ಸಾರ್ವಜನಿಕರ ಅನುಕೂಲಕ್ಕಾಗಿ ನಗರ ಸಾರಿಗೆ, ಆಟೋ ಟ್ಯಾಕ್ಸಿ ಸೌಲಭ್ಯಗಳಿವೆ. ಇತ್ತೀಚೆಗೆ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರಿ ಮೊದಲಾದ ಆಪ್ ಆಧಾರಿತ ಆಟೋ, ಟ್ಯಾಕ್ಸಿ, ಬೈಕ್ ಟ್ಯಾಕ್ಸಿ ಸೇವೆಗಳೂ ಲಭ್ಯವಿವೆ.
ಪ್ರಯಾಣಿಕರು ಟ್ಯಾಕ್ಸಿ ಆಯ್ಕೆ ಮಾಡುವ ಸಮಯಕ್ಕೆ ಅನುಗುಣವಾಗಿ ಹಾಗೂ ಕ್ರಮಿಸುವ ದೂರದ ಮೇಲೆ ಪ್ರಯಾಣದರ ನಿಗದಿಯಾಗುತ್ತದೆ. ಗ್ರಾಹಕರು ನಿಗದಿತ ದರವನ್ನು ಪಾವತಿಸಿ ಪ್ರಯಾಣಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಆಟೋ, ಟ್ಯಾಕ್ಸಿ, ಬೈಕ್ ಟ್ಯಾಕ್ಸಿಯನ್ನು ಬುಕ್ ಮಾಡುವಾಗಲೇ ಸದ್ಯಕ್ಕೆ ನಿಮಗೆ ಸೇವೆ ಲಭ್ಯವಿಲ್ಲ ನಿಗದಿತ ದರಕ್ಕಿಂತ ಹೆಚ್ಚು ಹಣವನ್ನು ನೀವು ನಮೂದಿಸಿದರೆ ಬುಕ್ ಆಗುತ್ತದೆ ಎಂಬ ಮೆಸೇಜ್ ಬರುತ್ತದೆ.
ಇಷ್ಟರ ನಡುವೆ ಹೆಚ್ಚುವರಿ ದರ ನಮೂದಿಸಿದರೂ ಬುಕ್ ಮಾಡಲಾದ ಆಟೋ, ಕಾರು, ಬೈಕ್ ನವರು ನೀವು ಇನ್ನೂ ಹೆಚ್ಚುವರಿ ಹಣ ನೀಡಿದರೆ ಮಾತ್ರ ಬರುತ್ತೇವೆ ಇಲ್ಲದಿದ್ದರೆ ರೈಡ್ ಕ್ಯಾನ್ಸಲ್ ಮಾಡಿಕೊಳ್ಳಿ ಎಂದು ಫೋನ್ ಮೂಲಕ ತಿಳಿಸುತ್ತಾರೆ. ರೈಡ್ ಕ್ಯಾನ್ಸಲ್ ಮಾಡಿದರೆ ಮುಂದಿನ ಪ್ರಯಾಣದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತದೆ. ಎಲ್ಲಾ ಪ್ರಯಾಣಿಕರಲ್ಲಿಯೂ ಹೆಚ್ಚುವರಿಯಾಗಿ ನೀಡಲು ಹಣ ಇರುವುದಿಲ್ಲ. ಜನ ಸ್ನೇಹಿ ಸಾರಿಗೆ ಎಂಬ ಪರಿಕಲ್ಪನೆಗೆ ಆಟೋ, ಕಾರು ಹಾಗೂ ಬೈಕ್ ಟ್ಯಾಕ್ಸಿ ಚಾಲಕರ ಹೆಚ್ಚುವರಿ ಹಣದ ಬೇಡಿಕೆ ಮಾರಕವಾಗಿದೆ. ಸರ್ಕಾರ ಹಾಗೂ ಸಂಬಂಧಪಟ್ಟ ಕ್ಯಾಬ್ ಕಂಪೆನಿಗಳ ಮುಖ್ಯಸ್ಥರು ಚಾಲಕರ ಅತಿಯಾದ ಹಣದ ಲಾಲಸೆಗೆ ಕಡಿವಾಣ ಹಾಕುವ ಮೂಲಕ ಸಾರ್ವಜನಿಕರ ಹಿತ ಕಾಪಾಡಬೇಕಿದೆ.
-ಜಿ. ವಾರುಣಿ, ಮೈಸೂರು





