-ಪ್ರೊ.ಆರ್.ಎಂ.ಚಿಂತಾಮಣಿ
ಕೇಂದ್ರ ಸಚಿವ ಸಂಪುಟ ಕಳೆದ ವಾರ ಎರಡು ನಿರ್ಣಯಗಳನ್ನು ಅಂಗೀಕರಿಸಿ ಸರ್ಕಾರದ ಟೆಲಿ ಸಂಪರ್ಕ ಕಂಪನಿ ಭಾರತದ ಸಂಚಾರ ನಿಗಮ ಲಿ.( ಬಿಎಸ್‌ಎನ್‌ಎಲ್)ಪುನಶ್ಚೇತನಕ್ಕೆ ನಾಲ್ಕು ವರ್ಷಗಳ ಯೋಜನೆಯನ್ನು ರೂಪಿಸಿದೆ. ದೇಶದ ದೂರ ಸಂಪರ್ಕ ವಲಯದಲ್ಲಿ ಆರೋಗ್ಯಕರ ಸ್ಪರ್ಧೆಗಾಗಿ ಇದೊಂದು ಉತ್ತಮ ಬೆಳೆವಣಿಗೆ ಎಂದೇ ಹೇಳಬಹುದು. ಸಮರ್ಪಕವಾಗಿ ಮತ್ತು ಸಮಯಕ್ಕೆ ಸರಿಯಾಗಿ ಜಾರಿಯಾಗಬೇಕಷ್ಟೆ. ಒಂದು ನಿರ್ಣಯದಂತೆ ಸರ್ಕಾರ ಒಟ್ಟು ೧.೬೪ ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಬಂಡವಾಳ ಒದಗಿಸಬಹುದು. ಇದರಲ್ಲಿ ೪೪ ಸಾವಿರ ಕೋಟಿ ರೂ.ಗಳು ನಗದು ರೂಪದಲ್ಲಿದ್ದು ಉಳಿದಂತೆ ೧.೨೦ ಲಕ್ಷ ಕೋಟಿ ರೂ.ಗಳ ಸ್ಪೆಕ್ಟ್ರಂ (ತರಂಗಾಂತರ) ಒದಗಿಸುವ ಮೂಲಕ ಕೊಡಲಾಗುವುದು.
ಇನ್ನೊಂದು ನಿರ್ಣಯದಂತೆ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಬ್ರಾಡಬ್ಯಾಂಡ್ ಸೇವೆ ಒದಗಿಸಲೆಂದೇ ಇರುವ ಭಾರತ್ ಬ್ರಾಡ್ ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (ಬಿಬಿಎನ್‌ಎಲ್) ಕಂಪನಿಯನ್ನು ಬಿಎಸ್‌ಎನ್‌ಎಲ್‌ನಲ್ಲಿ ವಿಲೀನಗೊಳಿಸಲಾಗುವುದು. ಇದರಿಂದ ಗ್ರಾಮೀಣ ದೂರು ಸಂಪರ್ಕ ವ್ಯವಸ್ಥೆ ಉತ್ತಮ ಗೊಳ್ಳುವುದಲ್ಲದೆ ಬಿಎಸ್‌ಎನ್‌ಎಲ್‌ಗೂ ಇನ್ನಷ್ಟು ಶಕ್ತಿ ತುಂಬಿದಂತಾಗುವುದು. ಸುಸ್ಥಿರ ಬೆಳವಣಿಗೆಗೆ ದಾರಿಯಾಗಬೇಕು.
ಹಿಂದೆ ಜೂನ್ ೨೦೧೯ರಲ್ಲಿ ಸ್ವೀಕೃತವಾದ ೭೩,೦೦೦ ಕೋಟಿ ರೂ. ಪುನಶ್ಚೇತನ ಯೋಜನೆಯಿಂದ ಬಿಎಸ್‌ಎನ್‌ಎಲ್ ಮತ್ತು ವಹಾನಗರ ಟೆಲಿಕಾಂ ನಿಗಮ ಲಿ.(ಮುಂಬಯಿ ಮತ್ತು ಹೊಸದಿಲ್ಲಿಗೆ ಸೀಮಿತ)ಗಳಲ್ಲಿ ಪೂರ್ಣಾವಧಿಯ ನೌಕರರ ಸಂಖ್ಯೆಯನ್ನು (ಪೆನ್ಷನ್ ಪಡೆಯುವ) ಕಡಿಮೆ ಮಾಡಲು ಉಪಯೋಗವಾಯಿತೆ ಹೊರತು ಹೆಚ್ಚಿನ ಪ್ರಯೋಜನವಾಗಲಿಲ್ಲ. ಅದರ ನಂತರ ಹೊರ ಗುತ್ತಿಗೆ ಮತ್ತು ಅರೆ ಅವಧಿ ನೌಕರರ ಸಂಖ್ಯೆ ಹೆಚ್ಚಾಗಿ ಸೇವೆಯಲ್ಲಿ ಸುಧಾರಣೆ ಕಾಣಲಿಲ್ಲ. ತಂತ್ರಜ್ಞಾನ ಉನ್ನತೀಕರಣಕ್ಕೂ ಅದರಿಂದ ಅನುಕೂಲವಾಗಲಿಲ್ಲ.
ಸದೃಢ ಬಿಎಸ್‌ಎನ್‌ಎಲ್ ಬೇಕು
ಸರ್ಕಾರಿ ಕಂಪನಿಯೊಂದು ಎಲ್ಲ ರೀತಿಯಿಂದಲೂ ಸಮರ್ಥವಾಗಿ ಮತ್ತು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ ಸ್ಪರ್ಧೆಯಲ್ಲಿರುವ ಖಾಸಗಿ ಕಂಪನಿಗಳೂ ಎಚ್ಚರಿಕೆಯಿಂದ ನಡೆದುಕೊಳ್ಳುತ್ತವೆ. ಇಲ್ಲದಿದ್ದರೆ ಖಾಸಗೀಯವರದೇ ಆಟವಾಗುತ್ತದೆ. ಅಲ್ಲದೇ ರಿಲಯನ್ಸ್ ಜಿಯೋದಂತಹ ಘಟಾನುಘಟಿಗಳು ಪೈಪೋಟಿ ಒಡ್ಡುತ್ತಿರುವುದರಿಂದ ಬಿಎಸ್‌ಎನ್‌ಎಲ್ ಅವರಿಗಿಂತ ಒಂದು ಹೆಜ್ಜೆ ಮುಂದಿರಬೇಕು. ಟೆಲಿಕಾಂ ವಲಯ ತಂತ್ರಜ್ಞಾನವನ್ನೇ ಅವಲಂಬಿಸಿರುವುದರಿಂದ ಹೊಸದೊಂದು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಸರ್ಕಾರಿ ಕಂಪನಿ ಮುಂದಿರಬೇಕು. ಯಾಕೆಂದರೆ ಅದರ ಮಾಲೀಕರು ಸಾರ್ವಭೌಮ ಸರ್ಕಾರ.
ಇಲ್ಲಿ ಬ್ಯಾಂಕಿಂಗ್ ವಲಯದ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕಿನ ಉದಾಹರಣೆ ಸೂಕ್ತವೆನ್ನಿಸುತ್ತದೆ. ಅದು ಏಶಿಯದಲ್ಲೇ ಅತಿ ದೊಡ್ಡ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಎಲ್ಲ ಸೇವೆಗಳಲ್ಲೂ ಮುಂದಿದೆ. ಇತರ ಎಲ್ಲ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಮಾದರಿಯಾಗಿದೆ. ದೇಶದಲ್ಲಿ ಸರ್ಕಾರಿ ಬ್ಯಾಂಕುಗಳು ಇದನ್ನೇ ಅನುಸರಿಸುತ್ತಿವೆ. ಟೆಲಿಕಾಂ ವಲಯದಲ್ಲೂ ಇಂಥದೊಂದು ಬಲವಾದ ಸಂಸ್ಥೆ ಇದ್ದರೆ ಇಡಿ ಉದ್ದಿಮೆಯನ್ನು ಸರ್ಕಾರ ನಿಯಂತ್ರಿಸುವದು ಸುಲಭವಾಗುತ್ತದೆ.
ಸದ್ಯದ ಯೋಜನೆಯಂತೆ ಬಿಬಿಎನ್‌ಎಲ್ ವಿಲೀನದಿಂದ ೧.೮೫ ಲಕ್ಷ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಾಕಲಾದ ಆಪ್ಟಿಕ್ ಫೈಬರ್ ಮೂಲ ಸೌಲಭ್ಯ (೫.೬೭೦ ಲಕ್ಷ ಕಿ.ಮೀ) ಬಿಎಸ್‌ಎನ್‌ಎಲ್ ವಶಕ್ಕೆ ಬರುತ್ತದೆ. ಇದೂ ಸೇರಿದರೆ ಒಟ್ಟು ೧೨.೫ ಲಕ್ಷ ಕಿ.ಮೀ.ಆಫ್ಟಿಕ್ ಫೈಬರ್ ಉಪಯೋಗಕ್ಕೆ ಲಭ್ಯ. ಇದರಿಂದ ಹಳ್ಳಿಗಳಲ್ಲಿ ಟೆಲಿಫೋನ್ ಸೌಲಭ್ಯವನ್ನು ಬಿಎಸ್‌ಎನ್‌ಎಲ್ ವೇಗವಾಗಿ ವಿಸ್ತರಿಸಬಹುದು. ಇದಕ್ಕಾಗಿ ೧೩೭೮೯ ಕೋಟಿ ರೂ.ಗಳ ಸಹಾಯ ಅನುದಾನವನ್ನು ‘ಸಾರ್ವತ್ರಿಕ ಸೇವಾ (ಟೆಲಿಫೋನ್) ಹೊಣೆಗಾರಿಕೆ ನಿಧಿ’ಯಿಂದ ಪಡೆದು ಆದಾಯ ಕೊರತೆಯನ್ನು ಸರಿದೂಗಿಸಿಕೊಳ್ಳಬಹುದು. ಹೆಚ್ಚುವರಿ ನಗದೂ ಲಭ್ಯವಾಗುತ್ತದೆ.
ಎರಡನೆಯದಾಗಿ ಎಲ್ಲ ಟೆಲಿಕಾಂ ಕಂಪನಿಗಳಿಗೆ ಕಂಟಕ ಪ್ರಾಯವಾಗಿದ್ದ ಸರಾಸರಿ ಒಟ್ಟು ಆದಾಯ (ಅಛ್ಟಿಜಛಿ ಎ್ಟಟ ್ಕಛಿಛ್ಞ್ಠಿಛಿ- ಅಎ್ಕ) ಬಿಎಸ್‌ಎನ್‌ಎಲ್‌ಅನ್ನೂ ಕಾಡುತ್ತಿದೆ. ಈ ವರೆಗಿನ ಎಜಿಆರ್ ಬಾಕಿ ೩೩,೪೦೪ ಕೋಟಿ ರೂ.ದೊಡ್ಡ ಹೊರೆಯಾಗಿತ್ತು. ಅದನ್ನು ಈಗ ಸರ್ಕಾರ ಶೇರು ಬಂಡವಾಳವಾಗಿ ಪರಿವರ್ತಿಸಿ ಬ್ಯಾಲನ್ಸ್ ಶೀಟನ್ನು ಸ್ವಚ್ಛಗೊಳಿಸುವದು.
ಈವರೆಗೆ ಅನುಭವಿಸಿ ನಷ್ಟದ ಭಾರವೇ ೫೦,೦೦೦ ಕೋಟಿ ರೂ.ಗೂ ಹೆಚ್ಚಾಗಿದೆ. ಈಗ ದೊರೆಯುವ ಹೆಚ್ಚುವರಿ ನಗದು ಬಂಡವಾಳದಿಂದ ಬ್ಯಾಲನ್ಸ್ ಶೀಟ್‌ನಲ್ಲಿ ಕೊರತೆಯ ಪ್ರಮಾಣ ಕಡಿಮೆ ಆಗಲಿದೆ. ಈ ಹಣದಿಂದ ತಾನೇ ಅಭಿವೃದ್ಧಿ ಪಡಿಸಿದ ೪ಜಿ ತಂತ್ರಜ್ಞಾನ ಉನ್ನತೀಕರಣವನ್ನು ಗ್ರಾಹಕರ ಸೇವೆಯಲ್ಲಿ ಬಳಸಿಕೊಂಡು ಹೆಚ್ಚು ಗ್ರಾಹಕರನ್ನು ಆಕರ್ಷಿಸಬಹುದು ಮತ್ತು ಕಡಿಮೆ ದರಗಳಲ್ಲಿ ಹೆಚ್ಚು ಸೇವೆಗಳನ್ನು ಗ್ರಾಹಕರಿಗೆ ಒದಗಿಸಬಹುದು. ಆದರಿಂದ ಆದಾಯವೂ ಹೆಚ್ಚುತ್ತದೆ.
ಎಂಟಿಎನ್‌ಎಲ್‌ಅನ್ನೂ ಇದರಲ್ಲಿಯೇ ವಿಲೀನಗೊಳಿಸುವ ಇರಾದೆ ಸರ್ಕಾರಕ್ಕಿದ್ದಂತಿದೆ.
ಟೆಲಿಕಾಂ ಮಂತ್ರಿಯವರ ಹೇಳಿಕೆಯಂತೆ ಅದರ ಆಡಳಿತವನ್ನು ಈಗಲೇ ಬಿಎಸ್‌ಎನ್‌ಎಲ್‌ಗೆ ವಹಿಸಲಾಗುವುದು. ಇದರಿಂದ ತನ್ನ ದೇಶಾದ್ಯಂತ ಇರುವ ಸ್ಥಿರಾಸ್ತಿಗಳೊಡನೆ ಮುಂಬಯಿ ಮತ್ತು ಹೊಸದಿಲ್ಲಿಯಲ್ಲಿರುವ ಬೆಲೆ ಬಾಳುವ ಸ್ಥಿರಾಸ್ತಿಗಳೂ ಬರುತ್ತದೆ. ಅವುಗಳ ಸಮಪಯೋಗ ಮಾಡಿಕೊಳ್ಳುವುದಲ್ಲದೆ ತನಗೆ ಅನವಶ್ಯಕ (ದೀರ್ಘಾವಧಿಯಲ್ಲೂ) ಎನಿಸಿದವುಗಳನ್ನು ಗುತ್ತಿಗೆ ಅಥವಾ ಮಾರಾಟದಿಂದ ನಗದೀಕರಿಸಿಕೊಳ್ಳಬಹುದು.
ಯೋಜನೆಯಿಂದ ಸರ್ಕಾರ ೪ ಜಿ ಮತ್ತು ೫ ಜಿ. ಸ್ಟೆಕ್ಟ್ರಂಅನ್ನು ಧಾರಾಳವಾಗಿ ಕೊಡಲಾಗುವದೆಂದೂ, ಅದನ್ನು ಒದಗಿಸಿದ ಬಂಡವಾಳವಾಗಿ ಪರಿಗಣಿಸಲಾಗುವದೆಂದೂ ಹೇಳಲಾಗಿದೆ. ಈ ವರೆಗೆ ಇಷ್ಟೊಂದು ಧಾರಾಳತನ ತೋರಿರಲಿಲ್ಲ. ಇದನ್ನು ಬಳಸಿಕೊಂಡು ಹೊಸ ಸೇವಾ ತಂತ್ರಜ್ಞಾನಗಳೊಂದಿಗೆ ಖಾಸಗಿ ಕಂಪನಿಗಳೊಂದಿಗೆ ಯಶಸ್ವಿ ಪೈಪೋಟಿ ಮಾಡಬಹುದು. ಅಖಿಲ ಭಾರತ ಮಾರುಕಟ್ಟೆ ಹೊಂದಿರುವ ಏಕೈಕ ದೊಡ್ಡ ಸರ್ಕಾರಿ ಕಂಪನಿಯಾಗಿ ಮತ್ತು ಭಾರತೀಯ ಗ್ರಾಹಕರ ನಾಡಿ ಮಿಡಿತ ಗೊತ್ತಿರುವ ಬಿಎಸ್‌ಎನ್‌ಎಲ್ ಯಶಸ್ವಿಯೂ ಆಗಬಹುದು. ಯೋಜನೆಯ ಪೂರ್ಣ ಉಪಯೋಗ ಆಗುವುದು ಅವಶ್ಯ. ಸರ್ಕಾರವೂ ಎಲ್ಲಿಯೂ ಹಿಂದೇಟು ಹಾಕಬಾರದು.
ವೃತ್ತಿಪರ ಸ್ವತಂತ್ರ ಆಡಳಿತವಿರಬೇಕು
ಟೆಲಿಕಾಂ ಉದ್ದಿಮೆಗೆ ತಂತ್ರಜ್ಞಾನ ಮತ್ತು ತಂತ್ರಜ್ಞರೇ ಮೂಲ. ಇದು ಹಲವು ದೃಷ್ಟಿಕೋನಗಳಿಂದ ಆಯಕಟ್ಟಿನ ವಲಯ. ಆದ್ದರಿಂದ ಸರ್ಕಾರಿ ಕಂಪನಿಯೊಂದು ಇರಲೇಬೇಕು. ಯಶಸ್ವಿಯಾಗಿ ಮತ್ತು ಲಾಭದೊಡನೆ ನಡೆಯಲೇಬೇಕು. ಭಾರತದಂತಹ ದೊಡ್ಡ ಮತ್ತು ಅಭಿವೃದ್ಧಿಶೀಲ ಪ್ರಜಾಪ್ರಭುತ್ವ ದೇಶದಲ್ಲಿ ಅದರ ಅವಶ್ಯಕತೆ ಇನ್ನೂ ಹೆಚ್ಚು. ಖಾಸಗಿಯವರೊಡನೆ ಇದು ಇರಬೇಕು.
ತಂತ್ರಜ್ಞರು ಮತ್ತು ಆಡಳಿತ ಪರಿಣಿತರು ವೃತ್ತಿಪರವಾಗಿ ಆಡಳಿತ ನಡೆಸಬೇಕು. ಯಾವುದೇ ರೀತಿಯ ಹಸ್ತಕ್ಷೇಪ ಸಲ್ಲದು. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಿಸುವದು ಮುಂತಾದವುಗಳ ಬಗ್ಗೆ ಸರ್ಕಾರದ ನೀತಿ ರೂಪಕರು ಕಂಪನಿ ಆಡಳಿತಗಾರರಿಗೆ ಮೊದಲೇ ಮನವರಿಕೆ ಮಾಡಿಕೊಡಬೇಕು. ಸಾಕಷ್ಟು ಬಂಡವಾಳವನ್ನು ಸಮಯ ಸಮಯಕ್ಕೆ ಒದಗಿಸಬೇಕು. ಅವರಿಗೆ ತಮ್ಮ ನೀತಿಗಳನ್ನು ರೂಪಿಸುವ ಸ್ವಾತಂತ್ರ್ಯವಿರಬೇಕು. ಒಟ್ಟಿನಲ್ಲಿ ವ್ಯವಹಾರ ವ್ಯವಹಾರದಂತೆ ನಡೆಯಬೇಕು.
ಈಗಲೂ ಕಾಲ ಮಿಂಚಿಲ್ಲ. ಇಂಥ ತೀಕ್ಷ್ಣ ಪೈಪೋಟಿಯಲ್ಲಿಯೂ ದೇಶಾದ್ಯಂತ ಇಂದಿಗೂ ಈ ಲೇಖಕನೂ ಸೇರಿ ಬಹಳ ಜನ ದೇಶಭಕ್ತರು ದೇಶಾದ್ಯಂತ ಸಂಪರ್ಕ ಸಾಧಿಸಿರುವ (connecting india) ಬಿಎಸ್‌ಎನ್‌ಎಲ್‌ನಲ್ಲಿಯೇ ಉಳಿದಿದ್ದಾರೆ. ಸೇವೆಗಳು ಸುಧಾರಿಸಿದರೆ ದರಗಳು ಸ್ಪರ್ಧಾತ್ಮಕವಾದರೆ ಬಿಟ್ಟು ಹೋದ ಗ್ರಾಹಕರು ಮರಳಿ ಬರುತ್ತಾರೆ. ಆದಾಯ ಹೆಚ್ಚುತ್ತದೆ. ನಷ್ಟ ಲಾಭವಾಗಿ ಪರಿವರ್ತನೆಯಾಗುತ್ತದೆ. ಸರ್ಕಾರದ ಖಜಾನೆಗೂ ಲಾಭಾಂಶ ಬರುತ್ತದೆ. ಸರ್ಕಾರ ತಾನು ತೆಗೆದುಕೊಂಡ ತೀರ್ಮಾನಗಳನ್ನು ವಿಳಂಬ ಮಾಡದೇ ಸಕಾರಾತ್ಮಕ ದೃಷ್ಟಿಯಿಂದ ಅನುಷ್ಠಾನಗೊಳಿಸಬೇಕು. ನಿರ್ಣಯದಲ್ಲಿ ಹೇಳಿರುವಂತೆ ಬಿಎಸ್‌ಎನ್‌ಎಲ್ ಬಾಂಡ್ ಮೂಲಕ ಸಾಲ ಪಡೆಯುವುದಾದರೆ ಸಾವರಿನ್ ಗ್ಯಾರಂಟಿ ಕೊಡಬೇಕು.