ಬಿಹಾರ ವಿಧಾನಸಭೆ ಚುನಾವಣೆಯ ಫಲಿತಾಂಶ ಜೆಡಿಯು (ಸಂಯುಕ್ತ ಜನತಾದಳ) ನಾಯಕ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಚಾಣಾಕ್ಷ ರಾಜಕಾರಣಕ್ಕೆ ಕನ್ನಡಿಯಾಗಿದೆ.
ಮತ್ತೆ ಮುಖ್ಯಮಂತ್ರಿ ಗಾದಿ ಏರಲು ಸಿದ್ಧವಾಗಿರುವ ನಿತೀಶ್ ಬಿಹಾರದಲ್ಲಿ ಅತಿ ಹಿಂದುಳಿದ ಸಮುದಾಯಗಳ ಕೇರ್ ಟೇಕರ್ ಆಗಿ, ಮಹಿಳೆಯರ ಸ್ವಾವಲಂಬನೆ ಹಾದಿಯಲ್ಲಿ ಖಚಿತ ಮಾರ್ಗವಾಗಿ ಕೈಗೊಂಡ ನಿರ್ಧಾರಗಳು ಅವರ ರಾಜಕೀಯ ಯಶಸ್ಸಿಗೆ ನಿರೀಕ್ಷೆ ಮೀರಿ ಬೆಂಬಲ ನೀಡಿವೆ. ಇದಲ್ಲದೆ, ಭ್ರಷ್ಟಾಚಾರ ರಹಿತ ಆಡಳಿತ ಅವರ ಇಮೇಜನ್ನು ಸುಭದ್ರಗೊಳಿಸಿದೆ.
ನಿತೀಶ್ ಅವರು, ಯಾದವರು, ಕುರ್ಮಿ (ನಿತೀಶ್ ಕೂಡ ಕುರ್ಮಿ ಸಮುದಾಯ) ಮತ್ತಿತರ ಬಲಾಢ್ಯರಾಗಿರುವ ಹಿಂದುಳಿದ ಸಮುದಾಯಗಳನ್ನು ಹೊರತುಪಡಿಸಿದ ಅತಿ ಹಿಂದುಳಿದ ಸಮುದಾಯಗಳ ಹಿತರಕ್ಷಣೆಗೆ ಆದ್ಯತೆ ನೀಡಿದ್ದು, ಅವರ ರಾಜಕೀಯ ಜೀವನದ ಯಶಸ್ಸಿನ ಪ್ರಮುಖ ಘಟ್ಟ. ಲಾಲೂ ಪ್ರಸಾದ್ ಯಾದವ್ ಅವರಂತಹ ಘಟಾನುಘಟಿ ನಾಯಕರ ಸವಾಲಿನಲ್ಲೂ ತಮ್ಮದೇ ಆದ ರಾಜಕಾರಣ ಮಾಡುತ್ತಲೇ ಎತ್ತರಕ್ಕೆ ಬೆಳೆದ ನಿತೀಶ್ ಸಾಧನೆ ಸಾಮಾನ್ಯವಾದುದಲ್ಲ.
ಮುಖ್ಯಮಂತ್ರಿಯಾಗಿರುವ ೨೦ ವರ್ಷಗಳ ಅವಧಿಯಲ್ಲಿ ಬಿಹಾರದಲ್ಲಿ ಅಪಾರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವುದರಿಂದ ಅವರು ಸಫಲರಾಗಿದ್ದಾರೆ. ಹಿಂದುಳಿದ ಜಾತಿಗಳಿಗೆ ಇದ್ದ ಶೇ.೨೭.೧೨ ಮೀಸಲಾತಿ ಪ್ರಮಾಣವನ್ನು ವಿಭಜಿಸಿ, ಶೇ.೧೮ ಮೀಸಲಾತಿಯನ್ನು ಅತಿ ಹಿಂದುಳಿದ ಸಮುದಾಯಗಳಿಗೆ ಹಂಚಿದರು. ಎರಡು ವರ್ಷಗಳ ಹಿಂದೆ ಈ ಶೇ.೧೮ ಮೀಸಲಾತಿ ಪ್ರಮಾಣವನ್ನು ಶೇ.೨೫ಕ್ಕೆ ಹೆಚ್ಚಳ ಮಾಡಿದರು.
ಇದನ್ನು ಓದಿ: ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿ
ಪ್ರಸ್ತುತ ಚುನಾವಣೆಯ ಪೂರ್ವದಲ್ಲಿ ಮಹಿಳೆಯರಿಗೆ ೧೦,೦೦೦ ರೂ.ಗಳನ್ನು ಸ್ವಯಂ ಉದ್ಯೋಗದ ಹೆಸರಿನಲ್ಲಿ ಹಂಚಿಕೆ ಮಾಡಿದ್ದು, ಎನ್‌ಡಿಎ ಗೆಲುವಿನಲ್ಲಿ ದೊಡ್ಡ ಪಾತ್ರವನ್ನು ವಹಿಸಿದೆ. ಅವರ ಆಡಳಿತದಲ್ಲಿ ಸಾರಾಯಿ ನಿಷೇಧ, ವಿದ್ಯಾರ್ಥಿನಿಯರಿಗೆ ಸೈಕಲ್‌ಗಳ ವಿತರಣೆ ಮುಂತಾದವು ನಿತೀಶ್ ಅವರಿಗೆ ಮಹಿಳಾ ಮತಬ್ಯಾಂಕ್ ಸೃಷ್ಟಿಸಿವೆ. ಕಳೆದ ಚುನಾವಣೆಯಲ್ಲಿ ೨೮ ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದ ಎಲ್‌ಜೆಪಿ (ಈ ಬಾರಿಸ್ಪರ್ಧಿಸಿದ್ದ ೨೯ ಸ್ಥಾನಗಳಲ್ಲಿ ೧೯ರಲ್ಲಿ ಜಯ ಗಳಿಸಿದೆ) ಯನ್ನು ನಿತೀಶ್ ಎನ್‌ಡಿಎ ಜೊತೆಗೆ ಸೇರಿಸಿಕೊಂಡಿದ್ದು, ಅವರ ರಾಜಕೀಯ ಲೆಕ್ಕಾ ಚಾರವನ್ನು ಪಕ್ವಗೊಳಿಸಿತು.
ಇದು ಅತಿ ಹಿಂದುಳಿದ ಸಮುದಾಯಗಳ ಮತಗಳು ಬಿಜೆಪಿಯ ಅಭ್ಯರ್ಥಿಗಳತ್ತ ಹರಿಯುವುದಕ್ಕೂ ಸಹಾಯ ಮಾಡಿತು. ನಿತೀಶ್ ಅವರ ಆಡಳಿತದಲ್ಲಿ ಕೋಮುಗಲಭೆ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ ಎಂಬುದು ನಿತೀಶ್ ಅನುಯಾಯಿಗಳ ಸಮರ್ಥನೆಯಾಗಿದೆ. ಅಲ್ಲದೆ, ನಿತೀಶ್ ಅವರು ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡದಿರುವುದು ಅವರ ಮುಖ್ಯಮಂತ್ರಿ ಹಾದಿಯಲ್ಲಿ ಚಿಮ್ಮುಹಲಗೆ ಎನ್ನಬಹುದು. ಒಬ್ಬ ಪುತ್ರನಿದ್ದರೂ ಅವರನ್ನು ರಾಜಕೀಯ ಪಡಸಾಲೆಯಿಂದ ದೂರ ಇಟ್ಟಿದ್ದಾರೆ. ಉತ್ತರಾಧಿಕಾರಿಯ ಗುಂಗು ಇಲ್ಲದೆ ರಾಜಕಾರಣದಲ್ಲಿ ನಿರತವಾಗಿದ್ದಾರೆ. ಹೀಗಾಗಿ ಎನ್‌ಡಿಎ ಬಿಹಾರದಲ್ಲಿ ಅಭೂತಪೂರ್ವ ಗೆಲುವು ಸಾಽಸಿದೆ ಎಂದರೆ ಅತಿಶೋಯಕ್ತಿ ಅಲ್ಲ.
ಅತ್ತ ಮಹಾಘಟಬಂಧನಕ್ಕೆ ಯಾವ ಕಡೆಯಿಂದಲೂ ಅಧಿಕಾರಕ್ಕೇರುವ ದಾರಿಗಳೇ ಇರಲಿಲ್ಲ ಎನ್ನಬಹುದು. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಹೊರತಾಗಿ ಕಾಂಗ್ರೆಸ್ ಸೇರಿದಂತೆ ಮಹಾಘಟಬಂಧನ ಕೂಟದ ಯಾವ ಪಕ್ಷವೂ ನಿರೀಕ್ಷೆಯಷ್ಟು ಸ್ಥಾನಗಳನ್ನು ಗಳಿಸಲಿಲ್ಲ. ಹಿಂದಿನ ಚುನಾವಣೆಯಲ್ಲಿ ೭೫ ಸ್ಥಾನಗಳನ್ನು ಗೆದ್ದಿದ್ದ ಆರ್‌ಜೆಡಿ ಈ ಬಾರಿ ಕೇವಲ ೨೫ಕ್ಕೆ ಕುಸಿದಿದೆ. ಇತರೆ ಹಿಂದುಳಿದ ವರ್ಗಗಳ ೧೯ ಸ್ಥಾನಗಳಲ್ಲಿ ಟಿಕೆಟ್ ನೀಡಿದ್ದ ಯಾದವ್, ಈ ಬಾರಿ ೩೩ ಮಂದಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೂ ಯಶಸ್ವಿಯಾಗಲಿಲ್ಲ.
ಇದನ್ನು ಓದಿ: ನಿತೀಶ್ ಕುಮಾರ್‌ಗೆ ಬಿಹಾರದ ಸಾರಥ್ಯ? : ನ.20ರಂದು ಪ್ರಮಾಣ ವಚನ ಸ್ವೀಕಾರ
ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ಮಾಸಿಕ ೨,೫೦೦ ರೂ. ಉಚಿತವಾಗಿ ನೀಡುವ, ಮನೆಗೊಬ್ಬರಿಗೆ ಸರ್ಕಾರಿ ನೌಕರಿ ಒದಗಿಸುವ ಭರವಸೆಗಳು ಕೂಡ ಮಹಾಘಟಬಂಧನದ ಕೈ ಹಿಡಿಯಲಿಲ್ಲ. ಮಹಾಘಟಬಂಧನದಲ್ಲಿ ಮಿತ್ರ ಪಕ್ಷಗಳ ನಡುವೆ ಸ್ಥಾನಗಳ ಹಂಚಿಕೆ ಕೂಡ ಸಮರ್ಪಕವಾಗಿರಲಿಲ್ಲ. ಇದು ಪರೋಕ್ಷವಾಗಿ ಎನ್‌ಡಿಎಗೆ ಅದ್ಭುತವಾದ ಜಯ ಗಳಿಸಲು ಕೊಡುಗೆ ನೀಡಿತು. ಕಾಂಗ್ರೆಸ್ ಪಕ್ಷಕ್ಕೆ ೩೦ ವರ್ಷಗಳ ಹಿಂದೆ ಅಧಿಕಾರ ಕಳೆದುಕೊಂಡರೂ, ಜನರ ನಾಡಿ ಮಿಡಿತ ಅರಿತು, ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಂತಹ ನಾಯಕನೊಬ್ಬನನ್ನು ಬೆಳೆಸಲು ಸಾಧ್ಯವಾಗಿಲ್ಲ.
ಆದರೆ, ನಿತೀಶ್ ಕುಮಾರ್ ಅವರಿಗೆ ೭೪ ವರ್ಷ ವಯಸ್ಸಾಗಿದ್ದರೂ ಅವರ ರಾಜಕೀಯ ಚಾಣಾಕ್ಷತೆಗೆ ಮುಪ್ಪಡರಿಲ್ಲ. ಅವರ ರಾಜಕೀಯ ಬೌದ್ಧಿಕತೆ ಪ್ರಖರಗೊಳ್ಳುತ್ತಲೇ ಇದೆ ಎಂಬುದಕ್ಕೆ ಬಿಜೆಪಿ ಅವರ ಸಖ್ಯ ಕಳೆದುಕೊಳ್ಳಲು ಇಚ್ಛಿಸದಿರುವುದು, ಜೊತೆಗೆ ನೂತನ ಮುಖ್ಯಮಂತ್ರಿಯಾಗಿ ನಿತೀಶ್ ಅವರ ಹೆಸರನ್ನು ಘೋಷಿಸಿರುವುದು ನಿದರ್ಶನವಾಗಿದೆ.
” ನಿತೀಶ್ ಅವರ ಆಡಳಿತದಲ್ಲಿ ಕೋಮುಗಲಭೆ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದೆ ಎಂಬುದು ನಿತೀಶ್ ಅನುಯಾಯಿಗಳ ಸಮರ್ಥನೆಯಾಗಿದೆ. ಅಲ್ಲದೆ, ನಿತೀಶ್ ಅವರು ಕುಟುಂಬ ರಾಜಕಾರಣಕ್ಕೆ ಆಸ್ಪದ ನೀಡದಿರುವುದು ಅವರ ಮುಖ್ಯಮಂತ್ರಿ ಹಾದಿಯಲ್ಲಿ ಚಿಮ್ಮುಹಲಗೆ ಎನ್ನಬಹುದು.”





