ನೀಟ್- ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಸಿಬಿಎಸ್‌ಇ ಪರೀಕ್ಷಾ ಅವ್ಯವಸ್ಥೆಯನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಹೊಸದಿಲ್ಲಿಯ ಜಂತರ್ ಮಂಥರ್‌ನಲ್ಲಿ ಶನಿವಾರ ನಡೆಸಿದ ಪ್ರತಿಭಟನೆ ಇಡೀ ದೇಶದ ಗಮನ ಸೆಳೆದಿದೆ. ಆ ಮೂಲಕ ಸಿಜೆಪಿ ಹೋರಾಟ ವಿಸ್ತಾರಗೊಳ್ಳುವ ಎಲ್ಲ ಲಕ್ಷಣಗಳೂ ಗೋಚರಿಸಿವೆ.
ಅಮೆರಿಕದಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಮಹಾರಾಷ್ಟ್ರ ಮೂಲದ ಅಭಿಜೀತ್ ದಿಪ್ಕೆ ಸ್ಥಾಪಿಸಿರುವ ಸಿಜೆಪಿಯು ನಾಡಿನ ಸಾಮಾಜಿಕ, ರಾಜಕೀಯ ರಂಗಗಳಲ್ಲಿ ಪ್ರಜಾಪ್ರಭುತ್ವ ವಿರೋಽ ಧೋರಣೆಗಳಿಗೆ ಪ್ರತ್ಯುತ್ತರ ಮಾದರಿ ಹೋರಾಟಗಳಿಗೆ ಮುನ್ನುಡಿ ಬರೆದಿದೆ ಎನ್ನಬಹುದು.
ಸುಮಾರು ಒಂದು ತಿಂಗಳ ಹಿಂದೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ಅವರು ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ‘ಜಿರಳೆ’ ಪದವನ್ನು ಬಳಸಿ ನಿರುದ್ಯೋಗಿಗಳನ್ನು ಸೋಮಾರಿಗಳು ಎಂಬಂತೆ ಬಿಂಬಿಸಿ ಆಡಿದ ಮಾತುಗಳು ಸಿಜೆಪಿ ಹುಟ್ಟಿಕೊಳ್ಳಲು ಮೂಲ ಪ್ರೇರಣೆಯಾದವು. ನ್ಯಾ. ಸೂರ್ಯಕಾಂತ್ ಅವರು ನಂತರ ತಮ್ಮ ಮಾತುಗಳ ಅರ್ಥವನ್ನು ವಿವರಿಸಿದರಲ್ಲದೆ, ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ ಎಂದು ಸ್ಪಷ್ಟಪಡಿಸಿದರು.
ಆ ವೇಳೆಗಾಗಲೇ ಅಮೆರಿಕದಲ್ಲಿದ್ದ ದಿಪ್ಕೆ, ಕಾಕ್ರೋಚ್ ಜನತಾ ಪಾರ್ಟಿ ಎಂಬ ವೇದಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿಬಿಟ್ಟರು. ಕೇವಲ ಎರಡು ದಿನಗಳ ಅಂತರದಲ್ಲಿ ಸುಮಾರು ೨ ಕೋಟಿ ಯುವಜನರು ಈ ವೇದಿಕೆಯಡಿ ಸಂಘಟಿತರಾದರು. ಸಿಜೆಪಿ ರಾಜಕೀಯವಾಗಿ ಬೆಳೆಯಬಹುದು ಅಥವಾ ಹುಟ್ಟಿದಷ್ಟೇ ಆಕಸ್ಮಿಕವಾಗಿ ಇಲ್ಲವಾಗಬಹುದು. ಈ ಬಗ್ಗೆ ಚಿಂತಿಸದ ದಿಪ್ಕೆ, ಸಿಜೆಪಿಯ ಪ್ರಣಾಳಿಕೆಯನ್ನೂ ಪ್ರಕಟಿಸಿದರು.
ಅದರಲ್ಲಿ ಪ್ರಮುಖವಾಗಿ ಸುಪ್ರೀಂ ಕೋರ್ಟ್‌ನ ಯಾವುದೇ ವಿಶ್ರಾಂತ ಮುಖ್ಯ ನ್ಯಾಯಮೂರ್ತಿಗೆ ರಾಜ್ಯಸಭೆ ಸದಸ್ಯ ಸ್ಥಾನ ಕೊಡುವುದಿಲ್ಲ ಎಂಬುದನ್ನು ಸೇರಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ರೂಪಿತವಾದ ಈ ವೇದಿಕೆಗೆ ಯುವಜನರು ನಿರೀಕ್ಷೆ ಮೀರಿ ಬೆಂಬಲ ನೀಡಿದ್ದಾರೆ. ಅದಕ್ಕೆ ಹೊಸದಿಲ್ಲಿಯಲ್ಲಿ ನಡೆದ ಪ್ರತಿಭಟನೆಯೇಸಾಕ್ಷಿ. ದೇಶದ ಸಾಮಾಜಿಕ ಜಾಲತಾಣದಲ್ಲಿ ಸಿಜೆಪಿಯನ್ನು ನಿರ್ಬಂಧಿಸಲಾಯಿತು. ಆದರೆ, ಅದು ನಿರೀಕ್ಷಿತ ರೀತಿಯಲ್ಲಿ ಫಲಪ್ರದವಾಗಲಿಲ್ಲ.
ಇದು ‘ಜೆನ್ ಝೀ’ (೧೯೯೭ರಿಂದ ೨೦೧೨ನೇ ಇಸವಿ ಒಳಗೆ ಜನಿಸಿರುವವರು) ಯುಗ. ಅಂದರೆ ಯುವಜನತೆಯ ಕಾಲ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಲ್ಲಿ ನಡೆದ ಕ್ರಾಂತಿಗೆ ಈ ‘ಜೆನ್ ಝೀ’ ಸಂಕುಲದ ಆಕ್ರೋಶವೇ ಕಾರಣ. ಇದೀಗ ಭಾರತದಲ್ಲಿ ಸಿಜೆಪಿಯಡಿಯಲ್ಲಿ ಈ ಯುವಜನರು ಒಗ್ಗೂಡುವ ಸೂಚನೆಗಳಿವೆ. ಅವರ ಶಕ್ತಿ ಪ್ರದರ್ಶಕ್ಕೆ ನೀಟ್- ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ವೇದಿಕೆಯಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡದಿದ್ದರೆ ಸಿಜೆಪಿ ಹೋರಾಟ ನಿಲ್ಲುವ ಸಾಧ್ಯತೆ ಕ್ಷೀಣವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಗಟ್ಟಿ ನಿರ್ಧಾರ ಕೈಗೊಳ್ಳುವ ಅಗತ್ಯ ಇದೆ. ಹೊಸದಿಲ್ಲಿಯಲ್ಲಿ ಸಿಜೆಪಿ ನಡೆಸಿದ ಹೋರಾಟ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಅಲ್ಲದೆ, ಸಿಜೆಪಿಯ ಮೊದಲ ಪ್ರತಿರೋಧಕ್ಕೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ಆಕಾಂಕ್ಷಿಗಳು, ಯುವಜನರು, ನಿರುದ್ಯೋಗಿಗಳು ಬೆಂಬಲ ನೀಡಿದ್ದಾರೆ. ಸಿಪಿಐ ಸೇರಿದಂತೆ ಕೆಲ ಎಡಪಕ್ಷಗಳು ಕೂಡ ಕೈಜೋಡಿಸಿರುವುದು ವಿಶೇಷ.
ಕೇಂದ್ರ ಶಿಕ್ಷಣ ಸಚಿವರ ಪದತ್ಯಾಗಕ್ಕೆ ಅಥವಾ ಪ್ರಧಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟದಿಂದ ವಜಾಗೊಳಿಸಲು ಸಿಜೆಪಿ ಏಳು ದಿನಗಳ ಗಡುವು ನೀಡಿದೆ. ಅವರ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯನ್ನು ರಾಷ್ಟ್ರವ್ಯಾಪಿಗೊಳಿಸುವ ಎಚ್ಚರಿಕೆಯನ್ನು ರವಾನಿಸಲಾಗಿದೆ. ‘ಸಾಮಾಜಿಕ ಮಾಧ್ಯಮಗಳಲ್ಲಿ ನಾವು ಮಾಡಿರುವ ಪೋಸ್ಟ್‌ಗಳನ್ನು ನೀವು ತೆಗೆದುಹಾಕಬಹುದು. ಆದರೆ, ನಮ್ಮ ಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಹೇಳಿರುವ ಮಾತು ನಿರ್ಲಕ್ಷ ವಹಿಸುವಂತಹದ್ದಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಉಡಾಫೆ ಮಾಡಬಾರದು.
ಅಲ್ಲದೆ, ಧಾರ್ಮಿಕ ಅಸಹಿಷ್ಣುತೆ, ಸಾಮಾಜಿಕ ಅಸಮಾನತೆ, ಶೈಕ್ಷಣಿಕ ಅವಜ್ಞೆಗಳನ್ನು ನಿರ್ಮೂಲನೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬದ್ಧತೆ ತೋರಿಸ ಬೇಕಾಗುತ್ತದೆ. ತಪ್ಪಿದರೆ ‘ಜಿರಳೆ’ಗಳು ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟಗಳಲ್ಲಿ ಕೂಡ ಸ್ಥಳೀಯ ಆಡಳಿತದ ವಿರುದ್ಧ ಹೋರಾಟವನ್ನು ಪ್ರಬಲಗೊಳಿಸಲು ಮುಂದಾಗುವ ಸಾಧ್ಯತೆ ಇದೆ. ‘ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ; ರೋಗ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಸೂಕ್ತ’. ಈ ಬಗ್ಗೆ ದೇಶದ ಒಕ್ಕೂಟ ಸರ್ಕಾರ ಎಚ್ಚೆತ್ತುಕೊಳ್ಳಬೇಕು.
” ಇದು ‘ಜೆನ್ ಝೀ’ (೧೯೯೭ ರಿಂದ ೨೦೧೨ನೇ ಇಸವಿ ಒಳಗೆಜನಿಸಿರುವವರು) ಯುಗ. ಅಂದರೆ ಯುವಜನತೆಯ ಕಾಲ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ನೇಪಾಳ ದೇಶಗಳಲ್ಲಿ ನಡೆದ ಕ್ರಾಂತಿಗೆ ಈ ‘ಜೆನ್ ಝೀ’ ಸಂಕುಲದ ಆಕ್ರೋಶವೇ ಕಾರಣ. ಇದೀಗ ಭಾರತದಲ್ಲಿ ಸಿಜೆಪಿಯಡಿಯಲ್ಲಿ ಈ ಯುವಜನರು ಒಗ್ಗೂಡುವ ಸೂಚನೆಗಳಿವೆ”




