Mysore
18
clear sky

Social Media

ಮಂಗಳವಾರ, 18 ಫೆಬ್ರವರಿ 2025
Light
Dark

ಬಿಜೆಪಿಗೂ ಅನಿವಾರ್ಯವಾದ ʻರೇವಡಿ ಕಲ್ಚರ್ʼ

ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಫೆಬ್ರವರಿ ೫ರಂದು ೭೦ ಕ್ಷೇತ್ರಗಳ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸುತ್ತಿವೆ. ಈಗಾಗಲೇ ನಾಮಪತ್ರ ಸಲ್ಲಿಕೆ ಶುರುವಾಗಿದೆ. ಚುನಾವಣೆಯಲ್ಲಿ ಅಧಿಕಾರ ಗಳಿಸಲೇಬೇಕೆನ್ನುವ ಏಕಮಾತ್ರ ಉದ್ದೇಶದಿಂದ ಮತದಾರರಿಗೀಗ ಉಚಿತ ಕೊಡುಗೆಗಳ ಸಾಲು ಸಾಲು ಘೋಷಣೆ ಮತ್ತು ಇಂಡಿಯಾ ಮೈತ್ರಿಕೂಟದಲ್ಲಿ ಒಡಕು. ಕಾಂಗ್ರೆಸ್ ಮತ್ತು ಅಮ್ ಆದ್ಮಿ ಪಾರ್ಟಿ ಪರಸ್ಪರ ತೊಡೆತಟ್ಟಿ ಚುನಾವಣೆ ಕಣಕ್ಕಿಳಿಯುವ ಮೂಲಕ ಮೈತ್ರಿಕೂಟದ ಕನಸು ಭಗ್ನವಾಗಿರುವುದು ಈ ಹೊಸದಿಲ್ಲಿ ಚುನಾವಣೆಯಲ್ಲಿ ಸ್ಪಷ್ಟವಾಗಿ ಗೋಚರಿಸಿದೆ.

ಚುನಾವಣೆಯ ಹಿನ್ನೆಲೆಯಲ್ಲಿ ದಿಲ್ಲಿ ರಾಜ್ಯ ಚುನಾವಣೆ ಬಗೆಗೆ ಒಂದು ಇಣುಕು ನೋಟವನ್ನು ಗಮನಿಸೋಣ. ಭಾರತ ಸರ್ಕಾರದ ಒಕ್ಕೂಟ ವ್ಯವಸ್ಥೆಯ ರಾಜಧಾನಿಯಾಗಿರುವ ದೆಹಲಿಯ ಆಡಳಿತದ ಮೇಲೆ ಕೇಂದ್ರ ಸರ್ಕಾರದ ಹಿಡಿತವಿದೆ. ೧೯೫೨ರಲ್ಲಿ ಮೊದಲ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಬ್ರಹ್ಮಪ್ರಕಾಶ್ ಯಾದವ್ ಎರಡು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ನಂತರ ಗುರುಮುಖ್ ನಿಹಾಲ್ ಸಿಂಗ್ ಒಂದು ವರ್ಷದ ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ೧೯೫೬ರಲ್ಲಿ ವಿಧಾನಸಭೆಯನ್ನು ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಲಾಯಿತು.

ಮತ್ತೆ ೧೯೯೩ರಲ್ಲಿ ಕೇಂದ್ರ ಸರ್ಕಾರದ ನಿಯಂತ್ರಣದ ಜೊತೆಗೆ ಹಲವು ಅಧಿಕಾರದ ಮಿತಿಗಳೊಡನೆ ಮತ್ತೆ ರಾಜ್ಯ ವಿಧಾನಸಭೆ ೧೯೯೩ರಲ್ಲಿ ಅಸ್ತಿತ್ವಕ್ಕೆ ಬಂದಿತು. ೧೯೯೩ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿತಾದರೂ ಐದು ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳನ್ನು ನೋಡಿದ ಅವಧಿಯದು. ಮೊದಲ ಬಾರಿಗೆ ಮದನ್ ಲಾಲ್ ಖುರಾನಾ, ಸಾಹೀಬ್ ಸಿಂಗ್ ವರ್ಮಾ ಮತ್ತು ಅಧಿಕಾರ ಮುಕ್ತಾಯದ ದಿನಗಳಲ್ಲಿ ಕೇವಲ ಮೂರು ತಿಂಗಳ ಅವಧಿಗೆ ಸುಷ್ಮಾ ಸ್ವರಾಜ್ ಮುಖ್ಯಮಂತ್ರಿಯಾದರು.

೧೯೯೮ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ೨೦೧೩ರವರೆಗೆ ಶೀಲಾ ದೀಕ್ಷಿತ್ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದರು. ನಂತರ ಕಾಂಗ್ರೆಸ್ ದಿಲ್ಲಿ ರಾಜ್ಯದ ಅಧಿಕಾರ ಹಿಡಿಯಲು ಆಗಿಲ್ಲ. ೨೦೧೪ರಿಂದ ೨೦೧೫ರವರೆಗೆ ದಿಲ್ಲಿಯಲ್ಲಿ ರಾಷ್ಟ್ರಪತಿ ಆಡಳಿತವಿತ್ತು. ಆ ನಂತರ ನಡೆದ ಚುನಾವಣೆಯಲ್ಲಿ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಉದ್ಭವವಾಗಿ ಬಂದ ಅರವಿಂದ ಕೇಜ್ರಿವಾಲ್ ೨೦೧೫ರಿಂದ ಮುಖ್ಯಮಂತ್ರಿ ಸ್ಥಾನದ ಗದ್ದಿಗೆ ಹಿಡಿದರು. ಆಮ್ ಆದ್ಮಿ ಪಾರ್ಟಿ ಹೆಸರಿನಲ್ಲಿ ಜನಸಾಮಾನ್ಯರ ಪಕ್ಷವಾಗಿ ದೆಹಲಿಯ ಜನರಲ್ಲಿ ಹೊಸ ಆಡಳಿತ ಶಕೆ ಶುರುವಾಯಿತು. ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಅಣ್ಣಾ ಹಜಾರೆ, ಕೇಜ್ರಿವಾಲ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರ ಸಂಘಟಿತ ಹೋರಾಟದಿಂದ ಹೊಸ ರಾಜಕೀಯ ಸಂಸ್ಕತಿ ಹುಟ್ಟಿಕೊಂಡಿತು.

೨೦೧೫ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಈ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ರಾಜಕೀಯ ಅಧಿಕಾರದ ಒಳ ಆಸೆಯಿಂದ ಅವರ ಹೋರಾಟ ಬೇರೆ ಬೇರೆ ಹಾದಿ ಹಿಡಿಯಿತು. ಅಣ್ಣಾ ಹಜಾರೆ ನಿಂತ ನೀರಾದರು. ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಕಟ್ಟಿ ಚುನಾವಣೆಗೆ ಸ್ಪರ್ಧಿಸಿದರು. ಇನ್ನು ಕಿರಣ್ ಬೇಡಿ ಅವರನ್ನು ರಾಜಕೀಯ ಅಧಿಕಾರದ ಆಮಿಷ ಬಿಡಲಿಲ್ಲ. ಅದಕ್ಕಾಗಿ ಅವರು ರಾಜಕೀಯ ಅಧಿಕಾರದ ಬೆನ್ನು ಹತ್ತಿದರು. ಈ ಅವಕಾಶವನ್ನೇ ಉಪಯೋಗಿಸಿಕೊಂಡ ಬಿಜೆಪಿಯು ಅವರನ್ನು ಪಕ್ಷಕ್ಕೆ ಸೇರಿಸಿ ಕೊಂಡು ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿತು. ಆದರೆ ಕಿರಣ್ ಬೇಡಿ ಅವರ ಬದಲಾದ ನಿಲುವು ದಿಲ್ಲಿ ಮತದಾರರಿಗೆ ಹಿಡಿಸಲಿಲ್ಲ. ದಿಲ್ಲಿ ಮತದಾರರು ಕಾಂಗ್ರೆಸ್ ಮತ್ತು ಬಿಜೆಪಿಗೆ ಹೊರತಾದ ಹೊಸ ಆಡಳಿತ ವ್ಯವಸ್ಥೆಯ ಕಡೆ ಒಲವು ತೋರಿದರು. ಹೀಗಾಗಿ ಕಾಂಗ್ರೆಸ್, ಬಿಜೆಪಿ ಸೋತು ಹೊಸ ಅಲೆಯನ್ನು ಉಂಟು ಮಾಡಿದ್ದ ಆಮ್ ಆದ್ಮಿ ಪಕ್ಷ ಅಧಿಕಾರದ ಗದ್ದಿಗೆ ಏರುವ ಮೂಲಕ ಇಡೀ ದೇಶದಲ್ಲಿ ಒಂದು ಸಂಚಲನವನ್ನು ಉಂಟು ಮಾಡಿದ್ದು ವಿಶೇಷ.

ಆಮ್ ಆದ್ಮಿ ಪಕ್ಷದ ನೇತಾರರಾದ ಅರವಿಂದ ಕೇಜ್ರಿವಾಲ್ ಭ್ರಷ್ಟಾಚಾರ ರಹಿತ ಆಡಳಿತ ನೀಡುವ ಜೊತೆಗೆ ರಾಜಧಾನಿಯ ಬದುಕು ದುಬಾರಿ ಎನಿಸಿದ್ದವರಿಗೆ ಕೆಲವು ಉಚಿತ ಕೊಡುಗೆಗಳನ್ನು ಪ್ರಕಟಿಸಿ ಆ ದಿನಗಳಲ್ಲಿ ಬಡವರಿಗೆ ಆಪದ್ಭಾಂದವರಾದರು. ಕೇಜ್ರಿವಾಲ್ ಮತದಾರರನ್ನು ಹೆಚ್ಚು ಆಕರ್ಷಿಸಿದರು. ಉಚಿತ ವಿದ್ಯತ್, ನೀರು ಪೂರೈಕೆ ಮತ್ತು ಸರ್ಕಾರಿ ಶಾಲೆಗಳನ್ನು ಖಾಸಗಿ ಕಾನ್ವೆಂಟ್ ಶಾಲೆಗಳ ಮಟ್ಟಕ್ಕೆ ತರುವ ಭರವಸೆಗಳ ಮೂಲಕ ದೆಹಲಿ ಮತದಾರರಿಗೆ ಅಚ್ಚರಿ ತಂದರು. ಅಂತು ಈ ಉಚಿತ ಕೊಡುಗೆಗಳಿಗೋ ಅಥವಾ ಹೊಸ ರಾಜಕೀಯ ವ್ಯವಸ್ಥೆಯನ್ನು ತರುವುದಕ್ಕೋ ದೆಹಲಿ ಮತದಾರರು ಆಮ್ ಆದ್ಮಿ ಪಕ್ಷದ ಕಡೆ ಒಲವು ತೋರಿದರು. ಹೀಗಾಗಿ ೨ ಚುನಾವಣೆ ಗಳಲ್ಲಿ ಅರವಿಂದ ಕೇಜ್ರಿವಾಲ್ ಗೆದ್ದು ದಿಲ್ಲಿ ಆಡಳಿತದ ಸೂತ್ರವನ್ನು ಹಿಡಿದರು. ಆದರೀಗ ಅವರ ಮೇಲೆ ನೂರಾರು ಕೋಟಿಯ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಬೆನ್ನು ಹತ್ತಿದೆ. ಅದಕ್ಕಾಗಿ ಬಿಜೆಪಿಯ ಕೇಂದ್ರ ದಲ್ಲಿನ ನರೇಂದ್ರ ಮೋದಿ ಸರ್ಕಾರ ದುರ್ಬೀನು ಹಾಕಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಹಗರಣವನ್ನು ಹುಡುಕಿದೆ. ಇದರ ಫಲವಾಗಿ ಕೇಜ್ರಿವಾಲ್ ಜೈಲಿಗೂ ಹೋಗಿ ಬಂದರು. ಜಾಮೀನಿನ ಮೇಲಿರುವ ಅವರು ಈ ಭ್ರಷ್ಟಾಚಾರದ ಆರೋಪದ ತನಿಖೆಯ ತೂಗುಗತ್ತಿ ಅವರ ಮೇಲೆ ಇರುವಾಗಲೇ ಮತ್ತೊಂದು ಚುನಾವಣೆಗೆ ಸಜ್ಜಾಗಿದ್ದಾರೆ. ಇದು ಈ ಹೊತ್ತಿನ ದಿಲ್ಲಿ ವಿಧಾನಸಭೆ ಚುನಾ ವಣೆಯ ಬೆಳವಣಿಗೆ.

ಈ ಮಧ್ಯೆ ಕೇಜ್ರಿವಾಲ್ ಅವರ ಉಚಿತ ವಿದ್ಯುತ್ ಮತ್ತು ಕುಡಿಯುವ ನೀರು ಯೋಜನೆಗಳು ಮತ್ತು ಕರ್ನಾಟಕ ಹಾಗೂ ತೆಲಂಗಾಣದ ಕಾಂಗ್ರೆಸ್ ಸರ್ಕಾರಗಳ ಗ್ಯಾರಂಟಿ ಯೋಜನೆಗಳು ಕೇಂದ್ರದ ಕಣ್ಣು ಕೆಂಪಗಾಗಿಸಿವೆ. ಈ ಉಚಿತ ಕೊಡುಗೆಗಳಿಂದ ಈ ರಾಜ್ಯಗಳು ಆರ್ಥಿಕವಾಗಿ ದಿವಾಳಿ ಆಗಲಿವೆ. ಇದೊಂದು ‘ರೇವಡಿ ಕಲ್ಚರ್‘ ಎಂದು ಪ್ರಧಾನಿ ನರೇಂದ್ರ ಮೋದಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಲೇವಡಿ ಮಾಡುತ್ತಿದ್ದರು. ರೇವಡಿ ಕಲ್ಚರ್ ಎಂದರೆ ಹಬ್ಬಗಳಲ್ಲಿ ಮತ್ತು ಜಾತ್ರೆಗಳಲ್ಲಿ ಭಕ್ತರಿಗೆ ಪ್ರಸಾದ ಎಂದು ಸಿಹಿ ಹಂಚಿದಂತೆ ಎಂದು ಮೋದಿ ಗೇಲಿ ಮಾಡಿದರು. ಆದರೆ ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ತಮ್ಮ ಈ ಉಚಿತ ಮತ್ತು ಗ್ಯಾರಂಟಿ ಯೋಜನೆ ಗಳನ್ನು ಬಲವಾಗಿ ಸಮರ್ಥಿಸಿಕೊಳ್ಳುತ್ತಿವೆ. ಜನಸಾಮಾನ್ಯರ ಕೌಟುಂಬಿಕ ವ್ಯವಸ್ಥೆ ಆರ್ಥಿಕವಾಗಿ ಬಲಗೊಳ್ಳಲು ಇವು ಸಹಕಾರಿ. ತಮಗಿರುವ ಸಂಪನ್ಮೂಲದಲ್ಲಿ ಅಭಿವೃದ್ಧಿಗೆ ಯಾವ ತೊಂದರೆಯೂ ಇಲ್ಲ ಎನ್ನುವುದು ಈ ಪಕ್ಷಗಳ ಸರ್ಕಾರದ ಸಮರ್ಥನೆ.

ಬಿಜೆಪಿ ನೇತೃತ್ವದ ಶಿವಸೇನೆಯ ಮಹಾಯುತಿ ಸರ್ಕಾರವೂ ಲಾಡ್ಲಿ ಬೆಹನ್ ಯೋಜನೆಯಿಂದ ಮಹಿಳಾ ಮತದಾರರನ್ನು ಆಕರ್ಷಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬಂದ ವಾಸ್ತವ ಸತ್ಯವನ್ನು ಅರ್ಥಮಾಡಿಕೊಂಡಿರುವ ಬಿಜೆಪಿಯು ಈಗ ದಿಲ್ಲಿ ಮತದಾರರಿಗೆ ಉಚಿತ ಸವಲತ್ತು ನೀಡುವ ಚುನಾವಣೆಯ ಗೆಲುವಿನ ತಂತ್ರವನ್ನಾಗಿ ಮಾಡಿಕೊಂಡಿರುವುದು ವಿಶೇಷ, ಈ ಬದಲಾದ ನಿಲುವಿಂದಾಗಿ ಈಗ ರಾಷ್ಟ್ರೀಯ ಮಟ್ಟದಲ್ಲಿ ಉಚಿತ ಕೊಡುಗೆಗಳ ಚರ್ಚೆ ನಡೆದಿದೆ.

ದೇಶದಲ್ಲಿ ಉಚಿತ ಸವಲತ್ತು ನೀಡುವ ಸಂಪ್ರದಾಯವನ್ನು ಮೊದಲ ಬಾರಿಗೆ ತಮಿಳುನಾಡಿನಲ್ಲಿ ೧೯೫೦ರಲ್ಲಿ ಮುಖ್ಯಮಂತ್ರಿ ಆಗಿದ್ದ ಕಾಮರಾಜ್ ಜಾರಿಗೆ ತಂದರು. ೧೯೭೭ರಲ್ಲಿ ಎಂ. ಜಿ. ರಾಮಚಂದ್ರನ್ ಅವರು ಶಾಲೆಗಳಿಗೆ ಹೆಚ್ಚು ಮಕ್ಕಳನ್ನು ಆಕರ್ಷಿಸಲು ಮಧ್ಯಾಹ್ನದ ಬಿಸಿಯೂಟ ಸೌಲಭ್ಯವನ್ನು ಜಾರಿಗೆ ತಂದರು. ಆ ನಂತರ ಜಯಲಲಿತಾ ಅವರು ತಮ್ಮ ಆಡಳಿತದಲ್ಲಿ ಬಡವರಿಗೆ ಕಲರ್ ಟಿವಿ, ಉಚಿತ ಅಕ್ಕಿ, ಗ್ರೈಂಡರ್ ಸೇರಿದಂತೆ ಮನೆಗಳಿಗೆ ಬೇಕಾದ ಅವಶ್ಯ ವಸ್ತುಗಳನ್ನು ನೀಡುವ ಮೂಲಕ ಮತದಾರರನ್ನು ಆಕರ್ಷಿಸಿದರು. ನಂತರ ಒಡಿಶಾದಲ್ಲಿ ನವೀನ್ ಪಟ್ನಾಯಕ್ ಬಡತನದ ರೇಖೆ ಕೆಳಗಿರುವವರಿಗೆ ಒಂದು ರೂಪಾಯಿಗೆ ಒಂದು ಕೆಜಿಯಂತೆ ಅಕ್ಕಿ ನೀಡುವ ಕಾರ್ಯಕ್ರಮವನ್ನು ಆರಂಭಿಸಿದರು.

ಇಂತಹ ಕಾರ್ಯಕ್ರಮದಲ್ಲಿ ಕರ್ನಾಟಕವೂ ಹಿಂದೆ ಬೀಳಲಿಲ್ಲ. ದೇವರಾಜ ಅರಸು ಕಾಲದಿಂದ ಹಿಡಿದು ಇಂದಿನವರೆಗೂ ಬಡತನ ರೇಖೆಯ ಕೆಳಗಿ ರುವವರಿಗೆ ಹತ್ತಾರು ಉಚಿತ ಸೌಲಭ್ಯಗಳನ್ನು ನೀಡುತ್ತಾ ಬರಲಾಗಿದೆ. ಆರ್. ಗುಂಡೂರಾವ್ ಅವರ ಆಡಳಿತದವರೆಗೂ ಇದ್ದ ಈ ಉಚಿತ ಕಾರ್ಯ ಕ್ರಮಗಳನ್ನು ಟೀಕಿಸುತ್ತಿದ್ದ ಜನತಾ ಪಕ್ಷವು ರಾಮಕೃಷ್ಣ ಹೆಗಡೆ ಅವರ ನೇತೃ ತ್ವದಲ್ಲಿ ಅಧಿಕಾರಕ್ಕೆ ಬಂದಾಗ ಬಡತನ ರೇಖೆಗಿಂತ ಕೆಳಗಿರುವವರನ್ನೂ ಮುಖ್ಯವಾಹಿನಿಗೆ ಕರೆದುಕೊಂಡು ಹೋಗಬೇಕಾದರೆ ಹಲವು ಉಚಿತ ಕಾರ್ಯಕ್ರಮಗಳು ಅನಿವಾರ್ಯ ಆದವು. ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ವಿಧವಾ ಪಿಂಚಣಿ, ಹಿರಿಯ ನಾಗರಿಕರಿಗೆ ಮತ್ತು ಸ್ವಾತಂತ್ರ್ಯ ಹೋರಾಟ ಮಾಡಿ ಕಷ್ಟದಲ್ಲಿರುವ ಜನರಿಗೆ ಪಿಂಚಣಿ ಯೋಜನೆಯನ್ನು ಹೆಗಡೆ ಜಾರಿಗೆ ತಂದರು. ಫ್ಯೂಡಲ್ ವ್ಯವಸ್ಥೆಯಿಂದ ಬಂದ ಅವರ ಸರ್ಕಾರದ ಒಂದಿಬ್ಬರು ಸಚಿವರು ಹೆಗಡೆ ಅವರ ಈ ಉಚಿತ ಕಾರ್ಯಕ್ರಮಗಳನ್ನು ಟೀಕಿಸಿದ್ದು ಈಗ ಇತಿಹಾಸ. ರೈತರಿಗೆ ಉಚಿತ ವಿದ್ಯುತ್ ಸೇರಿದಂತೆ ಹತ್ತಾರು ಕಾರ್ಯಕ್ರಮಗಳನ್ನು ಜನತಾದಳ ಮತ್ತು ಬಿಜೆಪಿಯು ತಮ್ಮ ಆಡಳಿತ ಬಂದಾಗ ಮುಂದುವರಿಸಬೇಕಾದ ಅನಿವಾರ್ಯ ಪರಿಸ್ಥಿತಿಯೂ ಬಂದಿತು.

ಈ ಎಲ್ಲ ವೈರುಧ್ಯದ ನಡುವೆ ಬಿಜೆಪಿಯು ಈಗ ತನ್ನ ಚುನಾವಣಾ ಪ್ರಣಾಳಿಕ ಸಂಕಲ್ಪ ಪತ್ರದ ಮೊದಲ ಭಾಗದಲ್ಲಿ ಗರ್ಭಿಣಿಯರಿಗೆ ಆರು ಆರೋಗ್ಯ ಕಿಟ್‌ಗಳನ್ನು ನೀಡಿದೆ. ಜೊತೆಗೆ ಮುಖ್ಯಮಂತ್ರಿ ಮಾತೃ ಸುರಕ್ಷಾ ಯೋಜನೆಯಡಿ ೨೧ ಸಾವಿರ ರೂ. ಆರ್ಥಿಕ ನೆರವು, ಹೋಳಿ ಮತ್ತು ದೀಪಾವಳಿಗೆ ನೀಡುತ್ತಿರುವ ಎರಡು ಉಚಿತ ಅಡುಗೆ ಅನಿಲದ ಜೊತೆಗೆ ತಾನು ಅಧಿಕಾರಕ್ಕೆ ಬಂದರೆ ಪ್ರತಿ ಸಿಲಿಂಡರ್‌ಗೆ ೫೦೦ ರೂ. ಸಬ್ಸಿಡಿ, ಮಹಿಳಾ ಸಮೃದ್ಧಿ ಯೋಜನೆಯಂತೆ ೨,೫೦೦ ರೂ, ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯಂತೆ ೫ ಲಕ್ಷ ರೂ. ವೆಚ್ಚವನ್ನು ಭರಿಸುವುದು, ಎಪ್ಪತ್ತು ವರ್ಷ ವಯಸ್ಸು ದಾಟಿದವರಿಗೆ ಉಚಿತ ಒಪಿಡಿ ಸೌಲಭ್ಯ, ರೋಗ ತಪಾಸಣೆ ಸೇರಿದಂತೆ ೫ ಲಕ್ಷ ರೂ. ಗಳಿಂದ ೧೦ ಲಕ್ಷ ರೂ. ವರೆಗಿನ ಆರ್ಥಿಕ ನೆರವು, ಹಿರಿಯ ನಾಗರಿಕರಿಗೆ ನೀಡುತ್ತಿರುವ ಪಿಂಚಣಿಯನ್ನು ೨,೦೦೦ ರೂ. ಗಳಿಂದ ೨,೫೦೦ ರೂ. ಗೆ ಹೆಚ್ಚಳ, ಕೊಳೆಗೇರಿಗಳಲ್ಲಿ ಅಟಲ್ ಹೆಸರಿನಲ್ಲಿ ಕ್ಯಾಂಟೀನ್ ತೆರೆದು ೫ ರೂಪಾಯಿಗೆ ಊಟ ನೀಡುವ ಭರವಸೆಯನ್ನು ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಅವರು ಪ್ರಕಟಿಸಿದ್ದಾರೆ.

ಸಂಕಲ್ಪ ಪತ್ರ ಹೆಸರಿನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಿರುವ ಅವರು ಇದು ಮೊದಲ ಹಂತದ ಕಾರ್ಯಕ್ರಮ. ಸದ್ಯದಲ್ಲಿಯೇ ಮತ್ತೆ ಎರಡು ಹಂತಗಳಲ್ಲಿ ಕಾರ್ಯಕ್ರಮಗಳನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಜಾರಿಯಲ್ಲಿರುವ ಲಾಡ್ಲಿ ಬೆಹನ್ ಯೋಜನೆಯನ್ನು ದೆಹಲಿಯಲ್ಲೂ ತರುವುದಾಗಿ ಬಿಜೆಪಿ ಹೇಳಿಕೊಂಡಿದೆ. ಆಮ್ ಆದ್ಮಿ ಪಾರ್ಟಿ ಮತ್ತು ಕಾಂಗ್ರೆಸ್ ಮಾಮೂಲಿನಂತೆ ಹೀಗಾಗಲೇ ಜಾರಿ ಯಲ್ಲಿರುವ ಗ್ಯಾರಂಟಿ ಯೋಜನೆಗಳನ್ನು ಮತ್ತಷ್ಟು ಪುನರಾವರ್ತಿಸಿ ದೆಹಲಿ ಚುನಾವಣೆ ಯಲ್ಲಿ ತರುವುದಾಗಿ ಹೇಳಿಕೊಂಡಿವೆ. ಕರ್ನಾಟಕ ಮತ್ತು ತೆಲಂಗಾಣದಲ್ಲಿನ ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿರುವ ಈ ರಾಜ್ಯಗಳು ದಿವಾಳಿಯಾಗುತ್ತಿವೆ ಎನ್ನುವ ಚರ್ಚೆ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಉಚಿತ ಕೊಡುಗೆ ಗಳಿಂದ ನಿಜವಾದ ಅಭಿವೃದ್ಧಿ ಹಿಂದೆ ಬೀಳಲಿದೆ ಎನ್ನುವ ಕೂಗು ಆತಂಕ ಕಾರಿಯೋ ಅಥವಾ ವಿರೋಧಿ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಲೋ ಎನ್ನುವುದು ಈಗ ಬಿಜೆಪಿಯು ಅದೇ ಹಾದಿ ಹಿಡಿದಿರುವುದರಿಂದ ಮತದಾರ ರಾಜಕೀಯ ಪಕ್ಷಗಳ ಮತ್ತು ನಾಯಕರ ನಿಲುವನ್ನು ಹೇಗೆ ಅರ್ಥೈಸಿ ಕೊಳ್ಳಬೇಕೋ ಗಂಭೀರವಾಗಿ ಚಿಂತಿಸಬೇಕಿದೆ.

Tags: