾಗಲೆಲ್ಲ ಭೆಟ್ಟಿಯಾಗುತ್ತಿದ್ದ . ಆಗೆಲ್ಲಾ ಒಂದೇ ಮಾತು. ನೋಡ್ತಾ ಇರು. ನನ್ನ ಬುಲೆಟ್ಟಿಗೇ ಅವನು ಬೀಳೋದು. ಈಗ ಹರಿಕೃಷ್ಣ ಪುನಃ ಬಂದಿದ್ದಾರೆ. Very dynamic officer. ಈ ಮೊದಲೂ STF ನಲ್ಲಿ ಕೆಲಸ ಮಾಡಿದ್ದರು. ನನಗೆ free hand ಕೊಟ್ಟಿದ್ದಾರೆ ಎಂದೆಲ್ಲ ಮಾತಾಡುತ್ತಿದ್ದ.

ನನಗೇಕೋ ಅತಿರೇಕ ಅನ್ನಿಸುತ್ತಿತ್ತು. ಆದರೆ ಆ ಧೃಡವಾದ ಕೆಚ್ಚು, ಛಾತಿ ಮತ್ತು ಬದ್ಧತೆ ನೋಡಿದರೆ ಗೆದ್ದರೂ ಗೆಲ್ಲಬಲ್ಲ ಅನ್ನಿಸುತ್ತಿತ್ತು. ಈ ಬಗೆಯ passionate ತಿಕ್ಕಲರೇ ಮಹತ್ತಾದುದನ್ನು ಸಾಧಿಸಿಬಿಡುತ್ತಾರೆ.

ಈಗ ನೋಡಿದರೆ ಹೆಣವಾಗಿ ಬಂದಿದ್ದಾನೆ ಗೆಳೆಯ. ಪೊಲೀಸರಿದ್ದ ಕಾರಿನ ಮೇಲೆ ಗುಂಡಿನ ಸುರಿಮಳೆಯ ದಾಳಿ ನಡೆದು, ಶಕೀಲರ ತಲೆಗೆ ಬಿದ್ದ ಗುಂಡೇಟಿನಿಂದ ಮೃತಪಟ್ಟಿದ್ದರು. ಧೀರ್ಘಕಾಲ ಒಡನಾಡಿದ್ದ ಗೆಳೆಯ ಹತ್ಯೆಯಾಗಿದ್ದು ನಮ್ಮೆಲ್ಲರಿಗೆ ಇನ್ನಿಲ್ಲದಷ್ಟು ದುಃಖ ತಂದಿತ್ತು. ಶವದ ಬಳಿ ನಿಲ್ಲಲಾಗಲಿಲ್ಲ. ದುಃಖ ಒತ್ತರಿಸಿ ಬರುತ್ತಿತ್ತು. ಹರಿಕೃಷ್ಣರ ನಿವಾಸದತ್ತ ನಾನು, ಚಂದ್ರಪ್ಪ , ವೆಂಕಟಸ್ವಾಮಿ ಹೊರಟೆವು.

ಐದಾರು ತಿಂಗಳ ಹಿಂದೆ ಶಕೀಲ್ ಹೇಳಿದ್ದ ಮಾತು ರಿಂಗಣಗೊಳ್ಳುತ್ತಿತ್ತು.

೧೯೯೨ರ ಫೆಬ್ರವರಿಯಲ್ಲಿ ಕಲ್ಲು ಗಣಿ ಧಣಿಯೊಬ್ಬನ ಮಗನನ್ನು ವೀರಪ್ಪನ್ ಅಪಹರಿಸಿದ್ದ. ಎರಡು ಕೋಟಿ ಕೊಟ್ಟರೆ ಮಾತ್ರ ಬಿಡುಗಡೆ. ಇಲ್ಲದಿದ್ದರೆ ಕೊಂದು ಪೀಸ್‌ಪೀಸ್ ಮಾಡಿ ಕಳಿಸುವೆ ಎಂದು ಬೆದರಿಕೆ ಹಾಕಿ, ಒಂದು ಷರತ್ತನ್ನೂ ವಿಧಿಸಿದ್ದ.

ಎರಡು ದಿನದೊಳಗೆ ಜಿಪ್ಸಿ ಜೀಪಿನಲ್ಲಿ ಹಣ ತರಬೇಕು. ಡ್ರೈವರ್ ಒಬ್ಬನೇ ಬಂದು ಇಂಥ ರಸ್ತೆಯಲ್ಲಿ ಬೆಳಿಗ್ಗೆ ಆರು ಗಂಟೆಯಿಂದ ಹತ್ತು ಗಂಟೆಯವರೆಗೆ ಅಡ್ಡಾಡುತ್ತಿರಲಿ. ತಾವು ಹೇಗೋ ಬಂದು ಎಲ್ಲೋ ಒಂದು ಕಡೆ ಜೀಪು ನಿಲ್ಲಿಸಿ ಹಣ ಪಡೆದು ಕೊಳ್ಳುತ್ತೇವೆ. ತಕ್ಷಣವೇ ನಿಮ್ಮ ಮಗ ಮತ್ತಿತರರನ್ನು ಕ್ಷೇಮವಾಗಿ ಬಿಡುಗಡೆ ಮಾಡುತ್ತೇವೆ.
ಅವನ ಸಂದೇಶ ಸ್ಪಷ್ಟವಾಗಿತ್ತು.

ಅವನನ್ನು ಬಿಡಿಸಿಕೊಂಡು ಬರಲು ಹರಿಕೃಷ್ಣ ದೊಡ್ಡ ಕಾರ್ಯತಂತ್ರವನ್ನೇ ಹೆಣೆದಿದ್ದರು. ಸುಮಾರು ನಾನೂರು ಜನ ಪೊಲೀಸರ ೨೫ ತಂಡಗಳನ್ನು ರಚಿಸಿ , ಏಕ ಕಾಲದಲ್ಲಿ ಆ ಜಾಗಕ್ಕೆ ನಾನಾ ಕಡೆಗಳಿಂದ ನುಗ್ಗುವುದೆಂಬ ಯೋಜನೆ ಅದು. ಇಡೀ ತಂಡವೇ ರಾತ್ರೋರಾತ್ರಿ ಕಾಡಿಗೆ ಹೋಗಿ ಆಯಕಟ್ಟಿನ ಜಾಗಗಳಲ್ಲಿ ಅವಿತು ಕುಳಿತು ಕೊಳ್ಳುತ್ತದೆ.

ಯೋಜನೆಯಂತೆ ಬೆಳಗಿನ ಜಾವ ಆರುಗಂಟೆಗೆ ಜಿಪ್ಸಿ ಜೀಪು ಆ ರಸ್ತೆಯಲ್ಲಿ ಅಡ್ಡಾಡತೊಡಗುತ್ತದೆ. ವೀರಪ್ಪನ್ ತಂಡ ಹತ್ತು ಗಂಟೆಯೊಳಗೆ ಬರಲೇ ಬೇಕು. ಅನಾಮತ್ತಾಗಿ ಮೇಲೆರಗಿ ಹಿಡಿಯುವುದೇ ಪ್ಲ್ಯಾನ್.

ತೆಗೆದುಕೊಂಡಿದ್ದ fool proof ನಿರ್ಧಾರ ಅದು.

ಮುಂದಿನ ಹೆಜ್ಜೆ ಇಡಲು ಇನ್ನೇನು ಪೊಲೀಸರೆಲ್ಲ ಸಜ್ಜಾಗಿದ್ದರು. ಅಷ್ಟರಲ್ಲಿ ಅಂದಿನ ಗೃಹಮಂತ್ರಿ ಎಂ ಎಂ ಹಿಲ್ಸ್ ಗೆಸ್ಟ್ ಹೌಸಿಗೆ ಧಿಡೀರ್ ಬಂದವರೇ ತಕ್ಷಣ ಬಂದು ನೋಡುವಂತೆ ಕರೆ ಕಳಿಸಿದರು. ಅವರು ಬರುವ ಬಗ್ಗೆ ಯಾವ ಮುನ್ಸೂಚನೆಯೂ ಇರಲಿಲ್ಲ.

ಮಡಿಯಾಳ್ , ಹರಿಕೃಷ್ಣ ಸೇರಿದಂತೆ ಪ್ರಮುಖ ಅಧಿಕಾರಿಗಳು ಹೋಗಿ ಮಂತ್ರಿಗಳನ್ನು ಭೆಟ್ಟಿಯಾದರು.
ಉದ್ಯಮಿಯ ಮಗನನ್ನು ಸೆರೆಯಿಂದ ಬಿಡುಗಡೆಗೊಳಿಸಲು ತಾವು ರೂಪಿಸಿರುವ ಕಾರ್ಯತಂತ್ರವನ್ನು ಹರಿಕೃಷ್ಣ ಮ್ಯಾಪ್ ನೊಂದಿಗೆ ವಿವರಿಸಿದರು.

ಅದೇಕೋ ಗೃಹಮಂತ್ರಿಗಳ ಮಟ್ಟರಿಸಿಕೊಂಡಿದ್ದ ಮುಖ ಅರಳಲೇ ಇಲ್ಲ. ‘ಪ್ಲ್ಯಾನ್ ಏನೋ ಮಾಡಿದ್ದೀರಿ. ಆದರೆ ಕಿಡ್ನ್ಯಾಪ್ ಆಗಿರುವವನನ್ನು ಜೀವಂತವಾಗಿ ಬಿಡುಗಡೆ ಮಾಡಿಸೋ ಗ್ಯಾರಂಟಿ ಕೊಡ್ತೀರೇನ್ರೀ?’ ಕೇಳಿದರು ವ್ಯಂಗ್ಯವಾಗಿ.

ಗೃಹಮಂತ್ರಿಗೆ ನೇರವಾಗಿ ಉತ್ತರಿಸುವುದುಂಟೇ? ಹರಿಕೃಷ್ಣ ನಿಂತರು ಮೌನವಾಗಿ. ‘

ಗ್ಯಾರಂಟೀ ದೇತಾ ಹೈ ಕ್ಯಾ?’ ಎಂದು ಮತ್ತೊಮ್ಮೆ ಜಗ್ಗಿಸಿ ಕೇಳಿದರು.

ಯಾರೂ ಉತ್ತರಿಸದ ಹೆಪ್ಪುಗಟ್ಟಿದ ಮೌನ ಅಲ್ಲಿತ್ತು.

ಗೃಹಮಂತ್ರಿ ಮತ್ತೊಂದು ಮಾತು ಎಸೆದರು.
‘ನೀವು ಮಾಡೋ ಆಪರೇಷನ್ ಅಷ್ಟರಲ್ಲೇ ಇದೆ . ನಾವೂ ನೋಡಿದ್ದೀವಲ್ಲಾ? ಆ ಉದ್ಯಮಿ ಅವರ ಪಾಡಿಗೆ ತಮ್ಮ ಮಗನನ್ನು ಹೇಗೋ ಬಿಡಿಸಿಕೊಳ್ಳುತ್ತಾರೆ ಬಿಡಿ. ನೀವು ಸುಮ್ಮನಿದ್ದರೆ ಸಾಕು. ನಿಮ್ಮ ಮಿಷನ್ನನ್ನು ಈಗಲೇ ಕ್ಲೋಸ್ ಮಾಡಿ’ ಎಂಬ ಆದೇಶವನ್ನೇ ಮಾಡಿಬಿಟ್ಟರು.
(ಮುಂದುವರೆದಿದೆ)

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ