ಕರೆಂಟಿನ ಮುಖನೋಡದ ಸದರಿ ಬೀದಿಯು, ರಾತ್ರಿಯಾದರೆ ಕಗ್ಗತ್ತಲಲ್ಲಿ ಮುಳುಗುತ್ತಿತ್ತು. ನಾವು ದೆವ್ವದ ಭಯದಿಂದ ಹೊರಗೆ ಹೊರಡುತ್ತಿರಲಿಲ್ಲ. ಈ ಕತ್ತಲ ರಾಜ್ಯದಲ್ಲಿ ಹಳ್ಳದ ದಂಡೆಯಲ್ಲಿ ಅನೇಕ ಗೂಢ ಚಟುವಟಿಕೆ ನಡೆಯುತ್ತಿದ್ದವು. ಮಾಟಮಾಡಿ ಸೂಜಿಚುಚ್ಚಿದ ಕುಂಕುಮಭರಿತ ಮಣ್ಣಿನ ಗೊಂಬೆಯನ್ನು ಹೂಳಲು ಜನ ಬರುತ್ತಿದ್ದರು. ಒಮ್ಮೆ ಎಲ್ಲಿಂದಲೋ ಬಂದಿದ್ದ ಅನಾಥ ಹೆಂಗಸು, ಕತ್ತಲ ಮೈದಾನದಲ್ಲಿ ನೋವಿನಿಂದ ಭೀಕರವಾಗಿ ಅಳುತ್ತ, ಆಗ ತಾನೇ ಹುಟ್ಟಿದ ಎಳೆಗೂಸಿನ ಮೇಲೆ ಮಣ್ಣು ಸುರಿಯುತ್ತಿದ್ದ ದೃಶ್ಯವನ್ನು ಬೀದಿಯವರೆಲ್ಲ ನೋಡಿಬಂದರು.
ಕೋಡಿದಿಕ್ಕಿನಲ್ಲಿದ್ದ ಕೊನೆಯ ಮನೆಯ ಬಾಗಿಲನ್ನು ಆಗಾಗ್ಗೆ ಕಳ್ಳರು ಮುರಿಯುತ್ತಿದ್ದರಿಂದ, ಸಂಸಾರಸ್ಥರು ಅದರಲ್ಲಿ ಇರುತ್ತಿರಲಿಲ್ಲ. ಅದನ್ನು ಒಬ್ಬ ನೇಪಾಳಿ ಗೂರ್ಕನಿಗೆ ಕೊಡಲಾಗಿತ್ತು. ದಿನವಿಡೀ ಮಲಗಿರುತ್ತಿದ್ದ ಆತ ಮಧ್ಯಾಹ್ನಕ್ಕೆದ್ದು ಅಡುಗೆ ಮಾಡಿ ಉಂಡು, ಸೂರ್ಯಾಸ್ತದ ಹೊತ್ತಿಗೆ ಖಾಕಿಯ ಪೋಷಾಕು ಧರಿಸಿ, ಕೆಂಪನೆಯ ಹೊಳೆವ ಬೆಲ್ಟಿಗೆ ಚರ್ಮದ ಚೀಲಕ್ಕೆ ನೇಪಾಳಿ ಖಡ್ಗಧಾರಣೆ ಮಾಡಿ, ಊರಿನ ಚಿನ್ನದಂಗಡಿಗಳ ಕಾವಲಿಗೆ ಹೋಗುತ್ತಿದ್ದನು. ನಂತರದ ಮನೆ ಸೇಂದಿ ಕಂತ್ರಾಟುದಾರ ರಾಮಣ್ಣನವರದು. ಮನೆಯಲ್ಲಿ ೨೦ ಜನ ಸದಸ್ಯರಿದ್ದು ಹನ್ನೆರಡು ರೂಪಾಯಿ ಬಾಡಿಗೆಯ ಪ್ರತಿ ಪೈಸೆಯನ್ನೂ ಗಿಟ್ಟುವಂತೆ ಮಾಡಿದ್ದರು. ಬೇಸಿಗೆಯಲ್ಲಿ ಸೆಖೆಗೆ ರಾತ್ರಿಯೂ ಬಾಗಿಲು ತೆರೆದಿಡುತ್ತಿದ್ದರು. ಕಳ್ಳರು ಬಂದರೆ ಮಲಗಿದವರ ಮೇಲೆ ಕಾಲಿಡುವಂತೆ ಮನೆಯ ತುಂಬ ಜನ. ರಾಮಣ್ಣನವರ ಮಗ ವಿಜಯ ನನ್ನ ಸಹಪಾಠಿ. ಆತನ ಸಂಗಕ್ಕೆ ಬಿದ್ದವರೆಲ್ಲ ಶಾಲೆ ಬಿಟ್ಟು ಪೋಲಿಗಳಾಗುತ್ತಾರೆ ಎಂಬ ಕೀರ್ತಿ ಗಳಿಸಿದವನು. ಅವನು ನನಗೆ ಕೊಡುತ್ತಿದ್ದ ತರಬೇತಿಯನ್ನು ಪೂರೈಸಲು ಅಪ್ಪ ಬಿಡಲಿಲ್ಲ. ನಂತರ ಮನೆ ಗಾರೆ ರುದ್ರ್ರಣ್ಣನದು. ಗಾರೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರನ್ನು ಪ್ರೇಮಿಸಿ ಮದುವೆಯಾಗುವ ಕುಶಲತೆಯಿದ್ದ ಆತ ಹಲವು ಹೆಂಡಿರ ಮುದ್ದಿನ ಗಂಡ. ಆ ಹೆಂಡಿರಾದರೊ ನಾನಾ ಸಮುದಾಯಗಳಿಂದ ಬಂದವರಾಗಿದ್ದು, ಅವನನ್ನು ಖರೇಖರೇ ಜಾತ್ಯತೀತನಾಗಿ ಮಾಡಿದ್ದರು. ಅವರ ಸವತಿ ಜಗಳದಲ್ಲಿ ರುದ್ರಣ್ಣ ಕೊನೆಗಾಲದಲ್ಲಿ ಸುಸ್ತಾದನು. ಜತೆಗೆ ಒಂದು ದೆವ್ವವೂ ಮೆಟ್ಟಿಕೊಂಡಿತು. ಅದು ಆವಾಹನೆಯಾದಾಗಲೆಲ್ಲ ಮಾಂಸದಡುಗೆಯ ಬೇಡಿಕೆ ಇಡುತ್ತಿತ್ತು. ದೊಡ್ಡ ಹರಿವಾಣದಲ್ಲಿ ಮಾಂಸದ ಸಾರನ್ನೂ ಸಣ್ಣಕ್ಕಿ ಅನ್ನವನ್ನೂ ತಿಂದ ಬಳಿಕ ಬಿಟ್ಟುಹೋಗುತ್ತಿತ್ತು. ಅವನಿಗೆ ಯಾರೊ ಮಾಟಮಾಡಿಸಿದ್ದಾರೆ ಎನ್ನುತ್ತಿದ್ದರು. ಬಿರುಮಳೆಗೆ ಸಿಕ್ಕ ಮಣ್ಣಿನಗೋಡೆಯಂತೆ ಆತ ಕರಗಿ ತೀರಿಕೊಂಡನು.
ನಂತರದ್ದು ಬಡಿಗೇರ ಕಲ್ಲಪ್ಪಾಚಾರ್ಯರ ಮನೆ. ಸಾಲಗಾರರು ಮನೆಗೆ ಬಂದರೆ ‘ನಾನು ಇಲ್ಲಾಂತ ಹೇಳು’ ಎಂದು ಆಚಾರ್ಯರು ಉಳಿಕೊಡತಿ ಇಡುವ ಕಟ್ಟಿಗೆಯ ಸಂದೂಕದಲ್ಲಿ ಅಡಗುತ್ತಿದ್ದರು. ಸಂದೂಕದ ಮೇಲೆ ದಿಂಬು ಹಾಸಿಗೆ ಇಡಲಾಗುತ್ತಿತ್ತು. ಈ ಗೂಢವನ್ನು ಪತ್ತೆಮಾಡಿದ ಸಾಲಗಾರನೊಬ್ಬ ಒಮ್ಮೆ ಬಲವಾದ ಇಬ್ಬರು ಆಳುಗಳನ್ನು ಜತೆಯಲ್ಲೇ ತಂದು, ಆಚಾರ್ಯರ ಪತ್ನಿ ಎಷ್ಟೇ ತಡೆದರೂ ಪೆಟ್ಟಿಗೆಯನ್ನು ಎತ್ತಿ ಅಂಗಳಕ್ಕೆ ಇಡಿಸಿದ್ದನು. ವಿಧಿಯಿಲ್ಲದೆ ಆಚಾರ್ಯರು ಸಮುದ್ರ ಮಥನದೊಳಗಿಂದ ಉದ್ಭವಿಸಿದ ಅಮೃತಕಲಶದಂತೆ ಎದ್ದು ಬರಬೇಕಾಯಿತು.
ಇನ್ನೊಂದು ಮನೆ ಬೆಸ್ತರ ಸುಬ್ರಮಣಿಯದು. ಬ್ರಹ್ಮಚಾರಿಯಾಗಿದ್ದ ಮಣಿಗೆ, ತಮಿಳುನಾಡಿಗೆ ಹೋಗಿ ಮದುವೆಯಾಗಿ ಬಂದ ಬಳಿಕ ಕಷ್ಟಸುಖ ಶುರುವಾದವು ಎಂದು ಬೀದಿಯವರು ಆಡಿಕೊಳ್ಳುತ್ತಿದ್ದರು. ಅವನ ಹೆಂಡತಿ ಮೀನಾಕ್ಷಿಯ ಮೇಲೆ ಪ್ರತಿ ಮಂಗಳವಾರ ಸಂಜೆ ದೇವಿ ಬರುತ್ತಿದ್ದಳು. ತಲೆಗೂದಲು ಬಿಚ್ಚಿಕೊಂಡು ಕಣ್ಣು ಕೆಕ್ಕರಿಸಿಕೊಂಡು ಹ್ಞುಹ್ಞುಹ್ಞು ಮಾಡುತ್ತ ‘ಅಡಾ ಮಣಿ, ವಾಡ ಇಂಗೆ’ ಎಂದು ಗಂಡನಿಗೆ ಕರೆಯುತ್ತಿದ್ದಳು. ಆಗ ಇಡೀ ಬೀದಿಯೇ ಅವರ ಮನೆಯೊಳಗೆ ನೆರೆಯುತ್ತಿತ್ತು. ಆಕೆ ಅನೇಕ ಕಾರ್ಣಿಕಗಳನ್ನು ತಮಿಳಿನಲ್ಲಿ ಹೇಳುವಾಗ, ಮಣಿ ಕೈಮುಗಿದು ನಿಂತು ಆಮ, ಆಯ್ಚಿ, ಎಂದು ವಿಧೇಯನಾಗಿ ಕೇಳಿಸಿಕೊಳ್ಳುತ್ತಿದ್ದನು. ಮೀನಾಕ್ಷಿ ಕೊನೆಗೆ ಉರಿವ ಕರ್ಪೂರವನ್ನು ನುಂಗಿ, ಪೂರ್ವಾವಸ್ಥೆಗೆ ಮರಳುತ್ತಿದ್ದಳು. ನಂತರದ ಮನೆ ಕುಲುಮೆ ಸತ್ಯಣ್ಣನವರು. ದೊಡ್ಡ ಸಂಸಾರ. ಎಲ್ಲರೂ ಕಾಡಿಗೆ ಹೋಗಿ ಮುತ್ತುಗದ ಎಲೆಯನ್ನು ಕೊಯ್ದುತಂದು ಒಣಗಿಸಿ ಹಾರ ಮಾಡುತ್ತಿದ್ದರು. ಬೇಸಿಗೆಯಲ್ಲಿ ಅವನ್ನು ಹಂಚಿಕಡ್ಡಿಯಿಂದ ಹೆಣೆದು ಪತ್ರೋಳಿ ತಯಾರಿಸಿ, ಅಂಗಡಿಗಳಿಗೆ ಸರಬರಾಜು ವಡುತ್ತಿದ್ದರು. ವೃತ್ತಪತ್ರಿಕೆಯನ್ನು ತಂದು ಅಂಗಡಿಗಳಿಗೆ ಕವರುಗಳನ್ನು ತಯಾರಿಸುತ್ತಿದ್ದರು.
ಬೀದಿಯ ಕೊನೆಯಲ್ಲಿ ನೆಲಬಾಡಿಗೆ ಕೊಟ್ಟು ಬಿದಿರಚಾಪೆಗಳ ಗೋಡೆಮಾಡಿನ ಮನೆಕಟ್ಟಿಕೊಂಡು ತೆಲುಗು ಮಾತಾಡುವ ಮೇದಾರರಿದ್ದರು. ಗಂಡಸರು ಹಸಿರುಗಳುಗಳನ್ನು ಭೀಮ ಜರಾಸಂಧನ ತೊಡೆ ಸೀಳಿದಂತೆ ಸೀಳಿ ದಬ್ಬೆ ಮಾಡುತ್ತಿದ್ದರು. ಮಹಿಳೆಯರು ದಬ್ಬೆಗಳನ್ನು ಹರಿತವಾದ ಕತ್ತಿಯಿಂದ ಟೇಪಿನಾಕಾರದಲ್ಲಿ ಪದರ ಎಬ್ಬಿಸುತ್ತಿದ್ದರು. ಚಿಕ್ಕ ಹುಡುಗ-ಹುಡುಗಿಯರು ಅವನ್ನು ಇಟ್ಟುಕೊಂಡು ಬುಟ್ಟಿ ಹೆಣೆಯುತ್ತಿದ್ದರು. ತರೀಕೆರೆ ಸೀಮೆಯ ಮಾವು ಈ ಬುಟ್ಟಿಗಳಲ್ಲಿ ಪುಣೆ, ಸಾಂಗಲಿಗಳಿಗೆ ರಫ್ತಾಗುತ್ತಿತ್ತು. ಮೃತರ ಮನೆಯವರು ಚಟ್ಟಕ್ಕೆ ಬೇಕಾದ ಬೊಂಬು ಅಡ್ಡಪಟ್ಟಿಗಳಿಗಾಗಿ ಬರುತ್ತಿದ್ದರು. ಆ ಮನೆಗಳಲ್ಲಿದ್ದ ಒಬ್ಬಾಕೆ ಅಮ್ಮನ ಮುಂದೆ ‘ಬೂಮಾ, ನಾನು ಆದರೆ ಮಿಲಿಟರಿಯಲ್ಲಿ ಇರೋನ್ನೇ ಮದುವೆ ಆಗೋದು’ ಎಂದು ಹೇಳುತ್ತಿದ್ದಳು. ಅದಕ್ಕೆ ಅಮ್ಮ ‘ಸುಖ ಪಟ್ಟೋಳು ಸುಬೇದಾರನಿಗೆ ಬೇಡಿದಳಂತೆ’ ಎಂದು ತಮಾಷೆ ಮಾಡುತ್ತಿದ್ದಳು.
ಹೀಗೆ ಬೆಳಗಿನಿಂದ ಸಂಜೆ ತನಕ ಇಡೀ ಬೀದಿ ಮಂಡಕ್ಕಿಹುರಿತ, ಬುಟ್ಟಿಹೆಣಿಗೆ, ಮೀನುಗಾರಿಕೆ, ಮರಗೆಲಸ, ಕಮ್ಮಾರಿಕೆ, ಪತ್ರೋಳಿ ಕಾರ್ಖಾನೆಯಾಗಿತ್ತು. ಬೀದಿಯಲ್ಲಿ ಯಾರೊಬ್ಬರ ಮನೆಯಲ್ಲಿ ಹಬ್ಬ, ಮದುವೆ ಕಾರ್ಯವಿದ್ದರೆ ಎಲ್ಲರೂ ಕೆಲಸವನ್ನು ಕೈದುಮಾಡಿ ಸೇರುತ್ತಿದ್ದರು. ಶವವಾದರೆ ಸುತ್ತ ಕೂತು ಅಳುತ್ತಿದ್ದರು. ಸೂತಕದ ಮನೆಯವರು ಅಡುಗೆ ಮಾಡದಂತೆ ಊಟ ಚಾ-ಕಾಫಿ ಪೂರೈಸುತ್ತಿದ್ದರು. ಇದೇ ಬೀದಿಯಲ್ಲಿ ನನ್ನ ಅಕ್ಕನ ಮದುವೆಯಾಯಿತು. ಅಮ್ಮನನ್ನು ಕಳೆದುಕೊಂಡೆವು. ನಾನು ಪದವಿ ಮುಗಿಸಿದೆ. ಎಲ್ಲರೂ ತೆಲುಗು-ತಮಿಳು ಕಲಿತೆವು. ಮರಾಠಿ-ಕೊಂಕಣಿ ಭಾಷೆ ಕೇಳಿಸಿಕೊಂಡೆವು. ‘ಬೀದಿಮಕ್ಕಳು ಬೆಳೆದೊ ಕ್ವಾಣೆ ಮಕ್ಕಳು ಕೊಳೆತೊ’ ಗಾದೆಗೆ ತಕ್ಕನಾಗಿ ಬದುಕಿದೆವು. ಕೊನೆಗೊಂದು ದಿನ ಹೊಸಮನೆ ಕಟ್ಟಿಸಿಕೊಂಡು ಸಮೀಪದಲ್ಲೇ ಇದ್ದ ಇನ್ನೊಂದು ಬೀದಿಗೆ ನಮ್ಮ ಕುಟುಂಬ ಹೊರಟಿತು. ಆಗ ಇಡೀ ಬೀದಿಯವರು ನಾವು ಕಾಣದ ದೇಶಕ್ಕೆ ಹೋಗುತ್ತಿದ್ದೇವೆ ಎಂಬಂತೆ ಕಂಬನಿದುಂಬಿ ಬೀಳ್ಕೊಟ್ಟರು.
(ಮುಗಿಯಿತು)