ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷರಾದ ಮಹೇಶ್ ಜೋಶಿ ಅವರು, ತಾವು ಅಧ್ಯಕ್ಷರಾದ ನಂತರ ತಮ್ಮ ಅನುಕೂಲಕ್ಕೆ ತಕ್ಕಂತೆ ಮೂರು ಬಾರಿ ಪರಿಷತ್ತಿನ ಬೈಲಾವನ್ನು ತಿದ್ದುಪಡಿ ಮಾಡಿಕೊಂಡಿದ್ದಾರೆ.
ಈಗ ನಾಲ್ಕನೇ ಬಾರಿ ಕಸಾಪ ಬೈಲಾಕ್ಕೆ ತಿದ್ದುಪಡಿ ಮಾಡಿ ರಾಜ್ಯ ಘಟಕದ ಅಧ್ಯಕ್ಷರಿಗೆ ಪರಮಾಧಿಕಾರ ನೀಡಲು ಅವಕಾಶ ಕಲ್ಪಿಸಲು ಹೊರಟಿದ್ದಾರೆ. ಈ ಬಗ್ಗೆ ಅವರನ್ನು ಪ್ರಶ್ನಿಸಿದರೆ ನಮ್ಮ ಸಂವಿಧಾನವನ್ನೇ ಆಗಾಗ ತಿದ್ದುಪಡಿ ಮಾಡುತ್ತಾರೆ, ನಮ್ಮ ಪರಿಷತ್‌ನ ಬೈಲಾ ತಿದ್ದುಪಡಿಯಾದರೆ ಏನು ಎಂದು ಉಡಾಫೆಯ ಉತ್ತರ ನೀಡುತ್ತಾರೆ.

ಹಲವಾರು ವರ್ಷಗಳಿಂದ ಪರಿಷತ್ ವತಿಯಿಂದ ಪ್ರಕಟವಾಗುತ್ತಿದ್ದ ‘ಕನ್ನಡ-ನುಡಿ’ ಮಾಸ ಪತ್ರಿಕೆ ಜೋಶಿ ಅವರು ಅಧ್ಯಕ್ಷರಾದ ನಂತರ ನಿಂತು ಹೋಯಿತು. ಇದರಿಂದಾಗಿ ಪರಿಷತ್‌ನ ಸದಸ್ಯರಿಗೆ ಸಿಗುತ್ತಿದ್ದ ಮಾಹಿತಿ ಸಿಗದಂತಾಗಿದೆ. ನಾಡಿನ ಹೆಸರಾಂತ ಸಾಹಿತಿಗಳು ಪರಿಷತ್ತಿನ ಅಧ್ಯಕ್ಷರಿಗೆ ಮಾರ್ಗದರ್ಶನ ನೀಡುವ ಮೂಲಕ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಕನ್ನಡ ನಾಡಿನ ಅಸ್ಮಿತೆಯದ ಕನ್ನಡ ಸಾಹಿತ್ಯ ಪರಿಷತ್ ಉಳಿಯುವುದಿಲ್ಲ.
- ಬೂಕನಕೆರೆ ವಿಜೇಂದ್ರ, ಕುವೆಂಪು ನಗರ ಮೈಸೂರು





