ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಸುಭದ್ರತೆ ಬಗ್ಗೆ ಆಗಾಗ ವಿವಾದಗಳು ಸೃಷ್ಟಿಯಾಗುತ್ತಲೇ ಇವೆ. ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‌ಡೌನ್ ಕಟ್ಟಡಗಳ ಭಾಗಶಃ ಕುಸಿತ, ದುರಸ್ತಿ, ಪುನರ್ ನಿರ್ಮಾಣದ ಪರ- ವಿರುದ್ಧದ ವಿವಾದ ಬೂದಿಮುಚ್ಚಿದ ಕೆಂಡದಂತೆ ಇರುವುದರ ಬೆನ್ನಲ್ಲೇ ಇತ್ತೀಚೆಗೆ ಪಾರಂಪರಿಕವಾಗಿ ಗುರುತಿಸಿಕೊಂಡಿರುವ ಮಹಾರಾಣಿ ಕಲಾ ಕಾಲೇಜಿನ ಹಳೆಯ ಕಟ್ಟಡವನ್ನು ನೆಲಸಮ ಮಾಡುವಾಗ ಮೊದಲನೇ ಅಂತಸ್ತಿನ ಚಾವಣಿ ಕುಸಿದು ಕಾರ್ಮಿಕ ಸದ್ದಾಂ ಹುಸೇನ್ ಎಂಬವರು ಜೀವ ತೆತ್ತಿದ್ದಾರೆ. ಅದೃಷ್ಟವಶಾತ್ ಇನ್ನೂ ೧೪ ಮಂದಿ ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಾರಂಪರಿಕ ಕಟ್ಟಡಗಳ ದುರಸ್ತಿ ಅಥವಾ ಪುನರ್ ನಿರ್ಮಾಣದ ಸಂಗತಿ ಮುನ್ನೆಲೆಗೆ ಬಂದಾಗಲೆಲ್ಲ ಪರ – ವಿರುದ್ಧದ ವಿವಾದ ದೊಡ್ಡ ಮಟ್ಟದಲ್ಲೇ ಎದುರಾಗುತ್ತದೆ. ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿಯು, ಈ ಕಟ್ಟಡಗಳ ದುರಸ್ತಿ ಬಗ್ಗೆ ಮಾತ್ರ ಒಲವು ತೋರಿದರೆ, ಕೆಲ ಸಂಘ- ಸಂಸ್ಥೆಗಳು ಸಾರ್ವಜನಿಕರ ಜೀವಕ್ಕೆ ಎರವಾಗುವುದಾದರೆ ಅಂತಹ ಕಟ್ಟಡಗಳನ್ನು ನೆಲಸಮ ಮಾಡಿ ನೂತನವಾಗಿ ನಿರ್ಮಿಸಬೇಕು ಎಂಬುದಾಗಿ ಪ್ರತಿಪಾದಿಸಿವೆ. ಮಹಾನಗರಪಾಲಿಕೆ ಹಾಗೂ ರಾಜ್ಯ ಸರ್ಕಾರಕ್ಕೆ ಇದು ನುಂಗಲೂ ಆಗದ ಉಗುಳಲೂ ಆಗದ ಬಿಸಿ ತುಪ್ಪದಂತಾಗಿದೆ.
ಹಲವು ವರ್ಷಗಳ ಹಿಂದೆ ಅಲ್ಪ ಭಾಗ ಕುಸಿದು ನಾಲ್ವರು ಜೀವ ಕಳೆದುಕೊಳ್ಳಲು ಕಾರಣವಾಗಿರುವ ಲ್ಯಾನ್ಸ್‌ಡೌನ್ ಕಟ್ಟಡ ಹಾಗೂ ಭಾಗಶಃ ಕುಸಿದಿರುವ ದೇವರಾಜ ಮಾರುಕಟ್ಟೆಯನ್ನು ಪುನರ್ ನಿರ್ಮಿಸಲು ನಗರಪಾಲಿಕೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಪಾರಂಪರಿಕ ಕಟ್ಟಡಗಳ ರಕ್ಷಣಾ ಸಮಿತಿ ವಿರೋಧ ವ್ಯಕ್ತಪಡಿಸಿದೆ. ಆದರೆ, ಪಾರಂಪರಿಕ ಕಟ್ಟಡಗಳು ಶಿಥಿಲವಾಗಿದ್ದರೆ ದುರಸ್ತಿಗೆ ಮುಂದಾಗಬೇಕು. ಅದರ ಹೊರತಾಗಿ ಕೆಡವಿ ಪುನರ್ ನಿರ್ಮಾಣ ಮಾಡುವುದು ಕಾರ್ಯ ಸಾಧುವಲ್ಲ ಎಂಬುದು ಸಮಿತಿಯ ವಾದ.
ಮೈಸೂರಿನಲ್ಲಿ ಸುಮಾರು ೨೦೦ ಪಾರಂಪರಿಕ ಕಟ್ಟಡಗಳು ಇವೆ. ಆ ಪೈಕಿ ಅಂದಾಜು ೨೦ ಕಟ್ಟಡ ಗಳು ದುಸ್ಥಿತಿಯಲ್ಲಿವೆ ಎನ್ನಲಾಗಿದೆ. ನಗರಪಾಲಿಕೆ ಮತ್ತು ರಾಜ್ಯ ಸರ್ಕಾರ ಬಹಳ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಮಹಾರಾಣಿ ಕಾಲೇಜಿನಲ್ಲಿ ಈಗ ನಡೆದಿರುವ ದುರಂತ ಮರುಕಳಿಸಲು ಅವಕಾಶ ಆಗದಂತೆ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯೋ, ದುರಸ್ತಿಯೋ ಅಥವಾ ಮರು ನಿರ್ಮಾಣವನ್ನೋ ಕೈಗೊಳ್ಳುವ ನಿಟ್ಟಿನಲ್ಲಿ ಖಚಿತ ಹೆಜ್ಜೆಗಳನ್ನು ಇಡುವುದು ಅತ್ಯಗತ್ಯವಾಗಿದೆ. ಪಾರಂಪರಿಕ ಕಟ್ಟಡ ಗಳು ಪ್ರವಾಸಿಗರ ಆಕರ್ಷಣೆಯ ಭಾಗವಾಗಿವೆ. ಅಲ್ಲದೆ, ಮೈಸೂರಿನ ಹೆಮ್ಮೆಯೂ ಹೌದು. ಆದರೆ, ಅವುಗಳಿಂದ ಜನರ ಪ್ರಾಣಕ್ಕೆ ಅಪಾಯ ಉಂಟಾಗುವಂತಹ ಪರಿಸ್ಥಿತಿ ಸೃಷ್ಟಿಯಾಗಬಾರದು. ಅಂತಹದ್ದೇನಾದರೂ ಘಟಿಸಿದರೆ ಅದಕ್ಕೆ ಯಾರನ್ನೇ ಹೊಣೆ ಮಾಡಿದರೂ ಹೋದ ಜೀವಗಳು ಮರಳಿ ಬರುವುದಿಲ್ಲ. ಸಂತ್ರಸ್ತ ಕುಟುಂಬಗಳಿಗೆ ದೊಡ್ಡ ಮೊತ್ತದ ಪರಿಹಾರ ದೊರೆತರೂ ಮನೆಯ ಆಧಾರಸ್ತಂಭವಾಗಿದ್ದ ಜೀವದ ಜಾಗವನ್ನು ತುಂಬುವುದು ಸಾಧ್ಯವಿಲ್ಲ ಎಂಬ ಜಾಗ್ರತೆ ರಾಜ್ಯ ಸರ್ಕಾರ, ನಗರಪಾಲಿಕೆಗೆ ಇರಬೇಕು.
ಪಾರಂಪರಿಕ ಕಟ್ಟಡಗಳ ಅಳಿವು-ಉಳಿವು ಎಂಬ ತರ್ಕದ ನಡುವೆ ಅವು ಸಾರ್ವ ಜನಿಕ ಜೀವನದಲ್ಲಿ ಎಷ್ಟು ಹಾಸು ಹೊಕ್ಕಾಗಿವೆ ಎಂಬುದನ್ನೂ ಮನಗಾಣಬೇಕು. ಉದಾಹರಣೆಗೆ ಲ್ಯಾನ್ಸ್‌ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡಗಳು ನೂರಾರು ಜನರ ಬದುಕಿಗೆ ಸೂರು ಕಲ್ಪಿಸಿವೆ. ಅಂತಹವು ಶಿಥಿಲವಾಗಿದ್ದು, ಯಾವುದೇ ಗಳಿಗೆಯಲ್ಲಿ ಕುಸಿದುಬಿದ್ದರೆ ಬಹುತೇಕ ಅಪಾಯ ಕಟ್ಟಿಟ್ಟಬುತ್ತಿ. ಕೆಲ ಕಟ್ಟಡಗಳು ರಸ್ತೆ ಮಗ್ಗುಲಿನಲ್ಲಿವೆ. ಅವು ಕುಸಿದರೂ ಕಷ್ಟವೇ. ಹಾಗಾಗಿ ಪಾರಂಪರಿಕ ಕಟ್ಟಡಗಳನ್ನು ಕೇವಲ ಸಂರಕ್ಷಿಸಿದರೆ ಸಾಲದು. ಅವುಗಳ ದುರಸ್ತಿ ಅಥವಾ ಪುನರ್ ನಿರ್ಮಾಣವನ್ನು ಜನಾಭಿಪ್ರಾಯಕ್ಕೆ ಪೂರಕವಾಗಿ ಕೈಗೊಳ್ಳುವುದು ನಗರಪಾಲಿಕೆ ಹಾಗೂ ಸರ್ಕಾರದ ಆದ್ಯತೆಯಾಗಬೇಕು. ಆದರೆ, ಯಾವುದೇ ನಿರ್ಣಯ ಕೈಗೊಂಡರೂ ಅದರಲ್ಲಿ ರಾಜಕೀಯ, ಲಾಭ, ಸ್ವಾರ್ಥದ ವಾದಗಳಿಗೆ ಮನ್ನಣೆ ನೀಡಬಾರದು. ಇಲ್ಲಿ ಜನರ ಜೀವ-ಜೀವನ ಮುಖ್ಯವಾಗುತ್ತದೆ. ಉಳಿದೆಲ್ಲದರ ಬಗ್ಗೆ ನಂತರ ಆಲೋಚನೆ ಮಾಡಲು ಅವಕಾಶ ಇರುತ್ತದೆ. ಹಾಗಾಗಿ ಆಡಳಿತ ಪಕ್ಷ ಮತ್ತು ಪಾಲಿಕೆ ಅತ್ಯಂತ ಗಂಭೀರವಾಗಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ಸುವ್ಯವಸ್ಥೆ ಕುರಿತು ಅತಿ ಶೀಘ್ರದಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಲಿ.