ತುಂಬಾ ದಿನಗಳ ಕೊಟ್ರ ಬಂದ. ಎಲೆಕ್ಷನ್ ಗೆಲ್ಲೋ ಸಾಧ್ಯತೆ ಇರುವ ನಾಯಕನ ಮುಖದಲ್ಲಿದ್ದಂತದ್ದೇ ಕಳೆ! ಆತ್ಮವಿಶ್ವಾಸ!!
‘ಏನ್ಲಾ ಕೊಟ್ರಾ ಇಷ್ಟ್ ದಿನಾ ಕಾಣ್ಲೆ ಇಲ್ಲಾ.. ಯಾವ ದೇಶ ಉದ್ಧಾರ ಮಾಡಕ್ಕೆ ಹೋಗಿದ್ಯೋ?’ ಅಂತಾ ಕೇಳಿದೆ.
‘ಅಯ್ಯೋ ಬುಡಿ ಸಾ.. ನಮ್ ದೇಸಾನೇ ಉದ್ಧಾರ ಆಗಿಲ್ಲ ಆದ್ರೂ ಬೇರೆ ದೇಶದ ನಾನು ಟೀಕೆ ಮಾಡ್ತೀನಿ ಅಂತಾ ಇನ್ ಡೈರೆಕ್ಟ್ ಆಗಿ ನನ್ನ ಟೀಕೆ ಮಾಡ್ತಾ ಇದ್ದೀರಾ ಅಂತಾ ಗೊತ್ತು.. ನಂಗೇನ್ ಬೇಜಾರಿಲ್ಲ ಬುಡಿ ಸಾ.. ಟೀಕಿಸೋದ್ರಿಂದಾನೆ ನಿಮ್ ಹೊಟ್ಟೆ ತಣ್ಣಗಾಗುತ್ತೆ ಅಂದರೆ ನಾನ್ ಯಾಕೆ ನಿಮ್ಗೆ ಉರುಸ್ಲಿ?’ ಅಂದ.
ಕೊಟ್ರಾ ತುಂಬಾ ಕಾನ್ಫಿಡೆಂಟಾಗಿ ಮಾತಾಡ್ತಾ ಇದಾನೆ ಅಂದರೆ, ಅವನಿಗೆ ಯಾವುದೋ ಪ್ರೋಗ್ರಾಮ್ ಐಡಿಯಾ ಬಂದಿರುತ್ತೆ ಇಲ್ಲಾ ಯಾರನ್ನೋ ಎಕ್ಕ ಮಕ್ಕಾ ಟೀಕೆ ಮಾಡಿದ ಖುಷಿಲಿರ್ತನೆ. ವಿಷ್ಯ ಅವನ ಬಾಯಲ್ಲೇ ಕೇಳೋಣ ಅಂತಾ, ‘ಏನ್ ಕೊಟ್ರಾ ಫುಲ್ ಖುಷೀಲಿ ಇದಿಯಾ ಏನ್ಸಮಚಾರ ಅಂದೆ.
‘ನಮ್ದೇನ್ ಖುಸಿ ಸಾ.. ಇವತ್ತುಂದಿನಾ ನಾನು ಕಾಲೇಜ್ ಲೀಡರ್‌ಆಗಿ ಇಡೀ ಕಾಲೇಜು ಸ್ಟೂಡೆಂಟ್ ಗಳನ್ನ ಖುಸಿಯಾಗಿ ಇಟ್ಕೊಂಡಿದ್ದೀನಲ್ಲಾ ಅದೇ ಖುಸಿ ವಿಚಾರ ಸಾ..’ ಅಂದ.
‘ಒಟ್ನಲ್ಲಿ ನೀನ್ ಖುಷಿಯಾಗಿದ್ದೀಯಾ ಅಂದ್ರೆ ಅಷ್ಟೇ ಸಾಕಪ್ಪಾ.. ಮಾರಾಯ.. ಇಲ್ಲ ಅಂದ್ರೆ ನೀನ್ ಏನೇನೆಲ್ಲಾ ಕಿತಾಪತಿ ಮಾಡ್ತೀಯಾ? ನಿನ್ ತಲೇಲಿ ಏನೇನೆಲ್ಲ ಓಡುತ್ತೆ.. ಅದ್ರಿಂದ ಏನೇನೆಲ್ಲ ಅನಾಹುತಗಳಾಗುತ್ವೆ ಅಂತಾ ನಂಗೆ ಗೊತ್ತಿಲ್ವಾ ಬಿಡು’ ಅಂದೆ.
ಕೋಪ ಮಾಡ್ಕೊಳ್ಳೋ ಬದಲಿಗೆ ಕೊಟ್ರಾ ಬಾಯ್ತುಂಬಾ ನಕ್ಕಾ! ‘ಈ ನಗುವಿನ ಕಾರಣವೇನು?’ ಅಂತಾ ಕೇಳಿದೆ.
‘ಅದೇ ಹೇಳಿದ್ನಲ್ಲಾ ಸಾ ಇವತ್ತುಂದಿನಾ ನಮ್ ಕಾಲೇಜಿಡೀ ಸ್ಟೂಡೆಂಟ್ಸು ಖುಸ್‌ಖುಸಿಯಾಗಿದ್ದಾರೆ. ಆ ಖುಸಿ ವಿಚಾರಕ್ಕಿಂತ ಬೇರೇನು ಬೇಕು ಸಾ ಇವತ್ತುಂದಿನಾ ಎಲ್ರೂ ಖುಸಿಯಾಗಿರಬೇಕು ಅನ್ನೋದೇ ನಮ್ಮ ಧ್ಯೇಯ.. ಅದುಕ್ಕಾಗಿ ನಾವ್ ಯಾವ್ ತ್ಯಾಗ ಬೇಕಾದ್ರೂ ಮಾಡ್ತೀವಿ..’ ಅಂದ.
ಕೊಟ್ರ ಮುಂದೆ ಒಳ್ಳೆ ರಾಜಕಾರಣಿಯಾಗೋ ಲಕ್ಷಣ ಇದೇ ಅನಿಸ್ತು.
‘ಅದ್ಸರಿನಪಾ.. ನಿಮ್ ಕಾಲೇಜಿನಲ್ಲಿ ಸಿಕ್ಕಾಪಟ್ಟೆ ಪ್ರಾಬ್ಲೆಮ್ಮುಗಳಿವೆ ಅಂತಾ ಕಳೆದ ಎರಡೂ ತಿಂಗ್ಳಿಂದಾನೂ ಸ್ಪೂಡೆಂಟ್ಸು ಸ್ಟ್ರೈಕ್ ಮಾಡ್ತಾ ಇದ್ರಲ್ವಾ? ಕಾಲೇಜಿನಲ್ಲಿ ಏನೂ ಬೇಸಿಕ್ ಫೆಸಿಲಿಟೀಸ್ ಇಲ್ಲ.. ಮಳೆ ಬಂದರೆ ಕ್ಲಾಸ್ ರೂಮುಗಳು ಸೋರುತ್ವೆ.. ಲೈಬ್ರರಿಯಲ್ಲಿ ಬುಕ್ಸು ಇಲ್ಲ. ಲ್ಯಾಬಿನಲ್ಲಿ ಇಕ್ಯುಪ್‌ಮೆಂಟ್ಸ್ ಇಲ್ಲ ್ ಪರ್ಮನೆಂಟ್ ಲೆಕ್ಚರರ್ ಇಲ್ಲ.. ಎಲ್ಲಾ ಬರೀ ಗೆಸ್ಟ್ ಲೆಕ್ಚರರ್.. ಲೆಕ್ಚರರ್‌ಗೆ ಸಂಬಳ ಕೊಟ್ಟಿಲ್ಲ ಅಂತಾ ಅವರೂ ಕ್ಲಾಸು ತೆಗೆದುಕೊಳ್ಳದೇ ಸ್ಟ್ರೈಕ್ ಮಾಡ್ತಾ ಇದ್ರೂ… ಸ್ಟೂಡೆಂಟ್ ಗಳಿಗೆ ಏನೂ ಫೆಸಿಲಿಟಿ ಕೊಡದೇ ಐಟಿ ಕಾರ್ಡ್ ಚಾರ್ಜ್.. ಯೂನಿಫಾರಂ ಚಾರ್ಜ್.. ಕಂಪ್ಯೂಟರ್ ಲ್ಯಾಬ್ ಫೀಸು ಇತ್ಯಾದಿ ಹೊಸದಾಗಿ ಫೀಸು ಸುಲಿಗೆ ಮಾಡ್ತಾ ಇದ್ದೀರಾ ಅಂತಾ ಸ್ಟೂಡೆಂಟ್ಸು ಬೀದಿಗಿಳಿದು ಸ್ಟ್ರೈಕ್ ಮಾಡಿದ್ರಲ್ವಾ?’ ಅಂತಾ ಕೊಟ್ರನಾ ಕೇಳಿದೆ.
‘ಹೌದು ಸಾ.. ಕೆಲವ್ರ ದೇಶದ್ರೋಹಿಗಳು ಸ್ಟ್ರೈಕ್ ಮಾಡಿದ್ರು.. ಸಾ.. ಇವತ್ತುಂದಿನಾ ಪ್ರಾಬ್ಲಂ ಎಲ್ಲಿಲ್ಲಾ ಹೇಳಿ ಸಾ.. ಅದುನ್ನೇ ಟಾಂ ಟಾಂ ಮಾಡ್ಕೊಂಡು ಹೋದ್ರೆ ನಮ್ ಕಾಲೇಜಿನ ಮರ್ಯಾದೆ ಹಾಳಾಗಲ್ವಾ? ಸ್ಟ್ರೈಕ್ ಮಾಡಿದ ಟೀಮಿನ ಲೀಡರ್ ವಿರುದ್ಧ ‘ಇಡಿ’ ತನಿಖೆ ಆದೇಶ ಮಾಡಿದ್ವಿ ನೋಡಿ.. ಎಲ್ರೂ ಸುಮ್ಮನಾದ್ರು..’ ಅಂದ. ಏನದು ಇಡಿ? ಕೇಳಿದೆ. ‘ಅದು ‘ಎಜುಕೆಷನಲ್ ಡಿಸಿಪ್ಲಿನ್’ ಸಾ.. ಯಾರಾದ್ರೂ ಮ್ಯಾನೆಜ್ಮೆಂಟ್ ವಿರುದ್ಧ ತಿರುಗಿ ಬಿದ್ರೆ ಇಡಿ ತನಿಖೆ ಮಾಡಿಸ್ತೀವಿ. ತನಿಖೆಗೆ ಆದೇಶ ಕೊಟ್ರೆ ಆಯ್ತು. ಪಾಪಾ ಆ ಸ್ಟೂಡೆಂಟ್ ಒಂದ್ ವರ್ಷ ಖತಂ..’
‘ಅಂದರೆ ನಿಮ್ಮ ಕಾಲೇಜಿನ ಪ್ರಾಬ್ಲಮ್ಮುಗಳು ಸಾಲ್ವ್ ಆದ್ವಾ?’
‘ಸಾ ಕಾಲೇಜ್ ಪ್ಲಾಬ್ಲೆಮ್ಸ್ ಸಾಲ್ವ್ ಆದ್ರೆ ನಮ್ಮಂತೋರಿಗೆ ಎಲ್ಲಿ ಬೆಲೆ ಸಾ? ಪ್ಲಾಬ್ಲೆಮ್ ಇರೋದ್ರಿಂದಾನೆ ನಾವು ಇರೋದು… ಈಗಿರೋ ಪ್ರಾಬ್ಲೆಮ್ಮುಗಳಿಗೆಲ್ಲ ಹಿಂದಿನೋರೇ ಕಾರಣ ಅಂತಾ ಆರೋಪ ಮಾಡ್ಕೊಂಡ್ ಎಲೆಕ್ಷನ್ ಗೆಲ್ತಾ ಇದ್ದೀನ್‌ಿ. ಪ್ರಾಲ್ಬೆಮ್ ಸಾಲ್ವ್ ಮಾಡೋಕೆ ಹಿಂದಿನವರು ಬಿಡ್ತಾ ಇಲ್ಲಾ… ಅಂತಾನೂ ಆರೋಪ ಮಾಡ್ತಾ ಇರ್ತೀನಿ ಸ್ಟೂಡೆಂಟ್ಸ್ ನಂಬ್ತಾರೆ ಸಾ.. ನಮ್ ಬಗ್ಗೆ ಅಭಿಮಾನ ಇದೆ ಸಾ… ಅದೇನೋಪಾ ನಾವೇನೋ ಒಳ್ಳೇದು ಮಾಡಿಯೇ ಮಾಡ್ತೀವಿ ಅಂತಾ ಸ್ಟೂಡೆಂಟ್ಸು ನಂಬಿದ್ದಾರೆ. ಪ್ರತಿ ವರ್ಷಾನೂ ನಂಬ್ಕೊಂಡೇ ನಮ್ಮುನ್ನೇ ಗೆಲ್ಲುಸ್ತಾ ಇದಾರೆ ಅವರ ನಂಬಿಕೆ ದೊಡ್ಡದು ಸಾ’ ಅಂತಾ ಬಿಲ್ಡಪ್ ಕೊಟು.
‘ಅದ್ಸರಿನಪಾ ಕಾಲೇಜಿನ ಪ್ರಾಬ್ಲೆಮ್ಮುಗಳನ್ನು ಸ್ಟೂಡೆಂಟ್ಸು ಅಷ್ಟುಬೇಗ ಮರೆತು ಬಿಟ್ರಾ?’ ಆಶ್ಚರ್ಯದಿಂದ ಕೇಳಿದೆ.
‘ಅದಕ್ಕಾಗಿ ಒಂದು ‘ಫ್ಲ್ಯಾಗ್‌ಶಿಪ್’ ಪ್ರೋಗ್ರಾಮ್ ಮಾಡಿದ್ದೀನಿ ಸಾ’ ಅಂದ.
‘ಏನದು ಫ್ಲ್ಯಾಗ್‌ಷಿಪ್ ಪ್ರೋಗ್ರಾಮ್?’ ಅಂದೆ.
‘ನೋಡಿ ಸಾ ನಮ್ ಕಾಲೇಜಿಗೆ ಈಗ ೨೫ ವರ್ಸಾ ಆಗ್ತಾ ಇದೆ. ಈ ೨೫ ವರ್ಸಾನಾ ಅದ್ದೂರಿಯಾಗಿ ಆಚರಿಸೋಣ ಅಂತಾ ಪ್ಲಾನ್ ಮಾಡಿದ್ದೀವಿ. ಸಾ.. ಎಲ್ಲಾ ಸ್ಟೂಡೆಂಟ್ ಗಳಿಗೂ ನಾನೇ ಕೈಯ್ಯಾರೆ ನಮ್ ಕಾಲೇಜಿನ ಲೋಗೋ ಇರೋ ಫ್ಲ್ಯಾಗ್ ಅನ್ನು ಕೊಟ್ಟಿದ್ದೀನಿ. ಸ್ಟೂಡೆಂಟ್ ಈ ವರ್ಷಾ ಇಡೀ ಆ ಫ್ಲಾಗನ್ನು ತಮ್ಮ ಎದೆ ಮೇಲೆ ಹಾಕ್ಕೊಂಡು ಅಭಿಮಾನ ಪ್ರದರ್ಶನ ಮಾಡ್ಬೇಕು. ಸಾ.. ಹಂಗೆ ಮಾಡಿದ್ದೀನಿ… ಇವತ್ತುಂದಿನಾ ನಂದು ಫ್ಲ್ಯಾಗಿಗೆ ಅಂತಾನೆ ಹತ್ತು ಸಾವಿರ ರೂಪಾಯಿ ಖರ್ಚು ಮಾಡಿದ್ದೀನಿ ಸಾ..’
‘ಹೌದಾ ಕಾಲೇಜಿನ ಮೇಲೆ ಅಷ್ಟೊಂದು ಅಭಿಮಾನಾನಾ?’
ಅಭಿಮಾನ ಇರಲಿ ಬಿಡಲಿ ತೋರಿಸಲೇಬೇಕು ಸಾ… ಸ್ಟೂಡೆಂಟ್ಸು ಪ್ರತಿಭಟನೆ ಬಿಟ್ಟು ಕಾಲೇಜಿನ ಬಗ್ಗೆ ಅಭಿಮಾನ ಇಟ್ಟು ಎದೇಮೇಲೆ ಫ್ಲ್ಯಾಗ್ ಹಾಕಿಕೊಂಡು ಬರ್ತಾ ಇದ್ದಾರಲ್ಲಾ ಸಾ ಅದು ಮುಖ್ಯ. ಅದೇ ಸಾ ನಂದು ‘ಫ್ಲ್ಯಾಗ್‌ಶಿಪ್’ ಪ್ರೋಗ್ರಾಮು.. ರಿಯಲ್ ಪ್ರಾಬ್ಲೆಮ್ ಮರೆಯಬೇಕು ಅಭಿಮಾನ ಉದ್ದೀಪಿಸಬೇಕು..ಅದೇ ನಮ್ ಸ್ಟ್ರಾಟಜಿ..’ ಅಂದ ಕೊಟಾ.
ನನಗೆ ತಲೆತಿಗಿದಂತಾಯ್ತು! ಈ ಕೊಟ್ರಾ ಲೀಡರ್‌ಆಗಿರೋವರೆಗೂ ಆ ಕಾಲೇಜು ಉದ್ಧಾರ ಆಗೋಲ್ಲ ಅನಿಸು !!
-‘ಅಷ್ಟಾವಕ್ರಾ’