Mysore
26
mist

Social Media

ಗುರುವಾರ, 07 ನವೆಂಬರ್ 2024
Light
Dark

ರಾಜ್ಯ ರಾಜಕಾರಣಿಗಳಿಗೆ ಸವಾಲಾದ ಉಪ ಕದನ

ಮೂರು ಪಕ್ಷಗಳಿಗೂ ಮುನ್ನುಡಿ ಬರೆಯಲಿರುವ ಪರೀಕ್ಷಾರ್ಥ ಪ್ರಯೋಗ ಕಣ

ಬೆಂಗಳೂರು ಡೈರಿ, ಆರ್‌.ಟಿ ವಿಠ್ಠಲಮೂರ್ತಿ

೧೯೭೮ರ ಸನ್ನಿವೇಶ ಮರುಕಳಿಸುವ ಲಕ್ಷಣಗಳು ಕಾಣಿಸುತ್ತಿವೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ
ಕಾಂಗ್ರೆಸ್ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಮತ್ತು ಬಿಜೆಪಿ-ಜಾ.ದಳ ಮಿತ್ರಕೂಟದ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿ ದಿರುವ ಹಿನ್ನೆಲೆಯಲ್ಲಿ ಇಂತಹದೊಂದು ವಾತಾವರಣ ಕಾಣಿಸತೊಡಗಿದೆ. ಆದರೆ ವ್ಯತ್ಯಾಸವೆಂದರೆ ೧೯೭೮ರಲ್ಲಿ ಕಾಂಗ್ರೆಸ್ ಮತ್ತು ಜನತಾ ಪಕ್ಷ ಮುಖಾಮುಖಿಯಾದ ಸಂದರ್ಭದಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆದರೆ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ-ಜಾ.ದಳ ಮಿತ್ರಕೂಟದ ನಡುವೆ ಸಾರ್ವತ್ರಿಕ ಚುನಾವಣೆಯ ಪೂರ್ವಭಾವಿ ಪರೀಕ್ಷೆ ನಡೆಯುತ್ತಿದೆ. ಅರ್ಥಾತ್, ಮುಂಬರುವ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಮತ್ತು ಮಿತ್ರಕೂಟದ ನಡುವೆ ಪರೀಕ್ಷಾರ್ಥ ಪ್ರಯೋಗಕ್ಕೆ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಸಾಕ್ಷಿಯಾಗಲಿದೆ.

ಅಂದ ಹಾಗೆ ೧೯೭೮ರಲ್ಲಿ ದೊಡ್ಡ ಬಲದೊಂದಿಗೆ ಜನತಾ ಪಕ್ಷ ಮೇಲೆದ್ದು ನಿಂತಿತ್ತು. ದೇವರಾಜ ಅರಸು ನೇತೃತ್ವದ ಕಾಂಗ್ರೆಸ್
ಪಕ್ಷದೊಂದಿಗೆ ನೇರವಾಗಿ ಮುಖಾಮುಖಿಯಾಗಿತ್ತು. ಗಮನಿಸಬೇಕಾದ ಸಂಗತಿ ಎಂದರೆ ರಾಜ್ಯದ ಒಕ್ಕಲಿಗ, ಲಿಂಗಾಯತ
ಶಕ್ತಿ ಗಣನೀಯ ಪ್ರಮಾಣದಲ್ಲಿ ಜನತಾ ಪಕ್ಷದೊಂದಿಗೆ ನಿಂತಿತ್ತು.ಹೀಗೆ ಒಕ್ಕಲಿಗ, ಲಿಂಗಾಯತ ಶಕ್ತಿ ಜನತಾ ಪಕ್ಷದೊಂದಿಗೆ ನಿಲ್ಲಲುಹಲವು ಕಾರಣಗಳೂ ಇದ್ದವು. ಈ ಪೈಕಿ ಮುಖ್ಯವಾದುದು ಭೂ ಸುಧಾರಣೆಯ ಮೂಲಕ ಅರಸರು ಜಾರಿಗೆ ತಂದ ಉಳುವವನೇ ಹೊಲದೊಡೆಯ ಎಂಬ ಕಾನೂನು. ಅಲ್ಲಿಯವರೆಗೆ ನಾಡಿನ ಬಹುಪಾಲು ಭೂಮಿಯನ್ನು ಹೊಂದಿದ್ದ ಒಕ್ಕಲಿಗ, ಲಿಂಗಾಯತ ಶಕ್ತಿಗಳಿಗೆ ಅರಸರು ಜಾರಿಗೆ ತಂದ ಕಾನೂನು ತೊಡಕಾಯಿತು. ಅರ್ಥಾತ್, ತಮ್ಮ ಕೈಲಿದ್ದ ದೊಡ್ಡ ಪ್ರಮಾಣದ ಭೂಮಿಯನ್ನು ಒಕ್ಕಲಿಗರು, ಲಿಂಗಾಯತರು ಕಳೆದುಕೊಂಡರು. ವಾಸ್ತವವಾಗಿ ೧೯೬೯ರ ಕಾಂಗ್ರೆಸ್ ವಿಭಜನೆಯ ನಂತರ ಲಿಂಗಾಯತ ಶಕ್ತಿ ಇಂದಿರಾ ಗಾಂಽ ನೇತೃತ್ವದ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿತ್ತಾದರೂ ಒಕ್ಕಲಿಗ ಶಕ್ತಿ ತಿರುಗಿ ಬಿದ್ದಿರಲಿಲ್ಲ. ಆದರೆ ೧೯೭೨ರಲ್ಲಿ ಅಽಕಾರಕ್ಕೆ ಬಂದ ದೇವರಾಜ ಅರಸು ನೇತೃತ್ವದ ಇಂದಿರಾ ಕಾಂಗ್ರೆಸ್ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಉಳುವವನೇ ಹೊಲದೊಡೆಯ ಎಂಬ ಮಂತ್ರವನ್ನು ಜಪಿಸಿದ ಮೇಲೆ ಒಕ್ಕಲಿಗ ಶಕ್ತಿಯೂ ಮುನಿಸಿಕೊಂಡಿತು. ಇದರ ಪರಿಣಾಮವೇ ೧೯೭೮ರ ವಿಧಾನಸಭಾ ಚುನಾವಣೆಯಲ್ಲಿಲಿಂಗಾಯತ ಶಕ್ತಿಯ ಜತೆ ಒಕ್ಕಲಿಗ ಶಕ್ತಿಯೂ ಬೆರೆತದ್ದು. ಹೀಗಾಗಿ ರಾಜ್ಯದ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿ ಆಡಳಿತಾರೂಢ ಕಾಂಗ್ರೆಸ್ ಪ್ರಬಲ ಪೈಪೋಟಿಯನ್ನು ಎದುರಿಸಬೇಕಾಯಿತು.

ಇಂತಹ ಪೈಪೋಟಿಯನ್ನು ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಪರಿಣಾಮಕಾರಿಯಾಗಿ ಎದುರಿಸಿ ಗೆಲುವು ಸಾಽಸಿತು.
ಇದಕ್ಕೆ ದೇವರಾಜ ಅರಸರು ರೂಪಿಸಿದ ರಣತಂತ್ರವೇ ಕಾರಣ. ಏಕೆಂದರೆ ತಾವು ಜಾರಿಗೆ ತರುವ ಕಾನೂನು ಒಕ್ಕಲಿಗ, ಲಿಂಗಾಯತ
ಶಕ್ತಿಗಳ ಮುನಿಸಿಗೆ ಕಾರಣವಾಗುತ್ತದೆ ಎಂಬುದನ್ನು ಅರಿತಿದ್ದ ಅರಸರು, ಇದಕ್ಕೆ ಪ್ರತಿಯಾಗಿ ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯಗಳ ಸೈನ್ಯ ಮೇಲೆದ್ದು ನಿಲ್ಲುತ್ತದೆ ಎಂಬುದನ್ನು ಬಲ್ಲವರಾಗಿದ್ದರು. ಆ ಸೈನ್ಯ ಮೇಲೆದ್ದು ನಿಲ್ಲಲು ಅವರು ಪ್ರೇರಕ ಶಕ್ತಿಯೂ ಆಗಿದ್ದರು. ಇದರ ಪರಿಣಾಮವಾಗಿ ೧೯೭೮ರ ವಿಧಾನಸಭಾ ಚುನಾವಣೆಯಲ್ಲಿ ಒಕ್ಕಲಿಗ, ಲಿಂಗಾಯತ ಶಕ್ತಿಗಳ ಬೆಂಬಲ ಹೊಂದಿದ್ದ ಜನತಾಪಕ್ಷವನ್ನು ಎದುರಿಸಿ ಕಾಂಗ್ರೆಸ್ ಗೆಲುವು ಸಾಧಿಸಿತು. ಮರಳಿ ಅಧಿಕಾರ ಸೂತ್ರ ಹಿಡಿಯಿತು.
ನಾಲ್ಕೂವರೆ ದಶಕಗಳ ನಂತರದ ಈ ಕಾಲಘಟ್ಟ ಕೂಡ ಯಥಾ ಪ್ರಕಾರ, ಕರ್ನಾಟಕದ ರಾಜಕಾರಣವನ್ನು ಕವಲು ದಾರಿಯಲ್ಲಿ ನಿಲ್ಲಿಸಿದ್ದು, ಬದಲಾದ ಸನ್ನಿವೇಶದಲ್ಲಿ ಒಕ್ಕಲಿಗ, ಲಿಂಗಾಯತ ಶಕ್ತಿಗಳು ಬೇರೆ ರೂಪದಲ್ಲಿ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಇದಕ್ಕೆ ಒಕ್ಕಲಿಗ ಶಕ್ತಿಯನ್ನು ಆಸರೆಯಾಗಿಟ್ಟುಕೊಂಡ ಜಾ.ದಳ ಮತ್ತು ಲಿಂಗಾಯತರನ್ನು ಮೂಲ ಶಕ್ತಿಯಾಗಿರಿಸಿಕೊಂಡ ಬಿಜೆಪಿ ಸಾಕ್ಷಿಯಾಗಿ ಕಾಣಿಸಿಕೊಂಡಿವೆ. ಅಂದರೆ ಬಿಜೆಪಿ-ಜಾ.ದಳ ಮಿತ್ರಕೂಟದ ಬೆನ್ನಿಗೆ ಈಗ ಒಕ್ಕಲಿಗ, ಲಿಂಗಾಯತ ಶಕ್ತಿಗಳು ನಿಲ್ಲುವ ಲಕ್ಷಣಗಳು ದಟ್ಟವಾಗಿ ಕಾಣಿಸಿಕೊಂಡಿವೆ.

 

ಇದಕ್ಕೆ ಪುಷ್ಟಿ ನೀಡಿರುವುದು ಇತ್ತೀಚಿನ ಲೋಕಸಭಾ ಚುನಾವಣೆ. ಈ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ ಮಿತ್ರಕೂಟ ದೊಡ್ಡ ಮಟ್ಟದ ಯಶಸ್ಸು ಗಳಿಸಿತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಇದ್ದರೂ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳ ಪೈಕಿ ಹತ್ತೊಂಬತ್ತು ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಗಳಿಸಿತು. ರಾಜ್ಯದ ಪ್ರಬಲ ಒಕ್ಕಲಿಗ, ಲಿಂಗಾಯತ ಶಕ್ತಿಗಳು ಕನ್‌ಸಾಲಿಡೇಟ್ ಆಗುತ್ತಿರುವುದಕ್ಕೆ ಇದೇ ಮುಖ್ಯ ಉದಾಹರಣೆ. ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಎರಡೂ ಸಮುದಾಯಗಳನ್ನು ಮೂಲ ಆಸರೆಯಾಗಿಟ್ಟುಕೊಂಡಿರುವ ಬಿಜೆಪಿ-ಜಾ.ದಳ ಮಿತ್ರಕೂಟ ಕಾಂಗ್ರೆಸ್ ಪಕ್ಷಕ್ಕೆ ಸವಾಲಾಗುವುದು
ನಿಶ್ಚಿತ. ಆದರೆ ಈಗ ಎದುರಾಗಿರುವ ಚನ್ನಪಟ್ಟಣ, ಶಿಗ್ಗಾಂವಿ ಮತ್ತು ಸಂಡೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಇದಕ್ಕೆ ಪೂರ್ವಭಾವಿ ಪರೀಕ್ಷೆಯಂತೆ ಕಾಣತೊಡಗಿದೆ. ಅಂದ ಹಾಗೆ ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಒಕ್ಕಲಿಗರ ಶಕ್ತಿ ನಗಣ್ಯವಾಗಿರುವುದರಿಂದ ಚನ್ನಪಟ್ಟಣ ಕ್ಷೇತ್ರವೇ ಕಾಂಗ್ರೆಸ್ ಮತ್ತು ಮಿತ್ರಕೂಟದ ನಡುವಣ ನಿಜ ಹೋರಾಟದ ಕಣವಾಗಿ ಪರಿವರ್ತನೆಯಾಗಿದೆ.

ಇವತ್ತು ಚನ್ನಪಟ್ಟಣದ ಕಣವನ್ನು ಕಾಂಗ್ರೆಸ್ ಪಕ್ಷವೇ ಆಗಲಿ, ಬಿಜೆಪಿ-ಜಾ.ದಳ ಮಿತ್ರಕೂಟವೇ ಆಗಲಿ, ಎಷ್ಟು ಗಂಭೀರವಾಗಿ ಪರಿಗಣಿಸಿವೆ ಎಂದರೆ ಈ ಉಪ ಚುನಾವಣೆಯಲ್ಲಿ ಗಳಿಸುವ ಸೋಲು ಮತ್ತು ಗೆಲುವು ಮುಂದಿನ ದಿನಗಳ ದಿಕ್ಸೂಚಿ ಎಂದೇ ಪರಿಗಣಿಸಿವೆ. ಒಂದು ವೇಳೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಗೆಲುವು ಗಳಿಸಿದರೆ ನಿಶ್ಚಿತವಾಗಿಯೂ ಅದು ಬಿಜೆಪಿ-ಜಾ.ದಳ ಮಿತ್ರಕೂಟದ ಶಕ್ತಿಯನ್ನು ಕುಗ್ಗಿಸಿದಂತೆಯೇ ಅರ್ಥ. ಅರ್ಥಾತ್, ಇಂತಹ ಗೆಲುವಿನ ಮೂಲಕ ಅದು ಭವಿಷ್ಯದಲ್ಲಿ ಮಿತ್ರಕೂಟವನ್ನು ಎದುರಿಸಲು ತಾನು ಶಕ್ತ ಎಂಬ ಸಂದೇಶವನ್ನು
ರವಾನಿಸಲು ಸಾಧ್ಯವಾಗುತ್ತದೆ. ಇದೇ ರೀತಿ ಮಿತ್ರಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರೇನಾದರೂ ಗೆಲುವು ಗಳಿಸಿದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಿಜೆಪಿ-ಜಾ.ದಳ ಮಿತ್ರಕೂಟದಿಂದ ಗಂಭೀರ ಸವಾಲನ್ನು ಎದುರಿಸುವುದು ಅನಿವಾರ್ಯ ಎಂಬುದು ಪಕ್ಕಾ ಆಗುತ್ತದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಿತ್ರಕೂಟಗಳು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯನ್ನು ಸಾವು-ಬದುಕಿನ ಹೋರಾಟದಂತೆ ಪರಿಗಣಿಸುವುದರಲ್ಲಿ ಅಚ್ಚರಿಯೇನೂ ಇಲ್ಲ.
ಪರಿಣಾಮ ಉಪ ಚುನಾವಣೆಯ ಕಾವು ಕರ್ನಾಟಕದ ರಾಜಕಾರಣವನ್ನು ತಲ್ಲಣಗೊಳಿಸುವುದಂತೂ ನಿಶ್ಚಿತ.

Tags: