ತವರು ಜಿಲ್ಲೆ ಮೈಸೂರಿನಲ್ಲಿ ಸಾಧನಾ ಸಮಾವೇಶವನ್ನು ಆಯೋಜಿಸುವ ಮೂಲಕ ಟೀಕಾಕಾರರಿಗೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ೨,೫೦೦ ಕೋಟಿ ರೂ. ಮೌಲ್ಯದ ಯೋಜನೆಗಳು, ಕಾಮಗಾರಿಗಳನ್ನು ಘೋಷಿಸಿದ್ದಾರೆ. ಆ ಮೂಲಕ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಂದಾಗಿ ಸೊರಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂಬ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತಾರೆ, ಮುಖ್ಯ ಮಂತ್ರಿ ಸ್ಥಾನ ಖಾಲಿಯಾಗುತ್ತದೆ ಎಂಬ ವದಂತಿಗಳ ಪ್ರಚಾರಕರಿಗೆ ತಕ್ಕ ಉತ್ತರ ನೀಡುವ ನಿಟ್ಟಿನಲ್ಲಿ ಸಾಧನಾ ಸಮಾವೇಶವನ್ನು ನಡೆಸಲಾಗಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ನಾಯಕರು ಸಮಾವೇಶದಲ್ಲಿ ಭಾಗವಹಿಸುವ ಮೂಲಕ ಸರ್ಕಾರದ ಸ್ಥಿರತೆಯನ್ನು ಎದು ರಾಳಿ ಪಕ್ಷಗಳಿಗೆ ಸಾರಿ ಹೇಳುವ ಯತ್ನ ಮಾಡಿದ್ದಾರೆ. ಸರ್ಕಾರ ಮತ್ತು ಕೆಲ ಸಚಿವರ ನಡುವೆ ಸಮನ್ವಯತೆ ಇಲ್ಲ ಎಂಬ ವಾದಕ್ಕೂ ಇದು ಉತ್ತರ ನೀಡಿದಂತಿದೆ. ಸಿದ್ದರಾಮಯ್ಯ, ಶಿವಕುಮಾರ್ ಅವರು ಪದೇ ಪದೇ ಹೊಸದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಯಾಗಿದ್ದು ಕೂಡ ಹಲವಾರು ಊಹಾಪೋಹಗಳಿಗೆ ಅವಕಾಶ ಕಲ್ಪಿಸಿತ್ತು. ಕೆಲ ಸಚಿವರೇ ಸೆಪ್ಟೆಂಬರ್ ವೇಳೆಗೆ ಕ್ರಾಂತಿಯಾಗುತ್ತದೆ ಎಂದಿದ್ದರು. ಆದರೆ, ಸಮಾವೇಶವು ಅದೆಲ್ಲವೂ ಸುಳ್ಳು ಎಂಬಂತೆ ವ್ಯವಸ್ಥೆಗೊಂಡಿತ್ತು.
ವಿರೋಧ ಪಕ್ಷಗಳು ಗ್ಯಾರಂಟಿ ಯೋಜನೆಗಳೇ ರಾಜ್ಯ ಸರ್ಕಾರಕ್ಕೆ ಮುಳುವಾಗಲಿವೆ. ಇತರೆ ಅಭಿವೃದ್ಧಿಯ ಹಣವನ್ನು ಗ್ಯಾರಂಟಿಗಳಿಗೆ ಸುರಿಯಲಾಗುತ್ತಿದೆ. ಅಲ್ಲದೆ, ಸಮರ್ಪಕವಾಗಿ ಎಲ್ಲ ಫಲಾನುಭವಿಗಳಿಗೂ ಪಂಚ ಖಾತ್ರಿ ಯೋಜನೆಗಳು ತಲುಪುತ್ತಿಲ್ಲ. ಅದರಲ್ಲಿ ಸರ್ಕಾರ ವಿಫಲವಾಗಿದೆ ಎಂಬ ವಿಪಕ್ಷಗಳ ಟೀಕೆಗಳಿಗೆ ಸೂಕ್ತ ಉತ್ತರ ನೀಡುವ ಅವಶ್ಯಕತೆ ಸರ್ಕಾರಕ್ಕೆ ಎದುರಾಗಿತ್ತು.
ಮಹಾರಾಷ್ಟ್ರ, ಹೊಸದಿಲ್ಲಿ ಸರ್ಕಾರಗಳೂ ಕರ್ನಾಟಕದ ಗ್ಯಾರಂಟಿಗಳನ್ನು ಮಾದರಿಯಾಗಿ ಪರಿಗಣಿಸಿವೆ. ಬಿಹಾರ ರಾಜ್ಯದ ವಿಧಾನಸಭಾ ಚುನಾವಣೆ ಸಿದ್ಧತೆಯಲ್ಲಿರುವ ಎನ್‌ಡಿಎ ಕೂಡ ಗ್ಯಾರಂಟಿಗಳ ಭರವಸೆ ನೀಡಿರುವುದು, ಸಿದ್ದರಾಮಯ್ಯ ಅವರಿಗೆ ಸಮರ್ಥಿಸಿಕೊಳ್ಳಲು ಬಲ ತಂದುಕೊಟ್ಟಿತ್ತು. ಇದೀಗ ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸುವ ಮೂಲಕ ಗ್ಯಾರಂಟಿಗಳು ಸದಾ ಚಾಲ್ತಿಯಲ್ಲಿರುತ್ತವೆ ಎಂದು ಮತ್ತಷ್ಟು ಗಟ್ಟಿಯಾಗಿ ಹೇಳಿದ್ದಾರೆ.
ಸಮಾವೇಶದಲ್ಲಿ ಮಲ್ಲಿಕಾರ್ಜನ ಖರ್ಗೆಯವರು, ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರು ಯಾವುದೇ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮೈಸೂರು ಜಿಲ್ಲೆಗೆ ಮೊದಲ ಆದ್ಯತೆ ನೀಡುತ್ತಾರೆ. ಅದು ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆ ಬಗ್ಗೆ ಇರುವ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಅವರ ಬೆನ್ನು ತಟ್ಟಿದ್ದಾರೆ.
ಗ್ಯಾರಂಟಿಗಳ ಅನುಷ್ಠಾನದಿಂದ ಮುಖ್ಯಮಂತ್ರಿ ಸ್ಥಾನಕ್ಕೆ ಧಕ್ಕೆ ಬರಬಹುದು ಅನಿಸಿದರೂ, ಅವುಗಳನ್ನು ಸ್ಥಗಿತಗೊಳಿಸುವ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಇದರ ಜೊತೆಗೆ ಬೆಂಗಳೂರಿನ ದೇವನಹಳ್ಳಿಯಲ್ಲಿ ಸರ್ಕಾರ ಸ್ವಾಧಿನ ಪಡಿಸಿಕೊಂಡಿದ್ದ ಭೂಮಿಯಲ್ಲಿ ೧೭,೦೦೦ ಎಕರೆಯನ್ನು ಡಿನೋಟಿಫಿಕೇಷನ್ ಮಾಡುವುದಾಗಿ ಘೋಷಣೆ ಮಾಡಿದ್ದು ಕೂಡ ಸಿದ್ದರಾಮಯ್ಯ ಅವರ ನಾಯಕತ್ವವನ್ನು ಪ್ರಬಲಗೊಳಿಸಿದೆ.
ರೈತಪರ ಹೋರಾಟಗಾರರು ಮತ್ತು ಭೂಮಿ ಕಳೆದುಕೊಂಡಿದ್ದ ಕೃಷಿಕರು ಸಾವಿರಾರು ದಿನಗಳು ಪ್ರತಿಭಟನೆ ನಡೆಸಿ, ಭೂಸ್ವಾಧಿನ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿದ್ದರು. ಸಿದ್ದರಾಮಯ್ಯ ಅವರು ಈ ಸುದೀರ್ಘ ಅವಧಿಯಲ್ಲಿ ಇತ್ತ ಗಮನ ಕೊಡದಿರುವುದು ರೈತರ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿತ್ತು.
ಮುಖ್ಯಮಂತ್ರಿ ಅವರಿಗೆ ಆಪ್ತರಾಗಿದ್ದ ರೈತರು, ಹೋರಾಟಗಾರರು ಕೂಡ ಭೂಸ್ವಾಧಿನದ ವಿರುದ್ಧ ಧ್ವನಿ ಎತ್ತಿದ್ದರು. ಅಂತಿಮವಾಗಿ ಸಿದ್ದರಾಮಯ್ಯ ಅವರು ಭೂ ಸ್ವಾಧಿನ ಪ್ರಕ್ರಿಯೆಯನ್ನು ಕೈಬಿಡುವ ಮೂಲಕ ಭೂಮಿ ತಾಯಿ ಮಕ್ಕಳ ನೋವನ್ನು ಶಮನಗೊಳಿಸಿದರು. ಬಹುಶಃ ಸಾಧನಾ ಸಮಾವೇಶಕ್ಕೆ ಸಿದ್ದರಾಮಯ್ಯ ಅವರ ಈ ನಿಲುವು ಮತ್ತಷ್ಟು ಬಲತಂದಿತು ಎನ್ನಬಹುದು. ಸಮಾವೇಶದಲ್ಲಿ ಅವರಿಗೆ ದೊರೆತ ಬೆಂಬಲ, ಸಿದ್ದರಾಮಯ್ಯ ಅವರ ನಾಯ ಕತ್ವ ಅಬಾಧಿತವಾಗಿರಬೇಕು ಎಂಬ ಹಕ್ಕೊತ್ತಾಯವನ್ನು ಮಂಡನೆ ಮಾಡಿದಂತಿದೆ.
ಆದರೆ, ಸಿದ್ದರಾಮಯ್ಯ ಅವರ ರಾಜಕೀಯ ವಿರೋಧಿಗಳು ಈ ಸಮಾವೇಶವನ್ನು ತಮ್ಮದೇ ದೃಷ್ಟಿಕೋನದಿಂದ ವಿಶ್ಲೇಷಿಸುತ್ತಿರುವುದು ಸುಳ್ಳಲ್ಲ. ಮುಖ್ಯ ಮಂತ್ರಿ ಸ್ಥಾನದ ಮೇಲೆ ತೂಗುಗತ್ತಿ ಇರುವುದರಿಂದಲೇ ಸಮಾವೇಶ ನಡೆದಿದೆ. ಇನ್ನು ಮುಂದೆ ಸಿದ್ದರಾಮಯ್ಯ ಅವರು ಇಂತಹ ಸಮಾವೇಶ ಆಯೋಜಿಸುವ ಅವಕಾಶ ಇರುವುದಿಲ್ಲ ಎಂಬುದು ವಿಪಕ್ಷಗಳ ಕುಹಕವಾಗಿದೆ.
ಮುಂದಿನ ದಿನಗಳಲ್ಲಿ ಏನಾಗುತ್ತದೋ, ಬಿಡುತ್ತದೋ ಅದರ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ಸಮಾವೇಶದ ಮೂಲಕ ತಮ್ಮ ನಾಯಕತ್ವದ ವರ್ಚಸ್ಸು ಕುಂದಿಲ್ಲ ಎಂಬುದನ್ನು ತಮ್ಮ ರಾಜಕೀಯ ಎದುರಾಳಿಗಳಿಗೆ ಅರ್ಥ ಮಾಡಿಸಿದ್ದಾರೆ ಎನ್ನಬಹುದು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದೊಳಗಿನ ಮುಸುಕಿನ ಗುದ್ದಾಟವನ್ನು ನಿವಾರಿಸಿ, ಸಮಾವೇಶದಲ್ಲಿ ಪ್ರಕಟವಾದ ಯೋಜನೆಗಳನ್ನು ಶೀಘ್ರವಾಗಿ ಜನರನ್ನು ತಲುಪಿಸುವ ನಿಟ್ಟಿನಲ್ಲಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವುದಕ್ಕೆ ಒತ್ತು ನೀಡುವುದು ಅತ್ಯಗತ್ಯ.
” ಸಮಾವೇಶದಲ್ಲಿ ಮಲ್ಲಿಕಾರ್ಜನ ಖರ್ಗೆಯವರು, ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಅವರು ಯಾವುದೇ ಯೋಜನೆ, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮೈಸೂರು ಜಿಲ್ಲೆಗೆ ಮೊದಲ ಆದ್ಯತೆ ನೀಡುತ್ತಾರೆ. ಅದು ಸಿದ್ದರಾಮಯ್ಯ ಅವರಿಗೆ ತವರು ಜಿಲ್ಲೆ ಬಗ್ಗೆ ಇರುವ ಕಾಳಜಿಗೆ ಹಿಡಿದ ಕನ್ನಡಿಯಾಗಿದೆ ಎನ್ನುವ ಮೂಲಕ ಸಿದ್ದರಾಮಯ್ಯ ಅವರ ಬೆನ್ನುತಟ್ಟಿದ್ದಾರೆ.”





