Light
Dark

ವಾರೆ ನೋಟ : ಆರ್‌ಬಿಐ ಬಡ್ಡಿ v/s ಮೀಟ್ರು ಬಡ್ಡಿ!

ಮಿಂಟ್ ರೋಡಿನಲ್ಲಿ ಬಡ್ಡಿಗಳ ಸಮಾವೇಶವಾಗಿತ್ತು. ಆರ್‌ಬಿಐ ರೆಪೊರೇಟ್ ಹೆಚ್ಚಿಸಿದ್ದೇ ಹೆಚ್ಚಿಸಿದ್ದು, ಉಳಿದೆಲ್ಲ ಬಡ್ಡಿಗಳಿಗೆ ಸಂಭ್ರಮವೋ ಸಂಭ್ರಮ. ಈ ಸಂಭ್ರಮ ಆಚರಣೆ ಮಾಡಲು ಮತ್ತು ರೆಪೊರೆಟ್ ಏರಿಸಿದ್ದ ಆರ್‌ಬಿಐಗೆ ಥ್ಯಾಂಕ್ಸ್ ಹೇಳುವ ಸಲುವಾಗಿ ಬಡ್ಡಿಗಳ ಸಮಾವೇಶವಾಗಿತ್ತು.
ಬಡ್ಡಿಗಳ ಸಮಾವೇಶಕ್ಕೆ ಗೃಹಸಾಲ ಬಡ್ಡಿ, ವಾಹನ ಸಾಲ ಬಡ್ಡಿ, ಗೃಹೋಪಯೋಗಿ ವಸ್ತುಗಳ ಸಾಲ ಬಡ್ಡಿ, ವೈಯಕ್ತಿಕ ಸಾಲ ಬಡ್ಡಿ, ಕಾರ್ಪೊರೆಟ್ ಸಾಲ ಬಡ್ಡಿ, ಎಂಎಸ್‌ಎಂಇ ಸಾಲ ಬಡ್ಡಿ, ಸಂಬಳ ಸಾಲ ಬಡ್ಡಿ, ಚಿನ್ನ ಸಾಲ ಬಡ್ಡಿ, ಬೆಳೆಸಾಲ ಬಡ್ಡಿ, ಹೀಗೆ ಬಡ್ಡಿಗಳ ಬಡಿವಾರವೇ ನೆರೆದಿತ್ತು.

ಬಡ್ಡಿ ಬಡ್ಡಿಗಳಿಗೆಲ್ಲ ದೊಡ್ಡ ಬಡ್ಡಿ ರೆಪೊ ಬಡ್ಡಿ ಅರ್ಥಾತ್ ಆರ್‌ಬಿಐ ಬಡ್ಡಿ ಆಗಿರೋದ್ರಿಂದ, ಸಾಂಪ್ರದಾಯಕವಾಗಿ ರೆಪೊ ಬಡ್ಡಿ ಮಾತಿಗಾರಂಭಿಸಿತು. ‘ನಂಗೆ ಗೊತ್ತಿಗೆ ೨೪ ತಿಂಗಳ ಹಿಂದೆ ನಮ್ಮ ಬಡ್ಡಿ ದರಾನಾ ನಾವು ಕನಿಷ್ಠ ಮಟ್ಟಕ್ಕೆ ಇಳ್ಸಿದ್ವಿ. ಅದರಿಂದಾಗಿ ನೀವೆಲ್ಲರೂ ನಿಮ್ ನಿಮ್ ಬಡ್ಡಿದರ ಇಳಿಸಬೇಕಾಗಿ ಬಂದಿತ್ತು. ಆವಾಗೆಲ್ಲ ನೀವು ನಮ್ಮ ಬಗ್ಗೆ ತುಂಬಾ ಅಸಮಾಧಾನ ವ್ಯಕ್ತ ಪಡಿಸಿದ್ರೀ ಅಂತಾನೂ ಗೊತ್ತು. ನಿಮ್ ಬಡ್ಡಿದರ ಏರಿಸಿ ಅಂತಾ ನೀವೆಲ್ಲ ಇನ್ ಡೈರೆಕ್ಟಾಗಿ ಪ್ರೆಶರ್ ಹಾಕಿದ್ದೂ ಗೊತ್ತಿದೆ. ಇವತ್ತುಂದಿನಾ ನಾವು ಬರೀ ನಮ್ ನಮ್ ಸ್ಥಿತಿ ನೊಡ್ಕಂಡ್ರೆ ಸಾಲ್ದು ಇಡೀ ದೇಶದ್ ಸ್ಥಿತಿ ನೋಡ್ಬೇಕು ಎಕಾನಮಿ ಕೊಲಾಪ್ಸ್ ಆಗುವಾಗಿ ನಾವು ನಮ್ ರೇಟ್ ಏರಿಸ್ಕೊಂಡ್ರೆ, ನಮ್ಮ ಲಾಭ ಏರುತ್ತೆ ಹೊರ್ತು ನಮ್ಮ ಘನತೆಯ ರೇಟ್ ಏರಲ್ಲ ಅದುಕ್ಕೊಸ್ಕರ ನಾವು ಬಳಹ ದಿನಾ ಕನಿಷ್ಠ ಮಟ್ಟದ ರೇಟ್ ಮೇನ್ಟೈನ್ ಮಾಡಿದ್ವಿ . ಆದರೀಗ ನಿಮ್ಮೆಲ್ರ ಡಿಮ್ಯಾಂಡಿಗೆ ಒಪ್ಪಿ ಮೂರು ತಿಂಗಳಲ್ಲೇ ಮೂರು ಬಾರಿ ರೇಟು ಏರಿಸಿದ್ದೀವಿ. ಇದ್ರಿಂದ ನಿಮ್ಮೆಲ್ಲರಿಗೂ ಸಮಾಧಾನ ಆಗಿದೆ. ನೀವು ನಿಮ್ ನಿಮ್ ರೇಟ್ ಸಿಕ್ಕಾಪಟ್ಟೆ ಹೆಚ್ಚುಸ್ಕೊಂಡಿದ್ದೀರಾ. ಆದ್ರೆ ಅವಕಾಶ ಸಿಕ್ಕಿಂದೆ ಅಂತಾ ಯದ್ವಾ ತದ್ವಾ ಏರಿಸಬೇಡಿ , ನೀತಿ ನಿಯಮ ಪಾಲಿಸ್ಕೊಂಡು ಏರಿಸಿ..’ಅಂತಾ ಪ್ರಸ್ತಾವಿಕ ಮಾತು ಮುಗಿಸಿ, ಈಗ ಗೃಹ ಸಾಲ ಬಡ್ಡಿ ತಮ್ಮ ಅಭಿಪ್ರಾಯ ತಿಳಿಸಬಹುದು ಎಂದು ಕುಳಿತಿತು.

ಗೃಹ ಸಾಲ ಬಡ್ಡಿ ಸ್ವಲ್ಪ ಜಂಭ. ರೆಪೊರೇಟ್ ಏರಿಕೆ ಆದಾಗಲೆಲ್ಲ ಮೊದಲು ತನ್ನ ಬಗ್ಗೆನೇ ಚರ್ಚೆ ಅನ್ನೋದು ಜಂಭಕ್ಕೆ ಕಾರಣ. ಅದೇ ಜಂಭದ ಗತ್ತಿನಲ್ಲಿ ಮಾತಿಗಾರಂಭಿಸಿತು, ‘ಇವತ್ತುಂದಿನಾ ನಮ್ ಎಕಾನಮಿ ರಿಕವರಿ ಆಗ್ತಾ ಇದೆ ಅಂದ್ರೆ ಅದುಕ್ಕೆ ನಾನೇ ಕಾರ್ಣ. ಆರ್‌ಬಿಐ ಏನೋ ನಮ್ ಲಾಭ ನಷ್ಟ ನೋಡ್ದೆ ರೇಟ್ ಕಮ್ಮಿ ಮಾಡ್ತು ನಾವು ಲಾಭ ನೋಡ್ತಾ ಕೂರ್ಲಿಲ್ಲ. ನಷ್ಟ ಆದ್ರೂ ಪರ್ವಾಗಿಲ್ಲ ಅಂತಾ ಆರು ಪರ್ಸೆಂಟಿಗೆಲ್ಲ ಹೋಮ್ಲೋನು ಕೊಟ್ಟಿದ್ದೀವಿ ಆರ್ ಪರ್ಸೆಂಟ್ ಹೋಮ್ ಲೋನ್ ಸಿಗುತ್ತೆ ಅಂತಾ ಇವತ್ತುಂದಿನಾ ಇಡೀ ದೇಶ್ದಲ್ಲಿ ಮನೆಕಟ್ಟೋರು ಜಾಸ್ತಿ ಆದ್ರು, ಫ್ಲ್ಯಾಟ್ ಕೊಳ್ಳೋರು ಜಾಸ್ತಿ ಆದ್ರು, ಮನೆ ಮೇಲೆ ಮತ್ತೆರಡು ಮೂರು ಮಹಡಿ ಕಟ್ಟಿಸೋರು ಜಾಸ್ತಿ ಆದ್ರು ಇದ್ರಿಂದಾಗಿ ಸೀಮೆಂಟು, ಕಬ್ಬಿಣ, ಕಲ್ಲು,ಮರಳು, ಇಟ್ಟಿಗೆ, ಇತ್ಯಾದಿಗಳಿಗೆಲ್ಲ ಡಿಮ್ಯಾಂಡು ಬಂತು. ಜನರಿಗೆ ಕೆಲ್ಸ ಸಿಕ್ತು ಕೆಲ್ಸದಿಂದ ದುಡ್ಡು ಬಂತು.. ಬಂದ ದುಡ್ಡು ಖರ್ಚು ಮಾಡಿದ್ರು.. ಇಡೀ ಎಕಾನಮಿನೇ ಫುಲ್ ರಿಕವರಿ ಆಗೋಯ್ತು… ಈಗ ರಿಕವರಿ ಆಗಿರೋದ್ರಿಂದ ನಾವು ನಮ್ಮ ‘ವರಿ’ ಮತ್ತು ‘ಹೊರೆ’ ಎರ್ಡನ್ನೂ ಕಮ್ಮಿ ಮಾಡ್ಕೊಳ್ಳೋಕೆ ಅಂತಾನು ನಾವೂ ನಮ್ ರೇಟ್ ಏರಿಸ್ತಿದ್ದೀವಿ.. ಅದುಕ್ಕೆ ಅವ್ಕಾಶ ಮಾಡಿಕೊಟ್ಟ ಆರ್‌ಬಿಐಗೆ ಧನ್ಯವಾದ’ ಎಂದಿತು.

‘ನಾವೂ ರೇಟ್ ಇಳ್ಸಿದ್ರಿಂದಾನೆ ರಸ್ತೇಲೀ ಬೈಕು ಕಾರು ಓಡಾಡ್ತಾ ಇರೋದು ಅನ್ನೋದನ್ನು ತಾವ್ಯಾರು ಮರೆಯಬಾರದು’ ಎಂದು ವಾಹನ ಸಾಲ ಎಚ್ಚರಿಸುವ ಧಾಟಿಯಲ್ಲಿ ಹೇಳಿ ಕೂತಿತು.

‘ಮನೆ ಮನೆಲೀ, ಟೀವಿ, ಫ್ರಿಜ್ಜು, ವಾಷಿಂಗ್ ಮಿಷಿನ್ನು,ಓವೆನ್ನು ಎಲ್ಲ ಬರ್ತಾ ಇರೋದು ನನ್ನಿಂದಾನೇ ಅನ್ನೋದು ಬಿಡಿಸಿ ಹೇಳಬೇಕೆ?’ ಎಂದು ಗೃಹೋಪಯೋಗಿ ಸಾಲ ಕೇಳಿತು.

‘ನೀವೆಲ್ಲ ಕೈಕೊಟ್ಟಾಗ ನಾನು ಕೈಹಿಡಿದಿದ್ದೀನಿ’ ಅಂತ ವೈಯಕ್ತಿಕ ಸಾಲ ಬೆನ್ನುತಟ್ಟಿಕೊಂಡಿತು. ‘ನಾನೂ ಅಷ್ಟೇಯಾ’ ಅಂದಿತು ಚಿನ್ನದ ಸಾಲ. ‘ನಾನು ಉದಾರತೆ ತೊರದೇ ಹೋಗಿದ್ರೆ, ನೀವೆಲ್ಲ ಉಣ್ಣೋಕು, ಇರ್ತಿರಲಿಲ್ಲ, ತಿನ್ನೋಕು ಇರ್ತಿರಲಿಲ್ಲ’ ಅಂತ ಬೆಳೆ ಸಾಲ ಆವಾಜು ಹಾಕಿತು.

ಮಾತಿನ ಧಾಟಿ ಮಿತಿ ಮೀರುತ್ತಿರುವುದನ್ನು ಗಮನಿಸಿದ ರೆಪೊ ಬಡ್ಡಿ, ‘ನೋಡ್ರಪಾ ಎಲ್ರೂ ಅವರವರ ಪರಿಮಿತಿಯಲ್ಲಿ ಅವರೇ ದೊಡ್ಡವರು.. ಈಗ ದೊಡ್ಡಸ್ತಿಕೆ ಬಗ್ಗೆ ಮಾತು ಬೇಡ.. ಮುಂದಿನ ಕ್ರಮಗಳ ಬಗ್ಗೆ ಚರ್ಚೆ ಮಾಡೋಣ’ ಎಂದಿತು.

ಕಾರ್ಪೊರೆಟ್ ಸಾಲ ಎದ್ದು ನಿಂತು ‘ನೋಡಿ ಜನಾ ಸುಮ್ನೇ ಆವಾಜು ಹಾಕುತ್ತಾರೆ.. ಜನರ ಮಾತು ಕೇಳಿದ್ರೆ ನಾವು ಉದ್ಧಾರ ಆಗೋಕಾಗಲ್ಲ .. ಸೋ, ಮತ್ತಷ್ಟು ರೇಟು ಆದಷ್ಟು ಬೇಗ ಜಾಸ್ತಿ ಆಗಲಿ’ ಎಂದಿತು. ಅದಕ್ಕೆ ಉಳಿದೆಲ್ಲ ಬಡ್ಡಿಗಳು ದನಿಗೂಡಿಸಿದವು.

ಹೊರಗಡೆ ಯಾರೋ ಬಲಿಷ್ಠರು ಬಂದಂತಾಯಿತು.. ನೋಡಿ ಎಲ್ಲಾ ಬಡ್ಡಿಗಳು ಹೆದರಿ ಆರ್‌ಬಿಐ ಬಡ್ಡಿ ಹಿಂದೆ ಸರಿದು ನಿಂತವು. ಧೈರ್ಯ ಹೇಳಬೇಕಿದ್ದ ಆರ್‌ಬಿಐ ಬಡ್ಡಿ ಕೂಡಾ ಹೆದರಿ ಹಿಂದೆ ಸರಿಯಿತು.

ಬಂದ ಅಜಾನುಬಾಹು ‘ಏನ್ರಲೇ.. ನನ್ನುನ್ನೇ ಬಿಟ್ಟು ಮೀಟಿಂಗು ಮಾಡೋವಷ್ಟು ಧೈರ್ಯ ಬಂತೆನ್ರೋ ನಿಮ್ಗೆ ? ನೀವು ಆರ್‌ಬಿಐಗೆ ಹೆದ್ರುತೀರಾ… ನಾನು ಯಾರ್ಗೂ ಹೆದ್ರಲ್ಲ , ನಂದೇ ರೂಲ್ಸು ನಂದೇ ರೆಗ್ಯುಲೆಷನ್ನು.. ನಿಮ್ದು ಆನ್ಯೂಯಲ್ ರೇಟು ನಂದು ಡೈಲಿ ರೇಟು.. ಡೈಲಿ ಟೆನ್ ಪರ್ಸೆಂಟು.. ಗೊತ್ತಾ? ಮಕ್ಳಾ ಯಾವಾನಾದ್ರು ತಟಿಕ್ ಪಿಟಿಕ್ ಅಂದ್ರೆ ಹುಟ್ನಿಲ್ಲ ಅನ್ನಿಸಿಬಿಡ್ತಿನಿ…’ ಅಂತಾ ಆವಾಜು ಹಾಕಿತು. ಆರ್‌ಬಿಐ ಕೂಡಾ ಹಿಂದೆ ಸರಿದದ್ದು ನೋಡಿ ಎಲ್ಲರಿಗೂ ಭಯಾ ಆಯ್ತು. ಪಿಸುಮಾತಿನಲ್ಲೇ ಎಲ್ಲಾ ಬಡ್ಡಿಗಳು ಕೇಳಿದವು ‘ಯಾರದು?’

ಆರ್‌ಬಿಐ ಬಡ್ಡಿ ಹೇಳಿತು- ‘ಅದೇ ಮೀಟ್ರು ಬಡ್ಡಿ’!!

-‘ಅಷ್ಟಾವಕ್ರಾ’

 

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ