ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ೨೬ ಮಂದಿ ಪ್ರವಾಸಿಗರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಭಾರತ ಸೇನಾಪಡೆಯು ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಶಂಕಿತ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿತು. ಪರಿಣಾಮವಾಗಿ ಹಲವು ಮಂದಿ ಶಂಕಿತ ಉಗ್ರರು ಹತರಾದರು. ಅದರಿಂದ ಪಾಕಿಸ್ತಾನ ಕೂಡ ಭಾರತದ ಮೇಲೆ ಮುಗಿಬೀಳುವ ಪ್ರಯತ್ನ ಮಾಡಿದರೂ ಭಾರತದ ಎಸ್- ೪೦೦ ಅಂತಹ ಬಲಶಾಲಿ ಶಸ್ತ್ರಗಳಿಂದ ಬಹುತೇಕ ವಿಫಲಗೊಂಡಿತು. ಆದರೆ, ಭಾರತ ಮಾತ್ರ ದಾಳಿಯನ್ನು ಮುಂದುವರಿಸಿತು. ಪಾಕ್, ತಾನು ಕೂಡ ಭಾರತದ ಹಲವು ಸೇನಾನೆಲೆಗಳನ್ನು ನಾಶ ಮಾಡಿದ್ದಾಗಿ ಹೇಳಿಕೊಂಡಿದೆ.
ಆಪರೇಷನ್ ಸಿಂಧೂರ ಆರಂಭವಾದ ಮೂರು ದಿನಗಳ ನಂತರ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಉಭಯ ದೇಶಗಳೂ ಕದನ ವಿರಾಮಕ್ಕೆ ಶನಿವಾರ ಸಮ್ಮತಿಸಿದವು. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಭಾರತ ಮತ್ತು ಪಾಕಿಸ್ತಾನ ದೇಶಗಳೂ ಇದನ್ನು ಖಚಿತಪಡಿಸಿದ್ದವು. ಆದರೆ, ಕೇವಲ ಮೂರು ಗಂಟೆಗಳ ಅವಧಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಸಿ, ಭಾರತದ ಗಡಿಯಲ್ಲಿ ದಾಳಿ ನಡೆಸಲು ಯತ್ನಿಸಿತು. ಭಾರತದ ಸೇನಾಪಡೆಗಳು ಅದನ್ನು ವಿಫಲಗೊಳಿಸಿದವು.
ಪಾಕಿಸ್ತಾನಕ್ಕಿಂತ ಹೆಚ್ಚು ಸೇನಾಬಲ, ಶಸ್ತ್ರಾಸ್ತ್ರ ಹೊಂದಿರುವ ಭಾರತವೇ ಅಮೆರಿಕದ ಮಧ್ಯಸ್ಥಿಕೆಗೆ ಗೌರವಪೂರ್ವಕವಾಗಿ ಸಮ್ಮತಿಸಿದೆ. ಇಂತಹ ಸಂದರ್ಭದಲ್ಲಿ ಪಾಕಿಸ್ತಾನ ಸಂಘರ್ಷ ಮುಂದುವರಿಸಲು ಪ್ರಯತ್ನಿಸು ವುದು ವಿಚಿತ್ರವಾಗಿದೆ. ಯಾವುದೇ ಯುದ್ಧ, ಯಾವುದೇ ಕಾರಣಕ್ಕೆ ನಡೆದರೂ ಅದು ಜೀವ ವಿರೋಧಿಯಾಗಿರುತ್ತದೆ. ಆದರೆ, ಯುದ್ಧಕ್ಕೆ ಬದಲು ಶಾಂತಿ ಸ್ಥಾಪನೆ ಬಗ್ಗೆ ಚಿಂತಿಸಲು ಅಮೆರಿಕ ನೀಡಿದ ಸಲಹೆಯನ್ನು ಮೇಲ್ನೋಟಕ್ಕೆ ಒಪ್ಪಿಕೊಂಡ ಪಾಕಿಸ್ತಾನ, ಮತ್ತೆ ದಾಳಿ ನಡೆಸುವ ಮೂಲಕ ಶಾಂತಿ ಮಾತುಕತೆಗೆ ಧಕ್ಕೆ ತಂದಿದೆ. ಆದರೆ, ಪಾಕಿಸ್ತಾನದಲ್ಲಿ ಸಂಸತ್ ಮತ್ತು ಸೇನಾಡಳಿತದ ನಡುವೆ ಸಮನ್ವಯತೆ ಇಲ್ಲ ಅನಿಸುತ್ತದೆ. ಇದಕ್ಕೆ ಕೆಲ ದಶಕಗಳ ಹಿಂದೆ ಸೇನಾಧಿಕಾರಿಯಾಗಿದ್ದ ಪರ್ವೇಜ್ ಮುಶ್ರಫ್ ಪ್ರಧಾನಿಯಾದದ್ದು ಸಾಕ್ಷಿಯಾಗಿದೆ. ಅದಕ್ಕೂ ಹಿಂದೆ ಕೂಡ ಇಂತಹ ನಿದರ್ಶನಗಳಿವೆ. ಆಂತರಿಕ ವಾಗಿ ಆ ದೇಶದ ಬೆಳವಣಿಗೆಗಳಿಗೆ ಭಾರತ ಮೂಗು ತೂರಿಸುವುದಿಲ್ಲ. ಆದರೆ, ಪ್ರಸ್ತುತ ಕದನ ವಿರಾಮ ಉಲ್ಲಂಸಿರುವ ಪಾಕ್ ನಡೆ ಸಮರ್ಥನೀಯವಲ್ಲ.
ಸಂಘರ್ಷಕ್ಕೊಳಗಾದ ಎರಡೂ ದೇಶಗಳ ನಡುವೆ ಶಾಂತಿ ಮರುಸ್ಥಾಪನೆ ಯಾಗಬೇಕೆಂದರೆ ಉಭಯ ದೇಶ ಗಳೂ ಕೈಜೋಡಿಸಬೇಕು. ಅಲ್ಲದೆ, ಸೋಮ ವಾರ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಉನ್ನತ ಮಟ್ಟದ ಸಭೆ ನಡೆಯಲಿದೆ. ಅಲ್ಲಿ ಪಾಕಿಸ್ತಾನ ತನ್ನ ಬೇಡಿಕೆಗಳನ್ನು ಮಂಡಿಸಲು ಅವಕಾಶ ಇತ್ತು. ಆ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರ ಪಾಕ್‌ಗೆ ಸರಿ ಅನಿಸದಿದ್ದರೆ, ಬೇರೆ ಯೋಚನೆ ಮಾಡುವುದಕ್ಕೆ ಅದು ಸ್ವತಂತ್ರವಾಗಿತ್ತು. ಆದರೆ, ತಾಳ್ಮೆ ಕಳೆದುಕೊಂಡಂತೆ, ಅದು ಕದನ ವಿರಾಮ ಘೋಷಣೆಯ ಬೆನ್ನಲ್ಲೇ ಭಾರತದ ಮೇಲೆ ದಾಳಿ ನಡೆಸಲು ಯತ್ನಿಸಿದ್ದು ಉಚಿತವಲ್ಲ ಅಂತಲೇ ಹೇಳಬಹುದು. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವುದಕ್ಕೆ ವಿಶ್ವದ ಎಲ್ಲ ದೇಶಗಳೂ ಕೈಜೋಡಿಸಲೇಬೇಕು. ಹೀಗಿರುವಾಗ ಪಾಕಿಸ್ತಾನ ಅಂತಹ ವಿಚಾರದಲ್ಲಿ ಸೂಕ್ತವಾಗಿ ಸ್ಪಂದಿಸದಿರುವುದು ಸಹಜವಾಗಿ ಅಪಾರ್ಥಕ್ಕೆ ಕಾರಣವಾಗುತ್ತದೆ.
ಇಂತಹ ಸೂಕ್ಷ ಆ ದೇಶಕ್ಕೆ ಅರ್ಥವಾಗದಿದ್ದರೆ, ಅಲ್ಲಿ ಶಾಂತಿ ನೆಲೆಯಾಗುವುದು ಕನಸಿನ ಮಾತಿನಂತೆ ಆಗುತ್ತದೆ. ಸದ್ಯಕ್ಕೆ ಕದನ ವಿರಾಮ ಉಲ್ಲಂಘನೆ ನಂತರದ ದಾಳಿಯಲ್ಲೂ ಭಾರತದ ಸೇನೆ ಎದುರು ಅಸಹಾಯಕವಾಗಿದೆ ಅನಿಸುತ್ತಿದೆ. ಏಕೆಂದರೆ ಪಾಕ್, ಭಾರತದೊಂದಿಗೆ ಸಂಘರ್ಷ ಶಮನಕ್ಕಾಗಿ ಮಧ್ಯಸ್ಥಿಕೆ ವಹಿಸುವಂತೆ ಮತ್ತೆ ಅಮೆರಿಕ ದೇಶದ ಮೊರೆ ಹೋಗಿದೆ ಎನ್ನಲಾಗಿದೆ. ಇಂತಹ ದುಸ್ಥಿತಿಯನ್ನು ಅದು ಸ್ವಯಂಕೃತ ಅಪರಾಧದಿಂದ ತಂದಿಟ್ಟುಕೊಂಡಿದೆ ಎನ್ನಬಹುದು. ಭಾರತ ಉಗ್ರಗಾಮಿಗಳ ನೆಲೆಯನ್ನು ಗುರಿಯಾಗಿಸಿ ಆಪರೇಷನ್ ಸಿಂಧೂರ ನಡೆಸಿದೆ. ಉಗ್ರಗಾಮಿಗಳ ತಾಣ ಎಂಬುದಾಗಿ ಭಾರತ ಹೇಳುವ ಜಾಗಗಳಲ್ಲಿ, ಭಯೋತ್ಪಾದಕರು ಇರಲಿಲ್ಲ ಎಂಬುದು ಪಾಕ್ ಆಡಳಿತದ ಪ್ರತಿಪಾದನೆ. ಯುದ್ಧ ನಡೆಯುವುದರಿಂದ ಯಾವುದೇ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಒಂದರ್ಥದಲ್ಲಿ ‘ಗೆದ್ದವನು ಸೋತಂತೆ ಆಗುತ್ತಾನೆ; ಸೋತವನು ಸತ್ತಂತೆ ಆಗುತ್ತಾನೆ’. ಹೀಗಿದ್ದರೂ ಪಾಕ್ ಸಂಯಮ ಮೀರಿ ವರ್ತಿಸಿರುವುದು ವಿಪರ್ಯಾಸ. ಅಮೆರಿಕದ ಮಧ್ಯಸ್ಥಿಕೆಯನ್ನು ಪಾಕ್ ಕೂಡ ಗೌರವಿಸಬೇಕು. ಭಾರತಕ್ಕೆ ಈ ಮಾತು ಹೇಳುವ ಅಗತ್ಯ ಇಲ್ಲ. ಯುದ್ಧ ಯಾವುದೇ ಸಮಸ್ಯೆಗೆ ಶಾಶ್ವತ ಪರಿಹಾರ ಅಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
” ಯುದ್ಧ ನಡೆಯುವುದರಿಂದ ಯಾವುದೇ ದೇಶಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಒಂದರ್ಥದಲ್ಲಿ ‘ಗೆದ್ದವನು ಸೋತಂತೆ ಆಗುತ್ತಾನೆ; ಸೋತವನು ಸತ್ತಂತೆ ಆಗುತ್ತಾನೆ’. ಹೀಗಿದ್ದರೂ ಪಾಕ್ ಸಂಯಮ ಮೀರಿ ವರ್ತಿಸಿರುವುದು ವಿಪರ್ಯಾಸ. ಅಮೆರಿಕದ ಮಧ್ಯಸ್ಥಿಕೆಯನ್ನು ಪಾಕ್ ಕೂಡ ಗೌರವಿಸಬೇಕು.”