ಮೈಸೂರಿನ ಚಾಮರಾಜ ಜೋಡಿ ರಸ್ತೆಯ ಬಸವೇಶ್ವರ ಸರ್ಕಲ್ ಬಳಿ ಹಾಸಿಗೆ ಅಂಗಡಿಗಳು, ಬೈಕ್ ರಿಪೇರಿ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಅನ್ನು ಅತಿಕ್ರಮಿಸಿದ್ದು, ಪಾದಚಾರಿಗಳು ಫುಟ್‌ಪಾತ್‌ಬಿಟ್ಟು ರಸ್ತೆಯ ಮೇಲೆ ನಡೆಯುವುದು ಅನಿವಾರ್ಯವಾಗಿದೆ.
ಇಲ್ಲಿ ಸುಮಾರು ಏಳೆಂಟು ಹಾಸಿಗೆ ಅಂಗಡಿಗಳಿದ್ದು, ಅಂಗಡಿಗಳವರು ಫುಟ್‌ಪಾತ್ ಮೇಲೆಯೇ ಹಾಸಿಗಳನ್ನು ತಯಾರಿಸುತ್ತಾರೆ. ಈ ಸಂದರ್ಭದಲ್ಲಿ ಪಾದಚಾರಿಗಳು ಓಡಾಡಲು ತೀವ್ರ ತೊಂದರೆಯಾಗುತ್ತದೆ. ಹಾಸಿಗೆ ತಯಾರಿಸಿದ ನಂತರ ಅದನ್ನು ಸರಿ ಮಾಡಲು ದೊಣ್ಣೆಯಿಂದ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಯಾರಿಗಾದರೂ ದೊಣ್ಣೆ ಆಕಸ್ಮಿಕವಾಗಿ ತಗುಲಿದರೆ ಪ್ರಾಣಕ್ಕೆ ಎರವಾಗುತ್ತದೆ. ಇನ್ನು ತಾತಯ್ಯ ಸರ್ಕಲ್ ಬಳಿ ಯೂ ಫುಟ್ ಪಾತ್ ಒತ್ತುವರಿಯಿಂದಾಗಿ ಸಾರ್ವಜನಿಕರಿಗೆ ಸಮಸ್ಯೆ ಯಾಗುತ್ತಿದೆ. ಸರ್ಕಲ್‌ನಿಂದ ಬಸವೇಶ್ವರ ಸರ್ಕಲ್‌ಗೆ ತೆರಳುವ ಮಾರ್ಗದ ಎಡ ಭಾಗದಲ್ಲಿ ಬೈಕ್ ರಿಪೇರಿ ಅಂಗಡಿಗಳು, ಟೈಲ್ಸ್ ಅಂಗಡಿ, ರೇಡಿಯಂ ಸ್ಟಿಕ್ಕರ್ ಅಂಗಡಿಗಳು ಪಾದಚಾರಿ ಮಾರ್ಗವನ್ನು ಅತಿಕ್ರಮಿಸಿದ್ದರೆ ಬಲ ಭಾಗದಲ್ಲಿ ಹೊಸದಾಗಿ ಆರಂಭವಾಗಿರುವ ಐಷಾರಾಮಿ ಹೋಟೆಲ್‌ನವರು ಫುಟ್‌ಪಾತ್ ಮೇಲೆಯೇ ಬೋರ್ಡ್ ನಿರ್ಮಿಸಿದ್ದಾರೆ. ಇದೂ ಸಾಲದೆಂಬಂತೆ ಹೋಟೆಲ್ ಜಾಹೀರಾತು ಫುಲಕಗಳನ್ನು ಅಳವಡಿಸಿದ್ದಾರೆ. ಅಲಂಕಾರಕ್ಕೆ ಇಟ್ಟಿರುವ ಹೂ ಕುಂಡಗಳಿಂದಲೂ ಫುಟ್ ಪಾತ್ ಒತ್ತುವರಿಯಾಗಿದೆ. ಉಪಾಹಾರ ದರ್ಶನಿಗಳು, ಅಂಗಡಿಗಳ ಮಾಲೀಕರಿಂದ ಪಾದಚಾರಿ ಮಾರ್ಗ ಒತ್ತುವರಿಯಾಗಿದೆ. ಮೈಸೂರು ಮಹಾನಗರ ಪಾಲಿಕೆಯ ಚುನಾಯಿತ ಜನಪ್ರತಿನಿಧಿಗಳ ಅಧಿಕಾರಾವಧಿ ಮುಗಿದು ೨ ವರ್ಷಗಳು ಕಳೆದಿವೆ. ಪಾಲಿಕೆ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಯನ್ನು ಗಮನಿಸುತ್ತಿಲ್ಲ. ಹೀಗಾಗಿ ಸಮಸ್ಯೆಯನ್ನು ಯಾರ ಬಳಿ ಹೇಳಬೇಕೆಂಬುದೇ ಸಾರ್ವಜನಿಕರಿಗೆ ತಿಳಿಯುತ್ತಿಲ್ಲ .
– ಎ.ಜಿ. ಚಂದ್ರಲಾ, ಮೈಸೂರು





