Light
Dark

ತರೀಕೆರೆ ಏರಿಮೇಲೆ : ಉದಯೋನ್ಮುಖ ಅವಸ್ಥೆಯ ಅವಸರ : ಅಳುಕು ಅಭದ್ರತೆಗಳಿಂದ ಸಿಗದ ಮುಕ್ತಿ

 – ರಹಮತ್ ತರೀಕೆರೆ

ತೋಟದ ಕಾವಲಿನ ಹನುಮಂತಾ ಬೋವಿಯ ಕತೆಗಳನ್ನು ಸಂಗ್ರಹಿಸಿ ಎಕ್ಸೈಜ್‌  ಪುಸ್ತಕದಲ್ಲಿ ಬರೆದಿಡತೊಡಗಿದೆ

ಬಹುತೇಕ ಲೇಖಕರಂತೆ ನನ್ನ ಬರೆಹದ ಬದುಕೂ ಕವನಗಳಿಂದ ಆರಂಭವಾಯಿತು. ಪಿಯಿಸಿಯಲ್ಲಿದ್ದೆ. ಕೃತಕವಾಗಿ ಪ್ರಾಸ ಜೋಡಿಸಿದ ಕವನಗಳನ್ನು ಊದುಬತ್ತಿಗಳಂತೆ ಹೊಸೆಯುತ್ತಿದ್ದೆ. ಪತ್ರಿಕೆ ಯಾವುದಾದರೂ ಸರಿ ಪ್ರಕಟವಾಗಬೇಕು ಅಷ್ಟೆ. ಪಬ್ಲಿಕ್ ಲೈಬ್ರರಿಯಲ್ಲಿದ್ದ ಪತ್ರಿಕೆಗಳ ವಿಳಾಸ ಗುರುತು ಮಾಡಿಕೊಂಡು ಅವಕ್ಕೆ ರವಾನಿಸುತ್ತಿದ್ದೆ. ಹಸ್ತಪ್ರತಿಗಳು ಮರಳಿ ಬರುತ್ತಿದ್ದವು. ಒಮ್ಮೆ ಬಿಜಾಪುರ ಜಿಲ್ಲೆಯ ವ್ಯಕ್ತಿಯೊಬ್ಬ ಉದಯೋನ್ಮುಖರ ಕವನ ಸಂಕಲನ ಪ್ರಕಟಿಸುವುದಾಗಿಯೂ, ಕವಿಗಳು ಕವನದ ಜತೆ ಐದು ರೂಪಾಯಿ ಕಳಿಸಬೇಕೆಂದೂ ಪ್ರಕಟಣೆ ನೀಡಿದನು. ಕವನವನ್ನು ಹಾಳೆಯಲ್ಲಿ ದುಂಡೆಗೆ ಬರೆದು, ಐದು ರೂಪಾಯಿ ಲಗತ್ತಿಸಿ- ಆಗ ಇದು ಎರಡಾಳಿನ ಕೂಲಿ ರೊಕ್ಕ- ಕವರಲ್ಲಿಟ್ಟು ಕಳಿಸಿದೆ. ಕವನ ಸರಿಯಿರಲಿಲ್ಲವೊ, ಅಂಚೆಯಣ್ಣ ನೋಟನ್ನು ಎಗರಿಸಿದನೊ, ಸದರಿ ಸಂಪಾದಕನು ಇದನ್ನೇ ದಂಧೆಯನ್ನಾಗಿಸಿಕೊಂಡ ಖೊಟ್ಟಿ ಮನುಷ್ಯನೊ, ಸಂಕಲನ ಹೊರಬರಲಿಲ್ಲ.

ಕವನಗಳಲ್ಲಿ ಯಶಸ್ಸು ಕಾಣದೇ ಹೋದಾಗ ಲೇಖನಗಳತ್ತ ಹೊರಳಿದೆ. ಅವುಗಳ ವಸ್ತು ನಾನಿದ್ದ ಪರಿಸರದಲ್ಲಿ ಢಾಳಾಗಿದ್ದ ದೈನಿಕ ಜ್ವಲಂತ ಸಮಸ್ಯೆಗಳಾಗಿರಲಿಲ್ಲ. ನನ್ನೊಳಗಿನ ತಲ್ಲಣಗಳನ್ನು ನಾನೇ ಹುಡುಕುವುದೂ ಅಲ್ಲ. ಅವು ‘ವಿದ್ಯಾರ್ಥಿ ಸಂಘಟನೆಗಳ ಅಗತ್ಯವಿದೆೆಯೇ?’, ‘ಸಮಾಜ ನಿರ್ಮಾಣದಲ್ಲಿ ಯುವಜನತೆಯ ಪಾತ್ರ’, ‘ದೇಶಕ್ಕೆ ಅಧ್ಯಕ್ಷೀಯ ಮಾದರಿಯ ಚುನಾವಣೆ ಬೇಕೆ?’, ‘ಭಾರತ ಭವ್ಯರಾಷ್ಟ್ರವಾಗಲು ಹಿಡಿಯಬೇಕಾದ ಪಥ’-ಮುಂತಾಗಿ ನನ್ನಳವಿಗೆ ಮೀರಿದ ಕ್ಷೇತ್ರಕ್ಕೆ ಸಂಬಂಧಿಸಿದ್ದವು. ಇವು ನಮ್ಮೂರಿಂದ ಹೊರಡುತ್ತಿದ್ದ ‘ಅಂಚೆವಾರ್ತೆ’, ‘ವಿಕ್ರಮ’ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ದಿನಪತ್ರಿಕೆಯು ‘ಯುವಶಕ್ತಿ’ ವಿಭಾಗಗಳು ನನ್ನ ಆಡುಂಬೊಲವಾಗಿದ್ದವು. ಥೇಟು ಅಡಿಗರ ಕವಿತೆಯ ‘ಏನಾದರೂ ಮಾಡುತಿರು ತಮ್ಮ’. ಲೇಖನಗಳ ವಸ್ತು ಗಂಭೀರವಾಗಿದ್ದರೂ, ಒಳಗೆ ಭವ್ಯ ದಿವ್ಯ ಮೊದಲಾಗಿ ಶಬ್ದಾಡಂಬರಗಳು ಮೆರೆಯುತ್ತಿದ್ದವು. ಇದಕ್ಕೆ ಗ್ರಂಥಾಲಯದಲ್ಲಿ ಓದುತ್ತಿದ್ದ ಕೆಲವು ಮಹನೀಯರ ಭಾಷಣದ ಪುಸ್ತಕಗಳೂ ಕಾರಣವಿರಬೇಕು. ಕೆಟ್ಟು ಹೋಗುತ್ತಿರುವ ಸಮಾಜಕ್ಕೆ ಬುದ್ಧಿವಾದ ಹೇಳುವುದು ಲೇಖನಗಳ ಮುಖ್ಯ ಗುರಿಯಾಗಿತ್ತು. ಈ ಲೇಖನ ವ್ಯವಸಾಯವೂ ಅಷ್ಟಾಗಿ ಬರಕತ್ತಾಗಲಿಲ್ಲ.

ಬಿ.ಎಯಲ್ಲಿ ಐಚ್ಛಿಕವಾಗಿ ಕನ್ನಡ ಸಾಹಿತ್ಯ ತೆಗೆದುಕೊಂಡ ಬಳಿಕ ಗೆಳೆಯರು ‘ಕನ್ನಡ ಮೇಜರ್ ತಗೊಂಡಿದೀಯಾ? ಒಂದು ಕತೆ ಬರೆಯಲಿಲ್ಲ್ಲ’ ಎಂದು ಛೇಡಿಸುತ್ತಿದ್ದರು. ಸವಾಲನ್ನು ಸ್ವೀಕರಿಸಿದೆ. ಅದೇ ಕಾಲಕ್ಕೆ ಹಸಿದವರು ಕಡ್ಲೆಪುರಿ ಮುಕ್ಕುವಂತೆ ಜನಪ್ರಿಯ ಕಾದಂಬರಿಗಳನ್ನು ಓದುತ್ತಿದ್ದೆ. ಎರಡು ದಿನಕ್ಕೆ ಒಂದು ಕಾದಂಬರಿ ಖತಂ. ಎಮ್ಮೆ ಸಪ್ಪೆದಂಟನ್ನಾದರೂ ಜಗಿದು ತಿನ್ನುತ್ತದೆ. ನಾನು ಮಕ್ಕಳು ಪೆಪ್ಪರಮೆಂಟನ್ನು ನುಂಗುವಂತೆ ಓದುತ್ತಿದ್ದೆ. ಓದುಗರ ಹೃದಯ ಕರಗಿಸುವುದು, ಸಾಧ್ಯವಾದರೆ ಅವರಲ್ಲಿ ಕಂಬನಿ ತುಳುಕುವಂತೆ ಮಾಡುವುದು ಸಾಹಿತ್ಯದ ಉದ್ದೇಶವೆಂದು ಕಂಡುಕೊಂಡೆ. ನನ್ನ ಬಹುತೇಕ ಕತೆಗಳ ವಸ್ತು ಗಂಡು ಹೆಣ್ಣಿನ ಸಂಬಂಧವಾಗಿತ್ತು. ಇವು ಹುಡುಗನ ಭಗ್ನಪ್ರೇಮದಲ್ಲಿ ದುರಂತವಾಗಿ ಮುಗಿಯುತ್ತಿದ್ದವು. ಶೀರ್ಷಿಕೆಗಳಲ್ಲೇ ಭಗ್ನ ಒಡೆದ ಬಿರುಕು ಸೀಳು ಪತನ ಶಬ್ದಗಳಿರುತ್ತಿದ್ದವು. ಹುಡುಗಿಯರ ಮನೆಗೆ ನೋಟ್ಸ್ ಕೇಳಲು ಹೋಗಿ ಅವರ ಅಪ್ಪಂದಿರಿಂದ ಬೈಸಿಕೊಂಡ ದುಃಖವೂ ಇದರ ಹಿಂದಿನ ಪ್ರೇರಣೆ ಇದ್ದೀತು. ಕತೆಗಳನ್ನು ಪಾಟೀಲ ಪುಟ್ಟಪ್ಪನವರ ‘ಪ್ರಪಂಚ’, ಕಲ್ಲೆ ಶೀವೋತ್ತಮರಾಯರ ‘ಜನಪ್ರಗತಿ’ ಪ್ರಕಟಿಸುತ್ತಿದ್ದವು. ಈ ಮಹಾಶಯರು ಹಸ್ತಪ್ರತಿ ಓದುತ್ತಿದ್ದರೊ ಇಲ್ಲವೊ, ಅವರಿಗೆ ಬರೆಹಗಳ ಜರೂರಿಯಿತ್ತೊ ಅಥವಾ ಸಾಬರ ಹುಡುಗ ಕನ್ನಡದಲ್ಲಿ ಬರೆಯುತ್ತಿದ್ದಾನೆ, ‘ಇಂದಿನ ಕುಡಿಚಿಗುರು ನಾಳೆ ತೊಲೆಯಾದೀತು’ ಎಂಬ ಉದಾರತೆಯಲ್ಲಿ ಹಾಕುತ್ತಿದ್ದರೋ ತಿಳಿಯದು.

ಈ ನಡುವೆ ಅಪ್ಪ ಚೇಣಿ ಹಿಡಿದ ತೆಂಗಿನ ತೋಟದಲ್ಲಿ ಸೂಟಿಯ ದಿನಗಳನ್ನು ಕಳೆಯಬೇಕಾಯಿತು. ತೋಟಗಳ ಬದಿಗೆ ಗೇರಮರಡಿ ಹಳ್ಳಿ; ಅದರ ತುಂಬ ಹಾಡುವ ಕತೆ ಹೇಳುವ ಕಲಾವಿದರು; ಅವರಲ್ಲಿ ಕೆಲವರು ನಮ್ಮಲ್ಲಿ ಕೆಲಸಕ್ಕೆ ಬರುತ್ತಿದ್ದರು. ತೋಟದ ಕಾವಲಿನ ಹನುಮಂತಾ ಬೋವಿಯಂತೂ ಶ್ರೇಷ್ಠ ಕತೆಗಾರ. ಇವರಿಂದ ಕತೆಗಳನ್ನು ಸಂಗ್ರಹಿಸಿ ಎಕ್ಸೈಜ್‌   ಪುಸ್ತಕದಲ್ಲಿ ಬರೆದಿಡತೊಡಗಿದೆ. ಇವುಗಳಲ್ಲಿ ‘ಯಾರು ದೊಡ್ಡವರು?’ ಎಂಬ ರಮ್ಯಾದ್ಭುತ ಕತೆ ‘ಮಯೂರ’ದಲ್ಲಿ ಪ್ರಕಟವಾಯಿತು. ಅದು ಗುರುಗಳಾದ ಪ್ರೊ.ಜಯಚಂದ್ರರ ಜನರಿಗೆ ಬಿತ್ತು. ಅವರು ಸ್ಟಾಫ್‌ರೂಮಿಗೆ ಕರೆಸಿಕೊಂಡು ‘ಇಂಥ ಕತೆಗಳು ಇನ್ನೂ ಎಷ್ಟಿವೆ?’ ಎಂದರು. ಸಂಗ್ರಹಿಸಿದ್ದನ್ನೆಲ್ಲ ಮುಂದಿಟ್ಟೆ. ಅವರು ಕ್ರಮವಾಗಿ ಜೋಡಿಸಿ, ಅನುಬಂಧ ಬರೆದು, ಕರಡುತಿದ್ದಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಪ್ರಕಟವಾಗುವಂತೆ ನೋಡಿಕೊಂಡರು. ಪ್ರಿನ್ಸಿಪಾಲರು ಕಾಲೇಜು ಮ್ಯಾಗಜೈನಿನಲ್ಲಿ ನನ್ನ ಪಟವನ್ನು ಶ್ರದ್ಧಾಂಜಲಿ ಪಟಕ್ಕೆ ಅಲಂಕಾರ ಮಾಡುವಂತೆ ಮಾಡಿ ಪ್ರಕಟಿಸಿದರು. ವಾಸ್ತವವಾಗಿ ಪುಸ್ತಕದ ಯಶಸ್ಸು ನಿರೂಪಕರಿಗೆ ಸಲ್ಲಬೇಕಿತ್ತು. ಆದರೆ ಪುಸ್ತಕ ನನ್ನದೆಂಬ ಹಮ್ಮಿನಲ್ಲಿ ಹುಂಜನಂತೆ ತಲೆೆಯತ್ತಿ ಕಾಲೇಜಿನಲ್ಲಿ ತಿರುಗಾಡಲಾರಂಭಿಸಿದೆ.

ಅಪ್ರಕಟಿತ ಕವನ, ಅಳುಮುಂಜಿ ಕತೆ ಹಾಗೂ ಪ್ರತಿಭಾವಂತ ಹಳ್ಳಿಗರು ಹೇಳಿದ ಕತೆಗಳ ಸಂಪಾದನೆಯನ್ನು ಗರಿಗಳನ್ನಾಗಿ ಮುಡಿದುಕೊಂಡು ಮೈಸೂರಿಗೆ ಎಂಎ ಕಲಿಯಲು ಸವಾರಿ ಮುಟ್ಟಿತು. ಅಲ್ಲಿ ಬಲೂನಿಗೆ ಬೇಕಾದಷ್ಟು ಸೂಜಿಗಳು ಚುಚ್ಚಿದವು. ಸಹಪಾಠಿ ಶಿವಲಿಂಗಸ್ವಾಮಿ, ಒಂದು ದಿನ ಚಿಲುಕವಾಡಿಯಲ್ಲಿರುವ ತಮ್ಮ ಚಿಕ್ಕಪ್ಪನವರಾದ ಶ್ರೀ ಕುಮಾರ ನಿಜಗುಣಸ್ವಾಮಿಗಳ ಆಶ್ರಮಕ್ಕೆ ಕರೆದೊಯ್ದರು. ಸ್ವಾಮೀಜಿಯವರ ಹಸ್ತಕ್ಕೆ ಜನಪದ ಕತೆಗಳ ಪುಸ್ತಕವನ್ನಿಟ್ಟೆ. ಅವರು ಅದನ್ನೊಮ್ಮೆ ತಿರುವಿಹಾಕಿ ‘ಇಂತಹ ಕತೆಗಳನ್ನು ನಮ್ಮ ಹಳ್ಳಿಗಳಲ್ಲಿ ಹೇಳುವವರು ಸಾವಿರ ಜನ ಇದಾರೆ. ಪೆನ್ನು ಪೇಪರ್ರು ಇದ್ದ ಯಾರಾದರೂ ಬರೆದುಕೊಂಡು ಪ್ರಕಟಮಾಡಬಹುದು. ನಿಮ್ಮ ಸ್ವಂತದ ಸಾಧನೆ ಏನಿದೆ? ಸಂಸ್ಕೃತಭೂಯಿಷ್ಠ ಪಂಪನ ಪದ್ಯವನ್ನು ಸರಾಗ ಓದಬೇಕು. ಅದು ಪಾಂಡಿತ್ಯ’ ಎಂದರು. ‘ಹೌದಲ್ಲ, ನನ್ನದೇನಿದೆ?’ ಎಂದು ಪರಿತಪಿಸಿದೆ. ಜೆ.ಎಚ್.ಕಸಿನ್ಸ್ ಅವರು ‘ನಿನ್ನ ಭಾಷೆಯಲ್ಲಿ ಬರೆದಿರುವುದನ್ನು ಕೊಡು’ ಎಂದು ಕೈಚಾಚಿದಾಗ ತರುಣಕವಿ ಕುವೆಂಪು ಕೂಡ ಇಷ್ಟು ಪೇಚಾಡಿರಲಿಕ್ಕಿಲ್ಲ.

ಅದೇ ಹೊತ್ತಿಗೆ ಪ್ರಸಿದ್ಧ ವಿಮರ್ಶಕರಾಗಿದ್ದ ಗುರುಗಳ ದಿಸೆಯಿಂದ ಕನ್ನಡದ ಶ್ರೇಷ್ಠ ಕಾದಂಬರಿ ಕವನ ಕತೆಗಳನ್ನು ಓದುವ, ಚರ್ಚಿಸುವ ಅವಕಾಶ ದೊರಕಿತ್ತು. ಕವನ ಕತೆ ಬರೆಯುವುದು ನನ್ನ ಕೆಲಸವಲ್ಲವೆಂದೂ, ಶ್ರೇಷ್ಠ ಲೇಖಕರು ಬರೆದ ಸಾಹಿತ್ಯವನ್ನು ವಿಮರ್ಶಿಸುವುದು ನನ್ನ ಮುಂದಿನ ಹೊಣೆೆಯೆಂದೂ ನಿರ್ಧರಿಸಿದೆ. ನನ್ನೀ ತೀರ್ಪಿನಿಂದ ಕನ್ನಡದ ಓದುಗರು ದುರಂತ ಕತೆಗಳನ್ನು ಓದುವ ಕಷ್ಟದಿಂದ ತಪ್ಪಿಸಿಕೊಂಡರು. ಅವರ ಕಣ್ಣೀರು ವ್ಯರ್ಥವಾಗಿ ಸುರಿದುಹೋಗದೆ ಉಳಿಯಿತು. ಎಂಎ ಮುಗಿಸಿದ ಬಳಿಕ ನಾನು ಮೂರು ವಿಮರ್ಶೆಗಳನ್ನು ಪ್ರಕಟಿಸಿದೆ. ಮೊದಲನೆಉದು- ನಮ್ಮೂರ ಪಾಳೇಗಾರರ ಮೇಲೆ ಸ್ಥಳೀಯ ಲೇಖಕರು ಬರೆದಿದ್ದ ಕಾದಂಬರಿ ಕುರಿತದ್ದು; ಎರಡನೆುಂದು-ಅಧ್ಯಾಪಕನಾಗಿ ಸೇರಿದಾಗ ಪಠ್ಯವಾಗಿದ್ದ ಯಶವಂತ ಚಿತ್ತಾಲರ ‘ಶಿಕಾರಿ’ಯು ಮೇಲೆ. ಲೇಖನದ ಗುಣಾವಗುಣವನ್ನು ಗಂಭೀರವಾಗಿ ಲೆಕ್ಕಿಸದೆ ಪ್ರಕಟಿಸುತ್ತಿದ್ದ ‘ಪ್ರಬುದ್ಧ ಕರ್ಣಾಟಕ’ದಲ್ಲಿ ಬಂದಿತು. ಮೂರನೆಯದು-‘ಬಸವಣ್ಣನವರ ಅರಿಷಿಣವನೆ ವೆಂದು’ ಎಂದು ಆರಂಭವಾಗುವ ವಚನದ ವಿಶ್ಲೇಷಣೆ. ಜಿ.ಎಸ್.ಶಿವರುದ್ರಪ್ಪನವರು ಸಂಪಾದಿಸುತ್ತಿದ್ದ ‘ಸಾಧನೆ’ಯಲ್ಲಿ ಬೆಳಕುಕಂಡಿತು. ನನ್ನ ಹಾದಿ ಮತ್ತು ದಿಕ್ಕು ಖಚಿತಗೊಂಡಿತು.

ಆದರೂ ಹಿಂತಿರುಗಿ ನೋಡುವಾಗ ಸಣ್ಣಕತೆಗಳನ್ನೇ ಬರೆದುಕೊಂಡಿದ್ದರೆ, ಕೈಕುದುರಿ ತಕ್ಕಮಟ್ಟಿನ ಯಶಸ್ಸು ಸಾಧಿಸುತ್ತಿದ್ದೇನೇನೊ, ಅವನ್ನು ನಡುದಾರಿಯಲ್ಲಿ ಕೈಬಿಡಬಾರದಿತ್ತು ಎಂದು ಹಳಹಳಿಸುತ್ತದೆ. ಮುಂದೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕಕ್ಕೆ ಕತೆ ಬರೆವ ಅವಸರ ಒದಗಿತು. ಬರೆದೆ ಎನ್ನುವುದಕ್ಕಿಂತ ಬರೆಸಿದರು ಎನ್ನುವುದೇ ದಿಟ. ವಿಮರ್ಶಕರು ಕತೆ ಹೇಗೆ ಬರೆಯುತ್ತಾರೆ ಎಂದು ಪತ್ರಿಕೆ ಮಾಡಿದ ಪ್ರಯೋಗವಂತೆ. ಪಿತೂರಿ ತಿಳಿಯದೆ ಬಲಿಪಶುವಿನಂತೆ ಹೋಗಿ ವಧಾಸ್ಥಂಭಕ್ಕೆ ಕೊರಳೊಡ್ಡಿದೆ. ಅದನ್ನೋದಿದ ಹಿತೈಷಿಗಳು ‘ವಿಮರ್ಶೆ ಸಂಶೋಧನೆ ಮಾಡಿ ಕೊಂಚ ಹೆಸರು ಸಂಪಾದಿಸಿದ್ದೀರಿ. ಇಂತಹ ಕತೆಗಳು  ಮರ್ಯಾದೆ ಕಳೆಯಬಹುದು, ಹುಷಾರು’ ಎಂದೆಚ್ಚರಿಸಿದರು. ಅಲ್ಲಿಗೆ ಕತೆಗಳಿಗೆ ವಿದಾಯ ಹೇಳಿದೆ. ಕತೆ ಬರೆಯಲಾರದ ವ್ಯಥೆಯನ್ನು ಲಲಿತಪ್ರಬಂಧಗಳಲ್ಲಿ ತೀರಿಸಿಕೊಳ್ಳಬೇಕೆಂದು ನಿಶ್ಚಯಿಸಿದೆ. ಏನೇ ಬರೆಯಲಿ, ಉದಯೋನ್ಮುಖ ಅವಸ್ಥೆಯ ಅವಸರ ಅಳುಕು ಅಭದ್ರತೆಗಳಿಂದ ಮುಕ್ತಿ ಸಿಕ್ಕಿಲ್ಲ. ಸಿಕ್ಕುವ ಲಕ್ಷಣವೂ ಇಲ್ಲ.

ಶ್ರೀ ಕುಮಾರ ನಿಜಗುಣಸ್ವಾಮೀಜಿಯವರ ಹಸ್ತಕ್ಕೆ ಜನಪದ ಕತೆಗಳ ಪುಸ್ತಕವನ್ನಿಟ್ಟೆ. ಅವರು ಅದನ್ನೊಮ್ಮೆ ತಿರುವಿಹಾಕಿ ‘ಇಂತಹ ಕತೆಗಳನ್ನು ನಮ್ಮ ಹಳ್ಳಿಗಳಲ್ಲಿ ಹೇಳುವವರು ಸಾವಿರ ಜನ ಇದಾರೆ. ಪೆನ್ನು ಪೇಪರ್ ಇದ್ದ ಯಾರಾದರೂ ಬರೆದುಕೊಂಡು ಪ್ರಕಟಮಾಡಬಹುದು. ನಿಮ್ಮ ಸ್ವಂತದ ಸಾಧನೆ ಏನಿದೆ? ಸಂಸ್ಕೃತಭೂಯಿಷ್ಠ ಪಂಪನ ಪದ್ಯವನ್ನು ಸರಾಗ ಓದಬೇಕು. ಅದು ಪಾಂಡಿತ್ಯ’ ಎಂದರು. ‘ಹೌದಲ್ಲ, ನನ್ನದೇನಿದೆ?’ ಎಂದು ಪರಿತಪಿಸಿದೆ.

 

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ