Light
Dark

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ರಕ್ಷಣೆ ನೀಡಲು ವಿಳಂಬ ಮಾಡಬಾರದು

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಬೇಕೆಂಬ ಷರತ್ತಿನ ಮೇಲೆ ದೆಹಲಿಯಲ್ಲಿ ನಡೆಸುತ್ತಿದ್ದ ಸುಧೀರ್ಘ ಕಾಲದ ಪ್ರತಿಭಟನೆಯನ್ನು ರೈತರು ಹಿಂಪಡೆದು ಒಂಭತ್ತು ತಿಂಗಳಾಗುತ್ತಾ ಬಂದಿದೆ. ಆದರೆ, ಕೇಂದ್ರ ಸರ್ಕಾರ ಆ ನಿಟ್ಟಿನಲ್ಲಿ ಯಾವುದೇ ರಚನಾತ್ಮಕ ಕ್ರಮಗಳನ್ನು ಪ್ರಕಟಿಸಿಲ್ಲ. ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ನಂತರವೂ ರೈತರು ಕನಿಷ್ಠ ಬೆಂಬಲ ಬೆಲೆ ನೀತಿಗೆ ಕಾನೂನು ಸ್ವರೂಪ ನೀಡಬೇಕೆಂದು ಪಟ್ಟು ಹಿಡಿದಿದ್ದರು. ರೈತರ ಪಟ್ಟಿಗೆ ಮಣಿದಿದ್ದ ಕೇಂದ್ರ ಸರ್ಕಾರ ಲಿಖಿತವಾಗಿ ಭರವಸೆ ನೀಡಿದ ನಂತರವಷ್ಟೇ ರೈತರು ಪ್ರತಿಭಟನೆ ಹಿಂಪಡೆದರು. ಅದಾದ ನಂತರ ಮೂರು ಬಾರಿ ಸಂಸತ್ ಅಧಿವೇಶನ ಸಮಾವೇಶಗೊಂಡಿದ್ದರೂ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಸ್ವರೂಪ ನೀಡುವ ಪ್ರಯತ್ನ ನಡೆದಿಲ್ಲ. ಕೇಂದ್ರ ಸರ್ಕಾರದ ಈ ಧೋರಣೆಯನ್ನು ಖಂಡಿಸಿ ಪಂಜಾಬ್ ಮತ್ತು ಹರ್ಯಾಣ ರೈತರು ಮತ್ತೀಗ ಸಾಂಕೇತಿಕವಾಗಿ ಪ್ರತಿಭಟನೆ ಆರಂಭಿಸಿದ್ದಾರೆ. ಕೇಂದ್ರದ ಪ್ರತಿಕ್ರಿಯೆ ನೋಡಿಕೊಂಡು ಪ್ರತಿಭಟನೆಯನ್ನು ತೀವ್ರಗೊಳಿಸುವ ಇರಾದೆ ಆ ರಾಜ್ಯಗಳ ರೈತರದ್ದು.

ಕೃಷಿ ವೆಚ್ಚ ಮತ್ತು ದರ ಆಯೋಗ (ಸಿಎಸಿಪಿ) ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಶಿಫಾರಸು ಮಾಡುತ್ತದೆ. ಕೇಂದ್ರ ಸರ್ಕಾರ ಶಿಫಾರಸನ್ನು ಪೂರ್ಣವಾಗಿ ಒಪ್ಪುತ್ತದೆ ಇಲ್ಲವೇ ಕೊಂಚ ಮಾರ್ಪಾಡು ಮಾಡಿ ಜಾರಿಗೆ ತರುತ್ತದೆ. ಪ್ರಸ್ತುತ ಸಿಎಸಿಪಿ ೨೩ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲಬೆಲೆ ಶಿಫಾರಸು ಮಾಡುತ್ತದೆ. ಈ ಪೈಕಿ ಏಳು ಧಾನ್ಯಗಳು (ಭತ್ತ, ಗೋಧಿ, ಜೋಳ, ಜೋಳ, ಮುತ್ತು ರಾಗಿ, ಬಾರ್ಲಿ ಮತ್ತು ರಾಗಿ), ಐದು ದ್ವಿದಳ ಧಾನ್ಯಗಳು, ಏಳು ಎಣ್ಣೆಕಾಳುಗಳು ಸೇರಿವೆ. ಇವಲ್ಲದೇ ವಾಣಿಜ್ಯ ಬೆಳೆಗಳಾದ ಕೊಬ್ಬರಿ, ಕಬ್ಬು, ಹತ್ತಿ ಮತ್ತು ಕಚ್ಚಾ ಸೆಣಬುಗಳಿಗೂ ಕನಿಷ್ಠ ಬೆಂಬಲ ಬೆಲೆ ಶಿಫಾರಸು ಮಾಡುತ್ತದೆ.

ಕನಿಷ್ಠ ಬೆಂಬಲ ಬೆಲೆ ನಿಗದಿಯಾದರೆ ಕೃಷಿ ಕ್ಷೇತ್ರದಲ್ಲಿ ಬೆಲೆ ಸ್ಥಿರತೆ ಕಾಯ್ದುಕೊಳ್ಳಲು ಸಾಧ್ಯ. ಬೆಲೆ ಸ್ಥಿರತೆ ಇದ್ದಾಗ ಮಾತ್ರ ರೈತರು ತಾವು ಶೋಷಣೆಗೆ ಒಳಗಾಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯ. ಕನಿಷ್ಠ ಬೆಂಬಲ ಬೆಲೆ ಘೋಷಿಸಿದರೆ ಬೊಕ್ಕಸದ ಮೇಲೆ ಭಾರಿ ಹೊರೆ ಬರುತ್ತದೆಂಬ ಸರ್ಕಾರದ ವಾದದಲ್ಲಿ ಸಂಪೂರ್ಣ ಹುರುಳಿಲ್ಲ. ಮಾರುಕಟ್ಟೆಯಲ್ಲಿ ದರ ಕುಸಿದಾಗ ಮಾತ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕಾಗುತ್ತದೆ. ಸಾಮಾನ್ಯದರ ಇದ್ದಾಗ ರೈತರು ಕೃಷಿ ಉತ್ಪನ್ನ ಮಾರುಕಟ್ಟೆಗಳಲ್ಲಿ ಸ್ಪರ್ಧಾತ್ಮಕ ದರಗಳಲ್ಲಿ ಮಾರಾಟ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಆಹಾರ ಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ದೇಶದ ಆಹಾರ ಧಾನ್ಯಗಳ ರಫ್ತು ಪ್ರಮಾಣವೂ ಗಣನೀಯವಾಗಿ ಹೆಚ್ಚಿದೆ. ಸರ್ಕಾರವು ಪ್ರತಿ ವರ್ಷ ಘೋಷಿತ ಎಲ್ಲ ಉತ್ಪನ್ನಗಳನ್ನು ಬೆಂಬಲ ಬೆಲೆ ನೀಡಿ ಖರೀದಿಸಬೇಕಿಲ್ಲ. ಹೀಗಾಗಿ ಬೊಕ್ಕಸದ ಮೇಲಿನ ಅಂದಾಜು ವೆಚ್ಚವು ಸಂಭವನೀಯವೇ ಹೊರತು ವಾಸ್ತವಿಕವಲ್ಲ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ಸಿಗುವುದರಿಂದ ಸರ್ಕಾರಕ್ಕೆ ದೀರ್ಘಕಾಲದಲ್ಲಿ ಲಾಭವೇ ಇದೆ. ಮಾರುಕಟ್ಟೆ ಸ್ಥಿರವಾಗಿದ್ದರೆ, ತೆರಿಗೆ ರೂಪದ ಆದಾಯ ಸಂಗ್ರಹ ಹೆಚ್ಚುತ್ತದೆ. ಮಾರುಕಟ್ಟೆ ಕುಸಿದಾಗಲೇ ತೆರಿಗೆ ವಂಚಿಸಿ ವ್ಯವಹರಿಸುವ ಪ್ರವೃತ್ತಿ ಹೆಚ್ಚುತ್ತದೆ. ಸರ್ಕಾರ ಬೊಕ್ಕಸದ ಮೇಲಾಗುವ ಸಂಭವನೀಯ ಹೊರೆಯನ್ನೇ ಮುಂದಿಟ್ಟುಕೊಂಡು ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ನೀಡಲು ಹಿಂದೇಟು ಹಾಕುತ್ತಿರುವುದು ಸಮರ್ಥನೀಯವಲ್ಲ.

ಈಗಾಗಲೇ ನೀಡುತ್ತಿರುವ ಕನಿಷ್ಠ ಬೆಂಬಲ ಬೆಲೆಯಲ್ಲಿ ಹಲವು ಲೋಪಗಳಿವೆ. ಡಾ.ಸ್ವಾಮಿನಾಥನ್ ಸಮಿತಿ ವರದಿಯಂತೆ ವೈಜ್ಞಾನಿಕವಾಗಿ ದರ ನಿಗದಿ ಮಾಡುತ್ತಿರುವುದಾಗಿ ಕೇಂದ್ರ ಸರ್ಕಾರ ಹೇಳಿಕೊಳ್ಳುತ್ತಿದೆ. ವಾಸ್ತವಿಕವಾಗಿ ಹಾಗೆ ಮಾಡಿಲ್ಲ. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ನಿಗದಿ ಮಾಡುವಾಗ ಸ್ವಾಮಿನಾಥನ್ ಅವರು ಪ್ರಸ್ತಾಪಿಸಿದ ಸೂತ್ರವನ್ನು ಅನುಸರಿಸಿಲ್ಲ. ಸ್ವಾಮಿನಾಥನ್ ಸಮಿತಿಯು ಬೆಂಬಲ ಬೆಲೆ ನಿಗದಿ ಮಾಡುವಾಗ ಎ-೨ ಮತ್ತು ಎಫ್‌ಎಲ್ ಜತೆಗೆ ಸಿ-೨ ಅಂಶವೂ ಒಳಗೊಳ್ಳಬೇಕು ಎಂದು ಪ್ರತಿಪಾದಿಸಿದೆ. ಆದರೆ, ಬೆಂಬಲಬೆಲೆ ನಿಗದಿ ಮಾಡುವಾಗ ಎ -೨ ಮತ್ತು ಎಫ್‌ಎಲ್ ಅನ್ನು ಮಾತ್ರ ಪರಿಗಣಿಸಲಾಗಿದೆ. ಸಿ-೨ ಕೈಬಿಡಲಾಗಿದೆ.

ಬೆಂಬಲ ಬೆಲೆ ನಿಗದಿ ಮಾಡುವಾಗ ವೆಚ್ಚವನ್ನು ಲೆಕ್ಕ ಹಾಕಲು ಎರಡು ವಿಧಾನ ಬಳಸಲಾಗುತ್ತದೆ. ಒಂದು ಎ೨+ಎಫ್‌ಎಲ್, ಮತ್ತೊಂದು ಎ೨+ಎಫ್‌ಎಲ್ ಮತ್ತು ಸಿ-೨. ಇಲ್ಲಿ ಎ-೨ ಎಂದರೆ, ರೈತರು ಬೆಳೆಗಾಗಿ ಮಾಡುವ ನಗದು ವೆಚ್ಚ, ಪರಿಕರಗಳ ಸ್ವರೂಪದ ವೆಚ್ಚ, ಭೂಮಿಗೆ ನೀಡುವ ಗುತ್ತಿಗೆ (ಲೀಸ್) ಸೇರಿರುತ್ತದೆ. ಎಫ್‌ಎಲ್ ಎಂಬುದು ಫ್ಯಾಮಿಲಿ ಲೇಬರ್- ಕೃಷಿಕನ ಮನೆಯ ಸದಸ್ಯರು ದುಡಿಯುವ ದಿನಗಳ ಲೆಕ್ಕ. ಅಂದರೆ, ಎ೨+ಎಫ್‌ಎಲ್ ವಿಧಾನದಲ್ಲಿ ಲೆಕ್ಕ ಹಾಕುವಾಗ ಇವಿಷ್ಟು ಅಂಶಗಳನ್ನು ಪರಿಗಣಿಸಲಾಗುತ್ತದೆ. ಇವಿಷ್ಟೆ ಅಂಶಗಳನ್ನು ಪರಿಗಣಿಸಿದರೆ ರೈತರಿಗೆ ವಾಸ್ತವಿಕವಾಗಿ ಲಾಭವಾಗುವುದಿಲ್ಲ. ಕನಿಷ್ಠ ಬೆಂಬಲ ಬೆಲೆಯನ್ನು ಶೇ.೫೦ರಷ್ಟು ಲಾಭಾಂಶ ಸೇರಿಸಿ ನಿಗದಿ ಮಾಡಬೇಕೆಂಬ ಬೇಡಿಕೆಯನ್ನು ತಿರಿಸ್ಕರಿಸಿದಂತಾಗುತ್ತದೆ. ಸಿ-೨ ವಿಧಾನದಲ್ಲಿ ಲೆಕ್ಕ ಹಾಕುವಾಗ ಎ೨+ಎಫ್‌ಎಲ್ ಜತೆಗೆ ರೈತರು ಹೊಲ, ಗದ್ದೆ ಉಳಲು ಬಳಸಿದ ಟ್ರಾರ್ಕ್ಟ ಬಾಡಿಗೆ, ಗೋದಾಮು ಬಾಡಿಗೆ, ನಿರ್ವಹಣಾ ವೆಚ್ಚವೂ ಸೇರಿರುತ್ತದೆ. ಆದರೆ, ಸಿ-೨ ಅಂಶವನ್ನು ಬಿಟ್ಟು ಬೆಂಬಲ ಬೆಲೆ ನಿಗದಿ ಮಾಡುವುದರಿಂದ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ.

ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ರಕ್ಷಣೆ ಒದಗಿಸುವ ಜತೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಾಗ ಸಿ-೨ ಅಂಶವನ್ನು ಒಳಗೊಂಡಂತೆ ದರ ಪರಿಷ್ಕರಣೆ ಮಾಡಬೇಕು. ಆಗ ಮಾತ್ರ ರೈತರ ಆದಾಯ ತ್ವರತಗತಿಯಲ್ಲಿ ದುಪ್ಪಟ್ಟಾಗಲು ಸಾಧ್ಯ!

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ