ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ತೆರಕಣಾಂಬಿ ಗ್ರಾಮದ ಎಪಿಎಂಸಿ ಆವರಣದಲ್ಲಿ ಪ್ರತಿ ಗುರುವಾರ ನಡೆಯುವ ಸಂತೆಯ ವೇಳೆ ಬಿತ್ತನೆ ಸಣ್ಣ ಈರುಳ್ಳಿ ಮಾರಾಟವು ರೈತರು, ದಳ್ಳಾಳಿಗಳು, ಮಾರಾಟಗಾರರ ನಡುವೆ ಜಟಾಪಟಿಗೆ ಕಾರಣವಾಗುತ್ತಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಪಂಪ್ಸೆಟ್ ಕೃಷಿಕರು ಚಳಿಗಾಲ-ಬೇಸಿಗೆ ಹಂಗಾಮಿನಲ್ಲಿ ಮತ್ತು ಮುಂಗಾರು ಮಳೆಗಾಲದಲ್ಲಿ ಹೆಚ್ಚಾಗಿ ಸಣ್ಣ ಈರುಳ್ಳಿ ಬೆಳೆಯುತ್ತಾರೆ. ನೆರೆಯ ತಮಿಳುನಾಡಿನ ವ್ಯಾಪಾರಿಗಳು ಬಿತ್ತನೆ ಈರುಳ್ಳಿಯನ್ನು ತಂದು ಪ್ರತಿ ವರ್ಷ ಇದೇ ಅವಧಿಯಲ್ಲಿ ಮಾರಾಟ ಮಾಡುತ್ತಾರೆ.
ಕನ್ನಡ ಭಾಷೆ ಮಾತನಾಡಲು ಗೊತ್ತಿರದ ತಮಿಳುನಾಡಿನ ವ್ಯಾಪಾರಿ ಗಳು ತಮಿಳು ಮಾತನಾಡುವ ಸ್ಥಳೀಯ ವ್ಯಾಪಾರಿ ಮತ್ತು ದಲ್ಲಾಳಿಗಳ ಮೊರೆ ಹೋಗುತ್ತಾರೆ. ಕ್ವಿಂಟಾಲ್ ಬಿತ್ತನೆ ಈರುಳ್ಳಿಗೆ ಇಂತಿಷ್ಟು ಎಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡಿಕೊಡುವಂತೆ ಸ್ಥಳೀಯ ವ್ಯಾಪಾರಿಗಳು ಮತ್ತು ದಲ್ಲಾಳಿಗಳಿಗೆ ವಹಿಸುತ್ತಾರೆ. ತಮಿಳುನಾಡಿನ ವ್ಯಾಪಾರಿಗಳು ಕ್ವಿಂಟಾಲ್‌ಗೆ ಇಂತಿಷ್ಟು ಕಮಿಷನ್ ನೀಡುವುದಾಗಿ ಒಪ್ಪಿಕೊಂಡು ಸ್ಥಳೀಯ ವ್ಯಾಪಾರಿಗಳು, ದಲ್ಲಾಳಿಗಳಿಗೆ ಈರುಳ್ಳಿಯನ್ನು ಮಾರಾಟಕ್ಕೆ ನೀಡುತ್ತಾರೆ. ಕಳೆದ ಗುರುವಾರ ಕ್ವಿಂಟಾಲ್ ಬಿತ್ತನೆ ಈರುಳ್ಳಿ ಬೆಲೆ ೫೫೦೦ ರೂ. ನಿಗದಿ ಮಾಡಿ ಮಾರಾಟ ಮಾಡಲಾಯಿತು. ಆದರೆ, ರೈತರು ಬೆಲೆ ದುಬಾರಿಯಾಯಿತು ಎಂದು ಗಲಾಟೆ ನಡೆಸಿ ಮಾರಾಟಕ್ಕೆ ತಡೆಯೊಡ್ಡಿದ್ದರು. ಆದರೆ, ಸ್ಥಳೀಯ ವ್ಯಾಪಾರಿಗಳು ಮತ್ತು ದಲ್ಲಾಳಿಗಳು ಮಾತ್ರ ಮಾರಾಟ ಮಾಡುವುದೇ ಇದೇ ಬೆಲೆಗೆ, ಬೇಕಿದ್ದರೆ ಖರೀದಿಸಿ ಇಲ್ಲವೆ ನಿಮ್ಮಿಷ್ಟ ಎಂದು ಹಠ ಹಿಡಿದಿದ್ದರು.
ರೈತ ಮುಖಂಡರು ಮಧ್ಯ ಪ್ರವೇಶಿಸಿ ನಾವು ಬೆಳೆದ ಈರುಳ್ಳಿಯನ್ನು ಒಮ್ಮೊಮ್ಮೆ ಕ್ವಿಂಟಾಲ್‌ಗೆ ೫೦೦ ರೂ. ನೀಡಿ ಖರೀದಿಸುವುದಿಲ್ಲ. ನಾವೇಕೆ ೫ ಸಾವಿರ ರೂ.ನೀಡಬೇಕು ಎಂದು ಮಾತಿನ ಚಕಮಕಿ ನಡೆಸಿದ್ದರು. ಸ್ಥಳೀಯ ದಲ್ಲಾಳಿಗಳು, ವ್ಯಾಪಾರಿಗಳು ಮತ್ತು ರೈತರ ನಡುವೆ ಜಟಾಪಟಿ ನಡೆ ಯಿತು. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು.
ಪ್ರತಿ ವರ್ಷದ ನವೆಂಬರ್, ಏಪ್ರಿಲ್ ತಿಂಗಳಲ್ಲಿ ಬಿತ್ತನೆ ಈರುಳ್ಳಿ ಮಾರಾಟ ನಡೆಯುತ್ತದೆ. ದುಬಾರಿ ಬೆಲೆ ಇದ್ದಾಗಲೆಲ್ಲಾ ರೈತರು ಮತ್ತು ವ್ಯಾಪಾರಿಗಳ ನಡುವೆ ಜಟಾಪಟಿ ನಡೆಯುತ್ತದೆ. ಕಳೆದ ೫-೬ ವರ್ಷಗಳಿಂದಲೂ ಇಂತಹ ಅವ್ಯವಸ್ಥೆಯಿದೆ. ಹಲವು ಬಾರಿ ಜಟಾಪಟಿಯು ತೆರಕಣಾಂಬಿಯ ಪೊಲೀಸ್ ಠಾಣೆಯ ಮೆಟ್ಟಿಲೇರಿ ತೀರ್ಮಾನವಾಗಿರುವ ನಿದರ್ಶನಗಳಿವೆ. ಬೆಲೆ ದುಬಾರಿಯಾದಾಗ ಸಂತೆ ಬಳಿ ಮಾರಾಟ ಮಾಡಕೂಡದು ಎಂದು ರೈತರು ಪ್ರತಿಭಟನೆ ಮಾಡಿ ಬಿತ್ತನೆ ಈರುಳ್ಳಿ ತುಂಬಿದ ಲಾರಿಗಳನ್ನು ವಾಪಸ್ ಕಳುಹಿಸಿದ ಘಟನೆಗಳು ನಡೆದಿವೆ.
ಇಂತಹ ಅಧ್ವಾನ ವರ್ಷದಲ್ಲಿ ೨ ಬಾರಿ ತೆರಕಣಾಂಬಿ ಸಂತೆಯ ಬಳಿ ನಡೆಯುತ್ತಿದ್ದರೂ ಎಪಿಎಂಸಿ ಅಧಿಕಾರಿಗಳಾಗಲಿ, ಸ್ಥಳೀಯ ಶಾಸಕರಾಗಲಿ ಯಾವುದೇ ಪರಿಹಾರ ಕ್ರಮ ಕೈಗೊಳ್ಳುತ್ತಿಲ್ಲ. ವಿಷಯ ಗೊತ್ತಿದ್ದರೂ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ.
ಸ್ಥಳೀಯ ಶಾಸಕರು, ಎಪಿಎಂಸಿ ಅಧಿಕಾರಿಗಳು, ರೈತ ಮುಖಂಡರು, ದಲ್ಲಾಳಿಗಳು, ಸ್ಥಳೀಯ ವ್ಯಾಪಾರಿಗಳ ಸಭೆ ನಡೆಸಿ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬಹುದು. ಇಲ್ಲವೇ ಸ್ಥಳೀಯ ವ್ಯಾಪಾರಿಗಳು ತಮಿಳುನಾಡಿನ ವ್ಯಾಪಾರಿಗಳಿಂದ ಖರೀದಿಸಿ ನ್ಯಾಯಯುತ ಬೆಲೆ ನಿಗದಿ ಮಾಡಿ ನೇರವಾಗಿ ರೈತರಿಗೆ ಮಾರಾಟ ಮಾಡಬಹುದು. ಇಂತಹ ಪ್ರಯತ್ನಗಳು ನಡೆಯುತ್ತಿಲ್ಲ.
ಪ್ರತಿವಾರ ಸಂತೆ ಬಳಿ ಲಾರಿಗಳನ್ನು ನಿಲ್ಲಿಸಿಕೊಂಡು ಮಾರಾಟ ಮಾಡುವುದೇಕೆ? ಇದರ ಬದಲಾಗಿ ಸ್ಥಳೀಯ ವ್ಯಾಪಾರಿಗಳು ಪ್ರತಿದಿನ ಮಾರಾಟ ಮಾಡುವ ವ್ಯವಸ್ಥೆ ಮಾಡಬಾರದೇಕೆ ಎಂಬುದು ರೈತರ ಪ್ರಶ್ನೆ. ಮೂರು ತಿಂಗಳ ಅವಧಿಯ ಈರುಳ್ಳಿಯ ಬಿತ್ತನೆ ಜಿಲ್ಲಾದ್ಯಂತ ಆರಂಭವಾಗಿದೆ. ಈರುಳ್ಳಿಗೆ, ಬಿತ್ತನೆಗೆ, ಔಷಧಕ್ಕೆ, ಗೊಬ್ಬರಕ್ಕೆ, ಕೊಯ್ಲು ಮಾಡಲು ಸಾಕಷ್ಟು ಖರ್ಚು ಮಾಡಬೇಕು. ಫೆಬ್ರವರಿಯಲ್ಲಿ ಕೊಯ್ಲು ಶುರುವಾದಾಗ ಕ್ವಿಂಟಾಲ್ ಬೆಲೆ ೫-೬ ಸಾವಿರ ರೂ. ಇರುತ್ತದೆ. ಬಳಿಕ ಈರುಳ್ಳಿ ಇಳುವರಿ ಹೆಚ್ಚಾಗಿ ಮಾರುಕಟ್ಟೆಗೆ ಬರುತ್ತಿದ್ದಂತೆ ೫೦೦ ರೂ.ಗೆ ಖರೀದಿಸುವವರು ಇರುವುದಿಲ್ಲ. ವ್ಯಾಪಾರಿಗಳನ್ನು ಗೊಗರೆದು ಅವರು ಕೇಳಿದಷ್ಟು ಬೆಲೆಗೆ ಮಾರಾಟ ಮಾಡುವ ಹೊತ್ತಿಗೆ ರೈತರು ಸುಸ್ತಾಗಿರುತ್ತಾರೆ. ಇಂತಹ ಮಾರುಕಟ್ಟೆ ವ್ಯವಸ್ಥೆಯಿಂದ ರೈತರು ಸಾಲಗಾರರಾಗುವುದರಲ್ಲಿ ಅನುಮಾನವಿಲ್ಲ. ಆದ್ದರಿಂದಲೇ ರೈತರು ಬಿತ್ತನೆ ಈರುಳ್ಳಿಯ ಬೆಲೆ ದುಬಾರಿ ಆಯಿತು ಎಂದು ವ್ಯಾಪಾರಿಗಳ ಜೊತೆ ಜಟಾಪಟಿಗೆ ಇಳಿಯುತ್ತಾರೆ. ಈರುಳ್ಳಿ ಬೆಳೆಯಲೇಬೇಕು ಎಂದು ನಿರ್ಧಾರ ಮಾಡಿದ ರೈತರು ಎಷ್ಟಾದರೂ ಬೆಲೆ ನೀಡಿ ಖರೀದಿಸುತ್ತಾರೆ.
ಈ ಈರುಳ್ಳಿ ಖರೀದಿಗೆ ಜಿಲ್ಲೆಯ ಎಲ್ಲ ಕಡೆಯಿಂದ ರೈತರು ಬರುತ್ತಾರೆ. ಇದರ ಬದಲು ತಮಿಳುನಾಡಿನ ವ್ಯಾಪಾರಿಗಳಿಂದ ಸ್ಥಳೀಯ ವ್ಯಾಪಾರಿ ಗಳು ಖರೀದಿಸಿ ಎಲ್ಲ ಕಡೆ ಮಾರಾಟ ಮಾಡುವಂತಹ ವ್ಯವಸ್ಥೆ ಮಾಡಬೇಕಿದೆ. ಸಂತೆ ಬಳಿಯ ರಸ್ತೆಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಬೇಕಿದೆ. ಇಲ್ಲದಿದ್ದರೆ ಇಂತಹ ಅವ್ಯವಸ್ಥೆ ಮುಂದುವರಿಯುತ್ತಲೇ ಇರುತ್ತದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಲೇ ಬೇಕು. ಇಲ್ಲದಿದ್ದರೆ ನಮ್ಮ ಜನಪ್ರತಿನಿಧಿಗಳಿಗಾಗಲಿ, ಅಧಿಕಾರಿಗಳಿಗಾಗಲೀ ರೈತರಪರ ಕಾಳಜಿ ಇಲ್ಲ ಎಂಬುದು ಬಿಂಬಿತವಾಗುತ್ತದೆ.