Light
Dark

ಮನೆ ಮಾರಿ ಪತ್ರಿಕೆ ಕಟ್ಟಿದವರು

ಡಾ. ಮಹಾಂತೇಶ ಬಿರಾದಾರ

ಪ್ರಜಾವಾಣಿ ಮಿತ್ರ ಷಣ್ಮುಖಪ್ಪ ‘ಆಂದೋಲನ’ ಪತ್ರಿಕೆಯ ೫೦ ನೇ ವಾರ್ಷಿಕೋತ್ಸವ ಆಮಂತ್ರಣ ಕಳುಹಿಸಿದ್ದರು. ಕಳೆದ ತಿಂಗಳು ವಿಜಯಪುರಕ್ಕೆ ಬಂದಿದ್ದ ಸೂತ್ತೂರು ಮಠದ ಡಾ.ಶಿವರಾತ್ರಿ ದೇಸಿಕೇಂದ್ರ ಮಹಾಸ್ವಾಮಿಗಳು ಉತ್ತರ ಕರ್ನಾಟಕದಿಂದ ಮೈಸೂರಿಗೆ ಬಂದು ರಾಜಶೇಖರ ಕೋಟಿ ಅವರು ಆಂದೋಲನ ಪತ್ರಿಕೆಯನ್ನು ಸ್ಥಾಪಿಸಿ, ನಡೆಸಿಕೊಂಡ ಬಂದ ಬಗೆಯನ್ನು ತಿಳಿಸಿದ್ದರು.

ಒಬ್ಬ ವ್ಯಕ್ತಿ ಒಂದು ಪತ್ರಿಕೆಯನ್ನು ತಪ್ಪದೆ ೫೦ ವರ್ಷಗಳ ಕಾಲ ನಡೆಸಿಕೊಂಡು ಬರುವುದು ಇಂದಿನ ಕಾಲದ ಪವಾಡವೇ ಸರಿ. ಇಂತಹ ಪವಾಡವನ್ನು ಕರ್ನಾಟಕದಲ್ಲಿ ಈ ಮುಂಚೆ ಮಾಡಿದವರು ವಚನಪಿತಾಮಹ ಡಾ.ಫ.ಗು.ಹಳಕಟ್ಟಿಯವರು. ಕಳೆದ ಶತಮಾನದಲ್ಲಿ ೧೯೦೨ರಲ್ಲಿ ಬಿ.ಎ ಓದುತ್ತಿದ್ದಾಗ ಧಾರವಾಡದ ಶಿವಲಿಂಗಪ್ಪ ಮಂಚಾಲಿ, ಗುರುಬಸಯ್ಯ ಕಂತಿ, ಗೋಕಾಕದ ವೀರಭದ್ರಪ್ಪ ಹಾಲಭಾವಿ, ಸೋದರ ಮಾವ ಬನಹಟ್ಟಿಯ ತಮ್ಮಣ್ಣಪ್ಪ ಚಿಕ್ಕೋಡಿಯವರ ಮನೆಯಲ್ಲಿದ್ದ ತಾಡೋಲೆಗಳನ್ನು ಪಡೆದು, ಅಭ್ಯಾಸ ಆರಂಭಿಸಿದರು. ಈ ರೀತಿ ೨೦ ವರ್ಷಗಳ ಕಾಲ ತಾಡೋಲೆಗಳನ್ನು ಸಂಗ್ರಹಿಸಿದ ಹಳಕಟ್ಟಿಯವರು ೧೯೨೨ ರಲ್ಲಿ ಪ್ರಥಮ ಬಾರಿಗೆ ೪೦೦ ಪುಟಗಳ ಕೈಬರಹದ ಹಸ್ತ ಪ್ರತಿಯನ್ನು ಸಂಪಾದಿಸಿದರು. ಆ ಸಂಪಾದಿಸಿದ ಹಸ್ತ ಪ್ರತಿಯಲ್ಲಿ ಅಡಗಿದ ಅಪಾರವಾದ ಜ್ಞಾನ ಭಂಡಾರವನ್ನು ಈ ಜಗತ್ತಿಗೆ ಪರಿಚಯಿಸಲು ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಅಂದು ಕರ್ನಾಟಕದಲ್ಲಿ ಮಂಗಳೂರಿನ ಬಾಸೆಲ್ ಮಿಷನ್ ಮುದ್ರಣಾಲಯ ಆ ಕಾಲದಲ್ಲಿ ಅತ್ಯಾಧುನಿಕವಾಗಿತ್ತು. ಕ್ರೈಸ್ತ ಧರ್ಮದ ಪ್ರಚಾರಕ್ಕಾಗಿ ಬೈಬಲ್ ಮುದ್ರಿಸುವ ಜೊತೆಗೆ ಉಳಿದ ಮುದ್ರಣ ವ್ಯವಹಾರವನ್ನು ಅವರು ಮಾಡುತ್ತಿದ್ದರು. ಹಳಕಟ್ಟಿಯವರು ತಮ್ಮ ಹಸ್ತ ಪ್ರತಿಯೊಂದಿಗೆ ೫೦೦ ರೂ.ಗಳ ಮನಿಯಾಡರ್ರ ಮಾಡಿ, ಪತ್ರ ಬರೆದು ಪುಸ್ತಕ ಮುದ್ರಿಸುವಂತೆ ಕೇಳಿಕೊಂಡರು. ದಿನಗಳು ಕಳೆದರೂ ಉತ್ತರವೂ ಇಲ್ಲ, ಪುಸ್ತಕವೂ ಇಲ್ಲ. ಕಾದು ಕಾದು ಬೇಸತ್ತ ಹಳಕಟ್ಟಿಯವರು ಮತ್ತೆ-ಮತ್ತೆ ಪತ್ರ ಬರೆದರು. ಕೊನೆಗೆ ಬಾಸೆಲ್ ಮಿಷನ್ ಮುದ್ರಣಾಲಯದಿಂದ ಹಳಕಟ್ಟಿಯವರ ವಿಳಾಸಕ್ಕೆ ಅಂಚೆ ಬಂದಿತು. ಅದರಲ್ಲಿ ಅವರ ಹಸ್ತ ಪ್ರತಿ, ಕಳುಹಿಸಿದ್ದ ೫೦೦ ರೂ. ಮನಿಯಾಡರ್ರ ಜೊತೆಗೆ ಪತ್ರ ಲಗತ್ತಿಸಿದ್ದರು. ಪತ್ರದಲ್ಲಿ ‘ತಾವು ಕಳುಹಿಸಿದ ವಚನ ಸಾಹಿತ್ಯದ ಹಸ್ತ ಪ್ರತಿಯನ್ನು ಕುಲಂಕುಷವಾಗಿ ಪರಿಶೀಲಿಸಲಾಗಿ, ಈ ಸಾಹಿತ್ಯದಲ್ಲಿನ ಅಂಶಗಳು ನಮ್ಮ ಬೈಬಲ್ನಲ್ಲಿರುವ ಅಂಶಗಳಿಗೆ ಸಮಾನವಾಗಿವೆ. ಇವುಗಳು ಪುಸ್ತಕ ರೂಪದಲ್ಲಿ ಬಂದರೆ ನಮ್ಮ ಉದ್ದೇಶಿತ ಕ್ರೈಸ್ತ ಧರ್ಮದ ಪ್ರಚಾರಕ್ಕಿಂತ ಲಿಂಗಾಯತ ಧರ್ಮಕ್ಕೆ ಹೆಚ್ಚು ಪ್ರಚಾರ ಸಿಗುತ್ತದೆ. ಆ ಕಾರಣದಿಂದ ನಾವು ಮುದ್ರಿಸಲಾಗುವುದಿಲ್ಲ ’ಎಂದಿದ್ದರು.

ತಮ್ಮ ಉನ್ನತ ವಕೀಲಿ ವೃತ್ತಿ ಬಿಟ್ಟು, ೨೦ ವರ್ಷಗಳ ಕಾಲ ಮನೆ-ಮಠ ತಿರುಗಿ ಜನರಿಂದ ಕಾಡಿಬೇಡಿ ಸಂಗ್ರಹಿಸಿದ್ದ ವಚನದ ಕಟ್ಟುಗಳಲ್ಲಿನ ಜ್ಞಾನವನ್ನು ಕೈಬರಹಕ್ಕೆ ತಂದು, ಅದನ್ನು ಮುದ್ರಿಸಲು ಆಗುತ್ತಿಲ್ಲವಲ್ಲ ಎಂದು ವಿಲವಿಲಗೊಂಡರು.
ಕೊನೆಗೆ ತಾವೇ ಒಂದು ಮುದ್ರಣಾಲಯ ಸ್ಥಾಪಿಸಲು ಮುಂದಾದರು. ಮುದ್ರಣಾಲಯ ಸ್ಥಾಪಿಸುವುದು ಸಾಮಾನ್ಯ ವಿಷಯವೇ? ಅದಕ್ಕಾಗಿ ತಾವು ವಕೀಲಿ ವೃತ್ತಿಯಲ್ಲಿ ಸಂಪಾದಿಸಿದ ಮನೆಯನ್ನೇ ಮಾರಿದರು. ಪರಿಣಾಮ 22.111925  ರಂದು ‘ಹಿತಚಿಂತಕ ಪ್ರಿಂಟಿಂಗ್ ಪ್ರೆಸ್’ ಆರಂಭಿಸಿದರು.

ನಾಡಿನ ಜನ-ಮನಕ್ಕೆ ಬಸವಾದಿ ಶರಣರ ವಚನಗಳು ತಲುಪಬೇಕು ಎಂಬ ಉದ್ದೇಶದಿಂದ ೦೧.೦೨.೧೯೨೬ ರಲ್ಲಿ ಶಿವಾನುಭವ ಪತ್ರಿಕೆಯನ್ನು ಆರಂಭಿಸಿದ ಹಳಕಟ್ಟಿಯವರು ನಿರಂತರ ೩೫ ವರ್ಷಗಳ ಕಾಲ ೧೯೬೧ ರ ವರೆಗೆ ಆ ಪತ್ರಿಕೆಯನ್ನು ನಡೆಸಿದರು. ಪ್ರಥಮ ಮೂರು ವರ್ಷ ತ್ರೈಮಾಸಿಕವಾಗಿ, ಬಳಿಕ ಎರಡು ವರ್ಷ ಮಾಸಿಕವಾಗಿ ಅನಂತರ ೫ ವರ್ಷ ದ್ವೈಮಾಸಿಕವಾಗಿ ಹಾಗೂ ನಂತರದ ೨೫ ವರ್ಷಗಳ ಕಾಲ ಮಾಸಿಕವಾಗಿ ಈ ಪತ್ರಿಕೆ ಪ್ರಕಟವಾಯಿತು. ೧೯೬೧ ರಲ್ಲಿ ಹಳಕಟ್ಟಿಯವರಿಗೆ ೮೧ ವರ್ಷ ವಯಸ್ಸಾಗಿತ್ತು. ಮುದ್ರಣಾಲಯ ಈಗಿನಂತೆ ಹೈಟೆಕ್ ಆಗಿರಲಿಲ್ಲ. ಕೈಯಿಂದ ಮೊಳೆಗಳನ್ನು ಜೋಡಿಸುವುದು, ಕಾಲಿನಿಂದ ಪೆಡಲ್ ತುಳಿದು, ಪುಟ-ಪುಟ ಮುದ್ರಿಸುವುದು ವಯಸ್ಸಾದ ಹಳಕಟ್ಟಿಯವರಿಗೆ ತೊಂದರೆಯಾಗುತ್ತಿತ್ತು. ಅದಕ್ಕಿಂತಲೂ ಮುಖ್ಯ ಚಂದಾದಾರರ ಕೊರತೆಯಿಂದ, ವಿಪರೀತ ಆರ್ಥಿಕ ಹೊರೆಯಿಂದ ಮನೆ ಮಾರಿ ಸ್ಥಾಪಿಸಿದ್ದ ಪತ್ರಿಕೆ ನಿಂತು ಹೋಯಿತು. ೩೫ ವರ್ಷಗಳ ಕಾಲ ನಿರಂತರವಾಗಿ ನಡೆಸಿದ ತಮ್ಮ ನೆಚ್ಚಿನ ಪತ್ರಿಕೆ ತಮ್ಮ ಕಣ್ಣ ಮುಂದೆಯೆ ನಿಂತಾಗ ಮತ್ತೋಮ್ಮೆ ವಿಲವಿಲಗೊಂಡರು.

೩೫ ವರ್ಷಗಳ ಸುಧೀರ್ಘ ಕಾಲ ಶಿವಾನುಭವ ಪತ್ರಿಕೆ ನೂರಾರು ಶರಣ ಸಾಹಿತಿಗಳನ್ನು, ಬರಹಗಾರರನ್ನು ಬೆಳಕಿಗೆ ತಂದರು. ಬೆನಗಲ್ ರಾಮರಾಯರು, ಬಿ.ಶಿವಮೂರ್ತಿ ಶಾಸ್ತ್ರಿಗಳು, ಅನುಭಾವ ಕವಿ ನನ್ನ ನಲ್ಲ ಖ್ಯಾತಿಯ ಮಧುರಚೆನ್ನ, ಪಾಂಡುರಂಗ ದೇಸಾಯಿ, ಸ.ಸ.ಮಾಳವಾಡ, ಸಿ.ಎಸ್ ನಂದಿಮಠ, ಎಂ.ರ್ಆ.ಸಾಕರೆ, ನವಕಲ್ಯಾಣದ ಕುಮಾರಸ್ವಾಮಿಗಳು, ಜಗದ್ಗುರು ಚೆನ್ನಬಸವ ನಿಡುಮಾಮಿಡಿ, ಸಿದ್ದಯ್ಯ ಪುರಾಣಿಕ, ಸಿಂಪಿ ಲಿಂಗಣ್ಣ, ಬಂಥನಾಳ ಶಿವಯೋಗಿ ಸ್ವಾಮಿಗಳು ಮತ್ತಿತರರು ಪ್ರಸಿದ್ಧರಾಗಿದ್ದು ಈ ಪತ್ರಿಕೆಯಿಂದ. ೩೫ ವರ್ಷ ಪತ್ರಿಕೆ ನಡೆದರೂ ಚಂದಾದಾರರು ಮುನ್ನೂರು ಮಿಕ್ಕಲಿಲ್ಲ.

ಕನ್ನಡ ಭಾಷೆಯಲ್ಲಿ ಪ್ರಕಟವಾದರೆ ಕೇವಲ ಕನ್ನಡಿಗರಿಗೆ ಮಾತ್ರ ಅರ್ಥವಾಗುತ್ತದೆ. ಬಸವಾದಿ ಶರಣರ ವಚನಗಳು ಪ್ರಪಂಚದ ಎಲ್ಲರಿಗೂ ತಿಳಿಯಬೇಕು ಎಂಬ ಉತ್ಕಟ ಉದ್ದೇಶದಿಂದ ಸ್ವತಃ ಇಂಗ್ಲಿಷ್ ಭಾಷಾ ಪಂಡಿತರಾಗಿದ್ದ ಹಳಕಟ್ಟಿಯವರು ೧೯೧೫ರಲ್ಲಿಯೇ ಬಸವೇಶ್ವರರ ನೂರಾರು ವಚನಗಳನ್ನು ಇಂಗ್ಲಿಷ್ಗೆ ಅನುವಾದಿಸಿದ್ದರು. ರೆ || ಜೆ.ಎನ್.ಫಾರಕ್ವಾರ್ ಎಂಬ ಸಂಶೋಧಕರ ಸಲಹೆಯಂತೆ ಇಂಡಿಯನ್ ಎಂಟಿಕ್ವರಿ ಪ್ರಕಟನೆಗೆ ಕಳುಹಿಸಿದರು. ಅದು ರ್ಸ ರಿಚರ್ಡ್ ಕಾರ್ನಾಕ್ ಟೆಂಪಲ್ ಬಾರ್ಟ್ ಇವರ ಸಂಪಾದಕತ್ವದ indian antiquary & a journal of oriental research voll.ll  1922 ಲಂಡನ್ನಿಂದ ಪ್ರಕಟವಾಯಿತು. ಅದರಲ್ಲಿ ಕನ್ನಡ ವಚನದ ಹಳಕಟ್ಟಿಯವರ ಇಂಗ್ಲಿಷ್ ಅನುವಾದ ಇಂತಿದೆ.

ದಯವಿಲ್ಲದ ಧರ್ಮವದೇವುದಯ್ಯಾ?

ದಯವಿರಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯು,

ದಯವೇ ಧರ್ಮದ ಮೂಲವಯ್ಯ

ಇಂತಲ್ಲದುದನು ಒಲ್ಲನಯ್ಯಾ ಕೂಡಲಸಂಗಮದೇವ.

what is that religion, whaerin there is no mercy?

it is mercy that is wanted for all creatures.

it is mercy that is the root of religion 

kudalasangam deva wants not that

which is unmerciful 

ಇಂದಿಗೆ ನೂರು ವರ್ಷಗಳ ಹಿಂದೆ ಹಳಕಟ್ಟಿಯವರು ಎದುರಿಸಿದ ಸವಾಲುಗಳನ್ನೇ ೫೦ ವರ್ಷಗಳ ಹಿಂದೆ ರಾಜಶೇಖರ ಕೋಟಿಯವರು ಖಂಡಿತ ಆಂದೋಲನದ ಆರಂಭದಲ್ಲಿ ಎದುರಿಸಿರುತ್ತಾರೆ. ೫೦ ವರ್ಷಗಳ ನಂತರ ಅವರಿಲ್ಲದ ಆಂದೋಲನವನ್ನು ಅವರ ಮಕ್ಕಳು, ಶಿಷ್ಯರು ಮುನ್ನೆಡೆಸುತ್ತಿದ್ದಾರೆ.
ಆದರೆ ಹಳಕಟ್ಟಿಯವರಿಗೆ ಆ ಭಾಗ್ಯವೂ ಇರಲಿಲ್ಲ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ