ಚಾಮರಾಜನಗರ ನೂತನ ಜಿಲ್ಲೆಯಾಗಿ ರೂಪುಗೊಂಡು ಆಗಸ್ಟ್ ೧೫ಕ್ಕೆ ೨೫ ವರ್ಷಗಳನ್ನು ಪೂರೈಸುತ್ತಿದೆ. ಜಿಲ್ಲಾಡಳಿತವು ಜಿಲ್ಲೆಯ ರಜತ ಮಹೋತ್ಸವ ಆಚರಿಸಲು ಸಿದ್ದತೆ ಕೈಗೊಂಡಿದೆ. ೧೯೯೭ರ ಆಗಸ್ಟ್ ೧೫ರ ತನಕ ಮೈಸೂರು ಜಿಲ್ಲೆಯ ಭಾಗವಾಗಿದ್ದ ಚಾಮರಾಜನಗರ ನಂತರ ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ತಾಲೂಕುಗಳನ್ನು ಒಳಗೊಂಡು ಸ್ವತಂತ್ರ ಜಿಲ್ಲೆಯಾಯಿತು. ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಹೊಸ ಜಿಲ್ಲೆಯನ್ನು ಘೋಷಿಸಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ರಜತ ಮಹೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಬೇಕು. ಈ ಮಹತ್ವದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಆಹ್ವಾನಿಸಬೇಕೆಂದು ಪ್ರಯತ್ನ ನಡೆಸುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಇಂತಹದೊಂದು ಕಾರ್ಯಕ್ರಮದ ಅವಶ್ಯಕತೆಯಿದೆ.
ರಜತ ಮಹೋತ್ಸವ ಆಚರಣೆ ಸಮಯದಲ್ಲಿ ಜಿಲ್ಲೆಯು ೨೫ ವರ್ಷಗಳ ಸುದೀರ್ಘ ಪಯಣದಲ್ಲಿ ಸಾಧಿಸಿದ ಅಭಿವೃದ್ಧಿ ಎಷ್ಟು? ಯಾವ ಪ್ರಮಾಣದಲ್ಲಿ ಅಭಿವೃದ್ಧಿಗೊಳ್ಳಬೇಕಿತ್ತು? ಸಾಧಿಸಿದ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರು, ಪ್ರಜ್ಞಾವಂತರು, ಸಾಹಿತಿಗಳು, ಉದ್ಯಮಿಗಳು, ರಾಜಕಾರಣಿಗಳು, ವಿದ್ವಾಂಸರು, ವಿವಿಧ ಚಳವಳಿಗಾರರು, ಅಧಿಕಾರಿಗಳು, ಕಲಾವಿದರು, ರೈತ ನಾಯಕರಿಗೆ ತೃಪ್ತಿ ಇದೆಯೇ ಎಂಬುದರ ಕುರಿತು ಅವಲೋಕನ ನಡೆಯಬೇಕಿದೆ.
ಮೈಸೂರಿನ ಮಹಾರಾಜರು, ಇತರೆ ರಾಜ ಮನೆತನಗಳು ಹಾಗೂ ಸುಲ್ತಾನರ ಆಡಳಿತಕ್ಕೆ ಒಳಪಟ್ಟಿದ್ದ ಪಕ್ಕದ ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳು ಅಭಿವೃದ್ದಿಗೊಂಡಿವೆ. ೧೯೯೭ ಆಗಸ್ಟ್ ವರೆಗೂ ಮೈಸೂರಿನ ಭಾಗವಾಗಿಯೇ ಇತ್ತು ಈಗಿನ ಚಾಮರಾಜನಗರ ಜಿಲ್ಲೆ. ಆದರೆ, ಮೈಸೂರು ಅಭಿವೃದ್ಧಿಯಲ್ಲಿ ಮುನ್ನಡೆ ಸಾಧಿಸಿದರೆ ಚಾ.ನಗರ ಜಿಲ್ಲೆ ಹಿಂದುಳಿಯಿತು. ಹಾಗಂತ ಜಿಲ್ಲೆಯು ಸಂಪೂರ್ಣವಾಗಿ ಹಿಂದುಳಿದಿದೆ ಎಂಬ ನಿರಾಸೆ ಬೇಡ. ಆದರೆ, ನಿರೀಕ್ಷಿತ ಅಭಿವೃದ್ಧಿ ಸಾಧಿಸಲಿಲ್ಲ ಎಂಬ ಬೇಸರ ಜಿಲ್ಲೆಯ ಎಲ್ಲ ವರ್ಗದ ಜನರನ್ನು ಕಾಡುತ್ತಿದೆ.
ಅಭಿವೃದ್ದಿ ಎಂಬುದನ್ನು ಲೆಕ್ಕಹಾಕಲು ಅಲ್ಲಿನ ಉತ್ತಮ ಸಂಪರ್ಕ ರಸ್ತೆಗಳು, ಹೆಚ್ಚು ಕೈಗಾರಿಕೆಗಳು, ಎಲ್ಲ ಕ್ಷೇತ್ರಗಳಲ್ಲೂ ತಾಂತ್ರಿಕತೆ ಅಳವಡಿಕೆ, ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಸುಲಿಲಿತ ವ್ಯಾಪಾರ ವಹಿವಾಟು, ಸಮೃದ್ಧ ಕೃಷಿ, ಸಮರ್ಪಕ ಕುಡಿಯುವ ನೀರು, ಸಾರಿಗೆ ಸೌಲಭ್ಯ, ಕೈಗೆಟುಕುವ ದರದಲ್ಲಿ ವಸತಿ ಸೌಲಭ್ಯ, ಮಾರುಕಟ್ಟೆ, ಕಾನೂನು ಸುವ್ಯವಸ್ಥೆ ಇರುವುದು ಮುಖ್ಯ, ಬದುಕು ದುಬಾರಿ ಆಗಿರಬಾರದು ಎಂಬುದು ಪ್ರಜ್ಞಾವಂತರ ಅಭಿಪ್ರಾಯ. ಇದೆಲ್ಲವನ್ನು ಜಿಲ್ಲೆಯಲ್ಲಿ ಪೂರ್ಣಪ್ರಮಾಣದಲ್ಲಿ ನಿರೀಕ್ಷಿಸುವುದು ಕಷ್ಟ. ಜಿಲ್ಲೆಯನ್ನು ಪ್ರತಿನಿಧಿಸಿದ್ದ ಜನಪ್ರತಿನಿಧಿಗಳು, ಆಡಳಿತ ನಡೆಸಿದ ಅಧಿಕಾರಿಗಳು, ಜನರ ಅಸಹಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಹೊಂದಿಲ್ಲ ಎಂಬುದಕ್ಕೆ ಪುರಾವೆಗಳು ಬೇಕಿಲ್ಲ. ಜಿಲ್ಲೆಯಲ್ಲಿ ಓಡಾಡಿದರೆ ಸಾಕು ಗೊತ್ತಾಗುತ್ತದೆ.
ಜಿಲ್ಲೆಯು ಶೇ.೫೨ ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ. ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತಂದುಕೊಡುವ ದೇವಾಲಯಗಳ ಪೈಕಿ ೨ ಸ್ಥಾನ ಪಡೆದಿರುವ ಮಲೆ ಮಹದೇಶ್ವರ ಬೆಟ್ಟವಿದೆ. ಬಿಳಿಗಿರಿರಂಗನಬೆಟ್ಟ, ಹಿಮವದ್ಗೋಪಾಲ ಸ್ವಾಮಿ ಬೆಟ್ಟ ಸೇರಿದಂತೆ ಇನ್ನು ಅನೇಕ ಪ್ರವಾಸಿ ತಾಣಗಳಿವೆ. ಆದರೆ, ಅವುಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮವನ್ನು ಬೆಳೆಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆದಿಲ್ಲ.
೨೦೦೮ ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಜಿಲ್ಲೆಯ ೨೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂಕಿತ ಹಾಕಿದರು. ೨೦೧೩ ರಲ್ಲಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರು ಜಿಲ್ಲೆಯ ಅಭಿವೃದ್ಧಿಗೆ ೪ ಸಾವಿರ ಕೋಟಿ ರೂ. ಅನುದಾನ ನೀಡಿ ಅಭಿವೃದ್ಧಿಗೆ ನಾಂದಿ ಹಾಡಿದರು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಅನುಷ್ಠಾನ ಮಾಡಿಸಿದರು. ಜಿಲ್ಲೆಗೆ ಚಾಮರಾಜನಗರ ಜಿಲ್ಲಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಸರ್ಕಾರಿ ವೈದ್ಯಕೀಯ ಕಾಲೇಜು-ಸಿಮ್ಸ್) ಮತ್ತು ಇಂಜಿನಿಯರಿಂಗ್ ಕಾಲೇಜುಗಳು ಮಂಜೂರಾದವು. ಇದಲ್ಲದೆ ಸಿಮ್ಸ್ ಬೋಧನಾ ಆಸ್ಪತ್ರೆಯು ೨೦೨೧ರಲ್ಲಿ ನಿರ್ಮಾಣಗೊಂಡಿದೆ. ನಳಂದ ಬೌದ್ಧ ಜ್ಞಾನ ಮತ್ತು ಅಧ್ಯಯನ ಕೇಂದ್ರ ತಲೆಎತ್ತಿದೆ.
೨೦೧೪-೧೫ ರಲ್ಲಿ ಮೈಮುಲ್‌ನಿಂದ ಪ್ರತ್ಯೇಕಗೊಂಡು ಚಾಮರಾಜನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟವಾಗಿ (ಚಾಮುಲ್) ರೂಪುಗೊಂಡು ಪ್ರತಿನಿತ್ಯ ೫ ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಈಗಿನ ಸ್ಪರ್ಧಾತ್ಮಕ ಪ್ರಪಂಚಕ್ಕೆ ಈ ಸಣ್ಣ ಪ್ರಮಾಣದ ಅಭಿವೃದ್ಧಿ ಸಾಲದು. ಯಾವುದೇ ಜಿಲ್ಲೆ ಅಭಿವೃದ್ಧಿ ಹೊಂದಢಬೇಕಾದರೆ ಕೈಗಾರಿಕೆಗಳು ಸ್ಥಾಪನೆ ಮುಖ್ಯ. ಇದಕ್ಕೆ ಪೂರಕವಾಗಿ ೨೦೧೩ರಲ್ಲಿ ಎಚ್.ಎಸ್.ಮಹದೇವಪ್ರಸಾದ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಚಾಮರಾಜನಗರ ತಾಲೂಕಿನ ಬದನಗುಪ್ಪೆ-ಕೆಲ್ಲಂಬಳ್ಳಿ ಬಳಿ ೧೩೦೦ ಎಕರೆ ಭೂಮಿಯನ್ನು ವಶಪಡಿಸಿಕೊಂಡು ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಪಡಿಸಲಾಯಿತು. ನಿರೀಕ್ಷೆಯಂತೆ ಕೈಗಾರಿಕೆಗಳು ಪ್ರಾರಂಭವಾಗಿಲ್ಲ.
ಜಿಲ್ಲಾ ಕೇಂದ್ರವಾದ ಚಾಮರಾಜನಗರ, ಪಟ್ಟಣಗಳಾದ ಗುಂಡ್ಲುಪೇಟೆ, ಯಳಂದೂರು, ಕೊಳ್ಳೇಗಾಲ, ಯಳಂದೂರುಗಳು ವಿಸ್ತಾರವಾಗುತ್ತಲೇ ಇಲ್ಲ. ನಿವೇಶನ ಸಮಸ್ಯೆ ಅಗಾಧವಾಗಿದೆ ಭೂ ಸ್ವಾಧೀನ ಮಾಡಿ ಬಡಾವಣೆ ನಿರ್ಮಾಣ ಪ್ರಕ್ರಿಯೆ ನಡೆದಿಲ್ಲ. ಮತ್ತೆ ಇವುಗಳ ಬಳಿ ಉಪ ನಗರಗಳನ್ನು ನಿರ್ಮಿಸುವ ಯೋಜನೆಯ ಪ್ರಸ್ತಾಪವಿಲ್ಲ.
ಜಿಲ್ಲೆಯಲ್ಲಿ ಉತ್ಕೃಷ್ಟ ಕಪ್ಪು ಶಿಲೆ ಸಿಗುವುದರಿಂದ ಗ್ರಾನೈಟ್ ಪಾರ್ಕ್ ನಿರ್ಮಿಸಬೇಕೆಂಬ ಹಲವು ದಿನಗಳ ಬೇಡಿಕೆ ಈಡೇರಬೇಕು. ಜೀವವೈವಿಧ್ಯ ಪಾರ್ಕ್ ನಿರ್ಮಾಣವಾಗಬೇಕು. ಜಿಲ್ಲೆಯಲ್ಲಿ ಪದವಿ ಪೂರ್ವ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳ, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಕೊರತೆಯಿದ್ದು ವಿದ್ಯಾರ್ಥಿಗಳು ಮೈಸೂರಿಗೆ ತೆರಳಬೇಕಿದೆ. ಈ ಸಮಸ್ಯೆ ನಿವಾರಣೆ ಆಗಬೇಕಿದೆ. ಬೆಂಗಳೂರು-ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಚಾಮರಾಜನಗರ ರೈಲು ಮಾರ್ಗ ನಿರ್ಮಾಣವಾಗಬೇಕಿದೆ. ರಜತ ಮಹೋತ್ಸವ ಆಚರಿಸಿದರೆ ಸಾಲದು ಜಿಲ್ಲೆಯ ಅಭಿವೃದ್ದಿಗೆ ಸಂಕಲ್ಪ ತೊಡಬೇಕು.