ಕೊಲೆ ಆರೋಪ ಎದುರಿಸುತ್ತಿರುವ ಕನ್ನಡ ನಟನೊಬ್ಬನ ಅಭಿಮಾನಿಗಳು ಹಾಗೂ ಕನ್ನಡ ನಟಿಯೊಬ್ಬರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸಂದೇಶ ಸಮರ ಕನ್ನಡ ಚಿತ್ರ ಪ್ರೇಮಿಗಳಿಗೆ ಬೇಸರ ತರಿಸಿದೆ. ಇತ್ತೀಚೆಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಹೆಣ್ಣು ಮಕ್ಕಳ ಕುರಿತು ಕೆಟ್ಟದಾಗಿ ಬಿಂಬಿಸುತ್ತಿರುವುದು ಕಳವಳಕಾರಿ ಸಂಗತಿ. ಮಹಿಳಾ ಸೆಲೆಬ್ರಿಟಿಗಳಿಗೇ ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಾರೆಂದರೆ, ಇನ್ನು ಸಾಮಾನ್ಯ ಹೆಣ್ಣು ಮಕ್ಕಳ ಕಥೆ ಏನಾಗಬೇಡ ಎಂಬುದನ್ನು ಯೋಚಿಸಬೇಕಿದೆ.
ತಮ್ಮ ನಾಯಕನ ಕುರಿತ ಅಭಿಮಾನವನ್ನು ಈ ಬಗೆಯಲ್ಲಿ ವ್ಯಕ್ತಪಡಿ ಸುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆ. ಕೆಲವೊಮ್ಮೆ ಇಂತಹ ಅತಿರೇಕದ ಅಭಿಮಾನವೇ ಪ್ರಾಣಕ್ಕೆ ಅಪಾಯವಾಗಿ ಪರಿಣಮಿಸುವುದುಂಟು. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇನ್ನು ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸದಂತೆ ಬಿಗಿ ನಿಯಂತ್ರಣದ ಕ್ರಮ ಅಗತ್ಯ. ಈ ರೀತಿಯ ಪ್ರಕರಣಗಳು ನಡೆಯುತ್ತಿದ್ದರೂ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಇದಕ್ಕೂ ನನಗೂ ಸಂಬಂಧವಿಲ್ಲವೆಂಬಂತೆ ವರ್ತಿಸುವುದನ್ನು ಬಿಟ್ಟು ಸಂಬಂಧ ಪಟ್ಟವರನ್ನು ಕರೆಯಿಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಕ್ರಮ ವಹಿಸ ಬೇಕಾಗಿದೆ.
–ಹರಳಹಳ್ಳಿ ಪುಟ್ಟರಾಜು, ಪಾಂಡವಪುರ





