Mysore
15
clear sky

Social Media

ಶನಿವಾರ, 24 ಜನವರಿ 2026
Light
Dark

ಕರೂರು ಕಾಲ್ತುಳಿತ: ದುರಂತಕ್ಕೆ ಹೊಣೆ ಯಾರು?

karuru tamil actor vijay

ತಮಿಳುನಾಡಿನ ಕರೂರಿನಲ್ಲಿ ಘನಘೋರ ಕಾಲ್ತುಳಿತ ದುರಂತ ಸಂಭವಿಸಿದೆ. ಅಮಾಯಕರ ಜೀವಗಳು ತರಗೆಲೆಯಂತೆ ಉದುರಿ ಹೋಗಿವೆ. ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಅವರು ನಡೆಸಿದ ರ‍್ಯಾಲಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ೪೦ ಮಂದಿ ಮೃತಪಟ್ಟಿದ್ದಾರೆ. ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಪೂರ್ವ ತಯಾರಿ ನಡೆಸುತ್ತಿರುವ ವಿಜಯ್ ಅವರು ರಾಜ್ಯಾದ್ಯಂತ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕರೂರಿನಲ್ಲಿ ರ‍್ಯಾಲಿ ಆಯೋಜಿಸಲಾಗಿತ್ತು.

ನಿರೀಕ್ಷೆ ಮೀರಿ ಸೇರಿದ್ದ ಜನಸಾಗರ ಹಾಗೂ ವಿಜಯ್ ನಿಗದಿತ ಸಮಯಕ್ಕಿಂತ ೬ ತಾಸು ತಡವಾಗಿ ಆಗಮಿಸಿದ್ದು, ಈ ಸಂದರ್ಭದಲ್ಲಿ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರು, ಅಭಿಮಾನಿಗಳು ಮುಗಿಬಿದ್ದ ಕಾರಣ ಈ ದುರಂತ ಸಂಭವಿಸಿದೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ರಾಜಕೀಯ ಮೇಲಾಟಗಳಿಗೆ ಅವಕಾಶ ಕಲ್ಪಿಸಬಾರದು. ತಮಿಳುನಾಡು ಸರ್ಕಾರ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ೧೦ ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದರೆ, ವಿಜಯ್ ಕೂಡ ತಲಾ ೨೦ ಲಕ್ಷ ರೂ. ಪರಿಹಾರ ನೀಡಲು ಮುಂದಾಗಿದ್ದಾರೆ. ಇಲ್ಲಿ ಪರಿಹಾರದ ಮೊತ್ತಕ್ಕೆ ಮನ್ನಣೆ ಸಾಧ್ಯವಿಲ್ಲ. ಕಾಲ್ತುಳಿತ ಪ್ರಕರಣದ ನಿಜವಾದ ಕಾರಣ ಕುರಿತು ತನಿಖೆ ಅಗತ್ಯ. ಅದಕ್ಕಾಗಿ ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಶನ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿರುವುದು ಸಮಯೋಚಿತವಾಗಿದೆ.

ಇದನ್ನು ಓದಿ : ನಟ ವಿಜಯ್‌ ರ‍್ಯಾಲಿ ವೇಳೆ ಕಾಲ್ತುಳಿತ ದುರಂತ : ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ

ತಮಿಳುನಾಡಿನಲ್ಲಿ ವಿಜಯ್ ಅವರ ರಾಜಕೀಯ ಪ್ರವೇಶ ಬಿರುಗಾಳಿಯನ್ನೇ ಎಬ್ಬಿಸಿದೆ. ಆಡಳಿತಾರೂಢ ಡಿಎಂಕೆ, ವಿರೋಧಪಕ್ಷ ಎಐಎಡಿಎಂಕೆ ನಾಯಕರ ರಾಜಕೀಯ ಆಶಯಗಳಿಗೆ ವಿಜಯ್ ಅಡ್ಡಿಯಾಗುವ ಸಾಧ್ಯತೆ ಇದೆ ಎಂಬುದು ಸ್ಥಳೀಯ ರಾಜಕೀಯಾಸಕ್ತರ ಅಭಿಪ್ರಾಯವೂ ಆಗಿದೆ. ಇಂತಹ ಸನ್ನಿವೇಶದಲ್ಲಿ ಈ ಕಾಲ್ತುಳಿತ ಪ್ರಕರಣವು ವಿಜಯ್ ಅವರ ರಾಜಕೀಯ ಪ್ರಗತಿಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಬಹು ಚರ್ಚಿತವಾಗಿದೆ.

ರಾಜಕೀಯ ವಿಚಾರಗಳು ಒತ್ತಟ್ಟಿಗಿರಲಿ. ಆದರೆ, ಜನರಿಗೆ ತಿಳಿವಳಿಕೆ ಮೂಡುವುದು ಹೇಗೆ? ಕಳೆದ ಜೂನ್ ೪ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋಜತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ೧೧ ಮಂದಿ ಸಾವಿಗೀಡಾಗಿದ್ದರು. ಇದು ರಾಜಕೀಯ ಕೆಸರೆರಚಾಟಕ್ಕೆ ದಾರಿಯಾಯಿತು. ರಾಜ್ಯ ಸರ್ಕಾರ ಮೃತರ ೧ಸಕುಟುಂಬಗಳಿಗೆ ಪರಿಹಾರ ನೀಡಿತು. ನಿಜವಾಗಿ ಸಾರ್ವಜನಿಕರು, ಅಭಿಮಾನಿಗಳು ಕೊಂಚ ಯೋಚಿಸಿದ್ದರೆ ಬಹುಶಃ ಇಂತಹ ದುರಂತ ಸಂಭವಿಸುತ್ತಿರಲಿಲ್ಲ. ಇದೊಂದೇ ಅಲ್ಲ, ಮೇ ೩ರಂದು ಉತ್ತರ ಗೋವಾದ ಶಿರ್ಗೋ ಗ್ರಾಮದ ದೇವಸ್ಥಾನದ ಉತ್ಸವದಲ್ಲಿ, ಫೆ.೧೮ರಂದು ಪ್ರಯಾಗ್ ರಾಜ್ ಕುಂಭಮೇಳಕ್ಕೆ ಹೋಗಲು ಹೊಸದಿಲ್ಲಿಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಅಪಾರ ಸಂಖ್ಯೆಯಲ್ಲಿ ಸೇರಿದ್ದ ವೇಳೆಯಲ್ಲಿ, ಜ.೨೯ರಂದು ಮಹಾಕುಂಭ ಮೇಳದಲ್ಲಿ ಅಮೃತ ಸ್ನಾನದ ವೇಳೆಯಲ್ಲಿ, ಜ.೮ರಂದು ತಿರುಮಲ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತ ಘಟನೆಗಳಲ್ಲಿ ನಡೆದ ಸಾವುಗಳನ್ನು ತಪ್ಪಿಸಬಹುದಿತ್ತು ಅನಿಸುತ್ತದೆ.

ಸ್ಥಳೀಯ ಸರ್ಕಾರಗಳು, ಪೊಲೀಸರು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಸ್ಥೆಗಳು ಭದ್ರತೆ ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸುವುದು ಸರಿ. ಏಕೆಂದರೆಯಾವುದೇ ಸರ್ಕಾರಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ದೂರದೃಷ್ಟಿ ಇರಬೇಕು. ಅದಕ್ಕೆ ತಕ್ಕಂತೆ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡಬೇಕು. ಕರೂರು ಘಟನೆಯಲ್ಲಿ ವಿಜಯ್ ಮತ್ತು ಅವರ ಪಕ್ಷದವರು ಕೂಡ ಪೊಲೀಸರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದಾರೆ. ಕಾರ್ಯಕ್ರಮದಲ್ಲಿ ೧೦,೦೦೦ ಮಂದಿ ಸೇರುತ್ತಾರೆ ಎಂದು ಅಂದಾಜಿಸಿದ್ದರು. ಅದಕ್ಕೆ ತಕ್ಕಂತೆ ಪೊಲೀಸರು ಭದ್ರತೆ ಕಲ್ಪಿಸಿದ್ದರು ಎನ್ನಲಾಗಿದೆ. ಆದರೆ, ವಿಜಯ್ ಅವರ ನಿರೀಕ್ಷೆ ಮೀರಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು ಎಂಬುದು ಸಾಬೀತಾಗಿದೆ.

ವಾಸ್ತವವಾಗಿ ಸಮಾವೇಶ, ರ‍್ಯಾಲಿಗಳನ್ನು ಆಯೋಜಿಸುವ ರಾಜಕಾರಣಿಗಳು, ನಾಯಕರು ಮತ್ತು ಅವರ ಪಕ್ಷದ ಕಾರ್ಯಕರ್ತರಿಗೂ ಇಂತಹ ಸಂಭವನೀಯ ಘಟನೆಗಳ ಬಗ್ಗೆ ಎಚ್ಚರಿಕೆ ಇರಬೇಕು. ಆದರೆ ಸಾರ್ವಜನಿಕರು ಕೂಡ ಇಂತಹ ಸಂದರ್ಭಗಳಲ್ಲಿ ಜವಾಬ್ದಾರಿಯುತವಾಗಿ ಯೋಚಿಸಬೇಕಾಗುತ್ತದೆ. ಏಕೆಂದರೆ ಇಂತಹ ಸಂದರ್ಭಗಳಲ್ಲಿ ಜನರ ಪ್ರಾಣಕ್ಕೆ ಸಂಚಕಾರ ಬರುವುದೇ ಹೊರತು, ಯಾವುದೇ ಜನಪ್ರತಿನಿಧಿಗಳಿಗೆ ಅಥವಾ ನಾಯಕರಿಗೆ ಅಲ್ಲ. ಹಾಗಾಗಿ ಈ ಬಗ್ಗೆ ಜನರೇ ಯೋಚಿಸಬೇಕು. ಕ್ರಿಕೆಟ್ ಪ್ರೀತಿಯಾಗಲಿ, ನಟ, ನಾಯಕರ ಮೇಲಿನ ಅಭಿಮಾನವಾಗಲಿ ನಿಯಂತ್ರಣದಲ್ಲಿರಬೇಕು. ಪ್ರಾಣವನ್ನು ಪಣವಾಗಿಟ್ಟು ಅವರನ್ನು ನೋಡುವ, ಮಾತನಾಡಿಸುವ ದುಸ್ಸಾಹಸಕ್ಕೆ ಮುಂದಾಗಬಾರದು.

ಮುಖ್ಯವಾಗಿ ಅಂಧಾಭಿಮಾನ ಸಲ್ಲದು. ಪ್ರತಿಕ್ಷಣವೂ ತಮ್ಮನ್ನೇ ನಂಬಿರುವ ಅಥವಾ ಪ್ರೀತಿಸುವ ಜೀವಗಳು ಇರುವ ಕುಟುಂಬಗಳ ಬಗ್ಗೆ ಹೃದಯ ತುಡಿಯಬೇಕು. ಹಾಗಾದಾಗ ಇಂತಹ ದುರಂತಗಳು ತಪ್ಪಬಹುದು; ಹಾಗಾಗಬೇಕು. ಇನ್ನಾದರೂ ಸರ್ಕಾರ ಗಳು, ರಾಜಕೀಯ ಪಕ್ಷಗಳು ಇಂತಹ ರ‍್ಯಾಲಿ ಅಥವಾ ಸಮಾವೇಶಗಳನ್ನು ಆಯೋಜಿಸು ವಾಗ ಜನರ ಭದ್ರತೆಯನ್ನು ಕುರಿತು ಯೋಚಿಸುವುದು ಅತ್ಯಗತ್ಯ.

” ಸ್ಥಳೀಯ ಸರ್ಕಾರಗಳು, ಪೊಲೀಸರು ಅಥವಾ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಸ್ಥೆಗಳು ಭದ್ರತೆ ಒದಗಿಸುವಲ್ಲಿ ವಿಫಲವಾಗಿವೆ ಎಂದು ಆರೋಪಿಸುವುದು ಸರಿ. ಏಕೆಂದರೆ ಯಾವುದೇ ಸರ್ಕಾರಕ್ಕೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವಾಗ ದೂರದೃಷ್ಟಿ ಇರಬೇಕು. ಅದಕ್ಕೆ ತಕ್ಕಂತೆ ಭದ್ರತೆ ಒದಗಿಸಲು ಪೊಲೀಸರಿಗೆ ಸೂಚನೆ ನೀಡಬೇಕು.”

Tags:
error: Content is protected !!