– ರಹಮತ್ ತರೀಕೆರೆ
ಈಗ ಭಾರತದಲ್ಲಿ ಬಹುತ್ವವೂ ಅದಕ್ಕೆ ಮಾತೃಕೆಯಾಗಿರುವಾಗ ಅನಹದ್ ತತ್ವವೂ ಅಳಿವಿನಂಚಿನ ಜೀವಿಯಂತೆ ಕಾಣುತ್ತಿವೆ
ನಮ್ಮ ನಡುವಿನ ಹಿರಿಯ ಜೀವ, ರಾಜೀವ ತಾರಾನಾಥರಿಗೆ ಈಗ ಒಂಬತ್ತು ದಶಮಾನ. ಪ್ರತಿಭಾವಂತ ಕಲಾವಿದರ ನಿಡಿದಾದ ಬಾಳು, ದೀರ್ಘಾಯುವಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಪರಂಪರೆಯ ಯಾನಕ್ಕೆ, ಅದರೊಳಗಿನ ಸೃಜನಶೀಲ ಪ್ರಯೋಗ ಮತ್ತು ಸಾಹಸಗಳಿಗೆ ಲಗತ್ತಾಗಿರುತ್ತದೆ. ಅಮೀರಖುಸ್ರೂ, ಅಬ್ದುಲ್ ಕರೀಂಖಾನ್, ಅಲ್ಲಾದಿಯಾ ಖಾನ್, ಕುಮಾರ ಗಂಧರ್ವ, ಪಂ. ತಾರಾನಾಥ, ಪಂ.ರವಿಶಂಕರ್, ಲತಾ ಮಂಗೇಶ್ಕರ್, ಮಹಮದ್‍ರಫಿ, ನೌಷಾದ್, ಅಮೀರಬಾಯಿ ಕರ್ನಾಟಕಿ, ಗುಬ್ಬಿಯ ವೀರಣ್ಣ- ಈ ಯಾರ ಬಾಳನ್ನು ಕಂಡರೂ ಈ ದಿಟ ಗೋಚರವಾಗುವುದು. ಸಾಹಿತ್ಯದಲ್ಲಿ ಮಲೆಯಾಳದ ವೈಕಂ, ಉರ್ದುವಿನ ಗಾಲಿಬ್, ಕನ್ನಡದ ಕಾರಂತ, ಲಂಕೇಶ್, ತೇಜಸ್ವಿ ಮುಂತಾದವರ ಮಟ್ಟಿಗೂ ಇದು ನಿಜ. ಇವರೆಲ್ಲ ತಾವು ಆರಿಸಿಕೊಂಡ ಮಾಧ್ಯಮದಲ್ಲಿ ಕೇವಲ ಕಲಾವಿದರಾಗಿ ದುಡಿಮೆ ಮಾಡಿದವರಲ್ಲ. ಆ ಮಾಧ್ಯಮದ ಚೌಕಟ್ಟನ್ನೆ ಬದಲಿಸಿದವರು. ಒಂದು ಮಾಧ್ಯಮಕ್ಕೆ ಸೀಮಿತರಲ್ಲ. ಹಲವು ಮಾಧ್ಯಮಗಳಿಗೆ ಹರಿದಾಡಿದವರು. ಇವರಿಗೆ ಸೀಮೆ ಅಥವಾ ನಿಯಮಗಳಿರುವುದು ಕೇವಲ ಪಾಲಿಸುವುದಕ್ಕಲ್ಲ, ಸೀಮೋಲ್ಲಂಘನಕ್ಕೆ. ಹದ್ದುಗಳಿರುವುದು ಅನಹದ್ ಆಗುವುದಕ್ಕೆ.
ಅನಹದ್-ಫಾರಸಿ ಶಬ್ದ. ಸಾಧಕರು ತಮ್ಮ ಆನುಭಾವಿಕ ಸಾಧನೆಯಲ್ಲಿ ಮಾಡುವ ಏರುಯಾನವನ್ನು ವಿವರಿಸಲು ಕಬೀರನು ಈ ಪದವನ್ನು ಬಳಸಿದನು. ಅವನ ಬಾಳಿನಲ್ಲಿ ಹಲವು ಬಗೆಯ ಸೀಮೋಲ್ಲಂಘನೆಗಳ ಮೊತ್ತ. ಆತ ತನ್ನ ಧರ್ಮದ ಸಾಂಸ್ಥಿಕ ಚೌಕಟ್ಟು ಬಿಟ್ಟು ಗುರುಪಂಥೀಯ ಅನುಭಾವಕ್ಕೆ ಚಲಿಸಿದವನು. ಅವನ ಗುರುವಾಗಲಿ ಶಿಷ್ಯರಾಗಲಿ ಅವನ ಧರ್ಮದವರಲ್ಲ. ಆತ ತಾನು ಹುಟ್ಟಿಬೆಳೆದ ಕಾಶಿ ಬಿಟ್ಟು ಗೋರಖಪುರಕ್ಕೆ ಪ್ರಸ್ಥಾನ ಮಾಡಿದವನು. ಗಾಯನ ಕಾವ್ಯ ಅನುಭಾವ ನೇಕಾರಿಕೆಗಳಲ್ಲಿ ಆತ ಮಗ್ಗದಲ್ಲಿ ನೂಲೆಳೆಗಳು ಹಾಸುಹೊಕ್ಕಾಡುವಂತೆ ಸಮದರ್ಶನದಲ್ಲಿ ಅಲೆದಾಡಿದವನು. ಹಿಂದೂಸ್ತಾನಿ ಸಂಗೀತ ಪ್ರವರ್ತಕನಾದ ಅಮೀರ್‍ಖುಸ್ರೂನಲ್ಲೂ ಇಂತಹವೇ ಅಲೆದಾಟಗಳಿವೆ. ಟರ್ಕಿ ಮೂಲದ ತಂದೆ- ಬ್ರಾಹ್ಮಣ ತಾಯಿಯ ಮಗನಾದ ಈತ, ದೆಹಲಿಯ ನಿಜಾಮುದ್ದೀನರ ಮುರೀದನಾದವನು. ಮರಾಠಾ ರಾಜಕುಮಾರಿಯನ್ನು ವರಿಸಿದ ಕಿರಾಣ ಘರಾಣೆಯ ಅಬ್ದುಲ್ ಕರೀಂಖಾನರ ಬದುಕಿನಲ್ಲೂ ಇಂಥವೇ ಜೈವಿಕ ಕಲಾತ್ಮಕ ಸೀಮೋಲ್ಲಂಘನೆಗಳಿವೆ. ಇಂತಹ ಜೈವಿಕ ಮತ್ತು ಕಲಾತ್ಮಕ ಸಂಕರ ಪರಂಪರೆಯ ಉಳಿ ಸುತ್ತಿಗೆಗಳಿಂದ ರಾಜೀವ ತಾರಾನಾಥರ ವ್ಯಕ್ತಿತ್ವ ಕಟೆಯಲ್ಪಟ್ಟಿತು. ಎಂತಲೇ ಅದು ಭಾರತದ ನಡಾವಳಿಯ ಭಾಗವಾಗಿರುವ ಬಹುತ್ವದ ಪರಂಪರೆಯ ಪ್ರತೀಕವಾಗಿದೆ.
ರಾಜೀವರ ತಂದೆ ಪಂಡಿತ ತಾರಾನಾಥರು ಕರಾವಳಿ ಸೀಮೆಯಲ್ಲಿ ಹುಟ್ಟಿ ಹೈದರಾಬಾದಿನಲ್ಲಿ ಬೆಳೆದು, ನಾಡನ್ನೆಲ್ಲ ತಿರುಗಾಡಿ, ತುಂಗಭದ್ರಾದಲ್ಲಿ ಬೇರುತಳೆದವರು. ಕೊಂಕಣಿ ಮನೆಮಾತಿನ ಸಾರಸ್ವತ ಬ್ರಾಹ್ಮಣರಾಗಿ ತಮಿಳು ಮನೆಮಾತಿನ ತಮಿಳುನಾಡಿನ ಬೆಸ್ತ ಸಮುದಾಯದ ಸುಮತಿಬಾಯಿಯವರನ್ನು ಸಂಗಾತಿಯಾಗಿ ಪಡೆದವರು. ಅವರ ಈ ಸೀಮೋಲ್ಲಂಘನೆಗೆ ಪ್ರೇರಣೆಯಾಗಿದ್ದು ಪ್ರೇಮ. ಅವರ ಆಶ್ರಮದ ಹೆಸರು `ಪ್ರೇಮಾಯತನ’. ಅವರ ಗೆಳೆತನ, ಶಾಲೆ ಮತ್ತು ಆಶ್ರಮದಲ್ಲಿ ಎಲ್ಲ ಧರ್ಮದವರು ಜಾತಿಯವರು ಇರುತ್ತಿದ್ದರು. ಅವರಿಗೆ ಸಂಸ್ಕೃತ ತಮಿಳು ಹಿಂದಿ ಉರ್ದು ಕನ್ನಡ ಅಂಗ್ರೇಜಿ ಕೊಂಕಣಿ ಮೊದಲಾಗಿ ಹಲವು ಭಾಷೆಗಳಲ್ಲಿ ಪ್ರವೇಶವಿತ್ತು. ವೈದ್ಯ, ಸಂಗೀತ, ಸಾಹಿತ್ಯ, ರಾಜಕೀಯ ಚಳುವಳಿ, ಯೋಗ, ತಂತ್ರ, ಉದ್ಯಮಶೀಲತೆ, ಅಧ್ಯಾಪನ- ಹೀಗೆ ಹಲವು ಹೊಲಗಳಲ್ಲಿ ಪೈರುಬೆಳೆದ ರೈತ ಅವರು. ರಾಜೀವರ ಗುರುಗಳಾದ ಅಲಿ ಅಕಬರ್‍ಖಾನರೂ, ಪಂಡಿತ ರವಿಶಂಕರರೂ ಹೀಗೇ ಲೋಕಸಂಚಾರಿಗಳು. ಅಕಬರ್ ಖಾನರ ತಂಗಿಯನ್ನು ಅವರ ಸಹಪಾಠಿಗಳಾಗಿದ್ದ ಪಂಡಿತ್ ರವಿಶಂಕರ್ ಲಗ್ನವಾದರು. ತಮ್ಮ ತಂದೆ ಅಲ್ಲಾವುದ್ದೀನ ಖಾನರಂತೆ, ಅಕಬರಖಾನರೂ ಎಲ್ಲ ಜಾತಿಯ ಮತ್ತು ಧರ್ಮದ ಶಿಷ್ಯರನ್ನು ಮನೆಯಲ್ಲಿಟ್ಟುಕೊಂಡು ಕಲಿಸಿದವರು. ರವಿಶಂಕರ್ ಹಾಗೂ ಅಲ್ಲಿ ಅಕಬರಖಾನರು ಸಿನಿಮಾಕ್ಕೆ ಸಂಗೀತ ನೀಡಿದ್ದು ಮಾತ್ರವಲ್ಲ, ಪಾಶ್ಚಿಮಾತ್ಯ ಸಂಗೀತದ ಜತೆ ಹಿಂದೂಸ್ತಾನಿ ಸಂಗೀತವನ್ನು ಕಸಿಗೊಳಿಸಿದವರು.
ರಾಜೀವರಿಗೆ ತಾಯಿತಂದೆಯರಿಂದ ತಮಿಳು ಕೊಂಕಣಿಗಳು ಬಂದವು. ಅವರು ಕಲಿತಿದ್ದು ಮತ್ತು ಕಲಿಸಿದ್ದು ಆಂಗ್ಲಸಾಹಿತ್ಯ. ಬರೆದಿದ್ದು ಕನ್ನಡದಲ್ಲಿ. ಅವರ ಗುರುಗಳಾದವರು ಬಂಗಾಳಿಗಳಾದ ಕಾರಣ, ಬಂಗಾಳಿ ದಕ್ಕಿತು. ಅವರಿಗೆ ಉರ್ದು ಅಥವಾ ಹಿಂದುಸ್ತಾನಿ ಪ್ರಿಯವಾದ ಭಾಷೆ. ಎಂತಲೇ ಅವರ ಸರಸವಾದ ಮಾತುಕತೆಯಲ್ಲಿ ಈ ಬಹುಭಾಷಿಕ ನುಡಿಗಟ್ಟು ಗಾದೆ ಕವಿತೆಯ ಸಾಲು ಸಂಗೀತದ ಚೀಜುಗಳು, ಒಂದೇ ರಾಗದ ವಿವಿಧ ಆಲಾಪಗಳಂತೆ ಬಂದುಹೋಗುತ್ತವೆ. ಅವರು ಮೂಲತಃ ಸಾಹಿತ್ಯ ವಿದ್ಯಾರ್ಥಿ. ಹೈದರಾಬಾದ್ ಯೆಮನ್ ತಿರುಚನಾಪಲ್ಲಿ ಇತ್ಯಾದಿ ಕಡೆ ಅಧ್ಯಾಪನ ಮಾಡಿದವರು. ಅದರ ಕಟ್ಟನ್ನು ಹರಿದೊಗೆದು ಸಂಗೀತಕ್ಕೆ ಚಲಿಸಿದವರು. ಶಾಸ್ತ್ರೀಯ ಸಂಗೀತದೊಳಗಿದ್ದೇ ರಂಗಭೂಮಿಗೂ ಸಿನಿಮಾಕ್ಕೂ ಸಂಗೀತ ಒದಗಿಸಿದವರು. ಸಂಗೀತ ರಂಗಭೂಮಿ ಸಿನಿಮಾ ಭಾಷೆ ಸಾಹಿತ್ಯ ಚಿತ್ರಕಲೆ ವಾಸ್ತುಶಿಲ್ಪಗಳು ದೊಡ್ಡದನ್ನು ಸಾಧಿಸಿರುವುದೇ, ಒಡ್ಡಿದ ಹದ್ದುಗಳನ್ನು ದಾಟುತ್ತ ಅನಹದ್ ವಿಸ್ತರಣೆ ಪಡೆವ ಮೂಲಕ.
ನಾನೊಮ್ಮೆ ಅವರ ಸಂಗದಲ್ಲಿ ಎರಡು ದಿನವಿದ್ದೆ. ಅವರನ್ನು ಕಾಣಲು ಎಷ್ಟೊಂದು ಹಿನ್ನೆಲೆಯ ಜನ ಮನೆಗೆ ಬರುತ್ತಾರೆ? ಎಷ್ಟೊಂದು ಕ್ಷೇತ್ರದ ಮಂದಿ ಕರೆ ಮಾಡುತ್ತಾರೆ? ಅವರ ಮನೆಯಲ್ಲಿ ಪಾನೀಯ, ಊಟ, ಹರಟೆಗಳಿರುತ್ತವೆ. ಪೂರ್ವಸೂರಿಗಳು ಕಷ್ಟದಿಂದಲೂ ಪ್ರತಿಭೆಯಿಂದ ಗಳಿಸಿದ ಬಹುತ್ವದ ಪರಂಪರೆಯ ಅರಿವು, ವಿವೇಕ, ವೈಚಾರಿಕತೆಗಳಿರುತ್ತವೆ. ಸಂಗೀತದ ನಾದವಿರುತ್ತದೆ. ಬೆಚ್ಚಗಿನ ತಾಯಪ್ರೀತಿ ಸಿಗುತ್ತದೆ. ರಾಜೀವ್, ನಿಷ್ಠುರತೆಯ ಪೊಟ್ಟಣದೊಳಗೆ ಪ್ಯಾಕು ಮಾಡಿದ ಪ್ರೇಮದ ಸಿಹಿತಿಂಡಿಯಿದ್ದಂತೆ. ಅವರು `ಈ ತುಂಬಿಬಾಳು ತುಂಬಿರುವ ತನಕ ತುಂತುಂಬಿ ಕುಡಿಯಬೇಕು’ (ಸೂಫಿಕವಿ ಉಮರ್ ಖಯಾಮನ ಒಂದು ಒಸಗೆಯ ಬೇಂದ್ರೆಯವರ ಅನುವಾದವಿದು) ಎಂಬಂತೆ ಬದುಕಿದವರು. ಹಲವು ಹೂಗಳನ್ನು ತಿರಿದು ತಂದ ಜೇನನ್ನು ತುಂಬಿಯಂತೆ, ತಾಯಿಯಂತೆ ಗುರುವಿನಂತೆ, ಸಖನಂತೆ ಲೋಕಕ್ಕೆ ಉಣಿಸಿದವರು. ಅವರಿಗೆ ಶತಮಾನ ತುಂಬುವುದಕ್ಕೂ ನಾಡು ಸಾಕ್ಷಿಯಾಗಬೇಕು.
ಆದರೆ, ಈಗ ಭಾರತದಲ್ಲಿ ಬಹುತ್ವವೂ ಅದಕ್ಕೆ ಮಾತೃಕೆಯಾಗಿರುವಾಗ ಅನಹದ್ ತತ್ವವೂ ಅಳಿವಿನಂಚಿನ ಜೀವಿಯಂತೆ ಕಾಣುತ್ತಿವೆ. ತಮ್ಮ ಸೀಮೋಲ್ಲಂಘನೆಯ ಪ್ರಯೋಗಶೀಲತೆಗಳಿಗೆ ಎರುವಾಗುತ್ತಿವೆ. ಬಹುತ್ವವನ್ನು ತಬ್ಬಲಿಗೊಳಿಸುವುದಕ್ಕೆ ಕೆಲವರಿಗೆ ಇನ್ನಿಲ್ಲದ ಅವಸರ. ರಾಜೀವರು ಸದ್ಯ ನೆಲೆಸಿರುವ ಮೈಸೂರ ಇತಿಹಾಸದಲ್ಲಿ ಆಗುತ್ತಿರುವ ಪಲ್ಲಟವನ್ನು ಗಮನಿಸಬೇಕು. ಇಲ್ಲಿ ಪೂರ್ಣಯ್ಯನೆಂಬ ರಾಜತಾಂತ್ರಿಕ ಚತುರ ಹೈದರಾಲಿ ಮತ್ತು ಟಿಪ್ಪುವಿಗೆ ದಿವಾನನಾಗಿದ್ದನು; ಕೂಗಳತೆಯಷ್ಟು ದೂರದಲ್ಲಿರುವ ರಂಗನಾಥ ಗುಡಿಯ ಮುಂದಿದ್ದ ಅರಮನೆಯಲ್ಲಿ ವಾಸವಾಗಿದ್ದ ಟಿಪ್ಪು, ಏಕಕಾಲದಲ್ಲಿ ಬೆಳಗಿನ ಅಜಾನ್ ಮತ್ತು ಗಂಟೆಯ ನಾದ ಆಲಿಸುತ್ತಿದ್ದನು; ನಾಲ್ವಡಿಯವರು, ತಮ್ಮ ಸಹಪಾಠಿ ಮಿರ್ಜಾ ಇಸ್ಮಾಯಿಲರನ್ನು, ಮತೀಯ ವಿರೋಧಗಳನ್ನು ಲೆಕ್ಕಿಸಿದೆ ದಿವಾನರಾಗಿಸಿಕೊಂಡು ಅಧುನಿಕ ಮೈಸೂರನ್ನು ಕಟ್ಟಿದರು; ತಮ್ಮ ಪಟ್ಟಾಭಿಷೇಕದ ಬೆಳ್ಳಿಹಬ್ಬದ ಹೊತ್ತಲ್ಲಿ ಸಾರ್ವಜನಿಕರಿಗೆ ಹೊರಡಿಸಿದ ಕರೆಯೋಲೆಯನ್ನು ಸ್ವಹಸ್ತಾಕ್ಷದಿಂದ ಉರ್ದು ಕನ್ನಡ ಇಂಗ್ಲೀಶು ಭಾಷೆಯಲ್ಲಿ ಅವರು ಬರೆದಿದ್ದುಂಟು. ಬೇರೆಬೇರೆ ಧರ್ಮಗಳ ಬಗ್ಗೆ ತಿಳುವಳಿಕೆಯ ಕೊರತೆಯಿಂದಲೂ ಜನರಲ್ಲಿ ಪೂರ್ವಗ್ರಹ ಬೆಳೆಯುತ್ತದೆ ಎಂದು ಊಹಿಸಿದ ಬಿಎಂಶ್ರೀಯವರು, ಉರ್ದು ವಿದ್ವಾಂಸರಾದ ಅಬ್ಬಾಸ್ ಶೂಸ್ತ್ರಿಯವರಿಂದ `ಇಸ್ಲಾಂ ಸಂಸ್ಕೃತಿ’ ಪುಸ್ತಕ ಬರೆಯಿಸಿ, ಕೈಯಾರೆ ಅನುವಾದಿಸಿ ಪ್ರಕಟಿಸಿದರು. ಅದಕ್ಕೆ ಕುವೆಂಪು ಮುನ್ನುಡಿ ಬರೆದರು. ಆದರೀಗ ರಾಕೆಟ್‍ತಂತ್ರಜ್ಞಾನ, ರೇಷ್ಮೆ ಅಮೃತಮಹಲ್ ದನ, ಭೂಸುಧಾರಣೆ, ದಲಿತರಿಗೆ ಉದ್ಯೋಗಗಳಂತಹ ಪ್ರಯೋಗ ಮಾಡಿದ, ಮಕ್ಕಳನ್ನು ಒತ್ತೆಯಿಟ್ಟಿದ್ದ, ಬ್ರಿಟಿಶರ ವಿರುದ್ಧ ಹೋರಾಡುತ್ತ ರಣರಂಗದಲ್ಲೇ ಮಡಿದ, ಹಕೀಮನಂಜುಂಡನ ಗುಡಿಯಲ್ಲಿ ಪಚ್ಚೆಲಿಂಗ ಸ್ಥಾಪಿಸಿದ ಟಿಪ್ಪುವಿನ ಹೆಸರು, ರೈಲಿನಲ್ಲಿರುವುದನ್ನು ಸಹಿಸಲಾಗದ ಅಸಹನೆ ಏರ್ಪಟ್ಟಿದೆ.
ಇಂತಹ ಸಾಂಸ್ಕೃತಿಕ ಅನಕ್ಷರತೆ, ಅಸಹನೆ, ಧ್ರುವೀಕರಣ ಮತ್ತು ಏಕರೂಪೀಕರಣದ ಕಾಲದಲ್ಲಿ, ಬಹುತ್ವದ ಪರಂಪರೆಯ ಕೊಂಡಿಗಳಲ್ಲಿ ಒಬ್ಬರಾಗಿರುವ ರಾಜೀವ ತಾರಾನಾಥರ ತೊಂಬತ್ತರ ಹುಟ್ಟುಹಬ್ಬ (17.10.22) ಏರ್ಪಟ್ಟಿದೆ. ನಾಡು, ಏಕರೂಪೀಕರಣದ ಇಳಿಜಾರಿನಲ್ಲಿ ಜಾರುತ್ತಿರುವಾಗ, ಬೀಳದಂತೆ ನಮಗೆ ರಾಜೀವ ತಾರಾನಾಥರೂ ಅವರ ಗುರುಗಳೂ ನಡೆದು ಮಾಡಿದ ಹಾದಿ ಕೈಮರವಾಗಿ ಕಾಣುತ್ತಿದೆ. ಆದರೆ ಪಥಿಕರಾಗಿ ನಡೆಯುವವರು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ.