ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ಬಸ್‌ಗಳಲ್ಲಿ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ವಿಶೇಷಚೇತನರಿಗೆ ಆಸನಗಳನ್ನು ಕಾದಿರಿಸಲಾಗುತ್ತದೆ. ಅದಕ್ಕೆ ತಕ್ಕಂತೆ ಅದು ಪಾಲನೆಯಾಗುತ್ತಿಲ್ಲ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ, ಈ ವರ್ಗಗಳಿಗೆ ಆಸನಗಳನ್ನು ಮೀಸಲಿಟ್ಟಿರುವುದು ಸರಿಯಾದ ಕ್ರಮ. ಇದರ ಹೊರತಾದ ಮತ್ತೊಂದು ವಿಚಾರವೆಂದರೆ ಜನಪ್ರತಿನಿಧಿಗಳಿಗೆ ಆಸನವನ್ನು ಮೀಸಲಿರಿಸಿರುವುದು.
ಸಾಮಾನ್ಯವಾಗಿ ವೇಗದೂತ ಬಸ್‌ಗಳಲ್ಲಿ ಶಾಸಕರು, ಸಂಸದರಿಗೆ ಆಸನಗಳನ್ನು ಮೀಸಲಿರಿಸಲಾಗಿರುತ್ತದೆ. ಹಿಂದೆ ಶಾಸಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದುದ್ದನ್ನು ನೋಡಿದ್ದೇವೆ. ಆದರೆ, ಈಗ ಶಾಸಕರು, ಸಂಸದರು ಬಸ್‌ನಲ್ಲಿ ಪ್ರಯಾಣಿಸುವ ಮಾತು ಬಹಳ ದೂರವಾಗಿದೆ. ಒಂದು ವೇಳೆ ಹಾಗೆ ಪ್ರಯಾಣಿಸಿದರೆ ಅದು ಪತ್ರಿಕೆಗಳಿಗೆ ಅದರಲ್ಲಿಯೂ ದೃಶ್ಯ ಮಾಧ್ಯಮಗಳಿಗೆ ದೊಡ್ಡ ಬ್ರೇಕಿಂಗ್ ಸುದ್ದಿಯಾಗಿಬಿಡಬಹುದು. ಇದು ಕೆಎಸ್‌ಆರ್‌ಟಿಸಿ ಅವರಿಗೂ ಗೊತ್ತಿದೆ. ಹಾಗಿದ್ದರೂ ಕಿಟಕಿ ಮೇಲೆ ಶಾಸಕರು, ಸಂಸದರು ಎಂಬ ಬರಹ ನೋಡಿದರೆ, ಅದು ಕಿಸಕ್ಕನೆ ನಕ್ಕು ಅಣಕಿಸಿದಂತಾಗುತ್ತದೆ. ಈಗಲಾದೂ ಇಂತಹ ಬರಹಗಳನ್ನು ಕೊನೆಗಾಣಿಸಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಕ್ರಮವಹಿಸಬೇಕು.
-ಎ. ಆರ್ನವ್, ಸರಸ್ವತಿಪುರಂ, ಮೈಸೂರು.