Mysore
24
light rain
Light
Dark

ಮರಗಿಡಗಳ ಸಹವಾಸ

ವಿದ್ಯಾರ್ಥಿಗಳು ಕೊಟ್ಟ ಸಸಿಗಳು ದೊಡ್ಡಮರಗಳ ಸ್ವಾಲೆಗೆ ಸತ್ತುಹೋದವು. ಅಜ್ಞಾತ ಹಕ್ಕಿಯೊಂದು ಉದುರಿಸಿಹೋದ ಬೇವಿನಬೀಜವೊಂದು ತಾನೇ ಕಳಕಳಿಸಿ ತಲೆಯೆತ್ತಿತ್ತು! 

ಜೆಎನ್‌ಯುನ ಇತಿಹಾಸ ಪ್ರಾಧ್ಯಾಪಕಿ ಪ್ರೊ. ಜಾನಕಿ ನಾಯರ್ ಒಮ್ಮೆ ನಮ್ಮ ಮನೆಗೆ ಬಂದರು. ಹಿತ್ತಲಿನಲ್ಲ್‌ರುವ ದಿವಿ ಹಲಸನ್ನು ನೋಡಿದವರೇ ‘ವಾ! ಕಾಟ್ಟುಚಾತ್ತ! ರಹಮತ್, ನನಗಿದು ಬೇಕು’ ಎಂದರು-ಸೀತೆ ಮಾಯಾಜಿಂಕೆಗೆ ಆಸೆಪಟ್ಟಂತೆ. ಎಲೆಯ ಚಂದಕ್ಕೆ ಮಲೆನಾಡಿನಿಂದ ತಂದು ಹಾಕಿದ್ದ ಮರವಿದು. ಇದುವೊ ಹೆಮ್ಮರವಾಗಿ ಬೆಳೆದು, ಕೊಂಬೆಗೆ ಚೆಂಡುಗಳನ್ನು ಕಟ್ಟಿದಂತೆ ನೂರಾರು ಕಾಯಿ ಬಿಟ್ಟಿತು. ಕಾಯನ್ನು ಖಾಲಿಮಾಡಲು ಊರಲ್ಲಿರುವ ಕೇರಳಿಗ ಕರಾವಳಿಗ ಮಲೆನಾಡಿಗರ ಮತದಾರ ಪಟ್ಟಿ ತಯಾರಿಸಿ, ಅವರಿಗೆ ಕೊಟ್ಟು ಖಾಲಿ ಮಾಡಬೇಕಾಯಿತು. ಇಲ್ಲದಿದ್ದರೆ ಇವು ಹಣ್ಣಾಗಿ ಬಿಳಿಯ ತೊಪ್ಪೆಯಂತೆ ನೆಲಕ್ಕೆ ಬೀಳುತ್ತವೆ. ಅದರ ಸಿಹಿಗೆ ನೊಣಗಳು. ನಾನು ಚಂಗನೆ ಮರಹತ್ತಿ ಜಾನಕಿಯವರಿಗೆ ಕಾಯಿ ಕಿತ್ತುಕೊಟ್ಟೆ. ಅವರು ‘ಮರ ಏರುವವರ ಸಹಾಯ ತಗೊ. ಹೆಚ್ಚುಕಡಿಮೆಯಾದರೆ ಒಬ್ಬ ಸಂಶೋಧಕ ಇಲ್ಲವಾಗುತ್ತದೆ’ ಎಂದು ಎಚ್ಚರಿಸಿದರು. ಈ ಎಚ್ಚರಿಕೆಯನ್ನು ಹಿತ್ತಲೊಳಗಿನ ಮಾವಿನಗಿಡದಿಂದ ಕಾಯಿ ಇಳಿಸುವಾಗ ಬಾನು ಹಲವಾರು ಸಲ ಕೊಟ್ಟಿರುವುದುಂಟು: ‘ನೂರು ರೂಪಾಯಿ ಕೊಟ್ಟರೆ ಬಜಾರಿನಲ್ಲಿ ಒಳ್ಳೆಯ ಹಣ್ಣು ಸಿಗುತ್ತದೆ. ಕೈಕಾಲು ಮುರಿದುಕೊಂಡರೆ ಯಾರು ಉಪಚಾರ ಮಾಡೋರು?’. ಅವಳ ಆತಂಕ ನನ್ನ ಅಂಗವಿಕಲತೆಯದಲ್ಲ. ಬಿದ್ದವನನ್ನು ಆಸ್ಪತ್ರೆಗೆ ಕೊಂಡುಹೋಗಿ ಉಪಚರಿಸುವ ಕಷ್ಟದ್ದು. ಆಗೆಲ್ಲ ನಾನು ಅಭಯದಾಯಕ ಸಮಜಾಯಿಶಿ ನೀಡುತ್ತೇನೆ: ‘ಚಿಂತೆ ಮಾಡಬೇಡ. ನೆಲದ ಮೇಲೆ ನಡೆವಾಗ ಎಡವಿಯೇನು. ಮರದಿಂದ ಬೀಳುವ ಛಾನ್ಸೇ ಇಲ್ಲ. ವೃಕ್ಷಾರೋಹಣ ಕಲೆ ಪಿತ್ರಾರ್ಜಿತ’.

ಯಾವಾಗಲಾದರೂ ಅವಘಡ ಸಂಭವಿಸಬಹುದಾದ ಮರಹತ್ತುವ ಕೆಲಸವನ್ನೇ ಕಸುಬಾಗಿಸಿಕೊಂಡ ಸಾವಿರಾರು ಮಂದಿ ನಮ್ಮ ಸೀಮೆಯಲ್ಲಿದಾರೆ. ರಸ್ನಾಮಾಮ ಎಂಬುವವರೊಬ್ಬರು, ಸಂತೆದಿನ ಶರಬತ್ತು ಮಾರುತ್ತಿದ್ದವರು. ಗಟ್ಟಿಮುಟ್ಟಾದ ಮನುಷ್ಯ ಮರದಿಂದ ಬಿದ್ದ ಬಳಿಕ, ಈ ವೃತ್ತಿಗೆ ಇಳಿದಿದ್ದರು. ನಮ್ಮ ಹೆಣ್ಣಜ್ಜನ ಕಡೆಯ ಸೊಕ್ಕೆಅಜ್ಜನವರು, ಅಡಿಕೆಗೊನೆ ಇಳಹುವ ಕಾಯಕದವರು. ಹತ್ತಿದ ಮರವನ್ನು ಜೋಲಿ ಹೊಡೆಸಿ, ಪಕ್ಕದ ಮರಕ್ಕೆ ನೆಗೆದು ಇಡೀ ತೋಟವನ್ನು ಅತಂತ್ರವಾಗೇ ತಿರುಗುತ್ತಿದ್ದವರು. ನಾನು ತೋಟಗಳಿಗೆ ಬಾಲಂಗೋಚಿಯಂತೆ ಅವರೊಟ್ಟಿಗೆ ಹೋಗುತ್ತಿದ್ದೆ. ‘ಸೌಕಾರೆ, ನನ್ನ ಮೊಮ್ಮಗ ಬಂದಿದ್ದಾನೆ’ ಎಂದು ಹೇಳಿ, ತೋಟದ ಮಾಲಕರಿಂದ ಎಳೆನೀರು ಮಾವು ಸೀಬೆ ಹಣ್ಣನ್ನು ಕೊಡಿಸುತ್ತಿದ್ದರು. ಅಪಾಯಕರ ಮರಗಳನ್ನು ಹತ್ತುವುದರಲ್ಲಿ ನಮ್ಮೂರ ಜೇನುಪುಟ್ಟನನ್ನು ಮೀರಿಸಿದವರಿಲ್ಲ. ಆತನಿಗೆ ಹೆಜ್ಜೇನು ಕಡಿದು ಮುಖವೆಲ್ಲ ಹೊಸಮುಳ್ಳು ನಡಲು ಜಾಗವಿಲ್ಲದೆ ಅದೊಂದು ಡಾಂಬರಿನ ರಸ್ತೆಯಂತಾಗಿತ್ತು. ಮೇಣಮೆತ್ತಿ ಅಂಗಿ ತಾಡಪಾಲಾಗಿತ್ತು. ಆತ ಟಿನ್ನಿನ ಡಬ್ಬಕ್ಕೆ ಹಗ್ಗಕಟ್ಟಿಕೊಂಡು ಬೆಂಗಳೂರು- ಹೊನ್ನಾವರ ರಸ್ತೆಯಲ್ಲಿರುವ ಬೃಹದಾಕಾರದ ಅರಳಿಮರಗಳನ್ನು ಏರಿ, ಗೋಣಿತಾಟಿನಷ್ಟು ಅಗಲದ ಜೇನುಹುಟ್ಟುಗಳನ್ನು ಕೊಯ್ದು ಇಳಿಸುತ್ತಿದ್ದನು. ಹೆಂಡಿರು ಮಕ್ಕಳು ಇಲ್ಲದ ಆತ, ವಾರಕ್ಕೊಮ್ಮೆ ತಲೆಯ ಮೇಲೊಂದು ಬಾಟಲಿಯಲ್ಲಿ ಕಾಗದದ ಹೂವನ್ನು ಸಿಕ್ಕಿಸಿಕೊಂಡು ಕೆಮ್ಮಣ್ಣುಗುಂಡಿ ರಸ್ತೆಯಲ್ಲಿ ಕೈಬಿಟ್ಟು ಸೈಕಲ್ ಹೊಡೆಯುತ್ತ ಜನರಿಗೆ ಉಚಿತ ಮನರಂಜನೆ ಒದಗಿಸುತ್ತಿದ್ದನು.

ನನ್ನ ಬಾಲ್ಯದ ಬಹುತೇಕ ಆಯುಷ್ಯ ಮಾವು ನೇರಳೆ ಸೀಬೆ ಮರಗಳ ಮರಗಳ ಮೇಲೆಯೇ ಕಳೆಯಿತು. ಮರಗಿಡ ಕಂಡರೆ ಮೀನಿಗೆ ನೀರು ಕಂಡಷ್ಟು ಖುಶಿಯಾಗುತ್ತಿತ್ತು. ನಮ್ಮ ಸೀಮೆ ಮಾವಿನತೋಪುಗಳಿಗೆ ಖ್ಯಾತವಾಗಿದ್ದು, ಅಲ್ಲಿರುವ ಎಲ್ಲರಿಗೂ ಮರವೇರುವ ಕಲೆ ಕರಗತ. ನಾವು ತೋಟವನ್ನು ಚೇಣಿಗೆ ಹಿಡಿದವರು ಕುಯಿಲು ಮುಗಿಸುವುದನ್ನೇ ಕಾಯುತ್ತಿದ್ದೆವು. ಸಣ್ಣಕೊಂಬೆಗಳ ತುದಿಗಳನ್ನು ಕೋತಿಗಳಂತೆ ಏರಿ ಕೆಲಸಗಾರರು ಬಿಟ್ಟುಹೋದ ಅಳಿದುಳಿದ ಕಾಯನ್ನು ಹುಡುಕಿ ಕೀಳುತ್ತಿದ್ದೆವು. ಅಪ್ಪ ಚೇಣಿ ಹಿಡಿದಾಗ ಮಾವು ಮನೆಗೆ ತರುವ ತನಕ ತೋಟವೇ ಮನೆ. ಕೊಂಬೆಯಿರುವ ಮರಗಳನ್ನಷ್ಟೇ ಹತ್ತುತ್ತಿದ್ದ ನಾನು, ಅಪ್ಪ ತೆಂಗಿನತೋಟ ಮಾಡಿದ ಬಳಿಕ ಕಾಲಿಗೆ ಗುದ್ದೆ ಕಟ್ಟಿಕೊಂಡು ಮರ ಹತ್ತುವುದನ್ನು ರೂಢಿಸಿಕೊಂಡೆ. ಕೊಂಬೆಗಳಿರುವ ಮರಗಳಲ್ಲಿ ಕೆಳಗೆ ಇನ್ನೊಂದು ಕೊಂಬೆಯಾದರೂ ಕಾಣುತ್ತದೆ. ಆದರೆ ತೆಂಗು, ಲೈಟುಕಂಬ ಹತ್ತಿದಂತೆ. ಕೆಳಗೆ ಬಿದ್ದರೆ ನೇರ ನೆಲಕ್ಕೆ. ಕಾಂಡದಿಂದ ಗರಿಯ ಮೇಲೆ ಹತ್ತುವುದಕ್ಕೆ ಎಚ್ಚರವಹಿಸಬೇಕು. ನಮ್ಮೂರಲ್ಲಿ ಒಬ್ಬ ಕಾಯಿಗಳ್ಳ ಗರಿಯೇರುವ ಅವಸರದಲ್ಲಿ ಕೈಜಾರಿ ಬಿದ್ದು, ಬೆನ್ನಹುರಿ ಮುರಿದು ಜೀವನಪರ್ಯಂತ ಹಾಸಿಗೆಯ ಮೇಲೆ ಮಲಗಿ ಸತ್ತನು.

ಮೈಸೂರ ಒಡೆಯರು ಮತ್ತು ದಿವಾನರು ಶೃಂಗೇರಿ ಶಿವಮೊಗ್ಗೆಗಳಿಗೆ ಬಂದು ಹೋಗುತ್ತಿದ್ದ ರಸ್ತೆಯಲ್ಲಿ ನಮ್ಮೂರು ಬೀಳುತ್ತದೆ. ಈಗಲೂ ಬೆಂಗಳೂರು- ಶಿವಮೊಗ್ಗ ರಸ್ತೆ ರಾಜ್ಯದ ಪ್ರಧಾನ ಹೆದ್ದಾರಿಗಳಲ್ಲಿ ಒಂದು. ಅದರ ಎರಡೂ ಬದಿ ಶತಮಾನದ ಹಿಂದೆ ನೆಟ್ಟ ಸಾಲುಮರಗಳು ಗಗನಚುಂಬಿ ಆಗಿದ್ದವು. (ಈಗವು ರಸ್ತೆ ಅಗಲೀಕರಣದಲ್ಲಿ ಕಣ್ಮರೆಯಾಗಿವೆ.) ಅವುಗಳಲ್ಲಿದ್ದ ಹುಣಿಸೆ ನೇರಳೆ ಹಿಪ್ಪೆ ಮಾವು ಕೀಳುತ್ತ, ಒಣಕಟ್ಟಿಗೆ ಸಂಗ್ರಹಿಸುತ್ತ ನಾವು ಮೈಲಿಗಟ್ಟಲೆ ಹೋಗುತ್ತಿದ್ದೆವು. ಹಿಪ್ಪೆ ಸಪೋಟ ಹಣ್ಣಿನ ಜಾತಿಗೆ ಸೇರಿದ್ದು. ಇದರ ದೂರಸಂಬಂಧಿ ಮಧ್ಯಭಾರತದ ಮಹೂವಾ. ಮಾದಕ ಸುವಾಸನೆ ಬೀರುವ ಇದರ ಹೂಗಳಿಂದ ಬುಡಕಟ್ಟುಗಳು ಮದ್ಯ ತಯಾರಿಸುವರು. ಹಿಪ್ಪೆಹಣ್ಣನ್ನು ಬಾವಲಿಗಳು ತಿಂದು ಕಪ್ಪನೆ ಬೀಜವನ್ನು ಉಗುಳುತ್ತಿದ್ದವು. ಎಣ್ಣೆ ತಯಾರಿಕೆಗೆ ಬಳಕೆಯಾಗುವ ಹಿಪ್ಪೆಬೀಜಗಳನ್ನು ನಾವು ಹೆಕ್ಕಿ ಅಂಗಡಿಗೆ ಹಾಕುತ್ತಿದ್ದೆವು. ಒಂದು ಭಾನುವಾರ ಸಂಜೆ, ಹಿಪ್ಪೆಕಾಯಿ ಕೀಳಲು ಎತ್ತರದ ಮರಹತ್ತಿದ್ದೆ. ಹೈಸ್ಕೂಲಿನ ಗುರುಗಳು ವಾಕಿಂಗ್ ಬಂದವರು, ಕತ್ತೆತ್ತಿ ನೋಡಿದರು. ಅಲ್ಲಿಂದಲೇ ‘ನಮಸ್ಕಾರ ಸಾ’ ಎಂದೆ. ಅವರಿಗೆ ಶಿಷ್ಯನ ಗುರುತು ಸಿಕ್ಕಲಿಲ್ಲ. ‘ಲೇ, ನಿನ್ನ ನಮಸ್ಕಾರದ ಮನೆ ಹಾಳಾಗಲಿ. ಬಿದ್ಗಿದ್ದೀಯ ಹುಶಾರು’ ಎಂದು ಬೈದು ಮುಂದೆ ಹೋದರು.

ಇಷ್ಟೆಲ್ಲ ಪರಿಣತಿಯಿದ್ದಾಗ್ಯೂ ಕೆಲವು ಮರಗಳು ಸವಾಲೆಸೆದು ಸೋಲಿಸಿದವು. ಅವುಗಳಲ್ಲಿ ಕುಲುಮೆ ಮುಂದಿದ್ದ ನಾಟಿ ಮಾವಿನ ಮರವೂ ಒಂದು. ತಬ್ಬಲು ನಾಲ್ಕಾಳು ಸಾಲದೆಂಬ ಗಾತ್ರದ ಅದರ ಕಾಂಡ, ಹದಿನೈದು ಫೂಟು ಕಂಭದಂತೆ ಮೇಲೆ ಹೋಗಿತ್ತು. ಮುದಿ ಮರವಾದ್ದರಿಂದ ಹತ್ತುವುದು ಅಪಾಯಕರವಾಗಿತ್ತು. ಗಾಳಿಗೆ ಬಿದ್ದ ಹಣ್ಣುಗಳನ್ನು ಆರಿಸುವುದು ಬಿಟ್ಟು ಬೇರೆ ದಾರಿಯಿರಲಿಲ್ಲ. ಅದರ ಸವಿಫಲವನ್ನು ಅದು ಮುದಿಯಾಗಿ ನೆಲಕ್ಕೊರಗುವ ತನಕ ಅನುಭೋಗಿಸಿದೆವು. ಹಣ್ಣಾದರೆ ಚಿನ್ನದ ಮೊಟ್ಟೆಗಳಂತೆ ಬಣ್ಣಪಡೆಯುತ್ತಿದ್ದ ಅದರ ಸ್ವಾದವಿನ್ನೂ ನಾಲಗೆ ಮೇಲಿದೆ.

ನಾನು ಅಣ್ಣನೂ ತಣಿಗೆಬಯಲು ದಿಕ್ಕಿಗಿರುವ ಕಾಡಿಗೆ ಬಂಡಿ ಕಟ್ಟ್ಟಿಕೊಂಡು ಹೋಗಿ ಕಟ್ಟಿಗೆ ತರುತ್ತಿದ್ದೆವು. ಅವನ್ನು ಸೀಳಿ ಒಣಗಿಸಿ ಪೇಟೆಯಲ್ಲಿ ಮಾರುತ್ತಿದ್ದೆವು. ಯಾವ ಗಿಡಮರ ಕಂಡರೂ ಇದರಲ್ಲಿ ಎಷ್ಟು ಸೌದೆ ಸಿಗುತ್ತದೆ ಎಂದೇ ಕಣ್ಣು ಲೆಕ್ಕಾಚಾರ ಮಾಡುತ್ತಿತ್ತು. ಇದೇ ಕಾಲಕ್ಕೆ ನಾವು ಬಾಡಿಗೆ ಮನೆಗಳ ಮುಂದೆ ಸಿಕ್ಕಸಿಕ್ಕ ಸಸಿಗಳನ್ನು ತಂದು ಬೆಳೆಸುತ್ತಿದ್ದೆವು. ನುಗ್ಗೆಯ ಕೊಂಬೆ ಕತ್ತರಿಸಿ ನೆಟ್ಟರೆ ಅವು ಚಿಗುರಿ ಮರವಾಗುವುದು ಖುಶಿ ಕೊಡುತ್ತಿತ್ತು. ಅಗತ್ಯಬಿದ್ದಾಗ ಮರಕಡಿವ ಮತ್ತು ಬೆಳೆಸುವ, ಪ್ರಾಣಿಗಳನ್ನು ಸಾಕುವ ಮತ್ತು ಆಹಾರಕ್ಕೆ ಬಳಸುವ ಕಾರ್ಯಗಳ ನಡುವೆ ವೈರುಧ್ಯವಿಲ್ಲದ ಸಂಸ್ಕೃತಿಯಿದು. ನಾವು ನಟ್ಟ ಸಸಿಗಳೆಲ್ಲ ಈಗ ದೊಡ್ಡ ಮರಗಳಾಗಿವೆ. ಅವುಗಳಲ್ಲಿ ಒಂದು ತ್ರಿಶೂಲ ನೆಡಿಸಿಕೊಂಡು ಕುಂಕುಮಾಂಕಿತ ಶೋಭಿತ ದೇವರವೃಕ್ಷವಾಗಿದೆ. ಅದನ್ನು ನೋಡಲು ಈಚೆಗೆ ಹೋದೆ. ಮನೆಯೊಳಗಿಂದ ಒಬ್ಬ ಹುಡುಗಿ ಹೊರಬಂದು ‘ಅಣ್ಣಾ ಅದು ದೇವರಮರ. ಹೋಗಬೇಡ’ ಎಂದಳು. ಅವಳ ಹಿಂದಿನಿಂದ ತಲೆಹಾಕಿದ ಹಣ್ಣುಮುದುಕಿ ಕುಪ್ಪಮ್ಮ, ನನ್ನನ್ನು ದಿಟ್ಟಿಸುತ್ತ ‘ಅಯ್ಯಾ. ನಮ್ಮ ರಾಮತ್ತಲ್ಲವಾ? ಪೆಣ್ಣೇ, ಅಂದ ಚೇರ್ ಕೊಂಡುವಾ. ಅವನ್‌ದಾ ನಟ್ಟರ ಮರತ್ತೈ ಅದು’ ಎಂದು ಸೊಸೆಗೆ ಹೇಳಿ, ಮರದಡಿ ಕುರ್ಚಿ ಹಾಕಿ ಕೂರಿಸಿದಳು. ಹಾಲು-ಟೀಸೊಪ್ಪು ತರಲು ಮೊಮ್ಮಕ್ಕಳನ್ನು ಅಂಗಡಿಗೆ ಅಟ್ಟಿದಳು. ತಂಪಾದ ನೆರಳು. ಎಲೆಗಳು ಗಾಳಿಗೆ ಗಲಗಲಿಸುತ್ತಿದ್ದವು. ಮೈನಾಗಳು ಕಚಪಿಚ ಗಲಭೆ ಮಾಡುತ್ತಿದ್ದವು. ಕುಪ್ಪಮ್ಮ ಬಾಗಿ ನನ್ನ ಮುಖಕ್ಕೆ ನಿರಿಗೆಗಟ್ಟಿದ ಮುಖವನ್ನು ಹತ್ತಿರ ತಂದು ‘ವೈನಾಗಿದೀಯಾಪ್ಪ? ಮಕ್ಕಳು ಏನು ಮಾಡುತ್ತಿದ್ದಾರೆ? ನಿಮ್ಮಮ್ಮ ಎಂಥಾ ಮನಷಿ? ಇನ್ನ ನಿಮ್ಮಪ್ಪ ಹೇಳಬ್ಯಾಡ. ಕಿರಾತಕ’ ಎಂದಳು. ಅಮ್ಮ ಸತ್ತ ಹಿಂದೆಯೇ ಅಪ್ಪ ಮರುಮದುವೆ ಆಗಿದ್ದನ್ನು ನಾವು ಮರೆತಿದ್ದೆವು. ಕುಪ್ಪಮ್ಮ ಕ್ಷಮಿಸಿರಲಿಲ್ಲ.

ಶಿವಮೊಗ್ಗೆಗೆ ಹೋದಾಗೆಲ್ಲ, ನಾನೂ ತಮ್ಮನೂ ಸೇರಿ ನಮ್ಮ ಬಡಾವಣೆಯಲ್ಲಿ ನೆಟ್ಟ ಹೊಂಗೆಮರಗಳನ್ನು ನೋಡುತ್ತೇನೆ. ಅವು ಎತ್ತರಕ್ಕೆ ಬೆಳೆದಿವೆ. ಅಲ್ಲೇ ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಶಾಲೆಯೊಳಗೆ ಹೋಗಲು ನಿರಾಕರಿಸುವ ಮಕ್ಕಳನ್ನು ಬಡಿಯಲು, ತಂದೆತಾಯಿಗಳು ಆ ಮರಗಳಿಂದ ಬೇಕಾದಷ್ಟು ಕೊಂಬೆಗಳನ್ನು ಸೆಳೆದಿದ್ದಾರೆ. ಆದರೂ ಅವು ಉಳಿದುಕೊಂಡಿವೆ. ಹಣ್ಣೆಲೆ ಉದುರಿ ಕೊನರಿದ ಚಿಗುರೆಲೆ ಗಾಳಿಯಲ್ಲಿ ಪಟಪಟಿಸುತ್ತವೆ-ಬಾವುಟದಂತೆ.

ಹೊಸಪೇಟೆಯಲ್ಲಿದ್ದ ಬಾಡಿಗೆ ಮನೆಯಲ್ಲಿ ನಾನೂಬಾನೂ ಎರಡು ಬೇವಿನ ಮರ ಸಾಕಿದ್ದೆವು. ಚಂದ ಬೆಳೆದಿದ್ದವು. ಮಾಲಕರು ಬೇರುಗಳಿಂದ ಮನೆಗೋಡೆ ಬಿರುಕು ಬಿಡುತ್ತದೆಯೆಂದು ಕಡಿಸಿಬಿಟ್ಟರು. ಗಲಭೆಯಲ್ಲಿ ಛಿದ್ರಗೊಂಡು ಬಿದ್ದ ಹೆಣದಂತೆ, ಅದರ ಕೊಂಬೆಕಾಂಡ ನೋಡಿ ನಿದ್ದೆ ಬರಲಿಲ್ಲ. ಸದ್ಯ ಈಗಿರುವ ಬೀದಿಯಲ್ಲಿ ಎಲ್ಲರೂ ತಂತಮ್ಮ ಮನೆಗಳ ಮುಂದೆ ಮರಗಿಡ ಹಾಕಿದ್ದಾರೆ. ನಮ್ಮ ಹೊಂಗೆಯಂತೂ ಬಾಗಿಲು ತೆರೆದೊಡನೆ ಮುಖದೋರುತ್ತದೆ. ಹಿತ್ತಲಲ್ಲಿರುವ ಮಾವು ಸಂಪಿಗೆ ದಿವಿಹಲಸು ಪನ್ನೇರಲೆ ಕೋಣೆ ಮಕ್ಕಳಾದರೆ, ಇವು ಬೀದಿಮಕ್ಕಳು. ದುಂಬಿ ಹಕ್ಕಿ ಕೋತಿ ಕೋಗಿಲೆ ಎಲ್ಲವೂ ಇವಕ್ಕೆ ಎರಗುತ್ತವೆ-ಒಮ್ಮೊಮ್ಮೆ ಯಾಕಾದರೂ ಹಾಕಿದೆವೊ ಎನಿಸುವಷ್ಟ ಸರ್ಕಾರಿ ಶಾಲೆಯ ಮಕ್ಕಳು ಹೊಂಗೆಯ ಮರವನ್ನು ಏರಿ ಗಲಭೆ ಎಬ್ಬಿಸುತ್ತವೆ. ಅವಕ್ಕೂ ಹಕ್ಕಿ ಕೋತಿಗಳಿಗೂ ವ್ಯತ್ಯಾಸವೇ ಇಲ್ಲ.

ನಾನು ನಿವೃತ್ತನಾಗುವ ದಿನ ವಿದ್ಯಾರ್ಥಿಗಳು ಸಸಿಗಳನ್ನು ತಂದಿದ್ದರು. ನಾನಿದ್ದ ಕೋಣೆಯ ಸುತ್ತ ನೆಟ್ಟೆ. ಆದಿನ ಒಳ್ಳೆಯ ಮಳೆ ಕೂಡ ಬಂತು. ವರ್ಷಬಿಟ್ಟು ನೋಡಲು ಹೋದೆ. ದೊಡ್ಡಮರಗಳ ಸ್ವಾಲೆಗೆ ಅವು ಸತ್ತು ಹೋಗಿದ್ದವು. ಆದರೆ ಅಜ್ಞಾತ ಹಕ್ಕಿಯೊಂದು ಉದುರಿಸಿಹೋದ ಬೇವಿನಬೀಜವೊಂದು ತಾನೇ ಕಳಕಳಿಸಿ ತಲೆಯೆತ್ತಿತ್ತು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ