Light
Dark

ಸಂಪಾದಕೀಯ : ಜನರ ವಿಘ್ನಗಳು ನಿವಾರಣೆಯಾಗಲಿ…

ಜನರ ವಿಘ್ನಗಳು ನಿವಾರಣೆಯಾಗಲಿ…

ನಮ್ಮಲ್ಲಿ ಗಣೇಶನ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಏಕೆಂದರೆ ಗಣೇಶ ಬರೀ ಮನೆಯಲ್ಲಿ ಮಾತ್ರ ಪೂಜಿಸಲ್ಪಡುವುದಿಲ್ಲ. ಸಾರ್ವಜನಿಕವಾಗಿಯೂ ಗಣೇಶನ ಮೇಲೆ ವಿಶೇಷ ಅಭಿಮಾನ. ಇದಕ್ಕೆ ಭಾರತದಲ್ಲಿ ಶತಮಾನಕ್ಕೂ ಮಿಗಿಲಾದ ಇತಿಹಾಸವಿದೆ. ವಿಘ್ನ ನಿವಾರಕ ಎಂದರೆ ಕಷ್ಟಗಳನ್ನು ಪರಿಹರಿಸುವವನು ಎನ್ನುವ ನಂಬಿಕೆ ಜನ ಮಾನಸದಲ್ಲಿ ನೆಲೆಸಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಗಣೇಶ ಮನೆಗೆ ಮಾತ್ರ ಸೀಮಿತವಾಗಿದ್ದ. ಬೀದಿ, ಬಡಾವಣೆಗಳಲ್ಲಿ ಗಣೇಶನ ಗದ್ದಲ ಕೊಂಚ ಕಡಿಮೆಯೇ ಆಗಿತ್ತು. ಈ ಬಾರಿ ಕೋವಿಡ್ ಅಲ್ಲಲ್ಲಿ ಕಾಣಿಸಿಕೊಂಡು ಮಾಸ್ಕ್ ಕಡ್ಡಾಯದಂತಹ ಆದೇಶವಿದ್ದರೂ, ಬಹುತೇಕ ಜನರು ಲಸಿಕೆ ಹಾಕಿಸಿಕೊಂಡಿರುವುದರಿಂದಾಗಿ ಆತಂಕದ ಸನ್ನಿವೇಶವಂತೂ ಇಲ್ಲ. ಇದರಿಂದ ಗಣೇಶ ಈಗಾಗಲೇ ಮನೆಮನೆಗಳ ಜತೆಗೆ ಬಹಳಷ್ಟು ಕಡೆ ವೇದಿಕೆಗಳನ್ನು ಅಲಂಕರಿಸಿದ್ದಾನೆ. ಇದರೊಟ್ಟಿಗೆ ಗೌರಿಯೂ ಮಂಗಳವಾರವೇ ನಾರಿಯರಿಂದ ಪೂಜೆ ಸ್ವೀಕರಿಸಿದ್ದಾಳೆ.
ಇಷ್ಟೆಲ್ಲ ಸಡಗರ, ಸಂಭ್ರಮ ಜನರಲ್ಲಿ ಇದ್ದರೂ ಆಂತರ್ಯದಲ್ಲಿ ಸಂಕಷ್ಟಗಳ ಸರಮಾಲೆಗಳೇ ನಮ್ಮನ್ನು ಹೊದ್ದಿವೆ.  ವಾಡಿಕೆ ಮೀರಿ ವಿಪರೀತ ಸುರಿಯುತ್ತಿರುವ ಮಳೆಯಂತೂ ಜನರನ್ನು ಭಯಕ್ಕೆ ಈಡು ಮಾಡಿದೆ. ದಾಖಲೆಯಾಗುವಷ್ಟು, ಮನೆ ರಸ್ತೆಗಳೇ ಹಾಳಾಗಿ ಜನಜೀವನ ವ್ಯತ್ಯಯವಾಗುವ ಮಟ್ಟಿಗೆ ವರುಣ ಮುನಿದಿದ್ದಾನೆ.  ಬಹಳ ಮಳೆ ಸುರಿದರೂ ಅದು ಕಷ್ಟವೇ.
ಉತ್ತರ- ದಕ್ಷಿಣ ಕರ್ನಾಟಕ ಎನ್ನದೇ  ಎಲ್ಲ ಭಾಗದಲ್ಲೂ ವರುಣನ ಆರ್ಭಟ ಜೋರಿದೆ. ಹಳೇ ಮೈಸೂರು ಭಾಗದ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಕೆರೆಗಳು ಕೋಡಿ ಬಿದ್ದು ಮನೆಗಳಿಗೆ ನೀರು ನುಗ್ಗಿದೆ. ಪರಿಹಾರಕ್ಕಾಗಿ ಜನ ಕಾಯುತ್ತಿದ್ದಾರೆ. ಮತ್ತೊಂದು ಕಡೆ ಹಣದುಬ್ಬರ ಏರುತ್ತಲೇ ಇದೆ. ತತ್ಪರಿಣಾಮ  ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.  ಅದರಲ್ಲೂ ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ ದರ ಮೂರು ದಿನಗಳ ಹಿಂದೆಯೇ ಜೇಬು ಭಾರವಾಗುವಷ್ಟು ಏರಿವೆ. ಇದರೊಟ್ಟಿಗೆ ಜನರಿಗೆ ನಿತ್ಯದ ಅಗತ್ಯವಾದ ಹಾಲು ಲೀಟರ್ ಗೆ ಮೂರು ರೂ. ಏರಿಸುವ ಪ್ರಸ್ತಾವನೆ ಹೋಗಿದೆ. ಇದು ಸದ್ಯಕ್ಕೆ ಆಗುವುದಿಲ್ಲ ಎನ್ನಿಸಿದರೂ ಮುಂದೆ ಹೆಚ್ಚುವ ಆತಂಕವಂತೂ ಇದ್ದೇ ಇದೆ. ಕೊನೆಗೆ ಸಾಮಾನ್ಯ ಜನರಂತೂ ಗಣೇಶನನ್ನು ಬಿಟ್ಟರೇ ವಿಧಿಯಿಲ್ಲ ಎನ್ನುವ ಮನೋಭಾವದೊಂದಿಗೆ ಹಬ್ಬ ಮಾಡುತ್ತಿದ್ದಾರೆ.
ಕಷ್ಟಗಳಿದ್ದರೂ ಅವು ಪರಿಹಾರವಾಗಲಿ ಎನ್ನುವ ಭರವಸೆ ಒಂದು ಕಡೆಯಾದರೆ, ಮೂರ್ನಾಲ್ಕು ದಿನದ ಮಟ್ಟಿಗೆ ಕುಟುಂಬದವರೊಂದಿಗೆ ಸೇರಿ ಕಷ್ಟಗಳನ್ನು ಮರೆಯೋಣ ಎನ್ನುವ ಉದಾತ್ತ ಯೋಚನೆಯೂ ಇದರಲ್ಲಿದೆ.
ಆಳುವ ಸರ್ಕಾರಗಳಿಗೆ ಹಬ್ಬ, ಹರಿದಿನ ಏನೇ ಬಂದರೂ ಜನ ಹೇಗೋ ನಿಭಾಯಿಸುತ್ತಾರೆ ಬಿಡಿ ಎನ್ನುವ ಮನೋಭಾವ. ಅಗತ್ಯ ವಸ್ತುಗಳ ದರ ನಿಯಂತ್ರಣಕ್ಕೆ ಗಮನ ನೀಡಿ ಸಾಮಾನ್ಯರು ಕೊಂಚವಾದರೂ ನಿರಾಳವಾಗುವ ಅವಕಾಶ ಕಲ್ಪಿಸಬಹುದಿತ್ತು. ಇದು ಸರ್ಕಾರದ ಆದ್ಯತೆಯೇ ಅಲ್ಲ. ದರ ಏರಿದರೆ ನಮಗೇನು ಎಂಬ ಧೋರಣೆ ಆಳುವವರಲ್ಲಿ   ಬೆಳೆದಿದೆ. ಈ ಧೋರಣೆ ಇಂದು ನಿನ್ನೆಯದಲ್ಲ. ಹಿಂದಿನಿಂದ ನಡೆದುಕೊಂಡು ಬಂದಿದೆ.
ಜನ ಹಬ್ಬದ ಸಂತಸದಲ್ಲಿ ಎಲ್ಲವನ್ನೂ ಮರೆತುಬಿಡುತ್ತಾರೆ ಎನ್ನುವುದು ಆಳುವವರ ಮನದಾಳದಲ್ಲಿ ಬೇರೂರಿದೆ. ಜನರೂ ಆಳುವವರನ್ನು ನಂಬಿದರೆ ನಮ್ಮ ಅಡುಗೆ ಮನೆಯಲ್ಲಿ ಕೆಲಸ ನಿಲ್ಲುವುದೇ ಎಂಬೋ ದೃಢಚಿತ್ತ ಬೆಳೆಸಿಕೊಂಡಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಆಹಾರಧಾನ್ಯಗಳು, ಖಾದ್ಯ ತೈಲ ಸೇರಿದಂತೆ ಯಾವುದು ಕೈಗೆಟಕುವ ದರದಲ್ಲಿ ಇಲ್ಲ. ಕೈಗೆಟುಕುತ್ತಿದ್ದ ಅಕ್ಕಿ, ಗೋಧಿ, ಮೊಸರುಗಳಿಗೂ ಈಗ ಸರಕು ಮತ್ತು ಸೇವಾ ತೆರಿಗೆ ಹೇರಲಾಗುತ್ತಿದೆ. ಜನರು ಬಳಸುವ ಯಾವವಸ್ತುಗಳೂ ತೆರಿಗೆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಬಾರದೆಂಬ ಧೋರಣೆ ನಮ್ಮನ್ನು ಆಳುವವರಿಗೆ ಇದ್ದಂತಿದೆ. ಮೊದಲೆಲ್ಲ ದರ ಏರಿಕೆ ಯಾದರೆ ತೀವ್ರವಾಗಿ ಪ್ರತಿಭಟಿಸುತ್ತಿದ್ದ ಜನರೂ ಈಗೀಗ ದರ ಏರಿಕೆಯು ದೈನಂದಿನ ಸಹಜ ಚಟುವಟಿಕೆಯೇನೋ ಎಂಬಂತೆ ಒಗ್ಗಿಕೊಂಡಿದ್ದಾರೆ. ಜನಸಾಮಾನ್ಯರು  ಪ್ರತಿಭಟನೆ ಮಾಡದೇ ಈ ಒಗ್ಗಿಕೊಳ್ಳುವ ಧೋರಣೆಯೂ ಆಳುವವರಿಗೆ ಅನುಕೂಲವಾಗಿಯೇ ಪರಿಣಮಿಸಿದೆ.
ಈಗಲ್ಲದೇ ಮುಂದೆಯೂ ಇದು ಭಾರತದಂತ ಮಧ್ಯಮವರ್ಗದವರೇ ಹೆಚ್ಚಿರುವ, ಏನೇ ಹೊಸದು ಬಂದರೂ ಅದರ ಹೊರೆ ಹೊರುವವರ ಪ್ರಮಾಣ ಹೆಚ್ಚಿದೆ. ಗಣೇಶ ಜನರ ಕಷ್ಟಗಳಿಗೆ ಆಸರೆಯಾಗುವ ಜತೆಗೆ ಆಳುವವರಿಗೂ ಮತ್ತಷ್ಟು ಜನಪರವಾಗಿ ಕೆಲಸ ಮಾಡೋ ಚಿಂತನೆ ಬೆಳೆಸಿಕೊಳ್ಳುವಂತಹ ಸದ್ಭಾವನೆ ಬೆಳೆಸಲಿ ಎಂದು ನಾವೆಲ್ಲರೂ ಕೇಳಿಕೊಳ್ಳೋಣ. ನಮ್ಮ ಪ್ರಾರ್ಥನೆಗಳು ಗಣೇಶನ ಮೂಲಕ ನಮ್ಮನ್ನಾಳುವ ಸರ್ಕಾರಗಳಿಗೆ ತಲುಪಲಿ. ಇದನ್ನಷ್ಟೇ ನಾವೆಲ್ಲರೂ ಮಾಡಲು ಸಾಧ್ಯವಿರುವುದು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ