ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಯುಸಿಎಂಎಸ್ (ಯುನೈಟೆಡ್ ಯುನಿವರ್ಸಿಟಿ ಮತ್ತು ಕಾಲೇಜು ನಿರ್ವಹಣೆ) ಯೋಜನೆಯನ್ನು ಜಾರಿಗೆ ತಂದಿರುವುದು ಸ್ವಾಗತಾರ್ಹ.
ಆದರೆ, ಈ ಯೋಜನೆ ಜಾರಿಯಾದಾಗಿನಿಂದ ಇದರಲ್ಲಿ ತಾಂತ್ರಿಕ ದೋಷಗಳು ಹೆಚ್ಚಾಗಿದ್ದು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಅಲ್ಲದೆ ತಾಂತ್ರಿಕ ದೋಷದಿಂದ ವಿದ್ಯಾರ್ಥಿಗಳಿಗೆ ಈ ಯೋಜನೆಯ ಮೇಲೆ ನಿರುತ್ಸಾಹ ಮೂಡಿದೆ. ಈ ತಂತ್ರಾಂಶಕ್ಕೆ ವಿದ್ಯಾರ್ಥಿಗಳ ದತ್ತಾಂಶಗಳನ್ನು ಅಪ್ಲೋಡ್ ಮಾಡಲು ಅನೇಕ ಸಮಸ್ಯೆಗಳು ಎದುರಾಗಿದ್ದು, ಸರಿಯಾಗಿ ಅಪ್ಲೋಡ್ ಆಗುತ್ತಿಲ್ಲ. ಇದರ ಜತೆಗೆ ಸರ್ವರ್ ಸಮಸ್ಯೆಯೂ ಕಾಡುತ್ತಿದ್ದು, ವಿದ್ಯಾರ್ಥಿ ಗಳು ತರಗತಿಗಳಿಗಿಂತ ಡೇಟಾ ಎಂಟ್ರಿ ಮಾಡುವಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಗಿದೆ. ಈ ತಂತ್ರಾಂಶದಲ್ಲಿನ ಸಮಸ್ಯೆಗಳನ್ನು ಸಂಬಂಧಪಟ್ಟ ವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ತಾಂತ್ರಿಕ ದೋಷದಿಂದಾಗಿ ವಿದ್ಯಾರ್ಥಿಗಳು ಶುಲ್ಕದ ಜತೆಗೆ ದಂಡವನ್ನೂ ಪಾವತಿಸುವಂತಾಗಿದೆ. ಜತೆಗೆ ಪದವಿ ವಿದ್ಯಾರ್ಥಿಗಳಿಗೆ ಫಲಿತಾಂಶ ತಡವಾಗುತ್ತಿದ್ದು, ಉನ್ನತ ಶಿಕ್ಷಣಕ್ಕೆ ತಡೆಯಾಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಈ ತಂತ್ರಾಂಶದಲ್ಲಿನ ದೋಷವನ್ನು ಸರಿಪಡಿಸಬೇಕಿದೆ.
-ಕೀರ್ತನ ಕುಶಾಲಪ್ಪ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು.