೨೦೧೦ರ ಒಂದು ಸಂಜೆ, ದೆಹಲಿಯ ಕಾಲೇಜೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ೩೬ ವರ್ಷ ಪ್ರಾಯದ ಮೋಹಿತ್ ರಾಜ್ ತನ್ನ ಕಾಲೇಜಿನಿಂದ ಮನೆಗೆ ಮರಳಿ ಬರುತ್ತಿದ್ದರು. ಅವರೊಂದಿಗೆ ಅವರ ಆತ್ಮೀಯ ಗೆಳತಿ ೩೬ ವರ್ಷ ಪ್ರಾಯದ ಸಾಂಚಿ ಮಾರ್ವಾಹಾ ಇದ್ದರು. ರಸ್ತೆ ಬದಿಯಲ್ಲಿ ಇಬ್ಬರು ಚಿಕ್ಕ ಮಕ್ಕಳು ಆಟವಾಡುತ್ತಿದ್ದುದು ಕಾಣಿಸಿತು. ತುಸು ದೂರದಲ್ಲಿ ದರ್ಜಿ ಕೆಲಸ ಮಾಡುತ್ತಿದ್ದ ಆ ಮಕ್ಕಳ ತಂದೆ ಹೊಲಿಗೆ ಮೆಷಿನ್ ನಡೆಸುತ್ತಿದ್ದನು. ಆತ ತನ್ನ ಒಂದು ಕಣ್ಣನ್ನು ಹೊಲಿಗೆ ಮೆಷಿನ್ ಮೇಲಿಟ್ಟಿದ್ದರೆ ಇನ್ನೊಂದು ಕಣ್ಣನ್ನು ಆ ಮಕ್ಕಳ ಮೇಲಿಟ್ಟಿದ್ದನು. ಮೋಹಿತ್ ದೊಡ್ಡ ಹುಡುಗನನ್ನು ಹತ್ತಿರ ಕರೆದು ಅವನ ಹೆಸರೇನೆಂದು ವಿಚಾರಿಸಿದಾಗ ಅವನು ತನ್ನ ಹೆಸರು ಅಜಯ್ ಎಂದನು. ಶಾಲೆಗೆ ಹೋಗುವುದಿಲ್ಲವೇ? ಎಂದು ಕೇಳಿದಾಗ ಇಲ್ಲ ಎಂದು ಉತ್ತರಿಸಿದನು. ಮತ್ತೂ ವಿಚಾರಿಸಿದಾಗ, ಅವನ ಕುಟುಂಬ ಹೊಟ್ಟೆಪಾಡಿಗಾಗಿ ಮಧ್ಯಪ್ರದೇಶದಿಂದ ದೆಹಲಿಗೆ ಬಂದಿರುವುದು ತಿಳಿಯಿತು.
ಅಜಯ್ ಮಧ್ಯಪ್ರದೇಶದಲ್ಲೂ ಯಾವತ್ತೂ ಶಾಲೆಗೆ ಹೋಗಿರಲಿಲ್ಲ. ಈಗ ಅವನಿಗೆ ಹತ್ತು ವರ್ಷ ಪ್ರಾಯ. ಅವನ ಶೈಕ್ಷಣಿಕ ಮಟ್ಟ ಅವನದೇ ಪ್ರಾಯದ ಇತರ ಮಕ್ಕಳ ಶೈಕ್ಷಣಿಕ ಮಟ್ಟಕ್ಕಿಂತ ಕಡಿಮೆ ಇರುವುದರಿಂದ ದೆಹಲಿಯ ಯಾವ ಶಾಲೆಯೂ ಅವನನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಮೋಹಿತ್ ಮತ್ತು ಸಾಂಚಿಗೆ ತಿಳಿಯಿತು. ಆಗ ಅವರಿಬ್ಬರೂ ಅಜಯ್‌ನ ಶೈಕ್ಷಣಿಕ ಮಟ್ಟವನ್ನು ಅವನ ಪ್ರಾಯಕ್ಕೆ ಅನುಗುಣವಾಗಿ ಏರಿಸಿ, ಅವನನ್ನು ಶಾಲೆಗೆ ಸೇರಿಸುವ ಹೊಣೆಯನ್ನು ಹೊತ್ತುಕೊಂಡರು. ಮರುದಿನದಿಂದ ಮೋಹಿತ್ ಮತ್ತು ಸಾಂಚಿ, ಪಕ್ಕದಲ್ಲಿದ್ದ ಒಂದು ದೇವಸ್ಥಾನದಲ್ಲಿ ಪ್ರತೀ ದಿನ ಸಂಜೆ ಹೊತ್ತು ಅಜಯ್‌ಗೆ ಕಲಿಸಲು ಪ್ರಾರಂಭಿಸಿದರು. ಒಬ್ಬ ವಲಸೆ ಕಾರ್ಮಿಕನ ಮಗನಿಗೆ ಕಲಿಸುವ ಅವರ ಕೆಲಸ ಮುಂದೆ ನೂರು ವಲಸೆ ಕಾರ್ಮಿಕರ ಮಕ್ಕಳ ವರೆಗೆ ವಿಸ್ತರಿಸಿತು. ಆ ನೂರು ಮಕ್ಕಳಲ್ಲಿ ಎಂಬತ್ತು ಮಕ್ಕಳು ದೆಹಲಿ ಶಾಲೆಗಳ ಪ್ರವೇಶ ಪರೀಕ್ಷೆ (ಎಂಟ್ರೆನ್ಸ್ ಟೆಸ್ಟ್) ಗಳನ್ನು ಪಾಸು ಮಾಡಿ, ಅವರವರ ಪ್ರಾಯಕ್ಕನುಗುಣವಾದ ತರಗತಿಗಳಿಗೆ ಪ್ರವೇಶ ಪಡೆದರು.
ಅಜಯ್ ಮುಂದೆ ಹತ್ತನೇ ಕ್ಲಾಸ್ ಪಾಸು ಮಾಡಿದ್ದಲ್ಲದೆ,ಗ್ರ್ಯಾಜುಯೇಷನ್ ಮುಗಿಸಿ, ಚಾರ್ಟೆರ್ಡ್ ಅಕೌಂಟೆಂಟ್ ಪರೀಕ್ಷೆಗೆ ತಯಾರು ಮಾಡತೊಡಗಿ ದನು. ಅಜಯ್ ಹಾಗೂ ಇತರ ಹಲವು ವಲಸೆ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾದ ಕಾರಣ ಮೋಹಿತ್ ಮತ್ತು ಸಾಂಚಿಗೆ ತಮ್ಮ ಕೆಲಸದಲ್ಲಿ ಆತ್ಮವಿಶ್ವಾಸ ಹುಟ್ಟಿ, ಆ ಕೆಲಸವನ್ನು ಇನ್ನಷ್ಟು ವಿಸ್ತರಿಸಲು ತೀರ್ಮಾನಿಸಿದರು. ನಗರದ ಹೊರ ಅಂಚಿನಲ್ಲಿ ವಾಸಿಸುತ್ತಿದ್ದ ಶಿಕ್ಷಣ ವಂಚಿತ ಕೆಲವು ಬುಡಕಟ್ಟು ಸಮುದಾಯಗಳನ್ನು ಗುರುತಿಸಿ, ಅವರ ಮಕ್ಕಳಿಗೆ ಶಿಕ್ಷಣ ಕೊಡಿಸುವ ಗುರಿ ಹಾಕಿಕೊಂಡು, ಆ ಸಮುದಾಯಗಳು ವಾಸಿಸುವ ಪ್ರದೇಶಗಳಲ್ಲಿ ಟ್ಯೂಷನ್ ಕೇಂದ್ರಗಳನ್ನು ತೆರೆದರು. ಆ ಉದ್ದೇಶಕ್ಕಾಗಿ ಅವರು ‘ಟರ್ನ್ ಯುವರ್ ಕನ್ಸರ್ನ್ ಇಂಟು ಆಕ್ಷನ್’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಆ ಬುಡಕಟ್ಟು ಸಮುದಾಯಗಳನ್ನು ಶಿಕ್ಷಿತರನ್ನಾಗಿಸುವ ಪ್ರಯತ್ನವೇ ಮುಂದೆ ಮೋಹಿತ್ ಮತ್ತು ಸಾಂಚಿಯನ್ನು ತಿಹಾರ್ ಜೈಲಿಗೆ ಹೋಗುವಂತೆ ಮಾಡಿತು!
ಮೋಹಿತ್ ಮತ್ತು ಸಾಂಚಿ ಟ್ಯೂಷನ್ ಕೊಡಲು ಆರಿಸಿಕೊಂಡ ಆ ಬುಡಕಟ್ಟು ಸಮುದಾಯಗಳು ಬ್ರಿಟಿಷ್ ಆಡಳಿತದಲ್ಲಿ ಕಾನೂನಾತ್ಮಕವಾಗಿ ‘ಕ್ರಿಮಿನಲ್ ಟ್ರೈಬ್’ಗಳೆಂದು ಹಣೆಪಟ್ಟಿ ಅಂಟಿಸಿಕೊಂಡು ಸಾಮಾಜಿಕವಾಗಿ ಬಹಿಷ್ಕೃತ ಸಮುದಾಯಗಳಾಗಿ ಬದುಕುತ್ತಿದ್ದವು. ಬ್ರಿಟಿಷರು ಹೋಗಿ, ದೇಶ ಸ್ವತಂತ್ರಗೊಂಡು ಕೆಲಕಾಲದ ನಂತರ ಆ ಕಾನೂನು ಹೋದರೂ, ಆ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಯಲ್ಲಿ ಇಂದಿಗೂ ಹೆಚ್ಚಿನ ಬದಲಾವಣೆಗಳಾಗಿಲ್ಲ. ಈಗಿನ ಭಾರತೀಯ ಸಮಾಜವೂ ಇಂದಿಗೂ ಈ ಸಮುದಾಯಗಳನ್ನು ಬ್ರಿಟಿಷರು ನೋಡುತ್ತಿದ್ದ ದೃಷ್ಟಿಯಲ್ಲೇ ನೋಡುತ್ತಿರುವುದರಿಂದ ಅವರ ಬದುಕಿನ ಹೀನಾಯ ಸ್ಥಿತಿ ಈಗಲೂ ಮುಂದುವರಿದಿದೆ. ಮೊತ್ತ ಮೊದಲ ಬಾರಿಗೆ, ಹೊರ ಸಮಾಜಕ್ಕೆ ಸೇರಿದ ಒಂದಷ್ಟು ಜನ ತಮ್ಮನ್ನು ಪ್ರೀತಿ, ಗೌರವದಿಂದ ಕಂಡು, ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಕಾಳಜಿ ವಹಿಸುವುದನ್ನು ನೋಡಿದ ಆ ಬುಡಕಟ್ಟು ಸಮುದಾಯಗಳು ಹೊಸ ಆತ್ಮವಿಶ್ವಾಸ ಹೊಂದಿದವರಂತೆ ತಮ್ಮ ಮಕ್ಕಳ ಶಿಕ್ಷಣಕ್ಕೆ ಲಕ್ಷ ನೀಡಲು ಪ್ರಾರಂಭಿಸಿದರು. ಆ ಮೂಲಕ ಆ ಸಮುದಾಯಗಳ ಜೀವನ ಕ್ರಮ, ಧೋರಣೆ ಮೊದಲಾದವುಗಳಲ್ಲಿ ಬದಲಾವಣೆ ಕಾಣಬರತೊಡಗಿದವು.
ಕ್ರಿಮಿನಲ್ ಟ್ರೈಬ್‌ಗಳೆಂದು ಪರಿಗಣಿಸಲ್ಪಟ್ಟ ಆ ಬುಡಕಟ್ಟು ಸಮುದಾಯಗಳಲ್ಲಾದ ಬದಲಾವಣೆ ಐಪಿಎಸ್ ಅಽಕಾರಿ ಸುಽರ್ ಯಾದವ್ ಎಂಬವರ ಗಮನಕ್ಕೆ ಬಂದಿತು. ಅವರು ಆಗ ತಾನು ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದ ತಿಹಾರ್ ಜೈಲಲ್ಲಿ ಸುಧಾರಣೆಗಳನ್ನು ತರುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಅವರು ಮೋಹಿತ್ ಮತ್ತು ಸಾಂಚಿಯವರ ಸಹಾಯ ಪಡೆಯುವ ಉದ್ದೇಶದಿಂದ ಅವರನ್ನು ಸಂಪರ್ಕಿಸಿ, ತನ್ನ ಆಲೋಚನೆಯನ್ನು ಅವರೊಂದಿಗೆ ಹಂಚಿಕೊಂಡರು. ಸುಧೀರ್ ಯಾದವ್‌ರೊಂದಿಗೆ ಕೆಲಸ ಮಾಡಲು ಶುರು ಮಾಡಿದ ಮೋಹಿತ್ ಮತ್ತು ಸಾಂಚಿ, ಮುಂದಿನ ಹಲವು ತಿಂಗಳ ಕಾಲ ಹಲವು ಜೈಲುಗಳಲ್ಲಿ ಕೈದಿಗಳನ್ನು ಹತ್ತಿರದಿಂದ ಗಮನಿಸಿ, ಅವರೊಂದಿಗೆ ಮಾತಾಡಿ ಅವರ ಹಿನ್ನೆಲೆಗಳನ್ನು ತಿಳಿದು, ಅವರು ಅಪರಾಧಿಗಳಾಗಿ ರೂಪುಗೊಳ್ಳಲು ಕಾರಣವಾದ ಸನ್ನಿವೇಶಗಳು ಹಾಗೂ ಸದ್ಯದ ಅವರ ಬದುಕಿನ ಪ್ರಸ್ತುತ ಘಟ್ಟವನ್ನು ಹಾದು ಹೋಗಲು ಅವರು ಪಡುತ್ತಿರುವ ಪ್ರಯತ್ನ ಮೊದಲಾದವುಗಳನ್ನು ತಿಳಿದುಕೊಂಡರು.
ಜೈಲುಗಳಲ್ಲಿ ಕಳೆದ ಆ ತಿಂಗಳುಗಳು ಮೋಹಿತ್ ಮತ್ತು ಸಾಂಚಿಗೆ ಒಂದು ಬಹುದೊಡ್ಡ ಕರಾಳ ವಾಸ್ತವವನ್ನು ತೆರೆದು ತೋರಿಸಿತು. ಅದೇನೆಂದರೆ, ಭಾರತದಲ್ಲಿ ನ್ಯಾಯ ಎಂಬುದು ಉಳ್ಳವರಿಗೆ ಸುಲಭದಲ್ಲಿ ಲಭಿಸುತ್ತದೆ. ಆದರೆ ಬಡವರಿಗೆ ಅದು ಗಗನ ಕುಸುಮ. ಆದರೆ ಆ ವಿಚಾರದಲ್ಲಿ ಏನೂ ಮಾಡುವುದು ಅವರ ಮಿತಿಯನ್ನು ಮೀರಿದುದಾಗಿತ್ತು. ಹಾಗಾಗಿ ಅವರು ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವವರಿಗೆ ಹಾಗೂ ಶಿಕ್ಷೆ ಅನುಭವಿಸಿ ಹೊರ ಬರುವವರನ್ನು ಕೇಂದ್ರವಾಗಿರಿಸಿಕೊಂಡು, ಇನ್ನೊರ್ವ ಸಂಗಾತಿ ೩೦ ವರ್ಷ ಪ್ರಾಯದ ಎಲೀನಾ ಜಾರ್ಜ್ ಎಂಬವರನ್ನು ಜೊತೆಯಾಗಿರಿಸಿಕೊಂಡು ‘ಪ್ರಾಜೆಕ್ಟ್ ಸೆಕೆಂಡ್ ಚಾನ್ಸ್’ ಎಂಬ ಒಂದು ಯೋಜನೆಯನ್ನು ರೂಪಿಸಿದರು.
‘ಪ್ರಾಜೆಕ್ಟ್ ಸೆಕೆಂಡ್ ಚಾನ್ಸ್’ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವವರು ಮತ್ತು ಶಿಕ್ಷೆ ಅನುಭವಿಸಿ ಜೈಲಿಂದ ಹೊರ ಬಂದವರ ಶೈಕ್ಷಣಿಕ ಅರ್ಹತೆಯನ್ನು ಹೆಚ್ಚಿಸುವುದು, ಅವರ ವೃತ್ತಿ ಕೌಶಲವನ್ನು ಹೆಚ್ಚಿಸುವುದು, ಮದ್ಯ ಅಥವಾ ಡ್ರಗ್ ವ್ಯಸನಿಗಳಾಗಿರುವವರನ್ನು ವ್ಯಸನ ಮುಕ್ತರನ್ನಾಗಿಸುವುದು, ಕಾನೂನು ನೆರವು ನೀಡುವುದು ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುವುದು ಮೊದಲಾದ ಕಾರ್ಯಗಳನ್ನು ಮಾಡುತ್ತದೆ. ಜೈಲಲ್ಲಿರುವವರು ಅಥವಾ ಶಿಕ್ಷೆ ಮುಗಿಸಿ ಅಥವಾ ದೋಷ ಮುಕ್ತರಾಗಿ ಹೊರಬಂದವರಷ್ಟೇ ಇತರ ಕೈದಿಗಳ ಪರಿಸ್ಥಿತಿ ಹಾಗೂ ಅವರ ಅಗತ್ಯಗಳನ್ನು ಚೆನ್ನಾಗಿ ಅರಿಯಬಲ್ಲರು. ಹಾಗಾಗಿ, ‘ಪ್ರಾಜೆಕ್ಟ್ ಸೆಕೆಂಡ್ ಚಾನ್ಸ್’, ಹಾಲಿ ಹಾಗೂ ಮಾಜಿ ಕೈದಿಗಳನ್ನು ತನ್ನ ತೆಕ್ಕೆಗೆ ತೆಗೆದು ಕೊಂಡು, ಅವರನ್ನು ನಾಯಕರನ್ನಾಗಿ ರೂಪಿಸಿ, ಅವರ ಮೂಲಕ ತನ್ನ ಕಾಳಜಿಗಳನ್ನು ಕಾರ್ಯ ರೂಪಕ್ಕೆ ತರುತ್ತದೆ. ಉದಾಹರಣೆಗೆ, ಜೈಲಲ್ಲಿರುವಾಗ ದೂರ ಶಿಕ್ಷಣ ಮೂಲಕ ಸೋಶಿಯಲ್ ವರ್ಕ್ ವಿಷಯದಲ್ಲಿ ಬ್ಯಾಚುಲರ್ ಡಿಗ್ರಿ ಮಾಡಿದ್ದ ಕರಣ್ ದೋಷಮುಕ್ತನಾಗಿ ಜೈಲಿಂದ ಹೊರ ಬಂದ ಮೇಲೆ ‘ಪ್ರಾಜೆಕ್ಟ್ ಸೆಕೆಂಡ್ ಚಾನ್ಸ್’ ಸಹಾಯದಿಂದ ‘ಜೈಲುಗಳ ಮೇಲೆ ವಾತಾವರಣದ ಪ್ರಭಾವ’ ಎಂಬ ವಿಷಯವನ್ನು ಅಭ್ಯಸಿಸಿದನು. ಚಳಿಗಾಲದ ಸಮಯದಲ್ಲಿ ಮತ್ತು ಪ್ರಾಕೃತಿಕ ಪ್ರಕೋಪಗಳ ಸಮಯದಲ್ಲಿ ಆಶ್ರಯ ಪಡೆಯುವ ಕಾರಣಕ್ಕಾಗಿ ಜೈಲು ಸೇರುವವರ ಸಂಖ್ಯೆ ಹೆಚ್ಚಿರುವುದು ಜೈಲುಗಳನ್ನು ಹತ್ತಿರದಿಂದ ನೋಡಿದವರಿಗೆ ತಿಳಿದ ಸಂಗತಿ.
ರಾಹುಲ್ ಎಂಬ ಇನ್ನೊಬ್ಬ ಮಾಜಿ ಅಪರಾಧಿ, ಬಡ ಕುಟುಂಬಗಳ ಹಿನ್ನೆಲೆಯಿಂದ ಬಂದ ಅಪರಾಽಗಳು ಮತ್ತು ಉಚಿತ ಕಾನೂನು ನೆರವು ನೀಡುವ ವಕೀಲರ ನಡುವೆ ಸಂಪರ್ಕ ಏರ್ಪಡಿಸುವ ‘ಎಕ್ಷೆಸ್ ಟು ಲೀಗಲ್ ಏಯ್ಡ್ ಥ್ರೂ ಟೆಕ್ನಾಲಜಿ’ ಎಂಬ ಒಂದು ತಂತ್ರಾಂಶವನ್ನು ತಯಾರಿಸಿದನು. ಆರು ವರ್ಷಗಳ ಶಿಕ್ಷೆ ಅನುಭವಿಸಿ ೨೦೨೧ರಲ್ಲಿ ಜೈಲಿಂದ ಹೊರ ಬಂದ ದೆಹಲಿಯ ಅವ್ನೀಶ್ ಕುಮಾರ್ ನಿಯಮಿತವಾಗಿ ಹಾಲಿ ಕೈದಿಗಳಿಗೆ ಓದಲು, ಬರೆಯಲು ಕಲಿಸುವುದರ ಜೊತೆಯಲ್ಲಿ ಮಾಜಿ ಕೈದಿಗಳು ಮತ್ತು ಮನೋ ಆರೈಕೆ ನೀಡುವ ವಿವಿಧ ಸರ್ಕಾರೇತರ ಸಂಸ್ಥೆಗಳ ನಡುವೆ ಸಂಪರ್ಕ ಕಲ್ಪಿಸಲು ‘ಕುಂಜಿ ಹೆಲ್ಪ್ ಲೈನ್’ ಪ್ರಾರಂಭಿಸಿದನು. ಹೀಗೆ, ‘ಪ್ರಾಜೆಕ್ಟ್ ಸೆಕೆಂಡ್ ಚಾನ್ಸ್’ ಈವರೆಗೆ ಸುಮಾರು ೧೧,೫೦೦ ಜನ ಮಾಜಿ ಹಾಗೂ ಹಾಲಿ ಕೈದಿಗಳಿಗೆ ಹಲವು ರೀತಿಗಳಲ್ಲಿ ಸಹಾಯ ಮಾಡಿದೆ. ಅವರಲ್ಲಿ ೧೫೦ ಜನ ‘ನೇಷನಲ್ ಇನ್ ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್’ ಕಾರ್ಯಕ್ರಮದಡಿ ಬೋರ್ಡ್ ಪರೀಕ್ಷೆಗಳನ್ನು ಬರೆದಿದ್ದಾರೆ. ೬೦ ಜನ ಮಾಜಿ ಕೈದಿಗಳು ವಿವಿಧ ರೀತಿಯ ಉದ್ಯೋಗಗಳನ್ನು ಪಡೆದು ಹೊಸ ಬದುಕನ್ನು ನಡೆಸುತ್ತಿದ್ದಾರೆ.