Mysore
21
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಗಾಂಧಿ ಇಲ್ಲದ ಕಾಂಗ್ರೆಸ್‌ಗೆ ಮಹಾತ್ಮನ ಪ್ರಸ್ತುತತೆ

ಬೌದ್ಧಿಕವಾಗಿ ಗಾಂಧಿಯನ್ನು ಕಳೆದುಕೊಂಡಿರುವ ವರ್ತಮಾನದ ಕಾಂಗ್ರೆಸ್‌ ಮತ್ತು ರಾಜಕಾರಣ

ನಾ. ದಿವಾಕರ

೧೯೨೪-೨೫ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಗಾಂಧಿ ನೇತೃತ್ವ ವಹಿಸಿದ್ದ ಏಕೈಕ ಮಹಾಧಿವೇಶನಕ್ಕೆ ಈಗ ನೂರು ವರ್ಷ ತುಂಬಿದೆ. ಕರ್ನಾಟಕ ಸರ್ಕಾರ ಈ ಚಾರಿತ್ರಿಕ ಸಂದರ್ಭವನ್ನು ಸ್ಮರಿಸಲು ಹಾಗೂ ಭವಿಷ್ಯದ ತಲೆ ಮಾರಿಗೆ ಗಾಂಧಿಯನ್ನು ರಾಷ್ಟ್ರದ ಇಂದಿನ ಅಗತ್ಯ ಎಂದು ಬಿಂಬಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರ ಗಾಂಧಿ ಆದರ್ಶಗಳ ಅನುಸರಣೆ, ತಾತ್ವಿಕ ಅಳವಡಿಕೆ ಮತ್ತು ಅವರ ಕನಸು ನನಸಾಗುವ ಘೋಷ ವಾಕ್ಯಗಳನ್ನು ಹೊತ್ತು ಆಚರಿಸುತ್ತಿದೆ. ಪ್ರತಿಮೆ, ಆರಾಧನೆ ಮತ್ತು ಭವ್ಯ ಸೌಧದ ನಿರ್ಮಾಣ ಈ ಆಚರಣೆಗಳಿಂದಾಚೆಗೆ ಬೆಳಗಾವಿಯ ಸಮಾವೇಶ ಮತ್ತೇನನ್ನು ಸಾಧಿಸಲು ಹೊರಟಿದೆ ಎನ್ನುವುದು ವರ್ತಮಾನದ ಪ್ರಶ್ನೆಯಾಗಿದೆ.

ರಾಜಕೀಯ ಪ್ರಶ್ನೆಗಳನ್ನು ಬದಿಗಿಟ್ಟು, ನೂರು ವರ್ಷಗಳ ಹಿಂದೆ ನೋಟ ಹೊರಳಿಸಿದಾಗ, ೧೯೨೪ರ ಬೆಳಗಾವಿ ಅಧಿವೇಶನ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಒಂದು ಮಹತ್ತರ ಮೈಲಿಗಲ್ಲಿನಂತೆ ಕಾಣುತ್ತದೆ. ಅಂದಿನ ಕಾಂಗ್ರೆಸ್ ಎಂದರೆ ಅಧಿಕಾರ ಹಂಬಲದ, ಧನಾರ್ಜನೆಯ ಲಾಲಸೆಯ, ವ್ಯಕ್ತಿ ಪ್ರತಿಷ್ಠೆಯ, ಆತ್ಮರತಿಯ, ಸ್ವಾರ್ಥ ರಾಜಕಾರಣಿಗಳ ಒಕ್ಕೂಟ ಅಲ್ಲ. ಆಂತರಿಕ ವಾಗಿ ಹಲವು ತಾತ್ವಿಕ ಭಿನ್ನಾಭಿಪ್ರಾಯಗಳು, ಸೈದ್ಧಾಂತಿಕ ವೈರುಧ್ಯಗಳು ಹಾಗೂ ವ್ಯಕ್ತಿಗತ ಪೈಪೋಟಿಯ ವಾತಾವರಣ ಇದ್ದಾಗ್ಯೂ ೧೯೨೪ ತನ್ನ ಚಾರಿತ್ರಿಕ ಮಹತ್ವವನ್ನು ದಾಖಲಿಸಿದ್ದಕ್ಕೆ ಕಾರಣ, ಅದು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಚಾಲನೆ ಮತ್ತು ರೂಪಿಸಿದ ಹಾದಿ.

ಗಾಂಧಿ ಪ್ರಥಮ ಬಾರಿ ಸಾಮಾಜಿಕ ಸುಧಾರಣೆಯ ಹಾದಿಯಲ್ಲಿ ಅಸ್ಪ ಶ್ಯತೆಯ ವಿರುದ್ಧ ತಾತ್ವಿಕ ಹೋರಾಟಕ್ಕೆ ಕರೆ ನೀಡಿದ್ದೂ ಬೆಳಗಾವಿಯ ವೈಶಿಷ್ಟ . ಅಸ್ಪ ಶ್ಯತೆಯ ನಿವಾರಣೆಯಲ್ಲಿ ಅನುಸರಿಸಬೇಕಾದ ಕಾರ್ಯತಂತ್ರ ಮತ್ತು ಹಾದಿ ಅಂಬೇಡ್ಕರ್ ಅವರಿಂದ ಭಿನ್ನವಾಗಿದ್ದರೂ, ಉದ್ದೇಶದಲ್ಲಿ ವ್ಯತ್ಯಾಸವೇನೂ ಇರಲಿಲ್ಲ. ಡಾ. ಬಿ. ಆರ್. ಅಂಬೇಡ್ಕರ್ ಅಸ್ಪೃಶ್ಯರ ನಡುವೆ ನಿಂತು ತಮ್ಮ ವಿಮೋಚನೆಯ ಹಾದಿ ಹುಡುಕಿದರೆ ಗಾಂಧಿ ಹೊರಪದರದಲ್ಲಿ ನಿಂತು ಶೋಧಿಸಿದ್ದರು. ತಮ್ಮ ಅನುಭಾವದ ನೆಲೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವೂ ಗಾಂಧಿಯವರಿಗೆ ಇರಲಿಲ್ಲ.

೧೯೨೫ರಲ್ಲಿ ಹಿಂದುತ್ವದ ಉಗಮದೊಂದಿಗೆ ಆರಂಭವಾದ ಆರ್‌ಎಸ್‌ಎಸ್ ಸೈದ್ಧಾಂತಿಕವಾಗಿ ಒಂದು ಧ್ರುವವನ್ನು ಆಕ್ರಮಿಸಿದರೆ ಮತ್ತೊಂದು ಧ್ರುವದಲ್ಲಿ ಮೊಹಮ್ಮದ್ ಅಲಿ ಜಿನ್ನಾ ಅವರ ಎರಡು ರಾಷ್ಟ್ರಗಳ ಪರಿಕಲ್ಪನೆ ಮೊದಲ ಬಾರಿಗೆ ಚಾಲನೆ ಪಡೆದುಕೊಂಡಿತ್ತು. ಈ ಎರಡು ಅತಿರೇಕಗಳ ನಡುವೆ ಬಂಡವಾಳಶಾಹಿ-ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಕಮ್ಯುನಿಸ್ಟ್ ಪಕ್ಷದ ಉದಯವಾಗಿತ್ತು. ಇವುಗಳ ನಡುವೆ ಸಮಾಜವಾದಿ ಬಣಗಳು ತಮ್ಮದೇ ಆದ ರಾಜಕೀಯ ಧೋರಣೆಯನ್ನು ಪ್ರತಿ ಪಾದಿಸಲಾರಂಭಿಸಿದ್ದವು. ಡಾ. ಬಿ. ಆರ್. ಅಂಬೇಡ್ಕರ್ ಮತ್ತು ಗಾಂಧಿ ನಡುವಿನ ತಾತ್ವಿಕ ವಿರಸ ಉಲ್ಪಣಿಸಿದ್ದೂ ಈ ಸಮಯದಲ್ಲೇ. ಈ ಎಲ್ಲ ವೈರುಧ್ಯ ಮತ್ತು ವಿರೋಧಾ ಭಾಸಗಳ ನಡುವೆಯೇ ಮುಂದಿನ ಎರಡು ದಶಕಗಳ ಕಾಲ ದೇಶದ ಜನಸಾಮಾನ್ಯರನ್ನು ಸ್ವಾತಂತ್ರ್ಯ ಮತ್ತು ವಿಮೋಚನೆಯೆಡೆಗೆ ಕೊಂಡೊಯ್ದಿದ್ದು ‘ಗಾಂಧಿ’ ಎಂಬ ಒಂದು ಆಯಸ್ಕಾಂತೀಯ ಶಕ್ತಿ. ಸ್ವಾತಂತ್ರ್ಯಪೂರ್ವ ಭಾರತದ ಹೋರಾಟಗಳನ್ನು ಹಾಗೂ ಸಂಘರ್ಷಗಳನ್ನು ಏಕ ವ್ಯಕ್ತಿಗೆ ಆರೋಪಿಸದೆ ನೋಡಿದಾಗ, ‘ಗಾಂಽ’ ಎಲ್ಲರನ್ನೂ ಒಳಗೊಳ್ಳುವ ಒಂದು ಶಕ್ತಿಯಾಗಿ ಕಾಣುತ್ತಾರೆ.

ವರ್ತಮಾನದ ನೆಲೆಯಲ್ಲಿ

ಈ ಚಾರಿತ್ರಿಕ ಸಂದರ್ಭಗಳಿಂದ ಹೊರಬಂದು ವರ್ತಮಾನ ಭಾರತದತ್ತ ನೋಡಿದಾಗ ನಮಗೆ ಗಾಂಧಿ ಎಲ್ಲಿ ಕಾಣುತ್ತಾರೆ? ಇಂದು ಭಾರತ ಮತ್ತೊಂದು ಕವಲು ಹಾದಿಯಲ್ಲಿ ನಿಂತಿದೆ. ೧೯೨೪ರ ಬೆಳಗಾವಿ ಮಹಾಽವೇಶನಕ್ಕೆ ಮರು ಜೀವ ನೀಡಲು ರಾಜ್ಯ ಸರ್ಕಾರ ಗಾಂಽ ಭಾರತವನ್ನು ಮರುನಿರ್ಮಿಸುವ ಉದಾತ್ತ ಘೋಷಣೆಯೊಂದಿಗೆ ಬೆಳಗಾವಿಯಲ್ಲಿ ಚರಿತ್ರೆಯ ಮರು ನಿರ್ಮಾಣಕ್ಕೆ ಪ್ರಯತ್ನಿಸುತ್ತಿದೆ. ಆದರೆ ‘ಗಾಂಧಿ ಭಾರತ’ ಎಂದರೇನು ಎಂಬ ಪ್ರಶ್ನೆಗೆ ಬಹುಶಃ ಮುಖ್ಯವಾಹಿನಿಯ ಯಾವ ಪಕ್ಷಗಳಲ್ಲೂ ಉತ್ತರ ಸಿಗುವುದಿಲ್ಲ. ಗಾಂಧಿ ಆದರ್ಶಗಳನ್ನು ಅನುಸರಿಸುವುದು, ತತ್ವಗಳನ್ನು ಅಳವಡಿಸಿಕೊಳ್ಳುವುದು ಮತ್ತು ಕನಸನ್ನು ನನಸಾಗಿಸುವುದು, ಈ ಮೂರೂ ಘೋಷವಾಕ್ಯಗಳು ಮೊಳಗುತ್ತಿವೆ. ಆಚರಣಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಇದು ಆಕರ್ಷ ಣೀಯವಾದರೂ ಭಾರತವನ್ನು ಆಳುತ್ತಿರುವ ಸರ್ಕಾರಗಳ ಸಾಮಾಜಿಕ ಧೋರಣೆ, ಆರ್ಥಿಕ ನೀತಿ ಮತ್ತು ಸಾಂಸ್ಕೃತಿಕ ನಡೆಯನ್ನು ಗಮನಿಸಿದಾಗ, ಈ ಮೂರೂ ಘೋಷಣೆಗಳು ಅಲಂಕಾರಿಕವಾಗಿ ಮಾತ್ರ ಕಾಣಲು ಸಾಧ್ಯ.

 

ಮೊದಲನೆಯದಾಗಿ ಗಾಂಧಿ ಆದರ್ಶಗಳ ಅನುಸರಣೆ ಎಂದರೇನು? ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತೆ, ಸರಳ ಜೀವನಶೈಲಿ ಮತ್ತು ಎಲ್ಲರನ್ನೊಳಗೊಳ್ಳುವ ಸಾಮಾಜಿಕ ಪರಿಸರ. ಇಂದು ದೇಶವನ್ನು ಆಳುತ್ತಿರುವ ರಾಜಕೀಯ ಪಕ್ಷಗಳು, ಕಾಂಗ್ರೆಸ್ ಒಳಗೊಂಡಂತೆ, ಈ ಮೂರು ಆದರ್ಶಗಳನ್ನು ಪುನರುಚ್ಚರಿಸುವ ನೈತಿಕತೆಯನ್ನು ಉಳಿಸಿಕೊಂಡಿವೆಯೇ? ಕಳೆದ ಚುನಾ ವಣೆಗಳಲ್ಲಿ ಶಾಸನಸಭೆಗೆ ಆಯ್ಕೆಯಾದ ಜನಪ್ರತಿನಿಧಿಗಳ ಪೈಕಿ ಬಿಜೆಪಿಯ ಶೇ. ೫೮, ಕಾಂಗ್ರೆಸ್‌ನ ಶೇ. ೫೨ ಮತ್ತು ಜಾ. ದಳದ ಶೇ. ೧೯ರಷ್ಟು ಅಭ್ಯರ್ಥಿಗಳು ಅಪರಾಧದ ಹಿನ್ನೆಲೆಯುಳ್ಳವರಾಗಿದ್ದಾರೆ. ಇಲ್ಲಿಂದಲೇ ಉಗ ಮಿಸುವ ಭ್ರಷ್ಟತೆಯ ಬೇರುಗಳು ರಾಜ್ಯದ ವಿಶ್ವವಿದ್ಯಾನಿಲಯಗಳನ್ನೂ ಒಳಗೊಂಡಂತೆ, ಇಡೀ ಶೈಕ್ಷಣಿಕ ವಲಯವನ್ನು ಆಕ್ರಮಿಸಿವೆ.

ಎರಡನೆಯ ಘೋಷವಾಕ್ಯ ಗಾಂಧಿ ತತ್ವದ ಅಳವಡಿಕೆ. ಸರಳ ಜೀವನ, ಸಹಬಾಳ್ವೆ, ಎಲ್ಲರನ್ನೂ ಒಳಗೊಳ್ಳುವ ಮನಸ್ಥಿತಿ ಮತ್ತು ಸಾಮಾಜಿಕವಾಗಿ ನೆಲದ ಮೇಲೆ, ಅವಕಾಶವಂಚಿತರ ನಡುವೆ ನಿಂತು ಸುತ್ತಲಿನ ಸಮಾಜವನ್ನು ನೋಡುವ ವ್ಯವಧಾನ ಇವೆಲ್ಲವೂ ಗಾಂಧಿ ತತ್ವಗಳು. ಖಾದಿ ಒಂದು ಸಂಕೇತ ಮಾತ್ರ. ಇಂದಿನ ಸರ್ಕಾರವಾಗಲೀ, ಅಧಿಕಾರದಿಂದ ಹೊರಗಿರುವ ರಾಜಕೀಯ ನಾಯಕರಾಗಲೀ ಈ ವ್ಯವಧಾನವನ್ನು ರೂಢಿಸಿಕೊಂಡಿದ್ದಾರೆಯೇ? ಸರಳತೆ ಮತ್ತು ಸಹಬಾಳ್ವೆಯನ್ನು ತಮ್ಮ ಜೀವನಾದರ್ಶವಾಗಿ ಪಾಲಿಸುತ್ತಿರುವ ಒಬ್ಬರನ್ನಾದರೂ ನಮ್ಮ ನಡುವೆ ಕಾಣಲು ಸಾಧ್ಯವಿದೆ? ಇದಾವುದೂ ಇಲ್ಲದೆ ೧೯೨೪ರ ಬೆಳಗಾವಿಯ ಅಽವೇಶನವನ್ನು ನೆನೆಯುವುದು ಕೇವಲ ಆಡಂಬರ ಆದೀತು.

ಮೂರನೆಯ ಘೋಷವಾಕ್ಯ, ಗಾಂಧಿ ಕನಸನ್ನು ನನಸಾಗಿಸುವುದು. ಗಾಂಧಿಯ ಕನಸು ಗ್ರಾಮ ಭಾರತ. ತಾತ್ವಿಕವಾಗಿ ಗ್ರಾಮ ಭಾರತದ ಮೂಲ ತತ್ವಗಳು ವರ್ತಮಾನದ ಸಂದರ್ಭದಲ್ಲಿ ಪ್ರಶ್ನಾರ್ಹವಾಗಬಹುದಾದರೂ, ಇಂದಿಗೂ ೬,೪೯ ೪೮೧ ಗ್ರಾಮಗಳನ್ನು ತನ್ನ ಒಡಲಲ್ಲಿಟ್ಟುಕೊಂಡು, ವಿಶ್ವಗುರು ಆಗಲು ಹೊರಟಿರುವ ವಿಕಸಿತ ಭಾರತ ಈ ಗ್ರಾಮಗಳ ಆರ್ಥಿಕತೆಯನ್ನು ಎಷ್ಟು ಸುಧಾರಿಸಲು ಸಾಧ್ಯವಾಗಿದೆ. ಈ ಗ್ರಾಮಗಳಿಂದ ತಮ್ಮ ಅನಿಶ್ಚಿತ ಬದುಕನ್ನು ಕಟ್ಟಿಕೊಳ್ಳಲು ನಿರಂತರವಾಗಿ ವಲಸೆ ಹೋಗುವ ಬೃಹತ್ ಜನಸಂಖ್ಯೆಯ ಜೀವನ ಮತ್ತು ಜೀವನೋಪಾಯದ ಹಾದಿ ನವ ಉದಾರವಾದ ಮತ್ತು ಕಾರ್ಪೊರೇಟ್ ಮಾರುಕಟ್ಟೆಯ ಆಕ್ರಮಣದಿಂದ ದುರ್ಬರವಾಗುತ್ತಲೇ ಇದೆ. ಇಪ್ಪತ್ತೈದು ವರ್ಷಗಳಲ್ಲಿ ಮೂರು ಲಕ್ಷ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಇದಕ್ಕೆ ಸಾಕ್ಷಿ. ಎಲ್ಲ ಬೂರ್ಷ್ವಾ ಪಕ್ಷಗಳು ನವ ಉದಾರವಾದಿ ಕಾರ್ಪೋರೇಟ್ ಮಾರುಕಟ್ಟೆಯನ್ನು ಆರಾಧಿಸುತ್ತಿರುವ ಈ ಹೊತ್ತಿನಲ್ಲಿ, ಈ ವಂಚಿತ ಜನತೆ ಎತ್ತ ಹೋಗಬೇಕು? ಗಾಂಧಿ ಇಲ್ಲಿ ತಾತ್ವಿಕವಾಗಿ ಪ್ರಸ್ತುತವಾಗುತ್ತಾರೆ.

ವ್ಯಕ್ತಿ ಮತ್ತು ವ್ಯಕ್ತಿತ್ವದ ನೆಲೆಯಲ್ಲಿ

ಗಾಂಧಿ ಆಗಲೀ ಅಥವಾ ಅಂಬೇಡ್ಕರ್ ಆಗಲೀ, ಮೂಲತಃ ಇರಬೇಕಾದ್ದು ರಾಜಕೀಯ ನಾಯಕರ ವ್ಯಕ್ತಿತ್ವಗಳಲ್ಲಿ. ಅವರ ಜೀವನ ಧ್ಯೇಯಗಳನ್ನು ಯಥಾವತ್ತಾಗಿ ಪಾಲಿಸುವ ಸಂತರಾಗಬೇಕಿಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿ, ಆಡಳಿತ ವ್ಯವಸ್ಥೆಯಲ್ಲಿ ಮಹಾತ್ಮನ ಆದರ್ಶಗಳನ್ನು ಅನುಸರಿಸುವಷ್ಟು ಮಟ್ಟಿಗಾದರೂ, ಬೌದ್ಧಿಕ ಆಲೋಚನೆ ರಾಜಕಾರಣಿಗಳಲ್ಲಿರಬೇಕಲ್ಲವೇ? ಬೆಳಗಾವಿಗೆ ಹೊರಡುವ ಮುನ್ನ, ಅಲ್ಲಿ ೧೯೨೪ರ ಚಾರಿತ್ರಿಕ ಸಂದರ್ಭವನ್ನು ಪುನರ್ ಸೃಷ್ಟಿಸುವ ಮುನ್ನ, ಸಮಾಜವಾದ-ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧತೆಯನು ತೋರುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ವರ್ತ ಮಾನದ ಇಡೀ ರಾಜಕೀಯ ಬಳಗ, ಈ ಮೇಲಿನ ಪ್ರಶ್ನೆಗಳಿಗೆ ಎದೆಮುಟ್ಟಿ ಕೊಂಡು ಉತ್ತರಿಸಬೇಕಿದೆ. ಇಲ್ಲವಾದರೆ ಈಗಾಗಲೇ ರಾಜಕೀಯ ಚದು ರಂಗದಲ್ಲಿ ಪಗಡೆಯಾಗಿರುವ ಗಾಂಧಿ ಕೇವಲ ಪ್ರತಿಮೆಯಾಗಿ ಅಲಂಕಾರಿಕವಾಗಿಬಿಡುತ್ತಾರೆ.

ಈ ಕನಸುಗಳನ್ನು ಸಾಕಾರಗೊಳಿಸಬೇಕಾದರೆ ಭಾರತದ ಕಟ್ಟಕಡೆಯ ವ್ಯಕ್ತಿಯೂ ಕೇವಲ ಕನಸು ಕಟ್ಟುವ ಭ್ರಮೆಯಿಂದ ಹೊರಬಂದು ವಾಸ್ತವ ಬದುಕಿನಲ್ಲಿ ಸುಸ್ಥಿರಜೀವನ ಕಾಣುವಂತಾಗಬೇಕು. ನವ ಉದಾರವಾದ ಮತ್ತು ಕಾರ್ಪೊರೇಟ್ ಬಂಡವಾಳಶಾಹಿ ಮಾರುಕಟ್ಟೆಯ ಪ್ರಭಾವದಿಂದ ಭ್ರಮಾಧಿನರಾಗುತ್ತಿರುವ ಬೃಹತ್ ಯುವಸ್ತೋಮವನ್ನು ಭ್ರಮಾತ್ಮಕತೆ ಯಿಂದ ವಿಮೋಚನೆಗೊಳಿಸಿ ವಾಸ್ತವದಲ್ಲಿ ಬದುಕುವಂತೆ ಮಾಡಬೇಕು. ಸಮಾಜವಾದ ಮತ್ತು ಸಂವಿಧಾನ ಗ್ರಾಂಥಿಕವಾಗಿ ಉಳಿಯದೆ ಸಮಾಜದ ಕಟ್ಟಕಡೆಯ ಅವಕಾಶವಂಚಿತ ವ್ಯಕ್ತಿಗೆ ಅನ್ವಯಿಸುವಂತಾಗಬೇಕು. ಇದು ಸಾಧ್ಯವಾಗಬೇಕಾದರೆ ಭಾರತದ ಅಧಿಕಾರ ರಾಜಕಾರಣ ಊಳಿಗಮಾನ್ಯ ಪಿತೃಪ್ರಧಾನತೆ, ಕಾರ್ಪೊರೇಟ್ ಮಾರುಕಟ್ಟೆ, ಬಂಡವಾಳಶಾಹಿ, ಜಾತಿ ಶ್ರೇಷ್ಠತೆ, ಮತೀಯ ಯಜಮಾನಿಕೆ ಮತ್ತು ಗಂಡಾಳ್ವಿಕೆಯ ಮೌಲ್ಯಗಳಿಂದ ಮುಕ್ತವಾಗಬೇಕು.

ಭಾರತದ ರಾಜಕಾರಣದಲ್ಲಿ ಗಾಂಧಿ ಅದೃಶ್ಯರಾಗಿದ್ದಾರೆ, ಗಾಂಧಿಯಲ್ಲಿ ರಾಜಕೀಯವನ್ನು ಕಾಣಲು ವಿಫಲವಾಗಿದ್ದೇವೆ. ಈ ಸಂದಿಗ್ಧತೆಯ ನಡುವೆ ೧೯೨೪ರ ಬೆಳಗಾವಿ ೨೦೨೪ರಲ್ಲಿ ಹೇಗೆ ಕಾಣಲು ಸಾಧ್ಯ?

 

Tags: