ಮೈಸೂರು ಮಹಾನಗರ ಪಾಲಿಕೆ ಪಾದಚಾರಿ ಮಾರ್ಗಗಳಿಗೆ ಇಂಟರ್ ಲಾಕಿಂಗ್ ಟೈಲ್ಸ್‌ಗಳನ್ನು ಅಳವಡಿಸುತ್ತಿದ್ದು, ಇದು ಪಾದಚಾರಿಗಳಿಗೆ ಸುರಕ್ಷಿತ ಮತ್ತು ಆರಾಮದಾಯಕವಾದ ನಡಿಗೆಗೆ ಅನುಕೂಲವಾಗುತ್ತದೆ.
ಆದರೆ, ಹಲವು ಕಡೆ ಗಿಡಮರಗಳಿಗೆ ನೀರು ಹಾಕಲೂ ಆಗದಂತೆ ಟೈಲ್ಸ್ ಗಳನ್ನು ಹಾಕುತ್ತಿರುವುದರಿಂದ ಹತ್ತಾರು ವರ್ಷಗಳಿಂದ ಬೆಳೆಸಿರುವ ಮರಗಳು ಒಣಗುತ್ತಿವೆ. ಸುಂದರ ಪಾದಚಾರಿ ಮಾರ್ಗದ ನೆಪದಲ್ಲಿ ಮರಗಳನ್ನು ಉಸಿರುಗಟ್ಟಿಸಲಾಗುತ್ತಿದೆ. ಈಗಾಗಲೇ ರಸ್ತೆಯನ್ನು ಅಗೆದು ಮರಗಳ ಬೇರಿಗೆ ಹಾನಿ ಮಾಡಲಾಗಿದೆ. ಮರಗಳ ಸುತ್ತ ನಾಲ್ಕು ಅಡಿ ಜಾಗವನ್ನೂ ಬಿಡದಂತೆ ಅಗೆಯಲಾಗಿದೆ. ಪಾದಚಾರಿ ಮಾರ್ಗ ನಿರ್ಮಿಸಲು ಮರಗಳನ್ನು ಬೇರು ಸಮೇತ ಕೊರೆಯುವುದು ಸರಿಯಲ್ಲ. ಮರಗಳ ಸುತ್ತ ನಾಲ್ಕು ಅಡಿ ಜಾಗ ಬಿಟ್ಟು ಟೈಲ್ಸ್ ಅಳವಡಿಸಬೇಕು. ಬೆಳೆದ ಮರಗಳ ಬೇರುಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ಮರಗಳಿಗೆ ಹಾಗೂ ಅದರ ಬೇರುಗಳಿಗೆ ಹಾನಿ ಯಾಗದಂತೆ ಕೆಲಸ ಮಾಡಲು ಗುತ್ತಿಗೆದಾರರಿಗೆ ಸಂಬಂಧಪಟ್ಟವರು ಮೊದಲೇ ಸೂಚಿಸಬೇಕಿದೆ.
-ಗೋವಿತ್ ಕಿರಣ್, ರಾಜೇಂದ್ರ ನಗರ, ಮೈಸೂರು





