ರಾಜ್ಯದ ಹಲವು ಇಲಾಖೆಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ ಎಂದು ರಾಜ್ಯ ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಸಾಮಾನ್ಯ ಜನರು ಕೇವಲ ಒಂದು ತಿಂಗಳು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡರೆ ಸಾಕು ಕೆಇಬಿ ಇಲಾಖೆಯ ಅಧಿಕಾರಿಗಳು ಅದೇ ದೊಡ್ಡ ಅಪರಾಧವೆಂಬಂತೆ ವರ್ತಿಸುತ್ತಾರೆ. ಅಲ್ಲದೆ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುತ್ತಾರೆ. ಆದರೆ ಸರ್ಕಾರಿ ಕಚೇರಿಗಳಲ್ಲಿ ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ ಇದ್ದರೂ ಅದನ್ನು ವಸೂಲಿ ಮಾಡಲು ಮಾತ್ರ ಮುಂದಾಗಿಲ್ಲ. ಇತ್ತ ಸಚಿವರು ಈ ಬಾಕಿಯನ್ನು ವಸೂಲಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ. ಆದರೆ ಬಿಲ್ ಪಾವತಿಯಾಗುವವರೆಗೂ ಅಲ್ಲಿನ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಯಾವುದೇ ಅಧಿಕಾರಿಗಳು ಮುಂದಾಗುವುದಿಲ್ಲ. ಆದ್ದರಿಂದ ಸರ್ಕಾರ ಈ ವಿದ್ಯುತ್ ಬಿಲ್ ಹೊರೆಯನ್ನು ಜನರ ತಲೆ ಮೇಲೆ ಹೊರಿಸುವ ಮುನ್ನ ಅಧಿಕಾರಿಗಳು ವಿದ್ಯುತ್ ಬಿಲ್ ವಸೂಲಿ ಮಾಡಿಲಿ. -ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.





