Mysore
18
overcast clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಒಳ ಮೀಸಲಾತಿ: ಅತಿ ಸೂಕ್ಷ್ಮ ಜಾತಿಗಳನ್ನೂ ತಲುಪುವುದು ಅಗತ್ಯ 

Internal reservation

ಪರಿಶಿಷ್ಟ ಜಾತಿಯೊಳಗೆ ಇರುವ ೧೦೧ ಸಮುದಾಯಗಳಿಗೆ ಒಳ ಮೀಸಲಾತಿ ಕಲ್ಪಿಸಬೇಕು ಎಂಬ ಬಹು ವರ್ಷಗಳ ಬೇಡಿಕೆಯನ್ನು ರಾಜ್ಯ ಸರ್ಕಾರ ಈಡೇರಿಸಿದೆ. ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್  ಆಯೋಗ ಸಲ್ಲಿಸಿರುವ ವರದಿಯಲ್ಲಿ ಪ್ರಸ್ತಾಪಿತವಾಗಿರುವ ಜಾತಿವಾರು ವರ್ಗೀಕರಣವನ್ನು ತುಸು ಪರಿಷ್ಕರಿಸಿ ಜಾರಿಗೊಳಿಸಲು ನಿರ್ಧರಿಸುವ ಮೂಲಕ ಹೊಸ ಸೂತ್ರವನ್ನು ಸರ್ಕಾರ ಹೆಣೆದಿದೆ.

೧೦೧ ಪರಿಶಿಷ್ಟ ಜಾತಿಗಳನ್ನು ನಾಗಮೋಹನ ದಾಸ್ ಆಯೋಗ ಐದು ಗುಂಪುಗಳಾಗಿ ವಿಂಗಡಿಸಿ ನಿಗದಿತ ಶೇ.೧೭ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿತ್ತು. ಆದರೆ, ಸರ್ಕಾರ ಮೂರು ಗುಂಪು ಗಳಾಗಿ ಪರಿಷ್ಕರಿಸಿದೆ.

ಎಡಗೈ, ಬಲಗೈ ಸಂಬಂಧಿತ ಜಾತಿಗಳಿಗೆ ತಲಾ ಶೇ.೬, ಕೊರಚ, ಕೊರಮ, ಬೋವಿ, ಲಂಬಾಣಿ ಜಾತಿಗಳನ್ನು ಒಳ ಗೊಂಡ ಸ್ಪೃಶ್ಯ ಗುಂಪುಗಳಿಗೆ ಒಟ್ಟಾರೆ ಶೇ.೫ ಮೀಸಲಾತಿ ಹಂಚಿಕೆ ಮಾಡಲಾಗಿದೆ. ಮಾದಿಗ ಮತ್ತು ಇದರ ಸಂಬಂಧಿ ಎಡಗೈ ಜಾತಿ ಸಮುದಾಯಗಳು ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸುಮಾರು ೩೫ ವರ್ಷಗಳಿಂದ ಹೋರಾಟ ನಡೆಸಿದ್ದವು. ವರದಿ ಸಲ್ಲಿಕೆಯಾದ ನಂತರ ವರದಿಯನ್ನು ಯಥಾವತ್ತು ಜಾರಿಗೊಳಿಸುವಂತೆ ಆಗ್ರಹಿಸಿದ್ದವು.

ಇನ್ನೊಂದೆಡೆ ಬಲಗೈ ಜಾತಿ ಸಮುದಾಯಗಳು ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದವು. ತಮ್ಮ ಜಾತಿ ಸಮುದಾಯಗಳನ್ನು ಕಡಿಮೆ ತೋರಿಸಲಾಗಿದೆ, ದತ್ತಾಂಶಗಳನ್ನು ಸರಿಯಾಗಿ ಕಲೆ ಹಾಕಿಲ್ಲ. ಹೀಗಾಗಿ ವರದಿಯನ್ನು ಪರಿಷ್ಕರಿಸಬೇಕು ಎಂದು ಆಗ್ರಹಿಸಿದ್ದವು. ಒಟ್ಟಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಹತ್ತರವಾದ ತೀರ್ಮಾನವನ್ನು ಕೈಗೊಂಡಿದೆ. ಅಲ್ಲದೆ, ೨೦೨೩ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ತರುವ ಆಶ್ವಾಸನೆಯನ್ನು ಕಾಂಗ್ರೆಸ್ ಪಕ್ಷ ನೀಡಿತ್ತು.

ಅಲ್ಲದೆ, ಒಳ ಮೀಸಲಾತಿಯನ್ನು ದೇಶದಲ್ಲಿ ತೆಲಂಗಾಣದ ನಂತರ ಜಾರಿ ಗೊಳಿಸಿದ ಎರಡನೇ ರಾಜ್ಯ ಕರ್ನಾಟಕವಾಗಿದೆ. ಒಳ ಮೀಸಲಾತಿ ಜಾರಿಯಾದ ಕೂಡಲೇ ಕೆಲ ನೇಮಕಾತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಬೇಕಿದ್ದು, ಒಂದು ಬಾರಿ ಮಾತ್ರ ವಯೋಮಿತಿ ಸಡಿಲಿಸುವ ರಾಜ್ಯ ಸರ್ಕಾರದ ತೀರ್ಮಾನ ಗಮನಾರ್ಹವಾಗಿದೆ. ೨೦೨೪ರ ನವೆಂಬರ್ ೧೨ರಂದು ರಾಜ್ಯ ಸರ್ಕಾರ ನ್ಯಾ.ನಾಗಮೋಹನ ದಾಸ್ ಆಯೋಗವನ್ನು ರಚಿಸಿತ್ತು. ಆಯೋಗವು ಸಮೀಕ್ಷಾ ವರದಿಯನ್ನು ೨೦೨೫ರ ಆ.೧ರಂದು ಸಲ್ಲಿಸಿತ್ತು. ವರದಿಯಲ್ಲಿ ಪರಿಶಿಷ್ಟ ಜಾತಿಯ ೧೦೧ ಸಮುದಾಯಗಳನ್ನು ೫ ಪ್ರವರ್ಗ ಗಳಾಗಿ ವಿಂಗಡಿಸಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಲಾಗಿತ್ತು. ಆ ಪ್ರಕಾರ ಪ್ರವರ್ಗ ‘ಎ’ಗೆ ಶೇ.೧(ಒಟ್ಟು ೫೯ ಜಾತಿಗಳು), ಪ್ರವರ್ಗ ‘ಬಿ’ಗೆ ಶೇ.೬ (೧೮ ಜಾತಿಗಳು), ಪ್ರವರ್ಗ ‘ಸಿ’ಗೆ (೧೭ ಜಾತಿಗಳು), ಪ್ರವರ್ಗ ‘ಡಿ’ಗೆ ಶೇ.೫ (೪ ಜಾತಿಗಳು) ಮತ್ತು ಪ್ರವರ್ಗ ‘ಇ’ಗೆ ಶೇ.೧ (೩ ಜಾತಿಗಳು) ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಲಾಗಿತ್ತು.

ನ್ಯಾ.ನಾಗಮೋಹನ ದಾಸ್ ಅವರು ಸಲ್ಲಿಸಿದ ವರದಿಯನ್ನು ಸರ್ಕಾರ ಜಾರಿಗೆ ತರುವ ಬಗ್ಗೆ ಅಲ್ಲಲ್ಲಿ ಅಪಸ್ವರ ಕೇಳಿಬಂದಿತ್ತು. ಸಚಿವ ಸಂಪುಟದಲ್ಲೇ ವರದಿಯ ಪರ – ವಿರುದ್ಧ ಧ್ವನಿಗಳು ಸದ್ದು ಮಾಡಿದ್ದವು. ಅಂತಿಮವಾಗಿ ವರದಿಯನ್ನು ಪರಿಷ್ಕರಿಸಿ ಎಡ- ಬಲ ಸಮುದಾಯಗಳನ್ನು ಸಮಬಲಗೊಳಿಸುವ ಮೂಲಕ ವರದಿಯನ್ನು ಪರಿಷ್ಕರಿಸಿ ಜಾರಿಗೊಳಿಸಲಾಗಿದೆ. ಆದರೆ, ‘ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತೆ, ಪ್ರಮುಖವಾದ ಎರಡು ಸಮುದಾಯಗಳ ನಡುವಿನ ಹೋರಾಟದಲ್ಲಿ ಪರಿಶಿಷ್ಟ ಜಾತಿಗಳೊಳಗೆ ಅತ್ಯಂತ ಹಿಂದುಳಿದವರಾದ ಅಲೆಮಾರಿ, ಅರೆ ಅಲೆಮಾರಿ ಮತ್ತಿತರ ಸೂಕ್ಷ್ಮ ಸಮುದಾಯಗಳನ್ನು ಸ್ಪೃಶ್ಯ ಪಟ್ಟಿ ಯಲ್ಲಿರುವ ಕೊರಮ, ಕೊರಚ, ಬೋವಿ ಮುಂತಾದವರೊಂದಿಗೆ ಸೇರಿಸಿರುವುದು ಅಲೆಮಾರಿ ಜಾತಿಗಳಲ್ಲಿ ಅಸಮಾಧಾನ ಮೂಡಿಸಿದೆ.

ಸರ್ಕಾರದ ಒಳ ಮೀಸಲಾತಿ  ಹಂಚಿಕೆಯಲ್ಲಿ ತಮಗೆ ಅನ್ಯಾಯವಾಗಿದೆಎಂದು ಅಲೆಮಾರಿ ಸಮುದಾಯಗಳವರು ಹೋರಾಟ ಮುಂದುವರಿಸಿದ್ದಾರೆ. ಈ ಸಮುದಾಯಗಳನ್ನು ಗುರುತಿಸಲು ಬಳಸಿರುವ ಮಾನದಂಡ ಸಮರ್ಪಕವಾಗಿಲ್ಲ ಎಂಬ ಆಕ್ಷೇಪಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪರಿಶಿಷ್ಟ ಜಾತಿಗಳಲ್ಲಿನ ಲಭ್ಯವಾಗುವ ದತ್ತಾಂಶಗಳನ್ನು ಪರಿಶೀಲಿಸಿ ವರದಿ ನೀಡಲು ಶಾಶ್ವತ ಪರಿಶಿಷ್ಟ ಜಾತಿಗಳ ಆಯೋಗ ರಚಿಸಲಾಗುವುದು. ಸರ್ಕಾರದ ತೀರ್ಮಾನದಲ್ಲಿ ಮಾರ್ಪಾಡುಗಳ ಅಗತ್ಯ ಕಂಡುಬಂದರೆ ರಾಷ್ಟ್ರೀಯ ಜನಗಣತಿಯಲ್ಲಿನ ಅಂಕಿ – ಅಂಶಗಳನ್ನುಆಧರಿಸಿ ಬದಲಾವಣೆಗೆ ಒಳಪಡಿಸಲು ಬದ್ಧವಾಗಿರುವುದಾಗಿ ಹೇಳಿದ್ದಾರೆ. ಅತಿ ಸೂಕ್ಷ  ಜಾತಿಗಳು ತಮ್ಮದೇ ಜಾತಿಯ ಬಲಾಢ್ಯರ ವಿರುದ್ಧ ಹೋರಾಡಿ ಹಕ್ಕುಗಳನ್ನು ಪಡೆಯುವುದು ಕಷ್ಟಸಾಧ್ಯ. ಈಹಿನ್ನೆಲೆಯಲ್ಲಿ ಅರೆ ಅಲೆಮಾರಿ, ಅಲೆಮಾರಿ ಮತ್ತಿತರ ಸೂಕ್ಷ  ಹಾಗೂ ಅತಿಸೂಕ್ಷ  ಜಾರಿಗಳಿಗೆ ಒಳ ಮೀಸಲಾತಿ ಕೈಗೆಟುಕುವಂತೆ, ಆ ಮೂಲಕ ಅವರ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ಬದುಕನ್ನು ಸಮರ್ಥವಾಗಿ ಕಟ್ಟಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರುವುದಕ್ಕೆ ಅವಕಾಶ ಕಲ್ಪಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ಮರೆಯಬಾರದು.

” ನ್ಯಾ.ನಾಗಮೋಹನ ದಾಸ್ ಅವರು ಸಲ್ಲಿಸಿದ ವರದಿಯನ್ನು ಸರ್ಕಾರ ಜಾರಿಗೆ ತರುವ ಬಗ್ಗೆ ಅಲ್ಲಲ್ಲಿ ಅಪಸ್ವರಕೇಳಿಬಂದಿತ್ತು. ಸಚಿವ ಸಂಪುಟದಲ್ಲೇ ವರದಿಯ ಪರ – ವಿರುದ್ಧ ಧ್ವನಿಗಳು ಸದ್ದು ಮಾಡಿದ್ದವು. ಅಂತಿಮವಾಗಿವರದಿಯನ್ನು ಪರಿಷ್ಕರಿಸಿ ಎಡ- ಬಲ ಸಮುದಾಯಗಳನ್ನು ಸಮಬಲಗೊಳಿಸ ಲಾಗಿದೆ. ಆದರೆ, ‘ಅಪ್ಪ- ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಎಂಬಂತೆ, ಪ್ರಮುಖವಾದ ಎರಡು ಸಮುದಾಯಗಳ ನಡುವಿನ ಹೋರಾಟದಲ್ಲಿ ಪರಿಶಿಷ್ಟ ಜಾತಿಗಳೊಳಗೆ ಅತ್ಯಂತ ಹಿಂದುಳಿದವರಾದ ಅಲೆಮಾರಿ, ಅರೆ ಅಲೆಮಾರಿ ಮತ್ತಿತರ ಸೂಕ್ಷ  ಸಮುದಾಯಗಳನ್ನು ಸ್ಪೃಶ್ಯ ಪಟ್ಟಿಯಲ್ಲಿರುವ ಕೊರಮ, ಕೊರಚ, ಬೋವಿ ಮುಂತಾದವರೊಂದಿಗೆ ಸೇರಿಸಿರುವುದು ಅಲೆಮಾರಿ ಜಾತಿಗಳಲ್ಲಿ ಅಸಮಾಧಾನ ಮೂಡಿಸಿದೆ.”

Tags:
error: Content is protected !!