ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಹೆಬ್ಬಾಳ ಜಲಾಶಯವು ೮,೦೦೦ ಎಕರೆ ಕೃಷಿ ಭೂಮಿಗೆ ನೀರಾವರಿ ಸೌಲಭ್ಯವನ್ನು ಒದಗಿಸುತ್ತದೆ. ಬೆಳಗನಹಳ್ಳಿ, ಬೆಳಗನಹಳ್ಳಿ ಕಾವಲ್, ಎಚ್.ಮಟಕೆರೆ, ಹೈರಿಗೆ, ಮಲಾರ ಕಾಲೋನಿ, ಮಾದಾಪುರ, ದೇವರಾಜ ಕಾಲೋನಿ, ಕೋಳಗಾಲ, ಗುಜ್ಜಪ್ಪನ ಹುಂಡಿ ಗ್ರಾಮಗಳ ರೈತರು ಈ ಜಲಾಶಯದ ನೀರನ್ನು ಆಶ್ರಯಿಸಿ ಭತ್ತದ ಕೃಷಿ ಮಾಡುತ್ತಾರೆ. ಜಲಾಶಯದ ಕಾಲುವೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮಲಾರ ಕಾಲೋನಿ ಹತ್ತಿರ ಅರೆ ಬರೆ ಕಾಮಗಾರಿ ನಡೆಸಿದ ಗುತ್ತಿಗೆದಾರರು ಸರ್ಕಾರದಿಂದ ಕಾಮಗಾರಿ ಬಿಲ್ ಪಾವತಿಸಿಕೊಂಡು ನಾಪತ್ತೆ ಯಾಗಿದ್ದಾರೆ. ಇದರಿಂದಾಗಿ ಹೈರಿಗೆ ಗ್ರಾಮದ ಹತ್ತಿರ ಕಾಲುವೆ ನೀರು ನಿಂತು ದುರ್ವಾಸನೆ ಬೀರುತ್ತಿದೆ. ಹಾಗೂ ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ. ಇದರಿಂದಾಗಿ ಅಕ್ಕಪಕ್ಕದ ಮನೆಗಳಿಗೆ ತೊಂದರೆ ಆಗುತ್ತಿದೆ. ಮಳೆಗಾಲ ಬಂದರೆ ಈ ಕಾಲುವೆಯ ಕೊಳಚೆ ನೀರು ಮನೆಗಳಿಗೆ ನುಗ್ಗಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಈ ಕುರಿತು ಶಾಸಕರು ಹಾಗೂ ಹೆಬ್ಬಾಳ ಜಲಾಶಯ ನಿರ್ವಹಣೆ ಮಾಡುವ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ತಾಲ್ಲೂಕಿನ ಜನಪ್ರತಿನಿಧಿಗಳು ಹೆಬ್ಬಾಳ ಕಾಲುವೆಯ ಹೂಳು ತೆಗೆಸಿ ದುರಸ್ತಿ ಮಾಡಿಸುವ ಮೂಲಕ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.





