Mysore
28
clear sky

Social Media

ಗುರುವಾರ, 06 ಫೆಬ್ರವರಿ 2025
Light
Dark

ಓದುಗರ ಪತ್ರ | ದರೋಡೆ ಪ್ರಕರಣಗಳಿಗೆ ಕಡಿವಾಣ ಹಾಕಿ

ರಾಜ್ಯದಲ್ಲಿ ಕಳ್ಳತನ, ಎಟಿಎಂ, ಬ್ಯಾಂಕ್ ದರೋಡೆ ಹಾಗೂ ವಾಹನಗಳನ್ನು ಅಡ್ಡಗಟ್ಟಿ ಬೆದರಿಸಿ ದರೋಡೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಇತ್ತೀಚೆಗೆ ಬೀದರ್‌ನಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ಬ್ಯಾಂಕ್ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿ ೯೩ ಲಕ್ಷ ರೂ. ಗಳನ್ನು ದರೋಡೆ ಮಾಡಲಾಗಿದೆ. ಅಲ್ಲದೆ ಮಂಗಳೂರಿನಲ್ಲಿ ಕೋಟೆಕಾರು ಸಹಕಾರ ಬ್ಯಾಂಕ್ ದರೋಡೆ ಮಾಡಿ ಲಕ್ಷಾಂತರ ರೂ. ಮೌಲ್ಯದ ಒಡವೆ ದೋಚಲಾಗಿದೆ.

ಇವುಗಳೊಂದಿಗೆ ಅಮಾನವೀಯ ಕೃತ್ಯಗಳೂ ಹೆಚ್ಚಾಗುತ್ತಿದ್ದು, ಹೊನ್ನಾವರದಲ್ಲಿ ಗೋವಿನ ರುಂಡ ಕತ್ತರಿಸಿ ಕ್ರೌರ್ಯ ಮೆರೆದಿದ್ದರೆ, ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದು ಹಿಂಸಿಸಲಾಗಿದೆ. ನಂಜನಗೂಡಿನಲ್ಲಿ ಕರುವಿನ ಬಾಲ ಕತ್ತರಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ.

ದರೋಡೆ ಪ್ರಕರಣ ಈಗ ಮೈಸೂರಿನಲ್ಲಿಯೂ ದಾಖಲಾಗಿದ್ದು, ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಕೇರಳ ಮೂಲದ ವ್ಯಕ್ತಿಯ ಕಾರನ್ನು ಅಡ್ಡಗಟ್ಟಿದ ಐವರು ಮುಸುಕುಧಾರಿಗಳು ಕಾರನ್ನು ಅಪಹರಿಸಿದಲ್ಲದೆ ೧. ೫೦ ಲಕ್ಷ ರೂ. ಗಳನ್ನು ದೋಚಿದ್ದಾರೆ. ಇವುಗಳೊಂದಿಗೆ ಮಂಡ್ಯ, ಮೈಸೂರು, ಹುಣಸೂರಿನಲ್ಲಿ ಎಟಿಎಂ ದರೋಡೆಗಳು ಹೆಚ್ಚಾಗುತ್ತಿದ್ದು, ಜನರು ಓಡಾಡಲು ಆತಂಕಪಡುವಂತಾಗಿದೆ. ಇಂತಹ ಅಪರಾಧಿಕ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಇವುಗಳಿಗೆ ಕಡಿವಾಣ ಹಾಕಲು ಮುಂದಾಗಬೇಕಿದ್ದ ಸರ್ಕಾರ ಕಣ್ಣು ಮುಚ್ಚಿ ಕುಳಿತಿರುವುದು ವಿಪರ್ಯಾಸ. -ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ.

Tags: