ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಗರಿಗೆದರಿದ ಬಳಿಕ ಅಲ್ಲಲ್ಲಿ ಕೆರೆ-ಕಟ್ಟೆ, ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣ ಮೇಲಿಂದ ಮೇಲೆ ಭಾರೀ ಸದ್ದು ಮಾಡುತ್ತಿದೆ. ಇದೀಗ ವಾಣಿಜ್ಯ ಉದ್ದೇಶದಿಂದ ಕನ್ನಡ ನಾಡಿನ ಜೀವನದಿ ಕಾವೇರಿ ನದಿ ಪಾತ್ರವನ್ನೇ ತಿರುಗಿಸುವ ಯತ್ನ ನಡೆದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ, ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕೃಷಿ, ಕುಡಿಯುವ ನೀರು ಒದಗಿಸುವ ಜತೆಗೆ ರಾಜಧಾನಿ ಬೆಂಗಳೂರಿಗೆ ಕುಡಿಯುವ ನೀರೂ ಸರಬರಾಜಾಗುತ್ತಿರುವ ಕಾವೇರಿ ನದಿಯನ್ನು ಕಾಪಾಡಿಕೊಳ್ಳಬೇಕಿರುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ.
ಆದರೆ ನದಿ ಪಾತ್ರವನ್ನು ಈಗ ಪ್ರವಾಸೋದ್ಯಮದ ಹೆಸರಲ್ಲಿ ವಾಣಿಜ್ಯೀಕರಣಗೊಳಿಸಿ, ಒತ್ತುವರಿ ಮಾಡಿಕೊಂಡಿರುವುದಲ್ಲದೇ ನದಿ ಪಾತ್ರವನ್ನು ತಿರುಗಿಸಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉಪ ಲೋಕಾಯುಕ್ತರು ಕಾವೇರಿ ನದಿ ಮತ್ತು ಬಂಗಾರದೊಡ್ಡಿ ನಾಲೆಯ ಬಫರ್ ವಲಯವನ್ನು ಗುರುತಿಸುವಂತೆ ಸೂಚಿಸುವ ಮೂಲಕ ಮಂಡ್ಯ ಜಿಲ್ಲಾಡಳಿತದ ವೈಫಲ್ಯವನ್ನು ಎತ್ತಿ ತೋರಿದ್ದಾರೆ.
ಶ್ರೀರಂಗಪಟ್ಟಣದ ಸ.ನಂ.೧೬೪ರಿಂದ ೧೭೮ರವರೆಗೆ ಪ್ರತಿ ಸರ್ವೆ ನಂಬರ್ಗಳಲ್ಲಿರುವ ರೆಸಾರ್ಟ್‌ಗಳು, ವಾಣಿಜ್ಯ ಕಟ್ಟಡಗಳಿಗೆ ನೀಡಿರುವ ವಿದ್ಯುತ್ ಸಂಪರ್ಕ, ವಿದ್ಯುತ್ ಮಂಜೂರಾತಿ ವಿವರ, ಬಾಕಿ ಮೊತ್ತಗಳ ಬಗ್ಗೆ ಮಾಹಿತಿ ನೀಡುವಂತೆ ಶ್ರೀರಂಗಪಟ್ಟಣದ ಸೆಸ್ಕ್ ಎಇಇಗೆ ಉಪ ಲೋಕಾಯುಕ್ತರು ಆದೇಶಿಸಿದ್ದಾರೆ.
ಇದನ್ನು ಓದಿ: ಅಧಿಕಾರ ಹಂಚಿಕೆ ಗೊಂದಲ; ಬಿಜೆಪಿ, ಜಾ.ದಳದಲ್ಲಿ ಆತ್ಮವಿಶ್ವಾಸ ಹೆಚ್ಚಳ
ಇತ್ತೀಚಿನ ವರ್ಷಗಳಲ್ಲಿ ವಾರಾಂತ್ಯದ ದಿನಗಳು, ಸರ್ಕಾರಿ ರಜಾ ದಿನಗಳಲ್ಲಿ ಪರಿಸರ ಪ್ರವಾಸೋದ್ಯಮದ ಹೆಸರಲ್ಲಿ ನಗರಗಳ ಮಂದಿ ಜಲಾಶಯಗಳ ಹಿನ್ನೀರು, ಕೆರೆ-ಕಟ್ಟೆ, ನದಿ ಪಾತ್ರಗಳನ್ನು ಹುಡುಕಿಕೊಂಡು ಬಂದು ಪಾರ್ಟಿ ಹೆಸರಲ್ಲಿ ಮೋಜು-ಮಸ್ತಿ ಮಾಡಿ ಜಲಮೂಲಗಳಿಗೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಹಾಳು ಮಾಡುತ್ತಿದ್ದಾರೆ. ಹೀಗೆ ಪ್ರವಾಸಿಗರು ನಿಯಮಿತವಾಗಿ ಬರುವ ಜಾಗಗಳನ್ನು ಹುಡುಕಿ ಕೆಲ ವ್ಯಾಪಾರಸ್ಥರು ಜೀವನೋಪಾಯದ ಹೆಸರಲ್ಲಿ ಪ್ರವಾಸಿಗರ ಬೇಕು-ಬೇಡಗಳನ್ನು ಪೂರೈಸಲು ಮುಂದಾಗಿ, ತಮ್ಮ ನೆಲೆಯನ್ನೇ ಹಾಳು ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಶ್ರೀರಂಗಪಟ್ಟಣದ ಕಾವೇರಿ ನದಿ ಪಾತ್ರದಲ್ಲಿ ಚಂದ್ರವನ ಆಶ್ರಮದ ಕಟ್ಟಡ, ಹೋಟೆಲ್‌ಗಳು, ರೆಸಾರ್ಟ್‌ಗಳು, ಹೋಮ್ ಸ್ಟೇಗಳು ಅಕ್ರಮವಾಗಿ ತಲೆ ಎತ್ತುವಲ್ಲಿ ಸ್ಥಳೀಯ ಆಡಳಿತದ ಜಾಣ ಕುರುಡು ಎದ್ದುಕಾಣುತ್ತದೆ. ಈ ಬಗ್ಗೆ ಸಾರ್ವಜನಿಕರೊಬ್ಬರು ಉಪ ಲೋಕಾಯುಕ್ತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವವರೆಗೆ ಸ್ಥಳೀಯ ಆಡಳಿತದ ಅಧಿಕಾರಿಗಳು ಮುಗುಮ್ಮಾಗಿದ್ದಾರೆ ಎಂದರೆ ಅದು ಅವರ ಬೇಜವಾಬ್ದಾರಿತನವನ್ನು ತೋರುತ್ತದೆ.
ಕಾವೇರಿ ನದಿ ತೀರದಲ್ಲಿ ಒತ್ತುವರಿ ಮಾಡಿ, ಅಕ್ರಮವಾಗಿ ನಿರ್ಮಿಸಿರುವ ಕಟ್ಟಡಗಳ ತೆರವು ಸಂಬಂಧ ಉಪ ಲೋಕಾಯುಕ್ತ ಬಿ.ವೀರಪ್ಪ ಅವರ ಆದೇಶದ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾಡಳಿತ ಇದೀಗ ಅಕ್ರಮ ಕಟ್ಟಡಗಳನ್ನು ಕಾನೂನಾತ್ಮಕವಾಗಿ ತೆರವುಗೊಳಿಸುವ ಜತೆಗೆ ಮುಂದಿನ ದಿನಗಳಲ್ಲಿ ಈ ರೀತಿಯ ಅಕ್ರಮ ಕಟ್ಟಡಗಳು ತಲೆ ಎತ್ತದಂತೆ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಈ ವಿಷಯದಲ್ಲಿ ಮಂಡ್ಯ ಜಿಲ್ಲಾಡಳಿತ ಹಾಗೂ ಶ್ರೀರಂಗಪಟ್ಟಣದ ತಹಸಿಲ್ದಾರ್ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸ್ಥಳೀಯ ಗ್ರಾಮಪಂಚಾಯಿತಿಯ ನಿರಾಕ್ಷೇಪಣಾ ಪತ್ರ, ಪ್ರವಾಸೋದ್ಯಮ ಇಲಾಖೆಯ ಎನ್‌ಒಸಿ ಎಲ್ಲವನ್ನೂ ಪಡೆದ ಮೇಲೆಯೇ ಸ್ಥಳೀಯ ಆಡಳಿತಗಳು ವಾಣಿಜ್ಯ ಉದ್ದೇಶದ ಕಟ್ಟಡಗಳನ್ನು ನಿರ್ಮಿಸಲು ಅನುಮತಿ ನೀಡಬೇಕು. ಮಂಜೂರಾದ ನಕ್ಷೆಯಂತೆಯೇ ಕಟ್ಟಡ ನಿರ್ಮಿಸಲಾಗಿದೆಯೇ ಎಂಬುದನ್ನು ನಗರ ಯೋಜನೆ ಇಂಜಿನಿಯರ್ ಪರಿಶೀಲಿಸಿ ಎನ್‌ಒಸಿ ನೀಡಿದ ಮೇಲೆಯೇ ಅಂತಹ ಕಟ್ಟಡಗಳಲ್ಲಿ ವಾಣಿಜ್ಯ ಉದ್ದೇಶಕ್ಕೆ ಪರವಾನಗಿ ನೀಡಬೇಕು. ಅಲ್ಲದೇ ಅಂತಹ ಕಡೆಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆಯೇ? ಎಂಬ ಬಗ್ಗೆ ನಿಗಾ ಇರಿಸಬೇಕಾಗುತ್ತದೆ.
” ಇತ್ತೀಚಿನ ವರ್ಷಗಳಲ್ಲಿ ವಾರಾಂತ್ಯದ ದಿನಗಳು, ಸರ್ಕಾರಿ ರಜಾದಿನಗಳಲ್ಲಿ ಪರಿಸರ ಪ್ರವಾಸೋದ್ಯಮದಹೆಸರಲ್ಲಿ ನಗರಗಳ ಮಂದಿ ಜಲಾಶಯಗಳ ಹಿನ್ನೀರು, ಕೆರೆ-ಕಟ್ಟೆ, ನದಿ ಪಾತ್ರಗಳನ್ನುಹುಡುಕಿಕೊಂಡುಬಂದು ಪಾರ್ಟಿ ಹೆಸರಲ್ಲಿಮೋಜು-ಮಸ್ತಿ ಮಾಡಿಜಲಮೂಲಗಳಿಗೆಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆದು ಹಾಳುಮಾಡುತ್ತಿದ್ದಾರೆ.”





