ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದ ೩೦ ಮಂದಿ ಮೃತಪಟ್ಟಿದ್ದಾರೆ. ಅಲ್ಲಿನ ಸರ್ಕಾರ ದುರಂತದ ನಂತರ ಎಚ್ಚೆತ್ತುಕೊಂಡು ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಿದೆ. ಇದು ‘ಕೊಳ್ಳೆ ಹೊಡೆದು ಹೋದ ಮೇಲೆ ಕೋಟೆ ಬಾಗಿಲು ಮುಚ್ಚಿದರು’ ಎಂಬ ಮಾತಿನಂತಿದೆ. ಇದೇ -ಬ್ರವರಿ ೧೦ರಿಂದ ೧೨ರ ವರೆಗೆ ಮೈಸೂರು ಜಿಲ್ಲೆ ತಿ. ನರಸೀಪುರದ ತ್ರಿವೇಣಿ ಸಂಗಮದಲ್ಲಿ ಕೂಡ ಕುಂಭಮೇಳ ನಡೆಯಲಿದ್ದು, ಕುಂಭಮೇಳದಲ್ಲಿ ಪಾಲ್ಗೊಳ್ಳುವ ಜನರ ಸುರಕ್ಷತೆಗೆ ರಾಜ್ಯ ಸರ್ಕಾರ ಮೊದಲ ಆದ್ಯತೆ ನೀಡಬೇಕು. ಒಟ್ಟಾರೆ ಈ ಮೇಳ ಜನಸ್ನೇಹಿಯಾಗಿರಬೇಕು.
ಧಾರ್ಮಿಕ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಡೆಸಲು ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿ ಇರುತ್ತಾರೆ. ಆದರೆ, ಮಕ್ಕಳು, ಸೀಯರು ಮತ್ತು ವಯೋವೃದ್ಧರ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ಕುಂಭಮೇಳ ನಡೆಯಲಿರುವ ಮೂರು ದಿನಗಳೂ ಸಾವಿರಾರು ಜನರು ಸೇರುವ ನಿರೀಕ್ಷೆ ಇದೆ. ಇವರಲ್ಲದೆ, ಹಲವು ವ್ಯಾಪಾರಿಗಳು, ಆಟಿಕೆಗಳನ್ನು ಮಾರುವವರು ದೊಡ್ಡ ಸಂಖ್ಯೆಯಲ್ಲೇ ಪಾಲ್ಗೊಳ್ಳುತ್ತಾರೆ. ಅವರಿಗೆ ಇಂತಹ ಮೇಳಗಳು ಹೊಟ್ಟೆಪಾಡಿನ ಮಾರ್ಗಗಳಾಗಿರುತ್ತವೆ. ಅವರಿಗೂ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಏಕೆಂದರೆ ಅವರೆಲ್ಲ ಕುಟುಂಬ ಸಮೇತರಾಗಿ ಆಗಮಿಸುತ್ತಾರೆ. ಮುಖ್ಯವಾಗಿ ಪೊಲೀಸರು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಬೇಕು. ಕುಂಭಮೇಳ ಮುಗಿಸಿ ಎಲ್ಲರೂ ಸಂಭ್ರಮ, ನೆನಪುಗಳೊಂದಿಗೆ ಸ್ವಸ್ಥಾನಗಳಿಗೆ ಹಿಂದಿರುಗುವಂತಾಗಬೇಕು. ಈ ಸಂಬಂಧ ಜಿಲ್ಲಾಡಳಿತ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು.
-ಜಿ. ಎಸ್. ಪವನ್, ಗಾಂಧಿನಗರ, ಮೈಸೂರು