Mysore
21
mist

Social Media

ಭಾನುವಾರ, 21 ಡಿಸೆಂಬರ್ 2025
Light
Dark

ಕಸಾಪಗೆ ಆಡಳಿತಾಧಿಕಾರಿ; ಕನ್ನಡಿಗರ ಪಾಲಿಗೆ ದುರಂತವೇ ಸರಿ

ಆಡಳಿತಾಧಿಕಾರಿ ನೇತೃತ್ವದಲ್ಲಿ ಮಹೇಶ್ ಜೋಶಿ ಅಕ್ರಮಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯುವಂತಾಗಲಿ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ಅವರ ವಿರುದ್ಧ ಗುರುತರ ಭ್ರಷ್ಟಾಚಾರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಇತಿಹಾಸದಲ್ಲಿ ಇದು ಎರಡನೇ ಬಾರಿಗೆ ಮರುಕಳಿಸಿದೆ. ೩೦ ವರ್ಷಗಳ ಹಿಂದೆ ಹಂಪ ನಾಗರಾಜಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲೂ ಸರ್ಕಾರ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು.

ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ೧೯೧೫ರಲ್ಲಿ ಆರಂಭವಾದ ಕಸಾಪ ಈಗ ನೂರಾ ಹತ್ತು ವರ್ಷಗಳನ್ನು ದಾಟುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯೇತರ ಕಾರಣಗಳಿಗೆ ಅಂದರೆ ಹಣದ ದುರುಪಯೋಗ ಹಾಗೂ ಅಧಿಕಾರದ ದುರ್ಬಳಕೆಯಿಂದ ಸುದ್ದಿಯಲ್ಲಿತ್ತು. ಪ್ರಾಯಶಃ ಹಲವು ದಶಕಗಳ ನಂತರ ಕಸಾಪದ ಅಧ್ಯಕ್ಷರೊಬ್ಬರ ಮೇಲೆ ಗುರುತರ ಆರೋಪಗಳು ಕೇಳಿ ಬಂದಿದೆ. ಕನ್ನಡಿಗರ ಅಸ್ಮಿತೆಯಂತಿರುವ ಕಸಾಪದ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ಅವರ ಏಕಪಕ್ಷೀಯ ನಿರ್ಣಯ, ತಮ್ಮವರನ್ನೇ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರತಿಷ್ಠಾಪಿಸಲು ಹಾಲಿ ಇರುವ ಬೈಲಾಗೆ ತಿದ್ದುಪಡಿ ಮಾಡಲು ಮುಂದಾಗಿದ್ದು, ತಾವು ನಂಬಿರುವ ಸಿದ್ಧಾಂತವನ್ನು ಬಲವಂತವಾಗಿ ಪ್ರತಿಪಾದಿಸಲು ಮುಂದಾಗಿದ್ದೇ ಸೈದ್ಧಾಂತಿಕ ಸಂಘರ್ಷಕ್ಕೆ ಮುನ್ನುಡಿ ಬರೆಯಿತು. ವಾಸ್ತವವಾಗಿ ಈವರೆಗೂ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಯಾರೊಬ್ಬರೂ ತಮ್ಮ ಸಿದ್ಧಾಂತಗಳು ಏನೇ ಇದ್ದರೂ ಅದನ್ನು ಎಂದಿಗೂ ಅಸಾಪದಲ್ಲಿ ಅನುಷ್ಠಾನ ಮಾಡುವಂತಹ ಕೆಲಸಕ್ಕೆ ಕೈ ಹಾಕಿರಲಿಲ್ಲ ಎಂಬುದನ್ನು ಗಮನರ್ಹ ವಾದುದು.

ಆದರೆ ಜೋಶಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಇಡೀ ಸಂಸ್ಥೆಯನ್ನೇ ತಮ್ಮ ಕುಟುಂಬದ ಆಸ್ತಿ ಎಂಬಂತೆ ಭಾವಿಸಿ ಕಬ್ಜಾ ಮಾಡಿಕೊಳ್ಳಲು ಮುಂದಾಗಿದ್ದರು ಎಂಬ ಆರೋಪವಿದೆ. ಕಸಾಪದಲ್ಲಿ ಹಣಕಾಸಿನ ಅವ್ಯವಹಾರ, ಅಧಿಕಾರ ದುರ್ಬಳಕೆಯ ಆರೋಪಗಳ ವಿಚಾರಣೆಗೆ ಸಂಬಂಧಿಸಿದಂತೆ ಸಹಕಾರ ಇಲಾಖೆ ಕಳೆದ ಜುಲೈನಲ್ಲಿ ಆದೇಶ ಹೊರಡಿಸಿ ವಿಚಾರಣಾಧಿಕಾರಿಯನ್ನು ನೇಮಕ ಮಾಡಿತ್ತು. ವಿಚಾರಣೆಗೆ ಸಂಬಂಧಿಸಿದಂತೆ ನಿಗದಿತ ಕಾಲಾವಧಿಯಲ್ಲಿ ಹಾಜರಾಗದಿರುವುದು, ಅಗತ್ಯ ದಾಖಲಾತಿಗಳನ್ನು ಒದಗಿಸದಿರುವ ಕಾರಣ ನೀಡಿ ಆಡಳಿತಾಧಿಕಾರಿಯನ್ನು ನೇಮಿಸುವಂತೆ ಸಹಕಾರ ಇಲಾಖೆ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಜೋಶಿಯವರ ಸರ್ವಾಧಿಕಾರ, ಬೈಲಾತಿದ್ದು ಪಡಿಯ ವಿಚಾರ, ಪರಿಷತ್ತಿನ ಹಣಕಾಸಿನ ವಿಚಾರದಲ್ಲಿ ಅವ್ಯವಹಾರ ಹಾಗೂ ಮಹೇಶ್ ಜೋಶಿಯನ್ನು ಅಧ್ಯಕ್ಷ ಸ್ಥಾನದಿಂದ ಅಮಾನತು ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತನ್ನು ಉಳಿಸಿ ಎಂದು ಆಗ್ರಹಿಸಿ ರಾಜ್ಯದ ಎಲ್ಲ ಸಮಾನ ಮನಸ್ಕರು ಸಮಾವೇಶವನ್ನು ನಡೆಸಿದ್ದರು. ಜೋಷಿ ಅವರ ವಿರುದ್ಧ ಮಾತನಾಡಿದರೆ, ಮಾತನಾಡಿದವರ ಸದಸ್ಯತ್ವವನ್ನು ಅಮಾ ನತಿನಲ್ಲಿಟ್ಟ ಹಲವು ಉದಾಹರಣೆಗಳು ಇವೆ. ಡಾ.ವಸುಂಧರಾ ಭೂಪತಿ ಅವರ ಆಜೀವ ಸದಸ್ಯತ್ವವನ್ನು ಅಮಾನತುಗೊಳಿ ಸಲಾಗಿತ್ತು. ಅದೇ ರೀತಿ ಬರಹಗಾರರಾದ ಜಾಣಗೆರೆ ವೆಂಕಟರರಾಮಯ್ಯ ಅವರ ಕಸಾಪ ಸದಸ್ಯತ್ವವನ್ನು ಅಮಾನತುಗೊಳಿಸ ಲಾಗಿತ್ತು. ಇದರ ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತು ಯಾವುದೇ ಸಭೆಗಳನ್ನು ನಡೆಸಿದರೂ, ಸದಸ್ಯರಲ್ಲದವರು ಬರುವಂತಿಲ್ಲ ಎಂದು ಆದೇಶಿಸಲಾಗಿತ್ತು. ಅದರಲ್ಲೂ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿದ್ದಾರೂ, ಸಂವಿಧಾನ ಬಾಹಿರವಾಗಿ ಅವರ ಸದಸ್ಯತ್ವವನ್ನು ಕೈಬಿಡಲಾಗುತ್ತಿತ್ತು. ಕಳೆದ ವರ್ಷ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಊಟಕ್ಕೆ ಮಾಂಸಹಾರವೂ ಕೊಡಬೇಕು ಎಂದು ಒಂದಷ್ಟು ಸಮಾನ ಮನಸ್ಕರು ಒತ್ತಾಯ ಮಾಡಿದ್ದರು. ಇದಕ್ಕೆ ಕಾರಣ ಸಮ್ಮೇಳನದಲ್ಲಿ ಪುಸ್ತಕ ಮತ್ತು ವಾಣಿಜ್ಯ ಮಳಿಗೆಗಳನ್ನು ಕಾಯ್ದಿರಿಸಿದವರಿಗೆ ಮಾಂಸಾಹಾರ, ಮದ್ಯ ಮತ್ತು ತಂಬಾಕು ಮಾರಾಟವನ್ನು ನಿಷೇಧಿಸಲಾಗಿದೆ ಎಂಬ ನಿಯಮವನ್ನು ಪರಿಷತ್ತು ಹೊರಡಿಸಿತ್ತು. ಮದ್ಯ ಮತ್ತು ತಂಬಾಕು ನಿಷೇಧಿಸುವುದನ್ನು ಸ್ವಾಗತಿಸಿದ ಹಲವಾರು ಜನರು, ಮಾಂಸಾಹಾರ ನಿಷೇಧವನ್ನು ವಿರೋಧಿಸಿದರು.

ಮೊದಲು ಸಮ್ಮೇಳನದ ಅಧ್ಯಕ್ಷರ ನೇಮಕದಲ್ಲಿ ಭಾರೀ ಗೊಂದಲ ಸೃಷ್ಟಿಸಿದ್ದ ಪರಿಷತ್ತಿನ ಅಧ್ಯಕ್ಷರು, ನಂತರ ಊಟದ ವಿಚಾರದಲ್ಲಿ ಸಾಕಷ್ಟು ವಿವಾದಕ್ಕೀಡಾದರು. ಆಡಳಿತಾಧಿಕಾರಿ ನೇತೃತ್ವದಲ್ಲಿ ಮಹೇಶ್ ಜೋಶಿ ಅವರ ಅಕ್ರಮಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಪರಿಷತ್ತಿಗೆ ಶುದ್ಧ ಮನಸ್ಸಿನ ಸಾಹಿತಿ ಗೆದ್ದು ಬರುವಂತಾಗಲಿ. ಆಗಲೇ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದಂತಾಗುತ್ತದೆ ಎಂಬುದು ಸಾಹಿತಿಗಳ ಆಗ್ರಹ. ಪ್ರಗತಿಪರ ಚಟುವಟಿಕೆಗಳಿಗೆ ಸುದ್ದಿಯಾಗಿರಬೇಕಿದ್ದ ಕಸಾಪ ವಿವಾದದಿಂದ ಸುದ್ದಿಯಾಗಿರುವುದು ಕನ್ನಡಿಗರ ದುರಂತವೇ ಸರಿ.

” ಮೊದಲು ಸಮ್ಮೇಳನದ ಅಧ್ಯಕ್ಷರ ನೇಮಕದಲ್ಲಿ ಭಾರೀಗೊಂದಲ ಸೃಷ್ಟಿಸಿದ್ದ ಪರಿಷತ್ತಿನ ಅಧ್ಯಕ್ಷರು, ನಂತರ ಊಟದ ವಿಚಾರದಲ್ಲಿ ಸಾಕಷ್ಟು ವಿವಾದಕ್ಕೀಡಾದರು. ಆಡಳಿತಾಧಿಕಾರಿ ನೇತೃತ್ವದಲ್ಲಿ ಮಹೇಶ್ ಜೋಶಿ ಅವರ ಅಕ್ರಮಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಪರಿಷತ್ತಿಗೆ ಶುದ್ಧ ಮನಸ್ಸಿನ ಸಾಹಿತಿ ಗೆದ್ದು ಬರುವಂತಾಗಲಿ. ಆಗಲೇ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದಂತಾಗುತ್ತದೆ ಎಂಬುದು ಸಾಹಿತಿಗಳ ಆಗ್ರಹ”

Tags:
error: Content is protected !!