ಮಳೆ ಏರುಪೇರು ಸೈಕ್ಲೋನ್‌ಗಳ ಹಾವಳಿ ಭಲೇ ಜೋರು!

ಅವಿನಾಶ್ ಟಿ ಜಿ ಎಸ್

ಕರ್ನಾಟಕದಲ್ಲಿ ಕೇವಲ ೫ ವರ್ಷಗಳ ಅವಧಿಯಲ್ಲಿ ಅತಿವೃಷ್ಟಿಯಿಂದ ೫೪.೩೨ ಲಕ್ಷ ಹೆಕ್ಟೇರ್ ಬೆಳೆ ಹಾನಿ, ೨.೬೨ ಲಕ್ಷ ಮನೆಗಳು ಹಾನಿ, ೧.೫ ಲಕ್ಷ ಕಿ,ಮೀ. ರಸ್ತೆಗಳು ಹಾನಿ, ೩೦ ಸಾವಿರ ಸೇತುವೆಗಳು ಹಾನಿ, ೪೯ ಸಾವಿರ ಶಾಲಾಕಟ್ಟಡಗಳು ಹಾನಿಯಾಗಿವೆ. ಇದರಿಂದ ಒಟ್ಟು ೯೩,೬೪೮ ಕೋಟಿ ರೂ. ನಷ್ಟವನ್ನು ಅನುಭವಿಸುವಂತಾಗಿದೆ ಎಂದು ಪತ್ರಿಕೆಗಳಲ್ಲಿ ವರದಿಗಳಾಗಿವೆ.
ನಿಜ, ವಾಡಿಕೆಯ ಮಳೆಯ ಪ್ರಮಾಣದಲ್ಲಿ ಏರುಪೇರಾಗುತ್ತಿದೆ. ಸೈಕ್ಲೋನ್‌ಗಳ ಹಾವಳಿ ಹೆಚ್ಚಾಗುತ್ತಿದೆ. ಅವು ಬಿರುಗಾಳಿಯಂತೆ ಅಪ್ಪಳಿಸುತ್ತಿವೆ. ೨೦೨೦ರಲ್ಲಿ ಸರಿಸುಮಾರು ೧೧ ಸೈಕ್ಲೋನ್‌ಗಳು ಸಂಭವಿಸಿವೆ. ೨೦೨೧ರಲ್ಲಿ ಸರಿಸುಮಾರು ೪೮ ಸೈಕ್ಲೋನ್‌ಗಳು ಸಂಭವಿಸಿವೆ. ೨೦೨೨ರಲ್ಲಿ ಸರಿಸುಮಾರು ೬೦ ಸೈಕ್ಲೋನ್‌ಗಳು ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ವರ್ಷದಿಂದ ವರ್ಷಕ್ಕೆ ಸೈಕ್ಲೋನ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಯಾಸ್, ನಿಸರ್ಗ, ಜಾವದ್, ಅಸನಿ, ಸಿತ್ರಾಂಗ್‌ನಂತಹ ಸೈಕ್ಲೋನ್‌ಗಳ ಹಾವಳಿಯಿಂದ ನಮಗಾದ ಅನಾಹುತಗಳ ನೆನಪಿದೆ ಅಲ್ಲವೇ?
ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಹೆಚ್ಚು ಸೈಕೋನ್‌ಗಳು ಹುಟ್ಟುವುದಕ್ಕೆ ಕಾರಣ ಏನು? ವಾತಾವರಣದಲ್ಲಿ ತಾಪಮಾನ ಏರಿಕೆಯಾಗುತ್ತಿದೆ. ಭೂತಾಪಮಾನವೂ ಹೆಚ್ಚಾಗುತ್ತಿದೆ. ಇದರಿಂದ ಭೂಮಿ ಮತ್ತು ಸಮುದ್ರಗಳು ಬಿಸಿಯಾಗುತ್ತಿವೆ. ಹೀಗೆ ಭೂಮಿ ಮತ್ತು ಸಮುದ್ರ ಬಿಸಿಯಾಗುತ್ತಿದ್ದಂತೆ ಅಲ್ಲಿರುವ ನೀರು ಆವಿಯಾಗುವ ಪ್ರಮಾಣವೂ ಹೆಚ್ಚಾಗುತ್ತಿದೆ. ಇದರಿಂದ ವಾತಾವರಣದಲ್ಲಿ ನೀರಿನಾಂಶ ಹೆಚ್ಚುತ್ತಿದೆ. ಸಾಮಾನ್ಯವಾಗಿ ಸಮುದ್ರದಲ್ಲಿರುವ ನೀರಿನ ಒಂದು ಪ್ರತಿಶತದಷ್ಟು ನೀರಿನಾಂಶವನ್ನು ವಾತಾವರಣ ಹಿಡಿದಿಟ್ಟುಕೊಳ್ಳುವ ಶಕ್ತಿ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಇಂದು ಸಮುದ್ರದ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗುತ್ತಿರುವುದರಿಂದ ತನ್ನ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ನೀರಿನಾಂಶವನ್ನು ವಾತಾವರಣ ಹಿಡಿದಿಟ್ಟುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಇಷ್ಟು ಪ್ರಮಾಣದ ನೀರಿನಾಂಶವನ್ನು ಹಿಡಿದಿಟ್ಟುಕೊಳ್ಳಲು ವಾತಾವರಣಕ್ಕೆ ಸಾಧ್ಯವಾಗದ ಮಾತು. ಹಾಗಾಗಿಯೇ ಎಲ್ಲೆಂದರೆ ಅಲ್ಲಿ ಧೋ ಅಂತ ಮಳೆಯ ರೂಪದಲ್ಲಿ ಆ ನೀರು ಸುರಿಯುತ್ತಿದೆ. ಅದು ವರ್ಷದ ೧೨ ತಿಂಗಳಲ್ಲಿಯೂ ಕೂಡ.
ಇದಲ್ಲದೆ, ಸಮುದ್ರದಲ್ಲಿ ಭೂ ಕುಸಿತ ಮತ್ತು ವಾಯುಭಾರ ಕುಸಿತ ಉಂಟಾದಾಗಲೂ ಸೈಕ್ಲೋನ್‌ಗಳು ಹುಟ್ಟುತ್ತವೆ.
ಇತ್ತೀಚಿನ ದಿನಗಳಲ್ಲಿ ವಾತಾವರಣ ಬಿಸಿಯಾಗುತ್ತಿರುವುದರಿಂದ ಹಿಮಗಡ್ಡೆಗಳು, ಹಿಮ ಪರ್ವತಗಳು ಕರಗುತ್ತಾ ಸಮುದ್ರವನ್ನು ಸೇರುತ್ತಿವೆ. ಇದರಿಂದ ಈವರೆಗೂ ಸುಮಾರು ೧೨ ಇಂಚು ಸಮುದ್ರ ಮಟ್ಟ ಏರಿಕೆಯಾಗಿದೆ ಎಂದು ಹೇಳಲಾಗುತ್ತಿದೆ. ಈ ಹೆಚ್ಚುವರಿ ನೀರನ್ನು ಸಮುದ್ರಗಳು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಮತ್ತೊಂದು ಕಡೆ ಮನುಷ್ಯನ ದುರಾಸೆಯ ತ್ಯಾಜ್ಯಗಳಾದ ಶಾಖವರ್ಧಕ ಅನಿಲಗಳು ಸಮುದ್ರದಲ್ಲಿ ಬೆರೆಯುತ್ತಿರುವುದರಿಂದ ಅಲ್ಲಿ ಆಮ್ಲೀಯತೆಯೂ ಹೆಚ್ಚಾಗುತ್ತಿದೆ. ಇದರ ದುಷ್ಪರಿಣಾಮ ಎನ್ನುವಂತೆ ಸಮುದ್ರದಲ್ಲಿ ನಡೆಯುತ್ತಿದ್ದ ಸಹಜ ಕ್ರಿಯೆಗಳಿಗೆ ಧಕ್ಕೆಯಾಗುತ್ತಿದೆ. ಇದರಿಂದ ಸಹಸ್ರಾರು ಸಂಖ್ಯೆಯಲ್ಲಿ ಸಮುದ್ರ ಜೀವಿಗಳು ಸಾವಿಗೀಡಾಗುತ್ತಿವೆ. ಇಂತಹ ಹತ್ತು ಹಲವು ಕಾರಣಗಳಿಂದ ಸಮುದ್ರ ತನ್ನ ಸಮತೋಲನ ಕಳೆದುಕೊಳ್ಳುತ್ತಿದೆ. ಜೊತೆಗೆ ಗಾಳಿ ಬಿಸಿಯಾಗುತ್ತಿದ್ದು, ಅದರ ವೇಗವೂ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಸಮುದ್ರದಲ್ಲಿ ಭೂ ಕುಸಿತ ಮತ್ತು ವಾಯುಭಾರ ಹೆಚ್ಚಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸೈಕ್ಲೋನ್‌ಗಳು ಭೂಮಿಗೆ ಅಪ್ಪಳಿಸುತ್ತಾ ಎಲ್ಲವನ್ನೂ ಕೊಚ್ಚಿಕೊಂಡು ಹೊಗುತ್ತಿದೆ. ಬಹುಮುಖ್ಯವಾಗಿ ಈ ಸೈಕ್ಲೋನ್‌ಗಳಿಂದ ಭೂಮಿಯ ಮೇಲೆ ಹೆಚ್ಚು ನೀರು ನಿಲ್ಲುವಂತಾಗುತ್ತಿದೆ… ಹೀಗೆ ನೀರು ನಿಂತಲ್ಲೇ ನಿಲ್ಲುವುದರಿಂದ ಮಿಥೈನ್‌ನಂತಹ ಅನಿಲಗಳು ಹೆಚ್ಚಿನ ಪ್ರಮಾಣದಲ್ಲಿ ವಾತಾವರಣ ಸೇರುತ್ತವೆ. ಈ ಮಿಥೈನ್ ಅನಿಲವು ವಾತಾವರಣದಲ್ಲಿ ೫೦ ವರ್ಷಗಳವರೆಗೂ ಸ್ಥಿರಗೊಳ್ಳುತ್ತದೆ. ಹೀಗಾದಲ್ಲಿ ಭೂತಾಪಮಾನವನ್ನು ಕಮ್ಮಿ ಮಾಡುವುದು ಅಸಾಧ್ಯವಾದ ಮಾತಾಗುತ್ತದೆ. ಮತ್ತೊಂದು ಆತಂಕದ ವಿಚಾರ ಎಂದರೆ, ದಕ್ಷಿಣ ಭಾರತವನ್ನು ಮೂರು ಸಮುದ್ರಗಳು ಸುತ್ತುವರೆದಿವೆ. ಸಾಮಾನ್ಯವಾಗಿ ಒಂದು ಕಡೆಯ ಸಮುದ್ರದಲ್ಲಿ ಸೈಕ್ಲೋನ್‌ಗಳು ಹುಟ್ಟಿದರೆ, ಅದು ಗಾಳಿಯ ಜೊತೆ ಇನ್ನೊಂದು ಭಾಗದ ಕಡೆ ಚಲಿಸುತ್ತದೆ. ಆದರೆ ಇಂದು ಎರಡು ಕಡೆಯ ಸಮುದ್ರಗಳಿಂದ ಒಟ್ಟೊಟ್ಟಿಗೆ ಸೈಕ್ಲೋನ್‌ಗಳು ಹುಟ್ಟಿಕೊಳ್ಳುತ್ತಿವೆ. ಇದು ಹೀಗೆಯೇ ಮುಂದುವರಿದರೆ ನಮ್ಮನ್ನು ಕಾಪಾಡುವವರು ಯಾರು? ಈ ಪ್ರಶ್ನೆಗೆ ಉತ್ತರವನ್ನು ಈಗಲೇ ಹುಡುಕಿಕೊಳ್ಳಬೇಕಾಗಿದೆ.
ಸೈಕ್ಲೋನ್‌ಗಳು ಎಂದರೆ ಬರಿ ಮಳೆ ಅಲ್ಲ, ಮೋಡ ಕವಿದ ವಾತಾವರಣ ಕಾಡಿದ್ದನ್ನು ನೋಡಿದ್ದೇವೆ. ಇತ್ತೀಚಿನ ದಿನಗಳಲ್ಲಿ ಒಂದು ವರ್ಷದ ೩೬೫ ದಿನಗಳಲ್ಲಿ ಸರಿಸುಮಾರು ೧೫೦ ದಿನಗಳು ಮೋಡ ಕವಿದ ವಾತಾವರಣ ನಮ್ಮನ್ನು ಆವರಿಸುತ್ತಿದೆ. ಇಂತಹ ದಿನಗಳಲ್ಲಿ ಸಸ್ಯಗಳಿಗೆ ಸರಿಪ್ರಮಾಣದ ಬೆಳಕು ಒದಗದೆ ಆಹಾರ ತಯಾರಿಕಾ ಕ್ರಿಯೆ ಕುಂಠಿತಗೊಳ್ಳುತ್ತದೆ. ಭೂಮಿಯ ಮೇಲೆ ನಡೆಯುವ ಹಲವಾರು ರಾಸಾಯನಿಕ ಕ್ರಿಯೆಗಳಿಗೂ ಧಕ್ಕೆಯಾಗುತ್ತಿದೆ. ಬೆಳೆಗಳ ಇಳುವರಿಯ ಪ್ರಮಾಣವೂ ಕುಸಿಯುತ್ತದೆ. ಜೊತೆಗೆ ಪ್ರಾಣಿಪಕ್ಷಿಗಳು, ಅದರಲ್ಲೂ ಮುಖ್ಯವಾಗಿ ಆಡು-ಕುರಿಗಳು ಬಿಸಿಲನ್ನು ಕಾಣಲಾಗದೆ, ಆ ಚಳಿಯನ್ನು ತಾಳಲಾರದೆ ಸಾವಿಗೀಡಾಗುವುದು ಅಥವಾ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ನಮ್ಮ ಕಣ್ಣುಗಳ ಮುಂದಿದೆ.
ಈ ಅನಾಹುತಗಳಿಗೆಲ್ಲಾ ಕಾರಣ ಯಾರು ಗೊತ್ತಾ? ಮನುಷ್ಯನೆಂಬ ಸಣ್ಣ ಜೀವಿ. ಈ ಜೀವಿಯು ಅಧುನಿಕ ಜಗತ್ತನ್ನು ಸೃಷ್ಟಿಸುವ ಭರದಲ್ಲಿ, ಐಷಾರಾಮಿ ಬದುಕಿಗೆ ಜೀತದಾಳಾಗಿ ಹಲವಾರು ಶಾಖವರ್ಧಕ ಅನಿಲಗಳನ್ನು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸುತ್ತಿದ್ದಾನೆ. ಕಾರ್ಬನ್ ಡೈಆಕ್ಸೈಡ್, ಮಿಥೇನ್, ನೈಟ್ರಸ್ ಆಕ್ಸೈಡ್, ಹೈಡ್ರೋಫ಼್ಲೋರೋ ಕಾರ್ಬನ್ಸ್, ಪರ್ಫ಼ಿಲೋರೊ ಕಾರ್ಬನ್ಸ್ ಮುಂತಾದವು. ಈ ಶಾಖವರ್ಧಕ ಅನಿಲಗಳು ಲಂಗುಲಗಾಮು ಇಲ್ಲದೆ ಸಮುದ್ರವನ್ನು, ಭೂಮಿಯನ್ನು, ಗಾಳಿಯನ್ನು, ವಾತಾವರಣವನ್ನು ಬಿಸಿ ಮಾಡುತ್ತಿವೆ. ಪ್ರಕೃತಿ ಮಾತೆಯ ಸಮತೋಲನವನ್ನು ಕದಡುತ್ತಿವೆ. ಜೊತೆಗೆ ಗಾಳಿ ಬಿಸಿಯಾಗುತ್ತಿದ್ದು, ಅದರ ವೇಗವೂ ಹೆಚ್ಚಾಗುತ್ತಿದೆ. ಇದರಿಂದ ನಮಗೆ ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ತಂದೊಡ್ಡುತ್ತಿದೆ.
ಬಾಕ್ಸ್
ಹವಾಮಾನ ತಜ್ಞರು, ವಿಜ್ಞಾನಿಗಳು, ಇನ್ನೊಂದು ನೂರು ವರ್ಷದಲ್ಲಿ ಭೂಮಿಯ ಮೇಲೆ ಯಾವ ಜೀವಸಂಕುಲವೂ ಬದುಕಲು ಸಾಧ್ಯವೇ ಇಲ್ಲ ಎಂದು ಹೇಳುತ್ತಿದ್ದಾರೆ. ಭೂಮಿ ಅಸ್ತಿತ್ವದಲ್ಲಿರಲು ಮನುಷ್ಯನೇ ಇರಬೇಕೆಂದಿಲ್ಲ. ಆದರೆ ಮನುಷ್ಯ ಉಳಿಯಬೇಕಾದರೆ ಭೂಮಿ ಅತ್ಯವಶ್ಯಕ ಎನ್ನುವುದನ್ನು ನಾವು ಮನಗಾಣಬೇಕು. ಇದನ್ನು ನಾವು ಸದಾ ನೆನಪಿಟ್ಟುಕೊಳ್ಳಬೇಕು. ಆಗ ಮಾತ್ರ ಈ ನಮ್ಮ ಭೂಮಿಯ ಮಹತ್ವವೂ ನಮಗೆ ಅರಿವಾಗುತ್ತದೆ ಹಾಗೂ ನಾವು ಮಾಡಿದ, ಮಾಡುತ್ತಿರುವ ತಪ್ಪಿನ ಅರಿವೂ ನಮಗಾಗುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ