Mysore
23
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಎಲ್ಲರೆದೆಯಲ್ಲಿ ಸಾಹಿತ್ಯ, ಸಂಸ್ಕೃತಿ  ಹಣತೆ ಹಚ್ಚಿದ ನಾಡಹಬ್ಬ ದಸರಾ

ನಾಡಹಬ್ಬ ಮೈಸೂರು ದಸರಾ ಮಹೋತ್ಸವ ನಿರಾತಂಕವಾಗಿ ನೆರವೇರಿದೆ. ರಾಜ್ಯ ಸರ್ಕಾರ ದಸರಾ ಉತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನ ಕೈಗೊಂಡಾಗ ಎಲ್ಲವೂ ಸುಸೂತ್ರವಾಗಿ ನಡೆಯುವುದು ಖಚಿತವಾಗಿತ್ತು. ಅತಿ ವೃಷ್ಟಿ, ಅನಾವೃಷ್ಟಿ ಇತ್ಯಾದಿ ಪ್ರಾಕೃತಿಕ ವಿಕೋಪಗಳೇನೂ ಇಲ್ಲದ್ದರಿಂದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವ ಅವಕಾಶ ಕೂಡ ವಿಪಕ್ಷಗಳಿಗೆ ಇರಲಿಲ್ಲ. ಆದರೆ, ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದಾಗ ವಿಪಕ್ಷ ಬಿಜೆಪಿ ಸರ್ಕಾರದ ಮೇಲೆ ಎಗರಿಬಿತ್ತು.

ಬಾನು ಅವರು ಕನ್ನಡ ಧ್ವಜಕ್ಕೆ ಅವ ಮಾನ ಮಾಡಿದ್ದಾರೆ, ಧಾರ್ಮಿಕ ಸಂಕೇತ ಗಳಾದ ಅರಿಶಿನ ಮತ್ತು ಕುಂಕುಮದ ಬಗ್ಗೆ ಅವಹೇಳನ ಮಾಡಿದ್ದಾರೆ ಎಂಬ ಆರೋಪಗಳು ಕೇಳಿಬಂದವು. ಒಂದು ರೀತಿಯಲ್ಲಿ ಬಾನು ಅವರೇ ದಸರಾ ಉದ್ಘಾಟಿಸಲು ನಿರಾಕರಿಸುವಂತೆ ಪರಿಸ್ಥಿತಿಯನ್ನು ಸೃಷ್ಟಿಸುವ ಯತ್ನವೂ ಕೆಲ ಹಿಂದೂ ಪರ ಸಂಘಟನೆಗಳಿಂದ ನಡೆಯಿತು.

ಆದರೆ, ಸ್ವತಃ ಬಾನು ಅವರು, ‘ಚಾಮುಂಡೇಶ್ವರಿ ದೇವಿಯೇ ನನ್ನನ್ನು ಕರೆಸಿಕೊಳ್ಳುತ್ತಿದ್ದಾಳೆ’ ಎನ್ನುವ ಮೂಲಕ ವಿರೋಧಿಸುತ್ತಿದ್ದವರಿಗೆ ತಿರುಗೇಟು ನೀಡಿದರು. ಸರ್ಕಾರ ಕೂಡ ತನ್ನ ನಿರ್ಧಾರದಿಂದ ಹಿಂದೆ ಸರಿಯಲ್ಲ ಎಂದು ಖಚಿತ ಪಡಿಸಿತು. ಆದರೆ, ಬಾನು ಅವರಿಗೆ ದಸರಾ ಉದ್ಘಾಟನೆಗೆ ಅವಕಾಶ ನೀಡದಂತೆ ಕೆಲವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.

ಇದನ್ನು ಓದಿ : ರಾಜ್ಯದಲ್ಲಿ ಬಗೆಹರಿಯದ ಅಧಿಕಾರ ಹಂಚಿಕೆಯ ವಿವಾದ

ನ್ಯಾಯಾಲಯವು, ಆ ಅರ್ಜಿಗಳ ವಿಚಾರಣೆಯಲ್ಲಿ ಅರ್ಥವೇ ಇಲ್ಲ ಎಂದು ತಳ್ಳಿಹಾಕಿತು. ಇಂತಹ ಸಣ್ಣಪುಟ್ಟ ಅಡೆತಡೆಗಳ ಹೊರತಾಗಿ ಸೆ.೨೨ರಂದು ಚಾಮುಂಡಿ ಬೆಟ್ಟದಲ್ಲಿ ಬಾನು ಮುಷ್ತಾಕ್‌ರು ದಸರಾ ಹಬ್ಬಕ್ಕೆ ಚಾಲನೆ ನೀಡಿದರು. ಅಂದಿನಿಂದ ಅ.೨ರ ಜಂಬೂಸವಾರಿವರೆಗೂ ದಸರಾ ಉತ್ಸವದಲ್ಲಿ ಮೈಸೂರು ಮೈಮರೆತು ಸಂಭ್ರಮಿಸಿತು.

ಜಗಜಗಿಸಿದ ವಿದ್ಯುತ್ ಅಲಂಕಾರಿಕ ದೀಪಗಳಿಂದ ಸಾಂಸ್ಕೃತಿಕ ನಗರಿ ವರ್ಣ ರಂಜಿತವಾಗಿ ಮಿಂಚಿತು. ಅರಮನೆ ಆವರಣ, ಕಲಾಮಂದಿರ ಇತ್ಯಾದಿ ಕಡೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಆಹಾರ ಮೇಳ, ಪುಸ್ತಕ ಮೇಳ, ವಸ್ತು ಪ್ರದರ್ಶನ, ಪ್ರವಾಸಿಗರು, ಸ್ಥಳೀಯರು, ಹೊರ ರಾಜ್ಯದವರು, ವಿದೇಶಿಗರು… ಹೀಗೆ ಎಲ್ಲ ವರ್ಗಗಳ ಜನರನ್ನೂ ಬರಸೆಳೆದು ಅಪ್ಪಿಕೊಂಡಿತು. ದಸರಾ ಅವಧಿಯ ದಿನಗಳಲ್ಲಿ ಮಧ್ಯಾಹ್ನ ೩ ಗಂಟೆಯಾದರೆ ಸಾಕು, ಅರಮನೆ ಸುತ್ತಲಿನ ರಸ್ತೆಗಳು ಜನರಿಂದ ತುಂಬಿ ತುಳುಕಿದವು.

ಇನ್ನು ದಸರಾ ಆರಂಭಕ್ಕೆ ಸುಮಾರು ಒಂದೂವರೆ ತಿಂಗಳ ಮುನ್ನವೇ ಅರಮನೆ ಆವರಣಕ್ಕೆ ಬಂದು ನೆಲೆಸಿದ್ದ ದಸರಾ ಗಜಪಡೆಯನ್ನು ನೋಡುವುದಕ್ಕೆ ಜನರ ದಂಡು ಮುಗಿಬಿದ್ದಿತ್ತು. ಗಜಪಡೆಯ ತಾಲೀಮು ವೇಳೆಯಲ್ಲಿ ಜನರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾ ಗಿತ್ತು. ಫಲ-ಪುಷ್ಪ ಪ್ರದರ್ಶನಕ್ಕೂ ಪ್ರೇಕ್ಷ ಕರು ಮುಗಿಬಿದ್ದು, ಸಂತೋಷಪಟ್ಟರು. ಡ್ರೋನ್ ಕಲಾಕೃತಿಗಳ ಪ್ರದರ್ಶನ, ವೈಮಾನಿಕ ಪ್ರದರ್ಶನವೂ ಜನರನ್ನು ಮುದಗೊಳಿಸಿದವು. ಒಟ್ಟಾರೆ ಕೊನೆಯದಿನ ಜಂಬೂಸವಾರಿಯಲ್ಲಿ ಕಲಾ ತಂಡಗಳು, ಸ್ತಬ್ಧಚಿತ್ರಗಳು, ಬನ್ನಿಮಂಟಪದಲ್ಲಿ ಪಂಜಿನ ಕವಾಯತು ನೋಡುಗರನ್ನು ಆಕರ್ಷಿಸಿದವು.

ಈ ಬಾರಿ ದಸರಾ ಹಬ್ಬವನ್ನು ಅಕ್ಷರಶಃ ಜನರ ಹಬ್ಬವಾಗಿ ಸಾಕ್ಷೀಕರಿಸಿದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಗೊಂದಲ ಇಲ್ಲದೆ ತಮ್ಮ ನಿಲುವಿಗೆ ಬದ್ಧವಾಗಿದ್ದು, ದಸರಾ ಉತ್ಸವವನ್ನು ಯಶಸ್ವಿಗೊಳಿಸಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ, ಗೋಲ್ಡ್ ಕಾರ್ಡ್ ಖರೀದಿಸಿದ್ದ ಹಲವರಿಗೆ ಅರಮನೆ ಆವರಣದಲ್ಲಿ ಜಂಬೂಸವಾರಿ ವೀಕ್ಷಣೆಗೆ ಪೊಲೀಸರು ಅವಕಾಶ ನೀಡಲಿಲ್ಲ. ಇನ್ನು ಗಣ್ಯರಿಗೆ ನೀಡಿದ್ದ ಉಚಿತ ಪಾಸ್‌ಗಳು ಕಾಳಸಂತೆಯಲ್ಲಿ ಮಾರಾಟವಾದ ಆರೋಪಗಳೂ ಕೇಳಿ ಬಂದವು. ಮುಂದಿನ ವರ್ಷಗಳಲ್ಲಿ ಇಂತಹ ಅವಾಂತರಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಮತ್ತು ಪೊಲೀಸರು ಕ್ರಮ ವಹಿಸಬೇಕು.

ಇದನ್ನು ಓದಿ : ಜಾನುವಾರುಗಳಿಗೆ ಬಹುವಾರ್ಷಿಕ ಮೇವಿನ ಬೆಳೆ ಬೆಳೆಯಿರಿ

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಶ್ರಮವಹಿಸಿದ್ದರು. ಆದರೆ,ಜಂಬೂಸವಾರಿ ದಿನ ಮುಖ್ಯಮಂತ್ರಿಯೊಡನೆ ಅರಮನೆ ಆವರಣದಲ್ಲಿ ತೆರೆದ ವಾಹನದಲ್ಲಿ ತೆರಳುವಾಗ ತಮ್ಮ ಮೊಮ್ಮಗನನ್ನೂ ಕರೆದೊಯ್ಯುವ ಮೂಲಕ ವಿವಾದಕ್ಕೆ ಆಸ್ಪದ ನೀಡಿದ್ದರು. ಅದಕ್ಕೂ ಶಿಷ್ಟಾಚಾರ ನಿಯಮಕ್ಕೂ ಸಂಬಂಧವಿಲ್ಲ ಎನ್ನಲಾಗಿದ್ದು, ವಿವಾದ ಮುಂದುವರಿಯುವ ಸಾಧ್ಯತೆ ಇಲ್ಲ. ದಸರಾ, ಯಾವುದೇ ಧರ್ಮ, ಮತದ ಹಂಗಿಲ್ಲದೆ, ಇದು ಎಲ್ಲರ ಸಾಂಸ್ಕೃತಿಕ ಹಬ್ಬ ಎಂಬುದಾಗಿ ಬಿಂಬಿತವಾಗಿತ್ತು.

ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಅದ್ಧೂರಿಯಾಗಿ ನಡೆಯಿತು. ಕನ್ನಡ ನಾಡು-ನುಡಿ, ಸಂಸ್ಕೃತಿ, ಸಂಸ್ಕಾರವೇ ಪ್ರಧಾನವೆಂಬುದನ್ನು ಸಾರಿ ಹೇಳಿದ ಹಬ್ಬವು, ಸಂವಿಧಾನದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಸಂದೇಶದೊಂದಿಗೆ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟವಾಗಿ ನಿರ್ಮಾಣಗೊಳ್ಳುವುದರ ಅಗತ್ಯವನ್ನೂ ಒತ್ತಿ ಹೇಳಿತು.

” ದಸರಾ, ಯಾವುದೇ ಧರ್ಮ, ಮತದ ಹಂಗಿಲ್ಲದೆ, ಇದು ಎಲ್ಲರ ಸಾಂಸ್ಕೃತಿಕ ಹಬ್ಬ ಎಂಬುದಾಗಿ ಬಿಂಬಿತವಾಗಿತ್ತು. ಬಡವ, ಬಲ್ಲಿದ ಎಂಬ ಭೇದವಿಲ್ಲದೆ ಅದ್ಧೂರಿಯಾಗಿ ನಡೆಯಿತು.”

Tags:
error: Content is protected !!