ಮೀಸಲಾತಿ ವಿಚಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುತ್ತಿದೆ. ಇದೀಗ ವಸತಿ ಯೋಜನೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಮೀಸಲಾತಿ ಪ್ರಮಾಣವನ್ನು ಶೇ.೧೫ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಸಂಬಂಧ ಕೈಗೊಂಡ ತೀರ್ಮಾನದಿಂದ ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಎಡ-ಬಲ ಸಮುದಾಯಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿರುವಾಗಲೇ, ಸರ್ಕಾರಿ ಗುತ್ತಿಗೆಯಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಶೇ.೪ರಷ್ಟು ಮೀಸಲಾತಿ ಕಲ್ಪಿಸುವ ಮೂಲಕ ವಿರೋಧಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಸರ್ಕಾರ, ಇದೀಗ ವಸತಿ ಇಲಾಖೆಯಡಿ ರಾಜ್ಯಾದ್ಯಂತ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸುವ ವಿವಿಧ ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ನಿಗದಿಪಡಿಸಿದ್ದ ಶೇ.೧೦ ಮೀಸಲಾತಿಯನ್ನು ಶೇ.೧೫ಕ್ಕೆ ಹೆಚ್ಚಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರ, ಪ್ರತಿಪಕ್ಷಗಳಿಗೆ ಹೋರಾಟದ ಅಸ ನೀಡಿದಂತಾಗಿದೆ.
ಅಲ್ಪಸಂಖ್ಯಾತರ ವಸತಿ ಸಮಸ್ಯೆಯನ್ನು ಗಮನಿಸಿ ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ನಮ್ಮ ಸರ್ಕಾರ ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ಸಲುವಾಗಿ ಮೀಸಲಾತಿಯನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ವಸತಿ ಸಚಿವ ಜಮೀರ್ ಅಹಮದ್ ಖಾನ್, ವಸತಿ ಯೋಜನೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಶೇ.೧೫ ಮೀಸಲಾತಿ ನಿರ್ಧಾರ ಈಗ ಕೈಗೊಂಡ ತೀರ್ಮಾನವಲ್ಲ, ೨೦೧೯ರ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಚಿವ ಸಂಪುಟ ಉಪ ಸಮಿತಿ ಶಿ-ರಸು ಮಾಡಿತ್ತು, ಅದಕ್ಕೆ ಈಗ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಸಾಚಾರ್ ಸಮಿತಿ ವರದಿ ಪ್ರಕಾರ ಅಲ್ಪಸಂಖ್ಯಾತ ಸಮುದಾಯಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ವಸತಿ ಯೋಜನೆಗಳಲ್ಲಿ ಶೇ.೧೫ ಮೀಸಲಾತಿ ನೀಡುತ್ತಿದೆ. ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗವು ಕೂಡ ೨೦೨೧ರಲ್ಲಿ ಶೇ.೧೫ರಷ್ಟು ಮೀಸಲಾತಿ ನೀಡಬೇಕು ಎಂದು ಹೇಳಿತ್ತು. ಹೀಗಾಗಿ ರಾಜ್ಯ ಸರ್ಕಾರ ಕೂಡ ಕೇಂದ್ರದ ಮಾದರಿಯನ್ನು ಅನುಸರಿಸಿದೆ ಎನ್ನುವ ಮೂಲಕ ಪ್ರತಿಪಕ್ಷ ಬಿಜೆಪಿಗೆ ತಿರುಗುಬಾಣ ಬಿಟ್ಟಿದ್ದಾರೆ. ಆದರೆ, ಬಿಜೆಪಿ ನಾಯಕರು ನಾವು ಧರ್ಮಾಧಾರಿತ ಮೀಸಲಾತಿಗೆ ವಿರೋಧ ಇದ್ದೇವೆ. ಹೀಗಿರುವಾಗ ವಸತಿ ಯೋಜನೆಯಲ್ಲಿ ಮುಸ್ಲಿಮರಿಗೆ ಶೇ.೧೫ರಷ್ಟು ಮೀಸಲಾತಿ ಕುರಿತು ಯಾವುದೇ ಸುತ್ತೋಲೆ ಹೊರಡಿಸಿಲ್ಲ. ಅಂತಹ ಸುತ್ತೋಲೆ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದ್ದಾರೆ.
ರಾಜಕೀಯವನ್ನು ಬದಿಗಿಟ್ಟು ನೋಡಿದಾಗ ನೈಜ ಸಂಗತಿ ಗೊತ್ತಾಗುತ್ತದೆ. ಇಂದಿಗೂ ಉನ್ನತ ಶಿಕ್ಷಣ ಪಡೆಯುತ್ತಿರುವ ಅಲ್ಪಸಂಖ್ಯಾತ ಸಮುದಾಯದಲ್ಲಿ ಬಹು ಸಂಖ್ಯಾತರಾಗಿರುವ ಮುಸ್ಲಿಮರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಮುಸ್ಲಿಂ ಸಮುದಾಯದ ಬಹುತೇಕ ಬಡ, ಅಶಿಕ್ಷಿತ ಪುರುಷರು ಗುಜರಿ ವ್ಯಾಪಾರ, ಮೆಕ್ಯಾನಿಕ್, ಬೀದಿ ಬದಿ ವ್ಯಾಪಾರಗಳಲ್ಲಿ ತೊಡಗಿದ್ದರೆ, ಮಹಿಳೆಯರೂ ಕೂಡ ಗೃಹ ಕೃತ್ಯದ ಜೊತೆಗೆ ಬೀಡಿ ಸುತ್ತುವ ಇಲ್ಲವೇ ಎಂಬ್ರಾಯಿಡರಿ, ಸೀರೆಗಳಿಗೆ ಫಾಲ್ಸ್ ಹಾಕುವುದು, ಕುಚ್ಚು ಕಟ್ಟುವುದು ಮೊದಲಾದ ಕೆಲಸಗಳಲ್ಲಿ ತೊಡಗಿಸಿಕೊಂಡು ಮನೆಯನ್ನು ನಿಭಾ ಯಿಸಲು ಹೆಣಗುತ್ತಿದ್ದಾರೆ. ಕಿಷ್ಕಿಂಧೆಯಂತಹ ಪುಟ್ಟ ಮನೆಯಲ್ಲಿ ಮೂರ‍್ನಾಲ್ಕು ಸಂಸಾರಗಳು ದಿನದೂಡುತ್ತಿರುವುದು ವಾಸ್ತವ.
ಹಾಗೆ ನೋಡಿದರೆ ರಾಜ್ಯ ಸರ್ಕಾರ ವಸತಿ ಯೋಜನೆಯಲ್ಲಿ ಮೀಸಲು ಪ್ರಮಾಣ ಹೆಚ್ಚಳವನ್ನು ಮುಸ್ಲಿಂ ಸಮುದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟು ಕೊಂಡು ಮಾಡಿಲ್ಲ. ಕ್ರಿಶ್ಚಿಯನ್ನರು, ಜೈನರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳ ಫಲಾನುಭವಿಗಳ ಪ್ರಮಾಣವನ್ನೂ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಚಿವ ಸಂಪುಟವು ನಿರ್ಣಯವನ್ನು ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿರುವ ಪ್ರಧಾನ ಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮ (೨೦೧೯)ದ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿಯೇ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ.
ಹಾಗೆ ನೋಡಿದರೆ ರಾಜ್ಯ ಸಚಿವ ಸಂಪುಟದ ಈ ನಿರ್ಣಯವು ವಸತಿ ಹಂಚಿಕೆಯಲ್ಲಿ ಹೆಚ್ಚುವರಿ ಮೀಸಲಾತಿಯನ್ನು ಇಡೀ ರಾಜ್ಯಕ್ಕೆ ಅನ್ವಯಿಸುವಂತಹದ್ದಲ್ಲ, ಕೇವಲ ನಿರ್ದಿಷ್ಟ ಸವಾಲುಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಪಸಂಖ್ಯಾತ ಜನಸಂಖ್ಯೆಯು ಶೇ.೧೦ಕ್ಕಿಂತ ಕಡಿಮೆಯಿರುವ ಹಲವು ಪಂಚಾಯಿತಿಗಳಲ್ಲಿ ನಿಗದಿಪಡಿಸಲಾದ ಶೇ.೧೦ರಷ್ಟು ಮೀಸಲಾತಿಯ ಅವಕಾಶವು ಸದ್ಬಳಕೆಯಾಗುತ್ತಿರಲಿಲ್ಲ. ಹೀಗಾಗಿ ನಿಗದಿಪಡಿಸಲಾದ ಗುರಿಯನ್ನು ತಲುಪಲು ಮತ್ತು ಲೋಪದೋಷಗಳನ್ನು ತಡೆಯಲು ಇಂತಹ ಪಂಚಾಯಿತಿಗಳಿಂದ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಿರುವ ಕಡೆಗೆ ಗರಿಷ್ಟ ಶೇ.೧೫ ಮಿತಿಗೆ ಒಳಪಟ್ಟು ಮರುಹಂಚಿಕೆ ಮಾಡಲಾಗಿದೆ.
ಇದು ಕೇವಲ ಆಡಳಿತಾತ್ಮಕ ದೃಷ್ಟಿಯಿಂದ ಸಾಮಾನ್ಯವರ್ಗದಲ್ಲಿ ಮಾಡಿಕೊಂಡ ಹೊಂದಾಣಿಕೆಯಾಗಿದ್ದು, ಇದರಿಂದ ಎಸ್‌ಸಿ, ಎಸ್‌ಟಿ ಅಥವಾ ಹಿಂದುಳಿದ ವರ್ಗಗಳಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸರ್ಕಾರದ ಈ ನಿರ್ಧಾರದಿಂದ ಪ್ರಸಕ್ತ ವರ್ಷ ಒಂದರಲ್ಲೇ ಭೂರಹಿತರು ಮತ್ತು ಮನೆಗಳ ತುರ್ತು ಅಗತ್ಯತೆ ಇರುವ ಸುಮಾರು ೩೪ ಸಾವಿರ ಅಲ್ಪಸಂಖ್ಯಾತ ಕುಟುಂಬಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಲ್ಪಸಂಖ್ಯಾತ ಅರ್ಜಿದಾರರು ಇಲ್ಲದ ಪಂಚಾಯಿತಿಗಳಲ್ಲಿನ ಉಪಯೋಗವಾಗದೆ ಉಳಿದ ವಸತಿ ಹಂಚಿಕೆಗಳನ್ನು ಅತಿ ಅಗತ್ಯವಿರುವೆಡೆಗೆ ಮರುಹಂಚಿಕೆ ಮಾಡುವುದಾಗಿ ಸರ್ಕಾರ ಸ್ಪಷ್ಟವಾಗಿ ಹೇಳಿರುವುದರಿಂದ ಕೇವಲ ರಾಜಕೀಯಕ್ಕಾಗಿ ವಿರೋಧ ಮಾಡುವುದು ಸಲ್ಲದು.
” ರಾಜ್ಯ ಸರ್ಕಾರ ವಸತಿ ಯೋಜನೆಯಲ್ಲಿಮೀಸಲಾತಿ ಪ್ರಮಾಣ ಹೆಚ್ಚಳವನ್ನು ಮುಸ್ಲಿಂ ಸಮುದಾಯವನ್ನಷ್ಟೇ ದೃಷ್ಟಿಯಲ್ಲಿಟ್ಟುಕೊಂಡು ಮಾಡಿಲ್ಲ. ಕ್ರಿಶ್ಚಿಯನ್ನರು, ಜೈನರು ಸೇರಿದಂತೆಎಲ್ಲ ಅಲ್ಪಸಂಖ್ಯಾ ಸಮುದಾಯಗಳ ಫಲಾನುಭವಿಗಳ ಪ್ರಮಾಣವನ್ನೂ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಸಚಿವ ಸಂಪುಟವು ನಿರ್ಣಯವನ್ನು ಕೈಗೊಂಡಿದೆ. ಇದು ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಇರುವ ಪ್ರಧಾನಮಂತ್ರಿಗಳ ೧೫ ಅಂಶಗಳ ಕಾರ್ಯಕ್ರಮ (೨೦೧೯)ದ ಆಧಾರದ ಮೇಲೆ ತೆಗೆದುಕೊಂಡ ತೀರ್ಮಾನವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಂತಹ ಕೇಂದ್ರ ಸರ್ಕಾರದ ಕಾರ್ಯಕ್ರಮದಲ್ಲಿಯೇ ಇದನ್ನು ಅನುಷ್ಠಾನ ಮಾಡಲಾಗುತ್ತಿದೆ.”





