ತಿರುಪತಿ ತಿಮ್ಮಪ್ಪನ ದೇವಾಲಯದಲ್ಲಿ ಪ್ರಸಾದದ ರೂಪದಲ್ಲಿ ನೀಡುವ ಲಡ್ಡುಗಳ ತಯಾರಿಕೆಯಲ್ಲಿ ಪ್ರಾಣಿಗಳ ಕೊಂಬಿನಾಂಶವನ್ನು ಬಳಕೆ ಮಾಡಿರುವುದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕರ್ನಾಟಕದಿಂದ ನಂದಿನಿ ತುಪ್ಪ ಖರೀದಿಸಿ ಲಡ್ಡುಗಳನ್ನು ತಯಾರಿಕೆಗೆ ಬಳಸಲು ಪ್ರಾರಂಭಿಸಿದ್ದೇವೆ ಎಂದು ಹೇಳಿರುವುದಾಗಿ ವರದಿಯಾಗಿದೆ. ಇದು ನಂದಿನಿ ತುಪ್ಪದ ಗುಣಮಟ್ಟಕ್ಕೆ ಸಂದ ಗರಿಮೆ ಎಂದರೆ ತಪ್ಪಲಾಗಲಾರದು. ಕೆಲ ವರ್ಷಗಳ ಹಿಂದಿನ ವರೆಗೂ ತಿರುಪತಿಯಲ್ಲಿ ಲಡ್ಡುಗಳ ತಯಾರಿಕೆಗೆ ನಂದಿನಿ ತುಪ್ಪವನ್ನೇ ಬಳಕೆ ಮಾಡಲಾಗುತ್ತಿತ್ತು. ಆದರೆ ನಂದಿನಿ ತುಪ್ಪದ ಬೆಲೆ ದುಬಾರಿಯಾಯಿತು ಎಂದು ಟಿಟಿಡಿ ಆಡಳಿತ ಮಂಡಳಿಯವರು ಲಡ್ಡುಗಳ ತಯಾರಿಕೆಯನ್ನು ಗುತ್ತಿಗೆದಾರರಿಗೆ ಟೆಂಡರ್ ನೀಡಿದರು. ಇದರ ಪರಿಣಾಮ ಗುತ್ತಿಗೆದಾರರು ಲಡ್ಡುಗಳಿಗೆ ಕಲಬೆರಿಕೆ ತುಪ್ಪದ ಜತೆಗೆ ಪ್ರಾಣಿಗಳ ಕೊಂಬಿನಾಂಶವನ್ನೂ ಸೇರಿಸಿ ತಯಾರಿಸಿ ತಿರುಪತಿಗೆ ಕಳಂಕ ತಂದಿದ್ದಾರೆ.
ಸದ್ಯ ಲಡ್ಡು ತಯಾರಿಕೆಗೆ ನಂದಿನ ತುಪ್ಪದ ಮೊರೆ ಹೋಗಿದ್ದು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಕೆಎಂಎಫ್ ಇದರಲ್ಲಿಯೂ ಕಲಬೆರಿಕೆಯಾಗದಂತೆ ಎಚ್ಚವಹಿಸುವುದು ಅಗತ್ಯ.
ಅಂದಹಾಗೆ ಒಂದೆರಡು ವರ್ಷಗಳ ಹಿಂದೆ ಮೈಸೂರಿನಲ್ಲಿಯೂ ನಕಲಿ ತುಪ್ಪದ ಹಾವಳಿ ಹೆಚ್ಚಾಗಿತ್ತು. ಈ ಪ್ರಕರಣ ಭಾರೀ ಸುದ್ದಿಯಾಗಿತ್ತು. ಬಳಿಕ ಪೊಲೀಸರು ದಾಳಿ ನಡೆಸಿ ಅಕ್ರಮಕ್ಕೆ ಬ್ರೇಕ್ ಹಾಕಿದ್ದರು. ಆದ್ದರಿಂದ ಕೆಎಂಎಫ್‌ನವರು ಈ ಬಗ್ಗೆ ಸಾಕಷ್ಟು ಎಚ್ಚರ ವಹಿಸುವುದು ಅಗತ್ಯ.
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು.