Mysore
28
few clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಕಾಂಗ್ರೆಸ್ ಹೈಕಮಾಂಡ್ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು

ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕತ್ವ ಬದಲಾವಣೆ ಬಿಕ್ಕಟ್ಟು ತೀವ್ರಗೊಂಡಿದೆ. ಪಕ್ಷದ ವರಿಷ್ಠರ ಪಾಲಿಗೆ ಉಗುಳಲೂ ಆಗದ, ನುಂಗಲೂ ಆಗದ ಬಿಸಿತುಪ್ಪವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸುತ್ತೇನೆ. ಈ ಅವಧಿಯ ಇನ್ನೆರಡು ಆರ್ಥಿಕ ಮುಂಗಡಪತ್ರಗಳನ್ನೂ ನಾನೇ ಮಂಡನೆ ಮಾಡುತ್ತೇನೆ ಎಂಬ ಮಾತುಗಳ ಜೊತೆಗೇ, ಹೈಕಮಾಂಡ್ ಆದೇಶಕ್ಕೆ ಬದ್ಧ ಎಂದೂ ಹೇಳುತ್ತಿದ್ದಾರೆ.

ಅತ್ತ ಮುಖ್ಯಮಂತ್ರಿಯಾಗುವ ಬಯಕೆಯಲ್ಲಿರುವ ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ನೇರವಾಗಿ ಮಾತನಾಡದೆ, ಪರೋಕ್ಷವಾಗಿ ಮನದಿಂಗಿತವನ್ನು ವ್ಯಕ್ತಪಡಿಸುತ್ತಿದ್ದಾರೆ. ೨೦೨೩ರಲ್ಲಿ ಕಾಂಗ್ರೆಸ್ ನಿರೀಕ್ಷೆ ಮೀರಿ ಅತ್ಯಧಿಕ ಬಹುಮತಗಳಿಸಿ ಅಧಿಕಾರಕ್ಕೇರಿದೆ. ಪಕ್ಷಕ್ಕೆ ಆಡಳಿತ ಚುಕ್ಕಾಣಿ ಕೊಡಿಸಲು ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಜೋಡೆತ್ತುಗಳಂತೆ ಶ್ರಮಿಸಿದ್ದಾರೆ. ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರ ಪಕ್ಷದ ವರಿಷ್ಠರನ್ನೂ ಇಕ್ಕಟ್ಟಿಗೆ ಸಿಲುಕಿಸಿತ್ತು.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ತಲಾ ಎರಡೂವರೆ ವರ್ಷಗಳ ಅಽಕಾರ ಹಂಚಿಕೆ ಒಪ್ಪಂದದ ಮೂಲಕ ಮೊದಲಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಕ್ಕೆ ಹೈಕಮಾಂಡ್ ನಿಂದ ಅನುಮೋದನೆ ದೊರಕಿತ್ತು ಎನ್ನಲಾಗಿದೆ.

ಇದನ್ನು ಓದಿ: ಅತೀ ಕೆಲಸದ ಅಪಾಯ ಬಿಂಬಿಸುವ ಡೆತ್‌ನೋಟ್‌ 

ನ.೨೦ಕ್ಕೆ ಎರಡೂವರೆ ವರ್ಷಗಳು ಮುಗಿದಿವೆ. ಅದಕ್ಕೂ ಮುಂಚಿನಿಂದಲೇ ಸಿದ್ದರಾಮಯ್ಯ ಅವರನ್ನು ಮುಂದುವರಿಸುವಂತೆ ಕೆಲ ಸಚಿವರು, ಶಾಸಕರು ವರಿಷ್ಠರ ಮೊರೆ ಹೋಗಿದ್ದರು. ಈ ನಡುವೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಮೇಲಿಂದ ಮೇಲೆ ಹೊಸದಿಲ್ಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗುವ ಪ್ರಯತ್ನ ಮಾಡಿದ್ದರು. ಸಿದ್ದರಾಮಯ್ಯ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ, ಸಂಪುಟ ಪುನಾರಚನೆಗೆ ಅನುಮತಿ ಕೋರಿದ್ದರು ಎನ್ನಲಾಗಿದೆ. ರಾಹುಲ್, ಆ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಚರ್ಚಿಸಿ ತೀರ್ಮಾನ ಕೈಗೊಳ್ಳುವಂತೆ ಸೂಚಿಸಿದ್ದರು ಎಂದು ಹೇಳಲಾಗಿದೆ.

ಇತ್ತ ಶಿವಕುಮಾರ್ ಅವರು ಕಾರ್ಯಕ್ರಮಗಳ ನೆಪದಲ್ಲಿ ಹೊಸದಿಲ್ಲಿಗೆ ಹೋಗಿ ವರಿಷ್ಠರ ಭೇಟಿ ಸಾಧ್ಯವಾಗದೆ ಹಿಂದಿರುಗಿದ್ದರು. ಅಲ್ಲದೆ, ಅವರು ಎರಡೂವರೆ ವರ್ಷಗಳು ಕಳೆಯುವವರೆಗೂ ಮೌನವಾಗಿರುವ ಲೆಕ್ಕಾಚಾರ ಹಾಕಿದ್ದಂತೆ ಕಾಣುತ್ತಿತ್ತು. ಏತನ್ಮಧ್ಯೆ, ‘ದಲಿತ ಮುಖ್ಯಮಂತ್ರಿ’ ಎಂಬ ಮಾತುಗಳೂ ಕೇಳಿಬಂದವು. ಆದರೆ, ಕಳೆದ ವಾರ ಶಿವಕುಮಾರ್ ಬಣದವರು ಎನ್ನಲಾದ ಕೆಲ ಶಾಸಕರು ವರಿಷ್ಠರನ್ನು ಭೇಟಿ ಮಾಡಲು ಹೊಸದಿಲ್ಲಿಗೆ ತೆರಳುವ ಮೂಲಕ ನಾಯಕತ್ವ ಬದಲಾವಣೆಯ ಚರ್ಚೆಗೆ ಗೆಜ್ಜೆ ಕಟ್ಟಿದಂತಾಯಿತು.

ಸಿದ್ದರಾಮಯ್ಯ ಅವರ ಬಣದವರು ಎನ್ನಲಾಗಿರುವ ಕೆಲ ಸಚಿವರು ಮತ್ತು ಶಾಸಕರು ಜಾಗೃತಗೊಂಡು, ಅಖಾಡಕ್ಕೆ ನೇರವಾಗಿ ಇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಬರುತ್ತಿದ್ದಂತೆ ನಾಯಕತ್ವ ಬದಲಾವಣೆ ವಿಚಾರ ಮತ್ತಷ್ಟು ಗರಿಗೆದರಿತು. ಸಿದ್ದರಾಮಯ್ಯ ಅವರನ್ನು ಹಲವು ಶಾಸಕರು ಭೇಟಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಆದರೆ, ಖರ್ಗೆ ಅವರು ಕೂಡ ಖಚಿತ ನಿರ್ಧಾರ ವ್ಯಕ್ತಪಡಿಸಿಲ್ಲ. ಆದರೆ, ಪಕ್ಷದೊಳಗೆ ನಡೆಯುತ್ತಿರುವ ಮುಸುಕಿನ ಗುದ್ದಾಟವು ವಿಪಕ್ಷಗಳ ಬಾಯಿಗೆ ಆಹಾರವಾಗಿದೆ.

ಇದನ್ನು ಓದಿ: ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿಗೆ ಹೆಚ್ಚಿದ ಒತ್ತಡ

೧೪೦ ಶಾಸಕರಿದ್ದರೂ ರಾಜ್ಯ ಸರ್ಕಾರ ಹೀಗೆ ಅತಂತ್ರ ಸ್ಥಿತಿ ಅನುಭವಿಸುತ್ತಿರುವುದನ್ನು ಸಾಮಾನ್ಯ ಜನರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತಂದಿದೆ. ಆದರೆ, ಅವು ಅರ್ಹರಿಗೆ ಸಮರ್ಪಕವಾಗಿ ತಲುಪುತ್ತಿವೆಯೇ ಎಂಬುದನ್ನು ಕಾಲಕಾಲಕ್ಕೆ ಪರಿಶೀಲಿಸುವ ಕೆಲಸ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ನಾಮಕಾವಸ್ತೆಗೆ ಅಲ್ಲಲ್ಲಿ ಕೆಲ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಉದ್ಘಾಟನೆಗಳು ನಡೆಯುತ್ತಿವೆ ಎಂಬ ಅಸಮಾಧಾನ ಸಾರ್ವಜನಿಕ ವಲಯದಲ್ಲಿ ಇದೆ.

ರಾಜ್ಯ ಸರ್ಕಾರಕ್ಕೆ ಎದುರಾಗಿರುವ ಇಂತಹ ಅತಂತ್ರ ಸ್ಥಿತಿಯನ್ನು ನಿವಾರಿಸುವ ಜವಾಬ್ದಾರಿ ಕಾಂಗ್ರೆಸ್ ಹೈಕಮಾಂಡ್‌ನದ್ದಾಗಿದೆ. ಹಾಗಾಗಿ ಆ ಪಕ್ಷದ ವರಿಷ್ಠರು ಆದಷ್ಟು ಶೀಘ್ರವಾಗಿ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಿದೆ. ಸರ್ಕಾರಗಳ ಇಂತಹ ಅನಪೇಕ್ಷಿತ ಬೆಳವಣಿಗೆಗಳು ರಾಜ್ಯದ ಅಭಿವೃದ್ಧಿಗೆ ಮಾರಕವಾಗಬಾರದು.

” ಸಿದ್ದರಾಮಯ್ಯ ಅವರ ಬಣದವರುಎನ್ನಲಾಗಿರುವ ಕೆಲ ಸಚಿವರು ಮತ್ತು ಶಾಸಕರು ಜಾಗೃತಗೊಂಡು, ಅಖಾಡಕ್ಕೆ ನೇರವಾಗಿ ಇಳಿದರು. ಮಲ್ಲಿಕಾರ್ಜುನಖರ್ಗೆ ಅವರು ಬೆಂಗಳೂರಿಗೆ ಬರುತ್ತಿದ್ದಂತೆ ನಾಯಕತ್ವ ಬದಲಾವಣೆವಿಚಾರ ಮತ್ತಷ್ಟು ಗರಿಗೆದರಿತು. ಸಿದ್ದರಾಮಯ್ಯ ಅವರನ್ನು ಹಲವು ಶಾಸಕರು ಭೇಟಿಯಾಗಿ ತಮ್ಮ ಬೆಂಬಲ ವ್ಯಕ್ತಪಡಿಸಿದರು.”

Tags:
error: Content is protected !!