ಎಚ್. ಡಿ. ಕೋಟೆ ತಾಲ್ಲೂಕಿನ ಕೆ. ಜಿ. ಹಳ್ಳಿ ಗ್ರಾಮದಲ್ಲಿ ಪ್ರತಿ ಬಾರಿಯೂ ಜನರು ಪಡಿತರ ಪಡೆದುಕೊಳ್ಳಲು ನ್ಯಾಯಬೆಲೆ ಅಂಗಡಿಯ ಮುಂದೆ ದಿನಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆ. ಜಿ. ಹಳ್ಳಿ ಗ್ರಾಮದ ನ್ಯಾಯಬೆಲೆ ಅಂಗಡಿ ನಡೆಸುವವರು ಬೇರೆ ಗ್ರಾಮದವರಾಗಿದ್ದು, ಅವರಿಚ್ಛೆಯಂತೆ ಬಂದು ಅಂಗಡಿ ತೆರೆದು ಸಾರ್ವಜನಿಕರ ಬಳಿ ಬಯೋ ಮೆಟ್ರಿಕ್ ಪಡೆದುಕೊಳ್ಳುತ್ತಾರೆ. ಬಯೋಮೆಟ್ರಿಕ್ ಪಡೆದ ಮೂರು-ನಾಲ್ಕು ದಿನಗಳ ಬಳಿಕ ಪಡಿತರ ವಿತರಿಸುತ್ತಿದ್ದಾರೆ. ಅದೂ ಕೂಡ ತಿಂಗಳ ಕೊನೆಯಲ್ಲಿ ಬಯೋಮೆಟ್ರಿಕ್ ಪಡೆದು ಮುಂದಿನ ತಿಂಗಳಿನಲ್ಲಿ ಪಡಿತರ ವಿತರಣೆ ಮಾಡುತ್ತಿದ್ದಾರೆ. ಇದರಿಂದಾಗಿ ಜನರು ಬಯೋಮೆಟ್ರಿಕ್ ನೀಡಲು ಒಂದು ದಿನ, ಪಡಿತರ ಪಡೆದುಕೊಳ್ಳಲು ಒಂದು ದಿನ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದ ಬಹುತೇಕ ಮಂದಿ ಕೂಲಿ ಕೆಲಸಗಾರರು, ಕೃಷಿ ಕಾರ್ಮಿಕ ರಾಗಿದ್ದು, ನಿತ್ಯ ದುಡಿದರೆ ಮಾತ್ರ ಅವರ ಜೀವನ ಬಂಡಿ ಸಾಗುವುದು.
ಹೀಗಿರುವಾಗ ಅವರು ಕೂಲಿ ಕೆಲಸ ಬಿಟ್ಟು ಪಡಿತರಕ್ಕಾಗಿ ೩-೪ ದಿನಗಳು ಕಾಯುತ್ತಾ ಕುಳಿತರೆ ಅವರು ಜೀವನ ಸಾಗಿಸುವುದಾದರೂ ಹೇಗೆ? ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ನ್ಯಾಯಬೆಲೆ ಅಂಗಡಿಯ ಮಾಲೀಕರಿಗೆ ಬಯೋಮೆಟ್ರಿಕ್ ಪಡೆದ ದಿನವೇ ಪಡಿತರ ವಿತರಿಸುವಂತೆ ಆದೇಶಿಸಲಿ. -ಕೆ. ಎಸ್. ಸುರೇಶ್, ಮುಖ್ಯ ಶಿಕ್ಷಕರು, ಸರಗೂರು