Mysore
30
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಮೈಕ್ರೊ ಫೈನಾನ್ಸ್ ಗಳ ಕಪಿಮುಷ್ಠಿಯಿಂದ ಜನರ ರಕ್ಷಣೆ ಅಗತ್ಯ

ಜೀವನಕ್ಕೆ ನಿತ್ಯ ದುಡಿಮೆಯೇ ಆಧಾರವಾಗಿರುವ ಬಡ ಕುಟುಂಬಗಳಿಗೆ ಪ್ರಮುಖವಾಗಿ ಅನಾರೋಗ್ಯ, ಮಕ್ಕಳ ಶಿಕ್ಷಣದ ವಿಚಾರದಲ್ಲಿ ಆರ್ಥಿಕ ಮುಗ್ಗಟ್ಟು ಬೃಹತ್ತಾಗಿ ಕಾಡುತ್ತದೆ. ಹಬ್ಬಗಳಲ್ಲಿಯೂ ಹೊಸ ಉಡುಗೆಗೆ, ವಿಶೇಷ ಅಡುಗೆಯ ಖರ್ಚಿಗಾಗಿ ಸಾಲ ಮಾಡಬೇಕು ಎಂಬಂತಹ ದುಸ್ಥಿತಿ ಆ ಕುಟುಂಬಗಳದ್ದು. ಇನ್ನು ಸಣ್ಣ ಹಿಡುವಳಿದಾರರು, ಕೃಷಿ ಕಾರ್ಮಿಕರು. . . ಹೀಗೆ ಬಹುತೇಕ ಶ್ರಮಿಕ ವರ್ಗಗಳ ಬದುಕಿನ ಹಾದಿ ಇದು. ಈ ಕುಟುಂಬಗಳಿಗೆ ದೊಡ್ಡ ಸಹಾಯ ಮಾಡುವ ಭರವಸೆಯೊಡನೆ ತಲೆ ಎತ್ತಿರುವ ಮೈಕ್ರೊ ಫೈನಾನ್ಸ್‌ಗಳು, ವಾರ, ಪಾಕ್ಷಿಕ, ಮಾಸಿಕ ಕಂತುಗಳಲ್ಲಿ ಮರು ಪಾವತಿಸಬೇಕು ಎಂಬ ಷರತ್ತುಗಳೊಡನೆ ಬಡವರಿಗೆ ಸಾವಿರ, ಲಕ್ಷಗಟ್ಟಲೇ ಸಾಲ ನೀಡುತ್ತಿವೆ.

ಸಾಲ ಕೊಡುವವರೆಗೆ ಮಾತ್ರ ಮೈಕ್ರೊ ಫೈನಾನ್ಸ್‌ಗಳು ಜನರಿಗೆ ಪ್ರಯೋಜನಕಾರಿಯಾಗಿ ಕಾಣುತ್ತವೆ. ನಂತರ ಬಡ್ಡಿ ದರ (ಶೇ. ೨೫ಕ್ಕೂ ಹೆಚ್ಚು? ), ಸಾಲ ವಸೂಲಿ ಪ್ರಕ್ರಿಯೆಗಳಲ್ಲಿ ಮಾನವೀಯತೆಗೆ ಜಾಗವೇ ಇರುವುದಿಲ್ಲ. ಹಳ್ಳಿಗಳಲ್ಲಿ ಮಹಿಳೆಯರೇ ಈ ಫೈನಾನ್ಸ್‌ಗಳ ಗುರಿ. ಕೂಲಿ- ನಾಲಿ ಮಾಡಿಕೊಂಡು ಜೀವನ ಮಾಡುವ ಕುಟುಂಬಗಳಿಗೆ ಫೈನಾನ್ಸ್ ಗಳು ಆಪದ್ಬಾಂಧವನಂತೆ ಕಾಣುವುದು ಸಹಜ. ಹಬ್ಬ, ಮದುವೆ, ಮನೆ ನಿರ್ಮಾಣ ಇಂತಹ ಸಂದರ್ಭಗಳಲ್ಲಿ ಬಹುತೇಕ ಬಡವರು ಫೈನಾನ್ಸ್‌ಗಳ ಮೊರೆ ಹೋಗುತ್ತಿದ್ದಾರೆ. ಸಾಲ ಪಡೆದವರು ಪ್ರತಿ ತಿಂಗಳು ಸರಿಯಾಗಿ ಕಂತಿನಲ್ಲಿ ಮರುಪಾವತಿ ಮಾಡುತ್ತಿದ್ದರೆ ಸಮಸ್ಯೆ ಇಲ್ಲ. ಉದಾಹರಣೆಗೆ ೩೦ ಕಂತುಗಳ ಪೈಕಿ ೨೦ ಕಂತುಗಳನ್ನು ಸಕಾಲಕ್ಕೆ ಪಾವತಿಸಿ, ೨೧ನೆಯದನ್ನು ತಪ್ಪಿಸಿದರೆ ಮುಗಿಯಿತು. ಬಡ್ಡಿ ದರ ಎಗ್ಗಿಲ್ಲದೆ ಏರುತ್ತದೆ.

ಫೈನಾನ್ಸ್‌ನವರು ಸಾಲ ವಸೂಲಿಗಾಗಿ ಗೂಂಡಾ ಗಳನ್ನು ಬಳಸುತ್ತಾರೆ ಎನ್ನಲಾಗಿದೆ. ಮಾನ- ಮರ್ಯಾದೆಯ ಪ್ರಶ್ನೆ ಎದುರಾದಾಗ ಗ್ರಾಮೀಣ ಪ್ರದೇಶದ ಜನರು ಊರು ತೊರೆಯುತ್ತಾರೆ. ಕೆಲವೆಡೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂಬ ಮಾಹಿತಿಯೂ ಇದೆ. ಇತ್ತೀಚೆಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮೈಕ್ರೊ ಫೈನಾನ್ಸ್ ನವರ ದೌರ್ಜನ್ಯಕ್ಕೆ ಹೆದರಿ ಅನೇಕ ಸಾಲಗಾರರು ಕುಟುಂಬ ಸಮೇತ ಊರನ್ನೇ ತೊರೆದಿದ್ದಾರೆ. ಹೆಚ್ಚು ದಾಖಲೆಗಳ ಅವಶ್ಯವಿಲ್ಲದೆ ಸುಲಭವಾಗಿ ಸಾಲ ದೊರೆಯುತ್ತದೆ ಎಂಬ ಕಾರಣಕ್ಕೆ ಸಾಕಷ್ಟು ಜನರು ಈ ಫೈನಾನ್ಸ್‌ಗಳ ಕಪಿಮುಷ್ಟಿಯಲ್ಲಿ ಸಿಲುಕುತ್ತಿದ್ದಾರೆ.

ಕೆಲ ಫೈನಾನ್ಸ್‌ಗಳು ಮಹಿಳಾ ಸಂಘಗಳನ್ನು ರಚಿಸಿ, ಅವುಗಳ ಮೂಲಕ ಸಾಲ ವಿತರಣೆ ಮಾಡುತ್ತವೆ. ಯಾರಾದರೊಬ್ಬರು ಸಾಲ ಮರು ಪಾವತಿ ಸದಿದ್ದರೆ ಇತರೆ ಸದಸ್ಯೆಯರು ಅದನ್ನು ವಸೂಲಿ ಮಾಡುವುದು ಕಡ್ಡಾಯವಾಗಿರುತ್ತದೆ. ಇದು ಸದಸ್ಯೆಯರ ನಡುವೆಯೇ ಮನಸ್ತಾಪಕ್ಕೂ ಅವಕಾಶ ಕಲ್ಪಿಸುತ್ತಿದೆ. ಹಲವು ಕುಟುಂಬಗಳಲ್ಲಿ ಪತಿ- ಪತ್ನಿ ನಡುವಿನ ವಿರಸಕ್ಕೂ ಕಾರಣವಾಗುತ್ತಿದೆ. ನಾಲ್ಕು ಜನರೊಂದಿಗೆ ಸಮಾನವಾಗಿ ಬದುಕಬೇಕು, ಹಬ್ಬಗಳನ್ನು ಆಚರಿಸಬೇಕು ಎಂಬ ಉದ್ದೇಶದಿಂದ ಈ ಫೈನಾನ್ಸ್‌ಗಳ ಮೊರೆ ಹೋಗುವ ಮಂದಿ, ಅದರ ಮುಂದಿನ ವರ್ಷದವರೆಗೆ ಮತ್ತೆ ಹಬ್ಬ ಮಾಡುವುದಕ್ಕೆ ಊರಿನಲ್ಲಿ ಉಳಿಯುವುದು ಕಷ್ಟ ಸಾಧ್ಯವಾಗಿದೆ.

ಈ ಮೈಕ್ರೊ ಫೈನಾನ್ಸ್‌ಗಳ ಹಾವಳಿಯನ್ನು ನಿಯಂತ್ರಿಸುವುದಕ್ಕೆ ರಾಜ್ಯ ಸರ್ಕಾರ ಅತಿ ಶೀಘ್ರವಾಗಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಸಾಲ ಪಡೆಯುವವರಿಗೆ ಫೈನಾನ್ಸ್‌ಗಳು ಸಾಲ ನೀಡುವಿಕೆ, ಮರುಪಾವತಿಸುವ ಸಂಬಂಧ ನಿಯಮಾವಳಿಯ ದೃಢೀಕರಿಸಿದ ಪ್ರತಿಗಳನ್ನು ನೀಡುವಂತಾಗಬೇಕು. ಅದು ಕನ್ನಡ ಭಾಷೆಯಲ್ಲಿಯೇ ಇರಬೇಕು. ಬಡ್ಡಿದರವನ್ನು ಸರ್ಕಾರವೇ ನಿಗದಿಪಡಿಸುವುದು ಸೂಕ್ತ. ಇವೆಲ್ಲಕ್ಕಿಂತ ಮುಖ್ಯವಾಗಿ ಈ ಫೈನಾನ್ಸ್‌ಗಳಿಂದ ಸಾಲ ಪಡೆಯದಿರುವಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಸೌಲಭ್ಯದ ನಿಯಮಾವಳಿಗಳನ್ನು ಸರಳೀಕರಣ ಮಾಡಬೇಕು. ಅನಗತ್ಯವಾದ ದಾಖಲೆಗಳು, ಭದ್ರತೆ ಕೇಳುವಂತಹ ನಿಯಮಗಳನ್ನು ಸಡಿಲಗೊಳಿಸಬೇಕು. ಆಗ ಜನರು ಈ ಮೈಕ್ರೊ ಫೈನಾನ್ಸ್‌ಗಳ ಮೊರೆ ಹೋಗುವುದನ್ನು ನಿಲ್ಲಿಸುತ್ತಾರೆ. ಸಾಮಾನ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರನ್ನು ಸೌಜನ್ಯದಿಂದ ಮಾತನಾಡಿಸುವವರೂ ಇರುವು ದಿಲ್ಲ ಎಂಬ ದೂರುಗಳಿವೆ. ಇನ್ನು ಸಾಲ ನೀಡುವುದಕ್ಕೆ ಹಿಂಜರಿಯುತ್ತಾರೆ. ಸರ್ಕಾರಿ ಯೋಜನೆಗಳಲ್ಲಿ ೧ ಲಕ್ಷ ರೂ. ಸಾಲ ನೀಡುವ ಅವಕಾಶ ಇದ್ದರೂ, ಅದನ್ನು ೨೫,೦೦೦ ಅಥವಾ ೫೦,೦೦೦ ರೂ. ಗಳಿಗೆ ಸೀಮಿತಗೊಳಿಸುತ್ತಾರೆ ಎಂಬ ದೂರುಗಳೂ ಇವೆ. ಸರ್ಕಾರಗಳು ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಜನಸ್ನೇಹಿಯಾಗಿಸಬೇಕು. ಬಹುಶಃ ಆಗ ಮಾತ್ರ ಗ್ರಾಮೀಣ ಪ್ರದೇಶದ ಜನರು ಮೈಕ್ರೊ ಫೈನಾನ್ಸ್‌ಗಳ ಸಹವಾಸದಿಂದ ದೂರವಾಗುತ್ತಾರೆ.

Tags: