ಸಹಸ್ರಾರು ಪ್ಯಾಲೆಸ್ಟೇನ್ ಜನರ ಹತ್ಯಾಕಾಂಡದ ನೆಲೆಯಾದ ಗಾಜಾದಲ್ಲಿ ಕದನವಿರಾಮ ಮೊದಲು ಘೋಷಣೆಯಾಗಬೇಕು ಎಂಬುದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಪ್ಯಾಲೆಸ್ಟೇನ್ ಜನರ ಪರವಾಗಿ ಹೋರಾಡುತ್ತಿರುವ ನೆರೆಯ ದೇಶವಾದ ಲೆಬನಾನ್‌ನಲ್ಲಿ ಕದನವಿರಾಮ ಘೋಷಣೆಯಾಗಿದೆ. ಲೆಬನಾನ್‌ನ ಉಗ್ರ ಸಂಘಟನೆಯಾದ ಹೆಜಬುಲ್ಲ ಮತ್ತು ಇಸ್ರೇಲ್ ನಾಯ ಕರು ಕದನವಿರಾಮ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಗಾಜಾ ಸಮಸ್ಯೆ ಹಾಗೆಯೇ ಉಳಿದಿದ್ದು, ಇಸ್ರೇಲ್‌ನಿಂದ ಹತ್ಯಾಕಾಂಡ ಮುಂದುವರಿದಿದೆ. ಇದರಿಂದಾಗಿ ಈ ಕದನವಿರಾಮ ಎಷ್ಟರ ಮಟ್ಟಿಗೆ ಯಶಸ್ವಿಯಾಗುವುದು ಎಂಬ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಅಮೆರಿಕ ಮತ್ತು ಫ್ರಾನ್ಸ್ ಮಧ್ಯಸ್ಥಿಕೆಯಲ್ಲಿ ಕದನವಿರಾಮ ಒಪ್ಪಂದಕ್ಕೆ ಲೆಬನಾನ್ ಮತ್ತು ಇಸ್ರೇಲ್ ನಾಯಕರು ಸಹಿ ಮಾಡಿದ್ದಾರೆ. ಬುಧವಾರ ಬೆಳಿಗ್ಗೆಯಿಂದ ಜಾರಿಗೆ ಬಂದಿರುವ ಈ ಕದನವಿರಾಮಕ್ಕೆ ಜನರಿಂದಲೂ ಸ್ವಾಗತ ಸಿಕ್ಕಿದೆ. ಇಸ್ರೇಲ್ ದಾಳಿಯಿಂದ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾದ ಜನರು ತಮ್ಮ ತಮ್ಮ ಜಾಗಗಳಿಗೆ ಹಿಂತಿರುಗುತ್ತಿದ್ದಾರೆ. ಬಾಂಬ್ ದಾಳಿಯಿಂದ ನಾಶವಾದ ತಮ್ಮ ಮನೆಗಳನ್ನು ನೋಡಿ ದಿಕ್ಕುತೋಚದವರಾಗಿದ್ದಾರೆ. ಅವರಿಗೆ ನೆರವಾಗುವ ಸ್ಥಿತಿಯಲ್ಲಿ ಸರ್ಕಾರವೂ ಇಲ್ಲ, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳೂ ಇಲ್ಲ. ಇದು ಯುದ್ಧಕ್ಕಿಂತ ದೊಡ್ಡ ದುರಂತ. ಈ ಮಧ್ಯೆ ಪ್ಯಾಲೆಸ್ಟೇನ್ ನಲ್ಲಿ ಕದನವಿರಾಮ ಘೋಷಿತವಾಗುವವರೆಗೆ ಇಸ್ರೇಲ್ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಹೆಜಬುಲ್ಲ ಸಂಘಟನೆಯ ಕೆಲವು ಹೋರಾಟಗಾರರು ಘೋಷಿಸಿದ್ದಾರೆ.
ಲೆಬನಾನ್ ಒಪ್ಪಂದದ ಪ್ರಕಾರ ಈ ಕದನವಿರಾಮ ತಾತ್ಕಾಲಿಕವಾದುದು. ಉಲ್ಲಂಘನೆಯಾಗದಿದ್ದರೆ ಅದೇ ಶಾಶ್ವತವಾಗಿ ಉಳಿಯಲಿದೆ. ಆದರೆ ಲೆಬನಾನ್‌ನ ಹೆಜಬುಲ್ಲ ಉಗ್ರಗಾಮಿಗಳು ಒಪ್ಪಂದವನ್ನು ಉಲ್ಲಂಸಿದರೆ ದಾಳಿ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ನೆತಾನ್ಯಹು ಹೇಳಿದ್ದಾರೆ. ಹಾಗೆ ನೋಡಿದರೆ ಕದನ ವಿರಾಮ ಜಾರಿಗೆ ಬಂದ ನಂತರ ಹಲವು ಉಲ್ಲಂಘನೆ ಪ್ರಕರಣಗಳು ನಡೆದಿವೆ. ಈ ಬಗ್ಗೆ ಎರಡೂ ಕಡೆಯವರು ದೂರಿದ್ದಾರೆ. ಉಲ್ಲಂಘನೆಗೆ ಸಮಜಾಯಿಷಿಯನ್ನೂ ನೀಡಿದ್ದಾರೆ. ಆದರೆ ಜನರಂತೂ ಕದನವಿರಾಮವನ್ನು ಸ್ವಾಗತಿಸಿದ್ದಾರೆ. ಕದನ ವಿರಾಮ ಒಪ್ಪಂದದ ಪ್ರಕಾರ ದಕ್ಷಿಣ ಲೆಬನಾನ್‌ನಲ್ಲಿರುವ ಇಸ್ರೇಲ್ ಸೇನೆ ವಾಪಸ್ ಆಗಲು ೬೦ ದಿನಗಳ ಗಡುವು ನೀಡಲಾಗಿದೆ. ಆ ಪ್ರದೇಶದ ಉಸ್ತುವಾರಿಯನ್ನು ಲೆಬನಾನ್ ಸೇನೆ ವಹಿಸಿಕೊಳ್ಳಲಿದೆ. ಇಸ್ರೇಲ್ ಸೇನೆ ನೆಲೆಮಾಡಿರುವ ಪ್ರದೇಶಗಳು ಮುಕ್ತ ವಾಗಲು ಕಾಲಾವಕಾಶ ಬೇಕೆಂದು ತಿಳಿಸಲಾಗಿದೆ. ಈ ಅವಕಾಶವನ್ನು ಬಳಸಿ ಕೊಂಡು ಇಸ್ರೇಲ್ ಲೆಬನಾನ್‌ನ ದಕ್ಷಿಣ ಭಾಗದ ತನ್ನ ಗಡಿಯಲ್ಲಿ ಯಾರಿಗೂ ಸೇರದ ಪ್ರದೇಶವೊಂದನ್ನು ಸೃಷ್ಟಿಸಬಹುದೆಂದು ಅಂದಾಜು ಮಾಡಲಾಗಿದೆ. ಹೀಗಾಗಿಯೇ ಇಸ್ರೇಲ್ ತನ್ನ ಸೇನೆಯನ್ನು ದಕ್ಷಿಣ ಲೆಬನಾನ್‌ನಿಂದ ತುರ್ತಾಗಿ ವಾಪಸ್ ಪಡೆಯುತ್ತಿಲ್ಲ ಎನ್ನಲಾಗಿದೆ. ಹೆಜಬುಲ್ಲ ಉಗ್ರರ ದಾಳಿಯಿಂದ ತೀವ್ರ ಸಮಸ್ಯೆಗೆ ಒಳಗಾದ ಪ್ರದೇಶ ಉತ್ತರ ಇಸ್ರೇಲ್. ಹೆಜಬುಲ್ಲ ದಾಳಿಯಿಂದಾಗಿ ಸುಮಾರು ೫೦ ಸಾವಿರ ಜನರು ಇಸ್ರೇಲ್‌ನ ಬೇರೆ ಬೇರೆ ಭಾಗಗಳಿಗೆ ವಲಸೆ ಹೋಗಿದ್ದಾರೆ. ಈ ಒಪ್ಪಂದದಿಂದಾಗಿ ಅವರೆಲ್ಲಾ ತಮ್ಮ ಊರುಗಳಿಗೆ ಹಿಂತಿರುಗಲಿದ್ದಾರೆ. ಉತ್ತರ ಗಡಿಯಲ್ಲಿದ್ದ ಹೆಜಬುಲ್ಲ ಉಗ್ರರ ಬಹುಶಃ ಎಲ್ಲ ನೆಲೆಗಳನ್ನೂ ಇಸ್ರೇಲ್ ನಾಶಮಾಡಿದೆ. ಹೆಜಬುಲ್ಲ ಉಗ್ರಗಾಮಿ ಸಂಘಟನೆಯ ನಾಯಕರನ್ನು ಕೊಲ್ಲಲಾಗಿದೆ. ಹೀಗಾಗಿ ಆ ಪ್ರದೇಶದಲ್ಲಿ ಮತ್ತೆ ಸದ್ಯಕ್ಕೆ ಹೆಜಬುಲ್ಲ ಸಂಘಟನೆ ತಲೆಎತ್ತುವ ಸಾಧ್ಯತೆ ಇಲ್ಲ. ಪ್ಯಾಲೆಸ್ಟೇನ್ ಮತ್ತು ಹೆಜಬುಲ್ಲ ಉಗ್ರರ ಮತ್ತೊಂದು ನೆಲೆಯಾದ ದಕ್ಷಿಣ ಲೆಬನಾನ್ ಈಗಾಗಲೇ ಇಸ್ರೇಲ್ ವಶದಲ್ಲಿರುವುದರಿಂದ ಉಗ್ರರ ಸಮಸ್ಯೆ ಬಹುಪಾಲು ನಾಶವಾದಂತೆ ಎಂದು ಇಸ್ರೇಲ್ ಭಾವಿಸಿದೆ. ಹೀಗಾಗಿಯೇ ಕದನವಿರಾಮ ಒಪ್ಪಂದಕ್ಕೆ ಇಸ್ರೇಲ್ ಒಪ್ಪಿದೆ ಎಂದೂ ಹೇಳಲಾಗಿದೆ. ಪ್ಯಾಲೆಸ್ಟೇನ್ ಜನರ ಉಗ್ರ ಸಂಘಟನೆಯಾದ ಹಮಾಸ್‌ಗೆ ಈಗ ನೇರ ಬೆಂಬಲ ಕೊಡುವವರು ಯಾರೂ ಇಲ್ಲ. ಇರಾನ್ ಏನಿದ್ದರೂ ಪರೋಕ್ಷವಾಗಿ ಬೆಂಬಲ ನೀಡಬಹುದಷ್ಟೆ. ಈ ಬಾರಿಯ ಯುದ್ಧದಲ್ಲಿ ಇರಾನ್ ಕೂಡ ಹೆಜಬುಲ್ಲಗಾಗಲಿ, ಹಮಾಸ್‌ಗಾಗಲೀ ನೇರ ಬೆಂಬಲ ನೀಡಿಲ್ಲ. ಇದುವರೆಗೆ ಇರಾನ್ ಬೆಂಬಲ ನೀಡುತ್ತಿದ್ದ ಉಗ್ರವಾದಿ ನಾಯಕರನ್ನು ಇಸ್ರೇಲ್ ಕೊಂದಿರುವುದರಿಂದ ಇರಾನ್ ಅಸಹಾಯಕ ಸ್ಥಿತಿಗೆ ತಲುಪಿದಂತಿದೆ. ಹೀಗಾಗಿಯೇ ಇರಾನ್ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಇಳಿಯಲಿಲ್ಲ. ಇದು ಇಸ್ರೇಲ್‌ಗೆ ಅನುಕೂಲಕರವಾಗಿ ಪರಿಣಮಿಸಿತು. ಹೆಜಬುಲ್ಲ ಉಗ್ರಗಾಮಿ ಸಂಘಟನೆ ಬಹಳ ಬಲಯುತವಾದದ್ದು ಮತ್ತು ಇಸ್ರೇಲ್‌ಗೆ ಆಘಾತ ನೀಡುವಂಥ ಶಕ್ತಿ ಅದರಲ್ಲಿದೆ ಎಂದು ತಿಳಿಯಲಾಗಿತ್ತು. ಆದರೆ ಇಸ್ರೇಲ್ ಈ ಬಾರಿ ಆ ನಂಬಿಕೆಯನ್ನು ಹುಸಿಗೊಳಿಸಿದೆ. ಎಲ್ಲ ನಾಯಕರನ್ನೂ ಕೊಲ್ಲುವ ಮೂಲಕ ಹೆಜಬುಲ್ಲ ಸಂಘಟನೆಯನ್ನು ಇಸ್ರೇಲ್ ದುರ್ಬಲಗೊಳಿಸಿದಂತಾಗಿದೆ. ಮತ್ತೆ ಹೆಜಬುಲ್ಲ ತಲೆಯೆತ್ತಲು ಹಲವಾರು ದಶಕಗಳೇ ಆಗಬಹುದು. ಅದುವರೆಗೆ ಇಸ್ರೇಲ್‌ನ ಜನರು ನೆಮ್ಮದಿಯಿಂದ ಬದುಕಬಹುದು, ಪ್ಯಾಲೆಸ್ಟೇನ್ ಸಮಸ್ಯೆ ಬಗೆಹರಿದರಂತೂ ಶಾಶ್ವತವಾಗಿ ಇಸ್ರೇಲ್ ಜನರು ಶಾಂತಿಯಿಂದ ಬದುಕಬಹುದು ಎಂಬುದು ಇಸ್ರೇಲ್ ಪ್ರಧಾನಿ ನೆತಾನ್ಯಹು ಅವರ ಲೆಕ್ಕಾಚಾರ.
ಈ ಲೆಕ್ಕಾಚಾರ ಏನೇ ಇದ್ದರೂ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವಂಥದ್ದಲ್ಲ. ಪ್ಯಾಲೆಸ್ಟೇನ್ ಜನರ ಉಗ್ರ ಸಂಘಟನೆಯಾದ ಹಮಾಸ್ ಇನ್ನೂ ಸೋಲೊಪ್ಪಿಕೊಂಡಿಲ್ಲ. ಆದರೆ ಹಮಾಸ್‌ನ ಎಲ್ಲ ಬಲವನ್ನು ಇಸ್ರೇಲ್ ನಾಶಮಾಡಿದೆ. ಹಮಾಸ್ ನಾಯಕರನ್ನೆಲ್ಲಾ ಕೊಂದಿದೆ. ಹಮಾಸ್ ಉಗ್ರರ ಹೋರಾಟದ ಮುಖ್ಯನೆಲೆಗಳಾದ ಸುರಂಗಗಳನ್ನೆ ಇಸ್ರೇಲ್ ನೆಲಸಮಮಾಡಿದೆ. ಅಷ್ಟೇ ಅಲ್ಲ ಅವರ ಬಹುಪಾಲು ಅಡಗು ತಾಣಗಳು, ಶಸ್ತ್ರಾಗಾರಗಳು ಮತ್ತು ಉಗ್ರಗಾಮಿಗಳನ್ನು ನಾಶಮಾಡಿದೆ.
ಆದರೆ ಇಸ್ರೇಲ್‌ನ ಒತ್ತೆಯಾಳುಗಳನ್ನು ಎಲ್ಲಿ ಅಡಗಿಸಿ ಇಡಲಾಗಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಇಸ್ರೇಲ್ ಯುದ್ಧ ಮುಂದು ವರಿಸಿದೆ. ಇಸ್ರೇಲ್ ನಡೆಸುತ್ತಿರುವ ಈ ಯುದ್ಧ ಎಷ್ಟು ಅಮಾನ ವೀಯವಾಗಿದೆ ಎಂದರೆ ಜನರಿಗೆ ಅನ್ನಾಹಾರವೂ ಸಿಗದಂತೆ ಮಾಡಲಾಗಿದೆ. ಯುದ್ಧದಲ್ಲಿ ಬದುಕುಳಿದವರಲ್ಲಿ ಏಕೆ ಬದುಕಿದ್ದೇವೆಯೋ ಎನ್ನುವ ಭಾವನೆ ಬರುವಂತೆ ಮಾಡಲಾಗಿದೆ. ಜನರನ್ನು ಅಸಹಾಯಕ ಸ್ಥಿತಿಗೆ ತಳ್ಳಿ ಅವರು ಹಮಾಸ್ ಸಂಘಟನೆಯನ್ನು ಬೆಂಬಲಿಸದಂತೆ ಮಾಡುವುದು ಇಸ್ರೇಲ್ ಉದ್ದೇಶ. ಆದರೆ ಈ ಉದ್ದೇಶ ಸಫಲವಾಗುವಂತೆ ಕಾಣುತ್ತಿಲ್ಲ. ಪ್ಯಾಲೆಸ್ಟೇನ್ ಸಮಸ್ಯೆ ಜಟಿಲವಾದುದು. ರಾಜಿ ಸಾಧ್ಯ. ರಾಜಿಗೆ ಪ್ಯಾಲೆಸ್ಟೇನ್ ನಾಯಕರೆಲ್ಲರೂ ಸಿದ್ಧರಾಗಬೇಕು. ಇಸ್ರೇಲ್ ಅಸ್ತಿತ್ವವನ್ನು ಒಪ್ಪಿಕೊಳ್ಳಬೇಕು. ನೆರೆಯ ದೇಶವಾಗಿ ಇಸ್ರೇಲ್ ಜೊತೆ ಬದುಕಲು ಪ್ಯಾಲೆಸ್ಟೇನ್ ನಾಯಕರು ಸಿದ್ಧವಾಗಬೇಕು. ಇದು ತಮ್ಮ ಪ್ರದೇಶ, ಅಲ್ಲಿ ಇಸ್ರೇಲ್ ಜನರಿಗೆ ಇರುವ ಹಕ್ಕು ಇಲ್ಲ. ಅವರು ಬೇರೆ ಕಡೆ ನೆಲೆಸಲಿ ಎಂಬ ಹಠದ ಧೋರಣೆಯನ್ನು ಪ್ಯಾಲೆಸ್ಟೇನ್ ನಾಯಕರು ಬಿಡಬೇಕು. ಇದೇ ಹಠದಿಂದ ಸುಮಾರು ೭೦ ವರ್ಷಗಳು ಕಳೆದುಹೋಗಿವೆ. ಸ್ವತಂತ್ರ ದೇಶದಲ್ಲಿ ಬದುಕುವ ಅವಕಾಶವನ್ನು ಪ್ಯಾಲೆಸ್ಟೇನ್ ಜನರು ಕಳೆದುಕೊಂಡಿದ್ದಾರೆ. ಪ್ಯಾಲೆಸ್ಟೇನ್ ನಾಯಕರ ಹಠದ ಧೋರಣೆ ಲಕ್ಷಾಂತರ ಜನರ ಸಾವು-ನೋವಿಗೆ ಕಾರಣವಾಗಿದೆ, ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಪ್ಯಾಲೆಸ್ಟೇನ್ ಸಂಘಟನೆಗಳು ಸತತವಾಗಿ ಸೋಲುತ್ತ ಬಂದಿವೆ. ಇಸ್ರೇಲ್‌ನ ಆಧುನಿಕ ಮಾರಕಾಸ್ತ್ರಗಳ ಎದುರು ಪ್ಯಾಲೆಸ್ಟೇನ್ ಹಮಾಸ್ ಉಗ್ರರ ಸುರಂಗ ರಕ್ಷಣೆ, ರಾಕೆಟ್ ಮತ್ತು ಬಂದೂಕು ದಾಳಿ ನಿಷ್ಛಲವಾಗಿದೆ. ಪ್ಯಾಲೆಸ್ಟೇನ್ ಜನರಿಗಾಗಿ ಹೋರಾಟ ಮಾಡಿದ ಹಲವು ಮುಸ್ಲಿಮ್ ದೇಶಗಳೂ ಹಲವು ಬಾರಿ ಸೋತಿವೆ. ಹೀಗಾಗಿಯೇ ಈ ಬಾರಿ ಯಾವುದೇ ಮುಸ್ಲಿಮ್ ದೇಶ ಪ್ಯಾಲೆಸ್ಟೇನ್ ಜನರ ಪರವಾಗಿ ಇಸ್ರೇಲ್ ವಿರುದ್ಧ ಯುದ್ಧಕ್ಕೆ ಇಳಿಯಲಿಲ್ಲ. ಈ ಸಮಸ್ಯೆ ಯುದ್ಧದಿಂದ ಪರಿಹಾರ ಕಾಣುವಂಥದ್ದಲ್ಲ, ಪರಸ್ಪರ ಮಾತುಕತೆಯಿಂದ, ಕೊಡುಕೊಳ್ಳುವ ಧೋರಣೆಯಿಂದ ಮಾತ್ರ ಸಮಸ್ಯೆ ಬಗೆಹರಿಯಲು ಸಾಧ್ಯ.
ಪ್ಯಾಲೆಸ್ಟೇನ್ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ಈಗ ಮತ್ತೆ ಪ್ರಯತ್ನಗಳು ಆರಂಭವಾಗಿರುವುದು ಸ್ವಾಗತಾರ್ಹ. ಅಮೆರಿಕದ ಅಧ್ಯಕ್ಷ ಜೋ ಬೈಡನ್ ಈ ಬಗ್ಗೆ ಈಗ ಸೂಚನೆ ನೀಡಿದ್ದಾರೆ. ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾದರೆ ಸಾಲದು. ಪ್ಯಾಲೆಸ್ಟೇನ್ ಪ್ರದೇಶದಲ್ಲಿ ಅದು ಮೊದಲು ಜಾರಿಯಾಗಬೇಕು. ಯುದ್ಧ ನಿಂತು ಒತ್ತೆಯಾಳುಗಳ ಬಿಡುಗಡೆಯಾಗಬೇಕು. ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆಗೆ ಅನುಕೂಲವಾಗುವಂತೆ ಆಕ್ರಮಿತ ಪ್ರದೇಶಗಳನ್ನು ಇಸ್ರೇಲ್ ತೆರವು ಮಾಡಬೇಕು. ಸ್ವತಂತ್ರ ಪ್ಯಾಲೆಸ್ಟೇನ್ ದೇಶ ರಚನೆಗೆ ಇಸ್ರೇಲ್ ಬೆಂಬಲ ನೀಡಬೇಕು. ಇದರಿಂದ ಇಸ್ರೇಲ್ ಜನರು ಕೂಡ ನೆಮ್ಮದಿಯಿಂದ ಬದುಕುವಂತಾಗುತ್ತದೆ.