Mysore
24
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ರಾಷ್ಟ್ರಪತಿ ಸ್ಥಾನವನ್ನು ಪ್ರಾತಿನಿಧಿಕವಾಗಿ ನೋಡಬೇಕಿಲ್ಲ!

-ನಾ ದಿವಾಕರ

ಭಾರತ ತನ್ನ ಸ್ವಾತಂತ್ರ್ಯದ ೭೫ನೆಯ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲೇ ಪ್ರಪ್ರಥಮವಾಗಿ ರಾಷ್ಟ್ರಪತಿ ಹುದ್ದೆಗೆ ಬುಡಕಟ್ಟು ಮಹಿಳೆಯೊಬ್ಬರು ಆಯ್ಕೆಯಾಗಿರುವುದು ಹೆಮ್ಮೆಯ ವಿಚಾರ. ನೂತನ ರಾಷ್ಟ್ರಪತಿಯವರನ್ನು ಯಾವುದೇ ರೀತಿಯ ಪ್ರಾತಿನಿಧಿಕ ಅಸ್ಮಿತೆಗಳಿಗೆ ಬಂಧಿಸದೆ, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬರು ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವುದು ಮತ್ತು ಓರ್ವ ಮಹಿಳೆ ಆಯ್ಕೆಯಾಗಿರುವುದು ಎಲ್ಲರೂ ಸ್ವಾಗತಿಸಬೇಕಾದ ವಿಚಾರ.

ಸ್ವಾತಂತ್ರ್ಯ ಬಂದ ದಿನದಿಂದಲೂ, ಇಂದಿನವರೆಗೂ ಈ ಹುದ್ದೆಯ ಹಿಂದೆ ಆಡಳಿತಾರೂಢ ಪಕ್ಷದ ರಾಜಕೀಯ ಹಿತಾಸಕ್ತಿಗಳು ಇರುವುದನ್ನು ಗಮನಿಸುತ್ತಲೇ ಬಂದಿದ್ದೇವೆ. ಏಕೆಂದರೆ ಮೂಲತಃ ಸಂವಿಧಾನ ಅನುಚ್ಛೇದ ೭೪ರ ಅನ್ವಯ ರಾಷ್ಟ್ರಪತಿಯವರು ಕೇಂದ್ರ ಸಚಿವ ಸಂಪುಟದ ಸಲಹೆಯಂತೆಯೇ ತಮ್ಮ ತೀರ್ಮಾನಗಳನ್ನು ಕೈಗೊಳ್ಳಬೇಕಾಗುತ್ತದೆ. ಕೆಲವು ವಿಶೇಷ ಸಂದರ್ಭಗಳಲ್ಲಿ ರಾಷ್ಟ್ರಪತಿಯವರಿಗೆ ವಿಶೇಷ ಪರಮಾಧಿಕಾರವನ್ನೂ ನೀಡಲಾಗಿದೆ. ಸಂಸತ್ತಿನಲ್ಲಿ ಅನುಮೋದಿಸಲಾದ ಪ್ರತಿಯೊಂದು ಮಸೂದೆಗೂ ರಾಷ್ಟ್ರಪತಿಯವರ ಅಂಕಿತ ಅವಶ್ಯವಾಗಿರುತ್ತದೆ. ಇಲ್ಲವಾದಲ್ಲಿ ಅದು ಕಾನೂನಾಗಿ ಜಾರಿಗೊಳಿಸಲಾಗುವುದಿಲ್ಲ. ಇಲ್ಲಿಯೂ ಸಹ ಸಂವಿಧಾನದ ಅನುಚ್ಛೇದ ೩ರಲ್ಲಿ ರಾಷ್ಟ್ರಪತಿಗೆ ಕೆಲವು ವಿಶೇಷ ನಿರಾಕಾರಣಾಧಿಕಾರಗಳನ್ನು ನೀಡಲಾಗಿದೆ. ತಮ್ಮ ಸಂಪೂರ್ಣ ನಿರಾಕರಣಾಧಿಕಾರವನ್ನು ಬಳಸಿ ರಾಷ್ಟ್ರಪತಿಯವರು ಯಾವುದೇ ಮಸೂದೆಗೆ ಅಂಕಿತ ಹಾಕಲು ಒಪ್ಪದೆ ಹೋದರೆ, ಅದನ್ನು ಕಾನೂನಾಗಿ ಜಾರಿಮಾಡಲಾಗುವುದಿಲ್ಲ. ಆದರೆ ಸಂಸತ್ತಿನಲ್ಲಿ ಖಾಸಗಿ ಸದಸ್ಯರ ಮೂಲಕ ಮಂಡಿಸಲಾಗುವ ಮಸೂದೆಗಳಿಗೆ ಇದು ಅನ್ವಯಿಸುವುದಿಲ್ಲ. ಹಾಗೆಯೇ ರಾಷ್ಟ್ರಪತಿಯವರ ಅಂಕಿತ ದೊರೆಯುವ ಮುನ್ನವೇ ಸಚಿವ ಸಂಪುಟ ರಾಜೀನಾಮೆ ನೀಡಿದರೂ ಅನ್ವಯಿಸುವುದಿಲ್ಲ.

ಕೆಲವು ಸಂದರ್ಭಗಳಲ್ಲಿ ರಾಷ್ಟ್ರಪತಿ ಕಚೇರಿಯು ಸಂಸತ್ತಿನಲ್ಲಿ ಅನುಮೋದಿಸಲಾದ ಮಸೂದೆಗಳನ್ನು ಪುರ್ನ ಪರಿಷ್ಕರಣೆಗೆ ಅಥವಾ ಪುನರಾವಲೋಕನಕ್ಕಾಗಿ, ತಮ್ಮ ಆಕ್ಷೇಪಗಳೊಂದಿಗೆ, ಹಿಂದಿರುಗಿಸುವ ವಿಶೇಷಾಧಿಕಾರವನ್ನೂ ಹೊಂದಿರುತ್ತದೆ. ಆದರೆ ಹೀಗೆ ಹಿಂದಿರುಗಿಸಲಾದ ಮಸೂದೆಯನ್ನು ಸಂಸತ್ತು ಮತ್ತೊಮ್ಮೆ ಸ್ಪಷ್ಟ ಬಹುಮತದೊಂದಿಗೆ ಅನುಮೋದಿಸಿದರೆ ಆಗ ರಾಷ್ಟ್ರಪತಿಯವರು ಅಂಗೀಕರಿಸಬೇಕಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದ ಮಸೂದೆಗಳನ್ನು ಇತ್ಯರ್ಥಮಾಡದೆ, ಅಂಕಿತವನ್ನೂ ನೀಡದೆ ಉಳಿಸಿಕೊಳ್ಳುವ ಅಧಿಕಾರವೂ ರಾಷ್ಟ್ರಪತಿಯವರಿಗೆ ಇರುತ್ತದೆ. ಸಂವಿಧಾನದಲ್ಲಿ ಈ ಕುರಿತ ಸ್ಪಷ್ಟ ಉಲ್ಲೇಖ ಇಲ್ಲದಿದ್ದರೂ, ಇದು ಆಚರಣೆಯಲ್ಲಿ ನಡೆದುಬಂದಿದೆ. ಇಂತಹ ಸನ್ನಿವೇಶಗಳಲ್ಲಿ ಮಸೂದೆಗಳು ಕಾಲಕ್ರಮೇಣ ನೆನೆಗುದಿಗೆ ಬೀಳುತ್ತವೆ.

ಸಂವಿಧಾನದ ಅನುಚ್ಚೇದ ೧೨೩ರ ಅಡಿಯಲ್ಲಿ ಕೇಂದ್ರ ಸಚಿವ ಸಂಪುಟದ ಸಲಹೆಯನ್ನಾಧರಿಸಿ ರಾಷ್ಟ್ರಪತಿಯವರು ಸುಗ್ರೀವಾಜ್ಞೆಯನ್ನು ಹೊರಡಿಸುವ ಪರಮಾಧಿಕಾರವನ್ನೂ ಹೊಂದಿರುತ್ತಾರೆ. ಇದು ತುರ್ತು ಸಂದರ್ಭಗಳಲ್ಲಿ ಮಾತ್ರವೇ ಬಳಕೆಯಾಗುವ ಒಂದು ಸಾಂವಿಧಾನಿಕ ಮಾರ್ಗವೂ ಅಗಿದೆ.

ಭಾರತದ ವಸಾಹತುಶಾಹಿಯಿಂದ ವಿಮೋಚನೆ ಪಡೆದ ನಂತರದಲ್ಲಿ ಸಂಸದೀಯ ಪ್ರಜಾಪ್ರಭುತ್ವದ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣವೇ ಈ ದೇಶದ ಬಹುತ್ವ ಸಂಸ್ಕೃತಿ ಮತ್ತು ವೈವಿಧ್ಯಮಯ ಸಾಮುದಾಯಿಕ ಅಸ್ಮಿತೆಗಳು. ಪಕ್ಷ ಕೇಂದ್ರಿತ, ಭಾಷಿಕ, ಪ್ರಾದೇಶಿಕ ಅಥವಾ ಮತ್ತಾವುದೇ ಅಸ್ಮಿತೆಗಳ ಹಂಗಿಲ್ಲದೆ, ಅಧಿಕಾರ ರಾಜಕಾರಣದ ಸೋಂಕಿಲ್ಲದೆ, ಚುನಾಯಿತ ಜನಪ್ರತಿನಿಧಿಗಳ ನಿರ್ಬಂಧಗಳಿಲ್ಲದೆ, ಭಾರತದ ಸಂವಿಧಾನ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು, ಆಶಯಗಳನ್ನು ಕಾಪಾಡುವ ಒಂದು ಸದುದ್ದೇಶದೊಂದಿಗೆ ರಾಷ್ಟ್ರಪತಿ ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಹಾಗಾಗಿ ಹಲವಾರು ಸಂದರ್ಭಗಳಲ್ಲಿ ಕೇಂದ್ರ ಸಚಿವ ಸಂಪುಟದ ಸಲಹೆಯನ್ನೂ ಮೀರಿ ರಾಷ್ಟ್ರಪತಿಯವರು ಮಸೂದೆಗಳಿಗೆ ಅಂಕಿತ ಹಾಕದೆ ಇರುವ ಸಾಧ್ಯತೆಗಳಿರುತ್ತವೆ.

ಪ್ರಸ್ತುತ ಸಂದರ್ಭದಲ್ಲಿ ಸಂಸತ್ತಿನಲ್ಲಿ ಚರ್ಚೆಗಳನ್ನೇ ನಡೆಸದೆ ಜನಸಾಮಾನ್ಯರ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರುವಂತಹ ಕಾನೂನುಗಳನ್ನು ಜಾರಿಗೊಳಿಸುತ್ತಿರುವುದನ್ನು ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಗಳಲ್ಲಿ ರಾಷ್ಟ್ರಪತಿಯವರ ಅಧಿಕಾರ ವ್ಯಾಪ್ತಿಯೂ ಸೀಮಿತವಾಗಿಯೇ ಇರುತ್ತದೆ. ಈ ಪ್ರತಿಷ್ಠಿತ ಹುದ್ದೆಯ ಅಧಿಕಾರ ವ್ಯಾಪ್ತಿ ಮತ್ತು ಸಾಂವಿಧಾನಿಕ ಜವಾಬ್ದಾರಿಯನ್ನು ಅರಿತು, ಪ್ರಜಾಪ್ರಭುತ್ವವನ್ನು ಮುನ್ನಡೆಸುವ ನೈತಿಕತೆ ಮತ್ತು ಸಾಂವಿಧಾನಿಕ ಮೌಲ್ಯ ಆಡಳಿತಾರೂಡ ಪಕ್ಷಗಳಲ್ಲಿರಬೇಕಾಗುತ್ತದೆ. ಈ ಹಿನ್ನೆಲೆಯಲ್ಲೇ ರಾಷ್ಟ್ರಪತಿ ಹುದ್ದೆಗೆ ರಾಜಕೀಯೇತರ ವ್ಯಕ್ತಿಗಳ ಆಯ್ಕೆಯೇ ಸಮರ್ಪಕವಾದದ್ದು ಎಂದು ರಾಜಕೀಯ ವಿಶ್ಲೇಷಕರು, ತಜ್ಞರು ಅಭಿಪ್ರಾಯಪಡುತ್ತಾರೆ. ತಮ್ಮ ಸೀಮಿತಿ ಅಧಿಕಾರ ವ್ಯಾಪ್ತಿಯಲ್ಲೂ ಸಹ, ಸಂವಿಧಾನವನ್ನು ರಕ್ಷಿಸುವ ನಿಟ್ಟಿನಲ್ಲಿ ವಿವೇಚನಾಧಿಕಾರವನ್ನು ಬಳಸುವ ಸ್ವಾತಂತ್ರ್ಯವನ್ನು ಹೀಗೆ ಆಯ್ಕೆಯಾದವರು ಹೊಂದಿರಲು ಸಾಧ್ಯ.

ಸ್ವತಂತ್ರ ಭಾರತದ ಅಮೃತ ಮಹೋತ್ಸವದ ಸಂದರ್ಭದಲ್ಲಾದರೂ ಭಾರತದ ರಾಜಕೀಯ ವ್ಯವಸ್ಥೆ ಕೊಂಚ ಪ್ರಬುದ್ಧತೆಯನ್ನು ತೋರಬಹುದಿತ್ತು. ಆದರೆ ಅಧಿಕಾರ ರಾಜಕಾರಣದ ಲಾಲಸೆ ಮತ್ತು ಕಾರ್ಪೋರೇಟ್ ಮಾರುಕಟ್ಟೆ ವ್ಯವಸ್ಥೆಯ ವ್ಯಾವಹಾರಿಕತೆ ಇಡೀ ರಾಜಕೀಯ ವ್ಯವಸ್ಥೆಯನ್ನೇ ಆವರಿಸಿರುವಾಗ ಇದನ್ನು ನಿರೀಕ್ಷಿಸುವುದೂ ಕಷ್ಟವೇ. ಸ್ಪಷ್ಟ ಬಹುಮತ ಇರುವ ಕೆಂದ್ರ ಎನ್ಡಿಎ ಸರ್ಕಾರಕ್ಕೆ ತನ್ನ ಆಯ್ಕೆಯ ಅಭ್ಯರ್ಥಿ ರಾಷ್ಟ್ರಪತಿಯಾಗಿ ಚುನಾಯಿತವಾಗುವುದು ಖಚಿತವಾಗಿದ್ದ ಸಂದರ್ಭದಲ್ಲಿ, ಇತರ ಎಲ್ಲ ರಾಜಕೀಯ ಪಕ್ಷಗಳೊಡನೆ ಮುಕ್ತ ಸಂವಾದ ನಡೆಸುವ ಮೂಲಕ ರಾಜಕೀಯ ಛಾಯೆಯಿಂದ ಮುಕ್ತವಾದ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ, ಸರ್ವಾನುಮತದಿಂದ ಆಯ್ಕೆ ಮಾಡುವ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಅಥವಾ ಇತರ ರಾಜಕೀಯ ಪಕ್ಷಗಳು ತಮ್ಮ ರಾಜಕೀಯ ಅಸ್ಮಿತೆಗಳನ್ನು ಬದಿಗಿಟ್ಟು, ಪ್ರಪ್ರಥಮ ಬುಡಕಟ್ಟು ಸಮುದಾಯದ ಪ್ರತಿನಿಧಿಯಾಗಿ, ದ್ರೌಪದಿ ಮುರ್ಮು ಅವರನ್ನೇ ಸರ್ವಾನುಮತದಿಂದ ಆಯ್ಕೆ ಮಾಡುವ ಪ್ರಯತ್ನವನ್ನಾದರೂ ಮಾಡಬಹುದಿತ್ತು.

ಈ ಹಿಂದೆ ಇಷ್ಟೇ ಬಹುಮತ ಹೊಂದಿದ್ದ ಕಾಂಗ್ರೆಸ್ ಆಡಳಿತದಲ್ಲೂ ಇಂತಹ ಪ್ರಯತ್ನಗಳು ನಡೆದಿಲ್ಲ ಎನ್ನುವುದು ಕಟು ವಾಸ್ತವ. ಬಹುಶಃ ಭಾರತದ ಪ್ರಜಾತಂತ್ರ ವ್ಯವಸ್ಥೆ ಈ ಪ್ರಬುದ್ಧತೆಯನ್ನು ರೂಢಿಸಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ ಎನಿಸುತ್ತದೆ. ಈಗ ಚುನಾಯಿತರಾಗಿರುವ ದ್ರೌಪದಿ ಮುರ್ಮು ಅವರನ್ನು ಆದಿವಾಸಿಗಳ, ಬುಡಕಟ್ಟು ಸಮುದಾಯಗಳ ಪ್ರತಿನಿಧಿಯಾಗಿ ನೋಡಲು ಸಾಧ್ಯವೇ ಅಥವಾ ಆಡಳಿತಾರೂಢ ಸರ್ಕಾರದ ಪರವಾಗಿಯೇ ತಮ್ಮ ಕಾರ್ಯನಿರ್ವಹಿಸುತ್ತಾರೆಯೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ದೊರೆಯಲಿದೆ. ಕೆ ಆರ್ ನಾರಾಯಣನ್ ದೇಶದ ಪ್ರಥಮ ದಲಿತ ರಾಷ್ಟ್ರಪತಿಯಾಗಿ ಆಯ್ಕೆಯಾದಾಗಲೂ ಈ ಸಾಮುದಾಯಿಕ ಅಸ್ಮಿತೆಯ ಪ್ರಶ್ನೆ ಎದುರಾಗಿತ್ತು. ರಾಮನಾಥ್ ಕೋವಿಂದ್ ಎರಡನೆ ದಲಿತ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ವೇಳೆಗೆ ಸಾಮುದಾಯಿಕ ಭ್ರಮೆಯೆಲ್ಲವೂ ಕಳಚಿಬಿದ್ದಿತ್ತು. ಏಕೆಂದರೆ ಭಾರತದ ಸಂಸದೀಯ ವ್ಯವಸ್ಥೆಯಲ್ಲಿ ರಾಷ್ಟ್ರಪತಿ ಹುದ್ದೆ, ಶಾಸಕಾಂಗದ ಮೇಲೆ ಸೀಮಿತ ಅಂಕುಶ ಸಾಧಿಸುವುದಕ್ಕಷ್ಟೇ ಸೀಮಿತವಾಗಿರುತ್ತದೆ. ಬಹುಮತ ಇರುವ ಸರ್ಕಾರಗಳು ತಮ್ಮದೇ ಆದ ಆಡಳಿತ ನೀತಿಗಳನ್ನು ಜಾರಿಗೊಳಿಸಲು ಒಂದು ಸುಗಮ ಮಾರ್ಗವನ್ನು ತಮ್ಮದೇ ಆಯ್ಕೆಯ ರಾಷ್ಟ್ರಪತಿಗಳ ಕಚೇರಿಯ ಮೂಲಕ ಕಂಡುಕೊಳ್ಳುವ ಒಂದು ಪರಂಪರೆಯನ್ನು ಭಾರತದ ರಾಜಕೀಯ ವ್ಯವಸ್ಥೆ ಮತ್ತು ಸಮಾಜ ಬಹುಪಾಲು ಒಪ್ಪಿಕೊಂಡೇ ನಡೆಯುತ್ತಿದೆ.

ಹಾಗಾಗಿಯೇ ಆಡಳಿತಾರೂಢ ಪಕ್ಷಗಳು ತಮ್ಮದೇ ಆದ ಅಭ್ಯರ್ಥಿಯನ್ನು, ಪಕ್ಷ ರಾಜಕಾರಣದ ಒಳಗಿನಿಂದಲೇ ರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಇಚ್ಚಿಸುತ್ತವೆ. ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಮಾತ್ರವೇ ಇದಕ್ಕೆ ಅಪವಾದದಂತಿದ್ದರು. ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದವರು ಶಾಸಕಾಂಗದ ಆಡಳಿತ ನೀತಿಗಳ ಮೇಲೆ, ಕಾಯ್ದೆ ಕಾನೂನುಗಳ ಮೇಲೆ ಒತ್ತಡ ಹೇರಲೂ ಆಗುವುದಿಲ್ಲ ಅಥವಾ ನಿಯಂತ್ರಿಸಲೂ ಆಗುವುದಿಲ್ಲ. ಹೆಚ್ಚೆಂದರೆ ಕೆಲವು ಕಾನೂನುಗಳಿಗೆ ಅಂಕಿತ ಹಾಕಲೊಪ್ಪದೆ, ತಿದ್ದುಪಡಿ ಮಾಡಲು ಪ್ರೇರೇಪಿಸಬಹುದು. ಇಂತಹ ಸನ್ನಿವೇಶದಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಆಯ್ಕೆಯೊಂದಿಗೆ, ಆದಿವಾಸಿಗಳ ಬದುಕಿಗೇ ಮಾರಕವಾಗುತ್ತಿರುವ ಅನೇಕ ಕಾರ್ಪೋರೇಟ್ ಮಾರುಕಟ್ಟೆ ಆಡಳಿತ/ಆರ್ಥಿಕ ನೀತಿಗಳಿಗೆ ಅಂಕುಶ ಬೀಳುತ್ತದೆ ಎಂದು ನಿರೀಕ್ಷಿಸಲೂ ಆಗುವುದಿಲ್ಲ. ಭಾರತದ ಪ್ರಸ್ತುತ ರಾಜಕೀಯ ವ್ಯವಸ್ಥೆ ಇದನ್ನು ನಿರೀಕ್ಷಿಸುವುದೂ ಇಲ್ಲ. ಆದಗ್ಯೂ ನೂತನ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ತಮ್ಮ ಸೇವಾವಧಿಯಲ್ಲಿ ನಿಷ್ಪಕ್ಷಪಾತತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ಭಾರತದ ಜನಸಾಮಾನ್ಯರ ಮತ್ತು ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುತ್ತಾರೆ ಎಂಬ ಅಪೇಕ್ಷೆಯೊಂದಿಗೆ ಸ್ವಾಗತಿಸೋಣ.

 

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ