ಕರ್ನಾಟಕ ರಾಜ್ಯದಲ್ಲಿ ವರುಣಾಘಾತವಾಗುತ್ತಿದೆ. ಕರಾವಳಿ ತೀರದ ಜಿಲ್ಲೆಗಳು ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಆರ್ಭಟದಿಂದ ಜಲರಾಶಿ ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ರೈತರು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿಯಾಗಿರುವುದಲ್ಲದೆ ನೂರಾರು ಮನೆಗಳು ಬಿದ್ದು ಹೋಗಿ ಆ ಕುಟುಂಬಗಳು ಆಶ್ರಯಕ್ಕಾಗಿ ಮೊರೆ ಇಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸನ್ನಿವೇಶದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಹಾಲಿನ ಜನರ ಕಷ್ಟಗಳನ್ನು ಆಲಿಸುತ್ತಿರುವುದು ಸಕಾರಾತ್ಮಕ ಧೋರಣೆಯಾಗಿದ್ದು, ನೊಂದ ಜನರಿಗೆ ನೈತಿಕವಾಗಿ ಬೆಂಬಲ ಸಿಗುವುದಲ್ಲದೇ, ಸ್ಥಳೀಯ ಮಟ್ಟದ ಅಧಿಕಾರಿಗಳ ಜಡತ್ವವನ್ನು ನೀಗಿಸಿದಂತೆ ಆಗುತ್ತದೆ.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಅವರ ಭೇಟಿ ಸ್ವಾಗತ ಹಾಗೂ ಶ್ಲಾಘನೀಯ. ಇದರಿಂದ ಮುಂದಿನ ಫಲಿತಾಂಶವೂ ಕೂಡ ಸಕಾರಾತ್ಮಕವಾಗಿ ಇರುವಂತೆ ನೋಡಿಕೊಳ್ಳಬೇಕು. ಅದನ್ನು ಬಿಟ್ಟು ದೊರೆ ಬಂದರೂ, ಓಡಾಡಿದರು, ಮತ್ತೆ ವಾಪಸ್ ಹೋದರು ಎನ್ನುವಂತಾಗಬಾರದು ಅಲ್ಲದೆ ಜನರ, ಸಂತ್ರಸ್ಥರ ಕಣ್ಣೊರೆಸುವ ತಂತ್ರವಾಗಬಾರದು.
ಮಳೆ – ಪ್ರಕೃತಿ ವಿಕೋಪ ಇವು ಯಾವುವು ಮನುಷ್ಯರ ಹತೋಟಿಗೆ ನಿಲುಕದ ಘಟನೆಗಳಾಗಿವೆ. ಆದ್ದರಿಂದ ಮುಖ್ಯಮಂತ್ರಿ ಅವರು ಬಂದು ನೋಡಿದ ಕ್ಷಣ ಅಲ್ಲಿ ಶಾಶ್ವತವಾಗಿ ಇನ್ನೆಂದು ಅವಗಡಗಳು ಆದರೂ ಯಾವ ಪರಿಣಾಮಗಳು ಉಂಟಾಗದಂತೆ ಪರಿಹಾರವಾಗಬೇಕು ಎನ್ನುವುದು ಪಾಲಿಶವಾಗುತ್ತದೆ.
ಆದರೂ ಇಂದಿನ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಂಡು ಸುಸ್ಥಿರ ಪರಿಹಾರವನ್ನಾದರೂ ಅನುಷ್ಠಾನಗೊಳಿಸುವ ಆದ್ಯ ಕರ್ತವ್ಯವಂತೂ ಮುಖ್ಯಮಂತ್ರಿ ಅವರ ಪಾಲಿಗೆ ಇದೆ. ಅತಿವೃಷ್ಟಿ – ಅನಾವೃಷ್ಟಿಯಾದ ಸಂದರ್ಭದಲ್ಲಿ ನಾಡನ್ನು ಆಳುವವರು ಮೊದಲಿಗೆ ನೀಡುವ ಹೇಳಿಕೆ ಪರಿಹಾರಕ್ಕೆ ಯಾವುದೇ ತೊಂದರೆ ಇಲ್ಲ. ನಮ್ಮಲ್ಲಿ ನೂರಾರು ಕೋಟಿ ರೂಪಾಯಿ ಮೀಸಲು ನಿಧಿ ಇದೆ. ಇದನ್ನೇ ಬಳಕೆ ಮಾಡಿಕೊಳ್ಳುತ್ತೇವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಸಮರ್ಪಕವಾಗಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆದೇಶ ನೀಡಲಾಗಿದೆ ಎನ್ನುವ ಮಾತುಗಳು ಪುಂಖಾನುಪುಂಖವಾಗಿ ಬರುತ್ತಿರುತ್ತವೆ. ಆದರೆ ಇದು ಕೇವಲ ಬಾಯಿ ಮಾತಿಗೆ ಸೀಮಿತವಾಗಿದೆ ಎನ್ನುವುದು ಕೇವಲ ಎರಡು – ಮೂರು ದಿನಗಳಲ್ಲೇ ಗೊತ್ತಾಗುತ್ತದೆ. ಇಂತಹ ಪ್ರಹಸನಗಳು ರಾಜ್ಯಕ್ಕೆ ಹೊಸದೇನು ಅಲ್ಲ ಎನ್ನುವುದು ಹಲವಾರು ಸಲ ಜಗಜ್ಜಾಹೀರಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಡಗು ಉಡುಪಿ ಪ್ರವಾಸ ಕೈಗೊಂಡಿದ್ದಾರೆ. ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಸುಮಾರು 739 ಕೋಟಿ ರೂಪಾಯಿ ಬಿಡುಗಡೆಯಾಗಿದೆ ಪರಿಹಾರ ಕ್ರಮಕ್ಕೆ ಹಣದ ಕೊರತೆ ಇಲ್ಲ ಎಂದು ಈ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ. ನದಿಗಳ ಪ್ರವಾಹದ ಸಮಯದಲ್ಲಿ ಹಲವಾರು ಊರುಗಳು ಮುಳುಗಡೆಯಾಗುತ್ತವೆ. ಅಲ್ಲಲ್ಲಿ ನಡುಗಡ್ಡೆಗಳ ಮಧ್ಯದಲ್ಲಿ ಇರುವ ಕುಟುಂಬಗಳು ಸಂಪರ್ಕವನ್ನೇ ಕಡಿದುಕೊಳ್ಳುತ್ತವೆ. ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ತಜ್ಞರ ಅಭಿಪ್ರಾಯಗಳನ್ನು ಕೇಳಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿಷಯ ಬಹಳ ಪ್ರಮುಖವಾಗಿರುವುದರಿಂದ ತಜ್ಞರು ಶೀಘ್ರವಾಗಿ ಅಭಿಪ್ರಾಯಗಳನ್ನು ನೀಡಬೇಕಾದ ಅಗತ್ಯತೆ ಕೂಡ ಇದೆ. ಏಕೆಂದರೆ ಮುಂಗಾರು ಮಳೆಯಲ್ಲಿ ಈ ರೀತಿಯ ಪ್ರವಾಹಗಳು ಪ್ರಾರಂಭವಾಗಿವೆ. ಅಣೆಕಟ್ಟುಗಳು ತುಂಬಿ ಕೋಡಿ ಬಿದ್ದು ನದಿಯಲ್ಲಿ ನೀರು ಭೋರ್ಗರೆಯುತ್ತಿದೆ. ಇನ್ನೂ ಎರಡು – ಮೂರು ತಿಂಗಳಲ್ಲಿ ಇಂಗಾರು ಪ್ರಾರಂಭವಾಗುತ್ತದೆ. ಆದ್ದರಿಂದ ಈ ವರ್ಷವೇ ಶಾಶ್ವತ ಪರಿಹಾರಕ್ಕೆ ಅಂಕಿತ ಹಾಕುವ ಕಾರ್ಯವನ್ನು ಬೊಮ್ಮಾಯಿ ಅವರು ಮಾಡಬೇಕಾದ ತುರ್ತು ಇದೆ. ಮುಂದಿನ ಏಪ್ರಿಲ್ ಗೆ ಚುನಾವಣಾ ಪ್ರಕ್ರಿಯೆಗಳು ಪ್ರಾರಂಭವಾಗುವುದರಿಂದ ಇದೆಲ್ಲಾ ಮುನ್ನೆಲೆಗೆ ಬರುವುದು ಕಷ್ಟ.
ಮಳೆ ಹಾನಿ ಪರಿಹಾರ ಆಡಳಿತ ಯಂತ್ರದ ಹಲವಾರು ಕೊಠಡಿಗಳನ್ನು ದಾಟಿ ಶ್ರೀಸಾಮಾನ್ಯನ ಬಳಿಗೆ ಬರುವ ಹೊತ್ತಿಗೆ ಬೆಟ್ಟದಷ್ಟು ಇದ್ದದ್ದು ಹುಲ್ಲಿನ ಹೊರೆಯಷ್ಟಾಗಿರುತ್ತದೆ. ಕೆಲವೊಂದು ಕಡೆ ಎರಡು ಮೂರು ವರ್ಷಗಳ ಹಿಂದೆ ಆಗಿರುವ ಅವಗಡಗಳಿಗೆ ಪರಿಹಾರವೇ ಸಿಕ್ಕಿಲ್ಲ ಎನ್ನುವ ಆರೋಪವೂ ಇದೆ. ಇದನ್ನು ಮುಖ್ಯಮಂತ್ರಿಗಳು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಾದ ಅಗತ್ಯವಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಿಸಬೇಕಾದ ಜವಾಬ್ದಾರಿಯೂ ಕೂಡ ಇದೆ. ಸಚಿವರು ಮಳೆ ಹಾನಿ ಪ್ರದೇಶಕ್ಕೆ ತೆರಳಿದ್ದಾರೆ ಅಲ್ಲಿ ವೀಕ್ಷಣೆ ಮಾಡಿದ್ದಾರೆ.
ಈಗ ಬದ್ಧತೆಯಿಂದ ಸಂತ್ರಸ್ತರಿಗೆ ಆಗಿರುವ ನಷ್ಟಕ್ಕೆ ಸೂಕ್ತ ಪರಿಹಾರವನ್ನು ತ್ವರಿತವಾಗಿ ಕೊಡಿಸುವ ಕೆಲಸವಾಗಬೇಕು. ಅಲ್ಲದೆ ಈಗಿನ ಸಮಯವೂ ಕೃಷಿ ಬೆಳೆಗಳು ಕಾಡು ಕಟ್ಟುವ ಸಮಯ. ಅತಿವೃಷ್ಟಿಯು ಇವುಗಳ ಮೇಲೆ ಪರಿಣಾಮ ಬೀರದೆ ಇರದು. ಆದ್ದರಿಂದ ಸರ್ಕಾರ ಪರಿಹಾರವನ್ನು ನೀಡುವ ವೇಳೆ ಕೇವಲ ನೀರು ನುಗ್ಗಿ ಮಳೆ ಹಾನಿಯಾಗಿರುವ ಬೆಳೆಯನ್ನು ಮಾತ್ರ ಪರಿಗಣಿಸದೆ ಸಮಗ್ರವಾಗಿ ಪರಿಗಣಿಸಿ ಸೂಕ್ತ ಪರಿಹಾರವನ್ನು ನೀಡುವ ಕೆಲಸಕ್ಕೆ ಮುಂದಡಿ ಇಡಬೇಕು. ಈ ಮೂಲಕ ಒಂದು ‘ಮಾದರಿ’ಯನ್ನು ಹುಟ್ಟು ಹಾಕಬೇಕು.